3

ಹಿರಿಯ ನಾಗರಿಕರ ಅನುಭವಗಳಿಂದ ಸಮಾಜ ಬದಲಾವಣೆ ಸಾಧ್ಯ : ಮುಂಡರಗಿ ನಾಗರಾಜ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 01- ಸಮಾಜದಲ್ಲಿ ಯುವಪೀಳಿಗೆಯನ್ನು ಮುನ್ನೆಡೆಸುವಲ್ಲಿ ಹಿರಿಯ ನಾಗರಿಕರ ಮಾರ್ಗದರ್ಶನವು ಅತ್ಯಂತ ಮಹತ್ತರವಾಗಿದ್ದು, ಹಿರಿಯ ನಾಗರಿಕರ ಅನುಭವಗಳಿಂದ ಮಾತ್ರ ಸಮಾಜ ಬದಲಾವಣೆಯು ಸಾಧ್ಯವಿದೆ ಎಂದು ಡಾ.ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಏರ್ಪಡಿಸಿದ್ದ ‘ವಿಶ್ವ ಹಿರಿಯ ನಾಗರಿಕರ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರು ೬೦ ವರ್ಷ ತುಂಬಿದ ನಂತರ ಎಲ್ಲವೂ ಮುಗಿಯಿತು ಎನ್ನುವ ಗೋಜಿಗೆ ಹೋಗುತ್ತಾರೆ. ಬದಲಾಗಿ ಅಂದಿನಿಂದಲೇ ತಮ್ಮ ಅನುಭವ ಮತ್ತು ಮಾರ್ಗದರ್ಶನಗಳಿಂದ ನಿಜ ಜೀವನದ ಪಯಣ ಆರಂಭಗೊಳುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರವು ಹಿರಿಯ ನಾಗರಿಕರ ಸಬಲೀಕರಣಕ್ಕಾಗಿಯೇ ಹಲವಾರು ಯೋಜನೆಗಳನ್ನು ರೂಪುಗೊಳಿಸಿದೆ. ರಾಜ್ಯದಲ್ಲಿ ೧೦೮ ವೃದ್ಧಾಶ್ರಮಗಳಿವೆ. ರಾಜ್ಯದ ೨೬ ಜಿಲ್ಲೆಗಳಲ್ಲಿ ೨೭ ಹಗಲು ಯೋಗಕ್ಷೇಮ ಕೇಂದ್ರಗಳು ಜೊತೆಗೆ ಸಹಾಯವಾಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ೬೦-೬೫ ಮೇಲ್ಪಟ್ಟವರಿಗೆ ವೃದ್ಧಾಪ್ಯ ವೇತನ ಜಾರಿಗೊಳಿಸಿದೆ. ಹಿರಿಯ ನಾಗರಿಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರನ್ನು ಕಡೆಗಣಿಸುತ್ತಿರುವುದು ಕಂಡುಬರುತ್ತಿದ್ದು, ವಿಷಾಧನೀಯ ಸಂಗತಿಯಾಗಿದೆ ಎಂದು ಹೇಳಿದರು.

ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು. ಅವರನ್ನು ಕಡೆಗಣಿಸುವಂತಿಲ್ಲ. ಹಿರಿಯ ನಾಗರಿಕರು ನೈತಿಕ ಮೌಲ್ಯಗಳನ್ನು ಮತ್ತು ಜೀವನದ ರೂಪುರೇಷೆಗಳನ್ನು ಇಂದಿನ ಪೀಳಿಗೆಯಲ್ಲಿ ಆಳವಾಗಿ ಬಿತ್ತುವ ಕೆಲಸವಾಗಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್ ಅವರು ಮಾತನಾಡಿ, ಮನೆಗಳಲ್ಲಿ ಹಿರಿಯರಿದ್ದಾಗ ಮಾತ್ರ ಕುಟುಂಬ ನಿಭಾಯಿಸಲು ಸಾಧ್ಯವಾಗುತ್ತದೆ. ಹಿರಿಯ ನಾಗರಿಕರ ಆರ್ಥಿಕ ಸಬಲತೆಯ ದೃಷ್ಠಿಯಿಂದ ಸರ್ಕಾರದಿಂದ ವೃದ್ಧಾಪ್ಯ ವೇತನ ಹಾಗೂ ಇತರೆ ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದರು.

ಹಿರಿಯ ನಾಗರಿಕರು ಮಿತವಾದ ವ್ಯಾಯಾಮ, ಆಹಾರ ಮತ್ತು ತಮ್ಮ ಆರೋಗ್ಯದ ಕಾಳಜಿಗೆ ಒತ್ತು ನೀಡಬೇಕು. ಮಕ್ಕಳು ಪೋಷಕರನ್ನು ಆರೈಕೆ ಮಾಡದೇ ಇದ್ದಲ್ಲಿ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ನ್ಯಾಯಮಂಡಳಿಯಿದ್ದು, ವಿಚಾರಣೆ ನಡೆಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶತಾಯುಶಿಗಳಿಗೆ ಸನ್ಮಾನಿಸಲಾಯಿತು. ಬಳಿಕ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಎಸ್ಪಿ ಕೆ.ಪಿ.ರವಿಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್‌ಕುಮಾರ್, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಗೋವಿಂದಪ್ಪ, ಜಿಲ್ಲಾ ಮಕ್ಕಳ ನಿರೂಪಣಾಧಿಕಾರಿ ರಾಮಕೃಷ್ಣ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಶಿವಾಜಿರಾವ್, ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಟಿ.ಮಲ್ಲೇಶ್, ಸ್ಮೆöÊಲ್ ಸಂಸ್ಥೆಯ ಉಮೇಶ್ ಗೌಡ, ಹಿರಿಯ ಸಾಹಿತಿ ಡಿ.ವೆಂಕಮ್ಮ ಸೇರಿದಂತೆ ಹಿರಿಯ ನಾಗರಿಕರು ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!