
ಸಂಭ್ರಮದ ನಾಗಚೌತಿ, ನಾಗಮೂರ್ತಿಗೆ ವಿಶೇಷ ಪೂಜೆ, ಹಾಲು ಸಮರ್ಪಣೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 8- ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ನಾಗರಪಂಚಮಿ ಹಬ್ಬವನ್ನು ಮಹಿಳೆಯರು, ಮಕ್ಕಳು ಸೇರಿ ಎಲ್ಲರೂ ಅತ್ಯಂತ ಸಂಭ್ರಮದಿಂದ ಆಚರಿಸಿದರು. ಬೆಳ್ಳo ಬೆಳಿಗ್ಗೆ ಮಹಿಳೆಯರು, ಮಕ್ಕಳು ಹೊಸ ಬಟ್ಟೆ ಧರಿಸಿ ಮನೆಯಲ್ಲಿ ವಿಶೇಷ ಪೂಜೆ ನೆರವೇರಿಸಿ, ನಂತರ ಸಮೀಪದ ನಾಗಕಟ್ಟೆಗೆ ತೆರಳಿ ನಾಗಮೂರ್ತಿಗಳಿಗೆ ವಿಶೇಷ ನೈವೇದ್ಯ ಸಲ್ಲಿಸಿ ಹಾಲು ಸಮರ್ಪಿಸಿದರು.
ಕೆಲವರು ಹಾಲಿನ ಜೊತೆಗೆ ಬೆಲ್ಲದ ನೀರನ್ನು ಮೂರ್ತಿಗೆ ಎರೆದು ಭಕ್ತಿ ಸಮರ್ಪಿಸಿದರು.
ನಗರ ಪಂಚಮಿ ಹಬ್ಬ ಹಿನ್ನೆಲೆಯಲ್ಲಿ ಮನೆಯಲ್ಲಿ ಸಿದ್ಧಪಡಿಸಿದ ಎಳ್ಳುಂಡಿ, ಶೇಂಗಾ ಉಂಡಿ, ತಂಬಿಟ್ಟು, ಪುಠಾಣಿ ಉಂಡಿ ಸೇರಿದಂತೆ ಸಿದ್ಧ ಪಡಿಸಿದ ನಾನಾ ಸಿಹಿ ಪದಾರ್ಥಗಳನ್ನು ನಗಮೂರ್ತಿಗಳಿಗೆ ನೈವೇದ್ಯ ಸಲ್ಲಿಸಿ, ಹೂವಿನ ಅಲಂಕಾರ ಮಾಡಿ ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು.
ಮನೆ ಮಂದಿಯಲ್ಲ ಸಿಹಿ ಪದಾರ್ಥಗಳನ್ನು ಸವಿದು, ನೆರೆ ಹೊರೆಯವರಿಗೆ ಪ್ರಸಾದ ಸಲ್ಲಿಸಿ ಹಬ್ಬವನ್ನು ಸoಭ್ರಮದಿಂದ ಆಚರಿಸಿದರು. ಗ್ರಾಮೀಣ ಪ್ರದೇಶದಲ್ಲಿ ಕೆಲವರು ತಮ್ಮ ತಮ್ಮ ಹೊಲದಲ್ಲಿರುವ ನಾಗ ಮೂರ್ತಿಗಳಿಗೆ ಹೂವಿನ ಅಲಂಕಾರ ಮಾಡಿ, ವಿಶೇಷ ಪೂಜೆ, ನೈವೇದ್ಯ ಮಾಡಿ, ಹಾಲು ಹಾಗೂ ಬೆಲ್ಲದ ನೀರನ್ನು ಎರೆದು ಭಕ್ತಿ ಸಮರ್ಪಿಸಿದರು.
ನಗರ ಪ್ರದೇಶದಲ್ಲಿ ಕೆಲವರು ಮನೆ ಮುಂದೆ ಇರುವ ನಾಗ ಮೂರ್ತಿಗಳಿಗೆ ಹಾಲೆರೆದು ಭಕ್ತಿ ಸಮರ್ಪಿಸಿದರು, ಕೆಲವರು ಹತ್ತಿರದ ನಾಗ ಕಟ್ಟೆಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಹಾಲೆರೆದು ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು.