
ಭಗ್ನ ಪ್ರೇಮಿಗಳ ದುರಂತ ಪ್ರೇಮಕಥೆ –
ದಿ ಬ್ರೋಕನ್ ವಿಂಗ್ಸ್
ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ?
ಮೋಡ ಕಟ್ಟಿತು ಹೇಗೆ?
ಹನಿಯೊಡೆದು ಕೆಳಗಿಳಿದು ಹಸಿರು ಮೂಡಿತು ಹೇಗೆ?
ಎನ್ನುವ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಕವನದ ಸಾಲುಗಳು ಬದುಕಿನಲ್ಲಿ ಪ್ರೀತಿಯ ಪ್ರಾಮುಖ್ಯತೆಯನ್ನು ಸಾರಿ ಹೇಳುತ್ತವೆ.
ಬದುಕಲು ಪ್ರೀತಿ ಬಹು ಮುಖ್ಯ ಇದು ಅಮೂರ್ತ ಸ್ವರೂಪ. ಪ್ರೀತಿ ಕೊಡುವಂಥ ಸಂತೋಷ ಮತ್ತು ಅದು ನೀಡುವಂತ ದುಃಖ ಅಪರಿಮಿತವಾದದ್ದು ಮತ್ತು ಅವರ್ಣನೀಯವಾದದ್ದು. ಪ್ರೀತಿಯಲ್ಲಿ ಯಶಸ್ಸು ಕಂಡವರಿಗಿಂತ ವಿಫಲವಾಗಿ ನೋವು ಅನುಭವಿಸಿದವರೇ ಹೆಚ್ಚು. ಅಂತ ದುರಂತ ಪ್ರೇಮ ಕಥೆಯನ್ನೊಳಗೊಂಡ ಹಲವು ಕಾದಂಬರಿಗಳಲ್ಲಿ ಖಲೀಲ್ ಗಿಬ್ರಾನ್ ಅವರು ಬರೆದ ದಿ ಬ್ರೋಕನ್ ವಿಂಗ್ಸ್ ಕೂಡ ಒಂದು.
ಖಲೀಲ್ ಗಿಬ್ರಾನ್ ಲೆಬನಾನ್-ಅಮೆರಿಕದ ಕವಿ ಮತ್ತು ಕಲಾವಿದ. ಜಗತ್ತಿನ ಹಲವಾರು ಪ್ರಸಿದ್ಧ ಕವಿಗಳಲ್ಲಿ ಖಲೀಲ್ ಗಿಬ್ರಾನ್ ಒಬ್ಬರು. ಇವರು ಬರೆದ ದಿ ಪ್ರಾಫೆಟ್ ಕೃತಿ ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ಅನುವಾದಗೊಂಡಿದೆ. ಇವರು ಮೌಂಟ್ ಲೆಬನಾನ್ ಗೆ ಸೇರಿದ ಬಶ್ಶರಿ ಗ್ರಾಮದಲ್ಲಿ ಜನೆವರಿ 6, 1883ರಲ್ಲಿ ಜನಿಸಿದರು. 1895ರಲ್ಲಿ ತನ್ನ ತಾಯಿ ಮತ್ತು ಒಡ ಹುಟ್ಟಿದವರೊಂದಿಗೆ ಅಮೇರಿಕಕ್ಕೆ ವಲಸೆ ಹೋದರು.
ದಿ ಬ್ರೋಕನ್ ವಿಂಗ್ಸ್ (ಮುರಿದ ರೆಕ್ಕೆಗಳು) ಕಾದಂಬರಿ ಲೆಬನಾನ್ ದೇಶದ ರಾಜಧಾನಿಯಾದ ಬೇರೂತ್ ನಲ್ಲಿ I was eighteen years of age when love opened my eyes… ಸಾಲುಗಳಿಂದ ಪ್ರಾರಂಭವಾಗುವ ಕಾದಂಬರಿ ಸ್ವತಃ ಗಿಬ್ರಾನ್ ಅವರ ಪ್ರೇಮ ಕಥೆಯನ್ನು ಹೇಳುತ್ತಾ ಹೋಗುತ್ತದೆ.
ಈ ಕಾದಂಬರಿಯಲ್ಲಿ ಹತ್ತು ಹಲವು ಸಣ್ಣ ಸಣ್ಣ ಭಾಗಗಳಿದ್ದು ಸ್ವತಃ ಕಾದಂಬರಿಕಾರ ಖಲೀಲ್ ಗಿಬ್ರಾನ್ ತನ್ನ ಅನುಭವಗಳನ್ನು ವಿವರಿಸುತ್ತಾ ಹೋಗುತ್ತಾರೆ.
ಎಪ್ರಿಲ್-ಮಾರ್ಚ ತಿಂಗಳಲ್ಲಿ ಖಲೀಲ್ ಗಿಬ್ರಾನ್ ತನ್ನ ಸ್ನೇಹಿತನೊಂದಿಗೆ ಸ್ವಲ್ಪವೇ ದೂರದಲ್ಲಿರುವ ಬೇರೂತ್ ನಗರದ ಅರವತ್ತೈದು ವರ್ಷದ ಶ್ರೀಮಂತ ವ್ಯಾಪಾರಿಯಾಗಿದ್ದ ಫಾರಿಸ್ ಎಫಂಡಿ ಕರಾಮಿಯ ಮನೆಗೆ ಹೋಗಿರುತ್ತಾನೆ.ಅವರಿಬ್ಬರ ನಡುವಿನ ಆತ್ಮೀಯತೆಯ ಸಂಭಾಷಣೆಯಿಂದ ಖಲೀಲ್ ಗಿಬ್ರಾನ್, ಫಾರಿಸ್ ಎಫಂಡಿಯ ಹಳೆಯ ಸ್ನೇಹಿತನ ಮಗ ಎಂದು ಗೊತ್ತಾದಾಗ ಸ್ವತಃ ತನ್ನ ಹಳೆಯ ಸ್ನೇಹಿತನೇ ಮನೆಗೆ ಆಗಮಿಸಿದ್ದಾನೆಂದು ಭಾವಿಸಿ ಅತ್ಯಂತ ಪ್ರೀತಿಯಿಂದ ಕಂಡನು. ಅಲ್ಲಿ ಶ್ವೇತ ವರ್ಣದ ಉಡುಪುಗಳನ್ನು ತೊಟ್ಟ ಒಬ್ಬ 20 ವರ್ಷದ ಸುಂದರವಾದ ಯುವತಿಯೊಬ್ಬಳು ಅವರ ಮುಂದೆ ಹಾದು ಹೋದಳು. ಅವಳ ಹೆಸರು ಸೆಲ್ಮಾ ಕರಾಮಿ. ಅವಳು ಫಾರಿಸ್ ಎಫಂಡಿಯ ಮುದ್ದಿನ ಮಗಳಾಗಿದ್ದಳು. ಆಕೆಯ ಕೈಗಳ ಸ್ಪರ್ಶದಿಂದ ಪುಳಕಗೊಂಡ ಗಿಬ್ರಾನ್ ಆಕೆಯ ಮಧುರ ಮಾತುಗಳಿಗೆ ಮನಸೋತು ಮೊದಲ ನೋಟದಲ್ಲೇ ಅವಳನ್ನು ಪ್ರೀತಿಸುವುದಕ್ಕೆ ಪ್ರಾರಂಭಿಸುತ್ತಾನೆ. ಸೆಲ್ಮಾ ಕರಾಮಿಗೂ ಕೂಡ ಗಿಬ್ರಾನ್ ಮೇಲೆ ಪ್ರೇಮಾಂಕುರವಾಗುತ್ತದೆ. ಅವಳು ತನ್ನ ನೋವು-ನಲಿವುಗಳನ್ನು ಅವನೊಂದಿಗೆ ಹಂಚಿಕೊಳ್ಳುತ್ತಾಳೆ.
ಒಂದು ದಿನ ಫಾರಿಸ್ ಎಫಂಡಿಯು ತನ್ನ ಆಪ್ತಮಿತ್ರನ ಮಗನಾದ ಗಿಬ್ರಾನನ್ನು ರಾತ್ರಿ ಭೋಜನ ಕೂಟಕ್ಕೆ ಆಹ್ವಾನಿಸಿದ್ದನು. ಭೋಜನ ಕೂಟಕ್ಕೆ ಆಗಮಿಸಿದ ಗಿಬ್ರಾನ್ ಸ್ವಲ್ಪ ಹೊತ್ತು ಏನೂ ಮಾತನಾಡದೆ ಮೌನವಾಗಿದ್ದ. ಅವನ ಮೌನವನ್ನು ಸೆಲ್ಮಾ ಬಲ್ಲವಳಾಗಿದ್ದಳು. ಭೋಜನ ಸವಿಯುವ ಸಮಯದಲ್ಲಿ ಸೇವಕನೊಬ್ಬ ಬಂದು ಧರ್ಮಾಧಿಕಾರಿಯವರು ಫಾರಿಸ್ ಎಫಂಡಿಯೊಡನೆ ಮುಖ್ಯವಾದ ವಿಚಾರವನ್ನು ಚರ್ಚಿಸುವ ಸಲುವಾಗಿ ಭೇಟಿಯಾಗಲು ತಿಳಿಸಿದ್ದಾರೆ ಎಂದು ಹೇಳಿದನು. ಧರ್ಮಾಧಿಕಾರಿಯವರನ್ನು ಭೇಟಿಯಾಗಲು ಎಫಂಡಿಯು ಹೋದ ನಂತರ ಸೆಲ್ಮಾ ಗಿಬ್ರಾನ್ ಎದುರಿಗೆ ಬಂದು ಕುಳಿತು ಸೆಲ್ಮಾ ಹೀಗೆ ಹೇಳುತ್ತಾಳೆ “If darkness hides trees and flowers from our eyes. It will not hide love from our heart”. ಸೆಲ್ಮಾ ಗಿಬ್ರಾನ್ ನನ್ನು ಎಷ್ಟು ಆಳವಾಗಿ ಪ್ರೀತಿಸುತ್ತಿದ್ದಳು ಎಂಬುದು ಅವಳ ಮಾತಿನಲ್ಲೇ ವ್ಯಕ್ತವಾಗಿದೆ. ಹೀಗೆ ಅವರಿಬ್ಬರ ದೀರ್ಘ ಸಂಭಾಷಣೆ ನಡುವೆ ಸಾರೋಟಿನ ಸದ್ದು ಕೇಳಿದ ತಕ್ಷಣ ಇಬ್ಬರೂ ಎಚ್ಚೆತ್ತುಕೊಂಡು ಫಾರಿಸ್ ಎಫಂಡಿಯು ಬಂದಿರಬಹುದೆಂದು ತಿಳಿದು ಅವನನ್ನು ನೋಡಲು ಮನೆಯ ಅಂಗಳಕ್ಕೆ ಹೋದಾಗ ಅಲ್ಲಿ ಅವರಿಬ್ಬರಿಗೂ ಆಘಾತಕಾರಿ ವಿಷಯವೊಂದು ಕಾದಿತ್ತು. ಅದೇನೆಂದರೆ ಸೆಲ್ಮಾಳನ್ನು ಮನ್ಸೂರ್ ಬೇ ಗಾಲಿಬ್ ಗೆ ಕೊಟ್ಟು ವಿವಾಹ ಮಾಡುವಂತೆ ಧರ್ಮಾಧಿಕಾರಿ ಆದೇಶವಾಗಿರುವುದಾಗಿ ತಿಳಿಸಿದನು. ಆಗ ದಿಗ್ಭ್ರಾಂತಳಾಗಿ ಸೆಲ್ಮಾ “The Bishop demanded me from you and has prepared a cage from this bird with broken wings. Is this your will father?” ಎಂದು ಕೇಳಿದಾಗ ತಕ್ಷಣ ಎಫಂಡಿಯು ಮಗಳನ್ನು ಮನೆಯೊಳಗೆ ಕರೆದುಕೊಂಡು ಹೋಗುತ್ತಿರುವಾಗ ಏಕಾಂಗಿ ಭಾವನೆ ಮೂಡಿದ ಗಿಬ್ರಾನ್ ಗೆ ವಸಂತದ ಚಿಗುರೆಲೆಗಳ ಮೇಲೆ ಬೆಂಕಿಯ ಬಿರುಗಾಳಿ ಅಪ್ಪಳಿಸಿದಂತಾಯಿತು.
ಫಾರಿಸ್ ಎಫಂಡಿಯ ಸಂಪತ್ತನ್ನು ಕಬಳಿಸುವ ಉದ್ದೇಶದಿಂದ ಅವನ ಮಗಳಾದ ಸಲ್ಮಾ ಕರಾಮಿಯನ್ನು ಮನ್ಸೂರ್ ಬೇ ಗಾಲಿಬ್ ನೊಂದಿಗೆ ವಿವಾಹ ಮಾಡವ ಉದ್ದೇಶ ಧರ್ಮಾಧಿಕಾರಿಯ(ಬಿಷಪ್)ದಾಗಿತ್ತು. ಯಾರೂ ಧರ್ಮದ ವಿರುದ್ಧ ಮತ್ತು ಧರ್ಮಾಧಿಕಾರಿಯ ಆದೇಶದ ವಿರುದ್ಧ ನಡೆದುಕೊಳ್ಳುವಂತಿರಲಿಲ್ಲ ಹೀಗಾಗಿ ಫಾರಿಸ್ ಎಫಂಡಿಯು ಸೆಲ್ಮಾಳ ಮದುವೆಗೆ ಒಪ್ಪಿಕೊಂಡನು. ಒಂದು ವೇಳೆ ಒಪ್ಪಿಕೊಳ್ಳದಿದ್ದರೆ ಅದು ಕಾನೂನುಬಾಹಿರವಾಗಿದೆ ಎಂದು ಪರಿಗಣಿಸಿ ಶಿಕ್ಷೆಗೆ ಗುರಿಯಾಗಿಸುತ್ತಿದ್ದರು. ಸಮಾಜದಲ್ಲಿ ಸೆಲ್ಮಾಳ ಹೆಸರಿಗೆ ಮಸಿ ಬಳಿಯುವ ಕೆಲಸಕ್ಕೆ ಕೈಹಾಕುತ್ತಾರೆ ಎಂಬ ಆತಂಕ ಫಾರಿಸ್ ಎಫಂಡಿಗೆ ಇತ್ತು.
ದಿನಗಳು ಉರುಳಿದಂತೆ ಗಿಬ್ರಾನ್ ನ ಸಂತೋಷದ ದಿನಗಳು ಮೋಡದಂತೆ ಕರಗಲು ಪ್ರಾರಂಭಿಸಿದವು. ದಿನದಿಂದ ದಿನಕ್ಕೆ ದುಃಖದ ನೆನಪುಗಳು ಹೆಚ್ಚಿದವು. ಮತ್ತೊಮ್ಮೆ ಸೆಲ್ಮಾಳನ್ನು ನೋಡುವ ಆಸೆಯಿಂದ ಗಿಬ್ರಾನ್ ಅವರ ಮನೆಗೆ ಹೋದನು. ಜಾಸ್ಮಿನ್ ಗಿಡದ ನೆರಳಿನ ಹತ್ತಿರವಿದ್ದ ಬೆಂಚಿನ ಮೇಲೆ ಕುಳಿತಿದ್ದ ಸೆಲ್ಮಾಳನ್ನು ನೀರವ ಮೌನ ಆವರಿಸಿತ್ತು. ಅವಳು ಪಕ್ಕದಲ್ಲಿ ಕುಳಿತಿದ್ದ ಗಿಬ್ರಾನ್ ಕೈಯನ್ನು ಹಿಡಿದು ” come my beloved, let us discuss the horrible future before it comes, my father has just left the house to see the man who is going to be my companion until death. Tonight two families will set the marriage date” ಎಂದು ಆತಂಕದಿಂದ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದಳು.
ಸೆಲ್ಮಾಳ ಮದುವೆಯ ನಂತರ ಗಿಬ್ರಾನ್ ಏಕಾಂಗಿ ಜೀವನವನ್ನು ಅನುಭವಿಸಬೇಕಾಗುತ್ತದೆ ಎಂಬ ನಿರಾಸೆಯ ಭಾವನೆಯಿಂದ “During my youth, love will be my teacher; in the middle age, my help; and in the old age, my delight. Love, my beloved Selma will stay with me to the end of my love, and after the death the hand of God will unite us again”. ಸಾವಿನ ನಂತರವೂ ಕೂಡ ತನ್ನ ಪ್ರೀತಿ ತನಗೆ ಸಿಗಲಿದೆ ಎಂಬ ಆಶಾ ಭಾವನೆಯನ್ನು ಗಿಬ್ರಾನ್ ವ್ಯಕ್ತಪಡಿಸಿದ್ದಾನೆ. ಹೀಗೆ ದೇವರಲ್ಲಿ ತಮ್ಮ ಪ್ರೀತಿ ಶಾಶ್ವತವಾಗಿ ನೆಲೆ ನಿಂತು, ಅವರಿಬ್ಬರೂ ಒಂದು ಗೂಡುವಂತೆ ಪ್ರಾರ್ಥಿಸುತ್ತಿದ್ದರು. ಮಧ್ಯರಾತ್ರಿಯ ಸಮಯದಲ್ಲಿ ಸೆಲ್ಮಾಳು ಗಿಬ್ರಾನನ್ನ ಅಪ್ಪಿಕೊಂಡು ದೇವರಲ್ಲಿ ಹೀಗೆ ಪ್ರಾರ್ಥಿಸುತ್ತಾಳೆ ” Oh my Lord God, have a mercy on me and mend my broken wings !. ಗಿಬ್ರಾನ್ ಸೆಲ್ಮಾಳನ್ನು ಏಕಾಂಗಿಯಾಗಿ ಕತ್ತಲಿನ ಆ ತೋಟದಲ್ಲಿ ಬಿಟ್ಟು ಬರುವಾಗ ಗಿಡಗಳ ಸೌಂದರ್ಯ, ಚಂದಿರನ ಬೆಳದಿಂಗಳು ಎಲ್ಲವೂ ಕೂರುಪಿಯಂತೆ ಭಯಾನಕವಾಗಿ ಕಂಡವು. ಗಿಬ್ರಾನ್ ತನ್ನ ಕೊಠಡಿಗೆ ಬಂದು ಮಲಗಿದಾಗಲೂ ಸೆಲ್ಮಾಳ ಮಾತುಗಳು ಸ್ವಪ್ನದಲ್ಲಿ ಕಾಡತೊಡಗಿದವು.
ಕೆಲವು ದಿನಗಳ ನಂತರ ಮನ್ಸೂರ್ ಬೇ ಗಾಲಿಬ್ ಮತ್ತು ಸೆಲ್ಮಾ ಕರಾಮಿಯ ವಿವಾಹ ಅದ್ಧೂರಿಯಾಗಿ ನೆರವೇರಿತು. ಅತ್ಯಂತ ಸುಂದರವಾದ ಬಂಗಲೆಯಲ್ಲಿ ದಂಪತಿಗಳಿಬ್ಬರು ವಾಸಿಸುತ್ತಿದ್ದರು. ಇತ್ತ ಗಿಬ್ರಾನ್ ಗೆ ಸೆಲ್ಮಾಳ ಮೇಲಿದ್ದ ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ಸೆಲ್ಮಾಳ ದಾಂಪತ್ಯ ಜೀವನ ಸುಖಕರವಾಗಿರಲೆಂದು ದೇವರಲ್ಲಿ ಸಲ್ಲಿಸುತ್ತಿದ್ದ ಪ್ರಾರ್ಥನೆ ವ್ಯರ್ಥವಾಗಿತ್ತು, ಏಕೆಂದರೆ ಮನ್ಸೂರ್ ಬೇ ಗಾಲಿಬ್ ಸಂಪತ್ತಿನ ಆಸೆಗಾಗಿ ಅವಳನ್ನು ವಿವಾಹವಾಗಿದ್ದನೇ ಹೊರತು ಅವಳ ಮೇಲಿನ ಪ್ರೀತಿಯಿಂದಲ್ಲ. ಮನ್ಸೂರ್ ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನು ಹಾಳುಮಾಡಿಕೊಂಡಿದ್ದ.
ಒಂದು ದಿನ ಫಾರಿಸ್ ಎಫಂಡಿಯು ಕಾಯಿಲೆಯಿಂದ ಬಳಲುತ್ತಿರುವ ವಿಷಯ ತಿಳಿದ ಗಿಬ್ರಾನ್ ಅವನ ಮನೆಗೆ ಹೋಗಿ ಆರೋಗ್ಯ ವಿಚಾರಿಸುತ್ತಿರುವಾಗ ಫಾರಿಸ್ ಪಕ್ಕದ ಕೋಣೆಯಲ್ಲಿರುವ ತನ್ನ ಮಗಳನ್ನು ಕರೆಯುವಂತೆ ಗಿಬ್ರಾನ್ ಗೆ ಹೇಳುತ್ತಾನೆ. ತಂದೆಯ ಅನಾರೋಗ್ಯ, ಮನ್ಸೂರ್ ಬೇ ಗಾಲಿಬ್ ನ ವಿಲಾಸಿ ಜೀವನ ಮತ್ತು ದಾಂಪತ್ಯದ ಬಿರುಕು ಇವುಗಳಿಂದ ಸಾಕಷ್ಟು ನೊಂದು ಕಣ್ಣೀರು ಸುರಿಸುತ್ತಿದ್ದ ಸೆಲ್ಮಾಳನ್ನು ಕಂಡು “Come Selma, come let us be strong towards before the tempest. Let us stand like a brave soldier before the enemy and face his weapons. If we are killed, we shall die as martyrs; If we win we shall live as heroes. ಎಂದು ಗಿಬ್ರಾನ್ ಅವಳಲ್ಲಿ ಧೈರ್ಯ ತುಂಬಿದನು. ಸೆಲ್ಮಾ ತಾಯಿಯನ್ನು ಕಳೆದು ಕೊಂಡ ತಬ್ಬಲಿಯಾಗಿದ್ದಳು. ಅವಳ ತಾಯಿ ತೀರಿಕೊಂಡಾಗ ಸೆಲ್ಮಾ ಕೇವಲ ಮೂರು ವರ್ಷದ ಹಸುಗೂಸು. ತನ್ನ ನಿಧನಾನಂತರ ಸೆಲ್ಮಾಳಿಗೆ ಸಹೋದರನಾಗಿ, ಸ್ನೇಹಿತನಾಗಿ ಅವಳ ನೋವು-ನಲಿವುಗಳಿಗೆ ಜೊತೆಯಾಗು ಎಂದು ಹೇಳಿ ಫಾರಿಸ್ ಕೊನೆಯುಸಿರೆಳೆಯುತ್ತಾನೆ.
ಲೆಬನಾನ್-ಬೇರೂತ್ ನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಆಲಿವ್, ಆಲ್ಮಂಡ್ ಮತ್ತು ವಿಲ್ಲೋ ಮರಗಳ ನಡುವೆ ಬಹಳ ಪುರಾತನ ಕಾಲದ ಒಂದು ಪಾಳುಬಿದ್ದ ದೇವಾಲಯವಿತ್ತು. ಅಲ್ಲಿ ತಿಂಗಳಿಗೊಮ್ಮೆ ಸೆಲ್ಮಾಮತ್ತು ಗಿಬ್ರಾನ್ ರಹಸ್ಯವಾಗಿ ಭೇಟಿಯಾಗಿ ಬಹಳ ಹೊತ್ತಿನವರೆಗೂ ತಮ್ಮ ಪ್ರೇಮದ ಭಾವಗಳನ್ನು ಹಂಚಿಕೊಳ್ಳುತ್ತಿದ್ದರು. ಅವರಿಬ್ಬರ ಸಂಭಾಷಣೆ ಕೇವಲ ಪ್ರೀತಿ ಪ್ರೇಮಕ್ಕೆ ಮಾತ್ರ ಸೀಮಿತವಾಗಿರಲಿಲ್ಲ ಗಂಡ-ಹೆಂಡತಿಯ ಸಂಬಂಧ, ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು.
ಅದೊಂದು ಜೂನ್ ತಿಂಗಳಿನ ದಿನ, ಪ್ರತಿ ಬಾರಿಯೂ ಹೋಗುತ್ತಿದ್ದಂತೆ ಅಂದು ಸೆಲ್ಮಾಳನ್ನು ಭೇಟಿಯಾಗಲು ಆ ಹಳೆಯ ದೇವಸ್ಥಾನದ ಬಳಿ ಕೂತು ಆಂಡಲೂಸಿಯಾ ಕವಿತೆಗಳನ್ನ ಓದುತ್ತಿದ್ದ ಖಲೀಲ್ ಗಿಬ್ರಾನನ್ನು ಕಂಡು ಭಾರವಾದ ಹೆಜ್ಜೆಗಳನ್ನು ಇಡುತ್ತಾ ಸೆಲ್ಮಾ ಅವನ ಬಳಿಗೆ ಬಂದು ಅವನ ತಲೆಯ ಮೇಲೆ ಕೈಯ ನೆರಿಸಿ ಹತ್ತಿರ ಬಾ ಎಂದು ಕರೆದಾಗ, ನಮ್ಮ ಭೇಟಿಯ ವಿಷಯ ಮನ್ಸೂರ್ ಬೇ ಗಾಲಿಬಗೆ ಗೊತ್ತಿದೆಯಾ ಎಂದು ಕೇಳಿದನು. ಅದಕ್ಕೆ ಅವಳು ನನ್ನ ಗಂಡ ನನ್ನ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಂಡಿಲ್ಲ, ಬಡ ಯುವತಿಯರ ಸೌಂದರ್ಯ ಸವಿಯುವಲ್ಲಿ ಮಗ್ನನಾಗಿದ್ದಾನೆ ಎಂದು ಹೇಳಿದಳು.
ಮದುವೆಯಾಗಿ 5 ವರ್ಷಗಳಾದರೂ ಸೆಲ್ಮಾಳಿಗೆ ಸಂತಾನ ಪ್ರಾಪ್ತಿಯಾಗಿರಲಿಲ್ಲ. ಮನ್ಸೂರ್ ಬೇ ಗಾಲೀಬನಿಗೆ ಅದು ಬೇಕಾಗಿರಲಿಲ್ಲ ಏಕೆಂದರೆ ಅವನು ಸಂಪತ್ತಿಗೆ ಆಸೆಪಟ್ಟವನು. ಸಲ್ಮಾ ಸಂತಾನ ಭಾಗ್ಯವನ್ನು ಕರುಣಿಸೆಂದು ಹಲವು ಬಾರಿ ದೇವರಲ್ಲಿ ಪ್ರಾರ್ಥಿಸಿದ್ದಳು. ಆ ಸಂಭ್ರಮದ ದಿನವನ್ನು ಕುತೂಹಲದಿಂದ ಎದುರು ನೋಡುತ್ತಿದ್ದಳು. ಕೊನೆಗೂ ಸಲ್ಮಾ ಸೂರ್ಯೋದಯಕ್ಕಿಂತ ಮುಂಚೆ ಒಂದು ಗಂಡು ಮಗುವಿಗೆ ಜನ್ಮವಿತ್ತಳು.ಆ ಕೋಠಡಿಯಲ್ಲಿ ಸಂತೋಷದ ವಾತಾವರಣ ತುಂಬಿ ತುಳುಕಿತ್ತು. ಸೇವಕರೆಲ್ಲ ಸುವಿಚಾರವನ್ನು ಮನ್ಸೂರ್ ಬೇ ಗಾಲಿಬ್ ಗೆ ತಿಳಿಸಲು ಉತ್ಸುಕರಾಗಿದ್ದರು.
ಆದರೆ ವೈದ್ಯರ ಮುಖದಲ್ಲಿ ಹತಾಶೆಯ ಭಾವನೆ ಮೂಡಿತ್ತು. ಆ ಮಗುವನ್ನು ತಮ್ಮ ಕೈಗಳಲ್ಲಿ ಎತ್ತಿಕೊಂಡಾಗ ವೈದ್ಯರ ಕಣ್ಣೀರು ಕೆನ್ನೆಯ ಮೇಲೆ ಜಾರಿತು, ಕಾರಣ ಆ ಹಸುಗೂಸು ಇಹಲೋಕವನ್ನು ತ್ಯಜಿಸಿತ್ತು ಆದರೆ ಹೊರಗಡೆ ನೆರೆ-ಹೊರೆಯವರು ಉತ್ತರಾಧಿಕಾರಿಯ ಆಗಮನವಾಗಿದೆ ಎಂದು ಉತ್ಸಾಹದಿಂದ ಸಂಭ್ರಮಿಸುತ್ತಿದ್ದರು. ವೈದ್ಯರು ಸೆಲ್ಮಾಳ ಮಗುವಿನ ಸಾವನ್ನು ಖಚಿತ ಪಡಿಸಿದ ನಂತರ ಆಕೆಯ ರೋಧನ ಮುಗಿಲು ಮುಟ್ಟಿತ್ತು. “Give me my child, bring him close to me and let me see him dead”. ಎಂದು ಕಿರುಚಿದಾಗ ವೈದ್ಯರು ಆ ಮಗುವಿನ ಶವವನ್ನು ಸೆಲ್ಮಾಳ ತೋಳುಗಳ ಮೇಲೆ ಮಲಗಿಸಿದರು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಸೆಲ್ಮಾ ಕೂಡಾ ಕೊನೆಯುಸಿರೆಳೆದಳು.
ಹಬ್ಬದ ವಾತಾವರಣದಂತಿದ್ದ ಆ ಸ್ಥಳದಲ್ಲಿ ಸ್ಮಶಾನ ಮೌನ ಆವರಿಸಿತ್ತು ಆದರೆ ಮನ್ಸೂರ್ ಬೇ ಗಾಲೀಬನ ಕಣ್ಣಲ್ಲಿ ಒಂದು ಹನಿ ನೀರೂ ಸಹ ಬರಲಿಲ್ಲ. ಕೈಯಲ್ಲಿ ಮದ್ಯದ ಗ್ಲಾಸ್ ಅನ್ನು ಹಿಡಿದುಕೊಂಡು ವಿಗ್ರಹದಂತೆ ನಿಂತಿದ್ದ. ಕೊನೆಗೆ ಸುಂದರವಾದ ಹಕ್ಕಿಯ ಎರಡು ರೆಕ್ಕೆಗಳಂತಿದ್ದ ತಾಯಿ-ಮಗುವಿನ ಶವವನ್ನು ಒಂದೇ ಶವಪೆಟ್ಟಿಗೆಯಲ್ಲಿ ಹಾಕಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡತೊಡಗಿದರು. ಅಲ್ಲಿಯ ಕೆಲವು ಜನರು “ಆ ಮಗು, ತಾಯಿಯನ್ನು ಕ್ರೂರ ತಂದೆಯಿಂದ ರಕ್ಷಣೆ ಕೊಡಲು ಬಂದಿತ್ತು” ಎಂದರೆ ಇನ್ನೂ ಕೆಲವರು “ಮನ್ಸೂರ್ ಬೇ ಗಾಲೀಬನ ಚಿಕ್ಕಪ್ಪ ಬಿಷಪ್ ಗಾಲೀಬನಿಗೆ ಮತ್ತೊಂದು ಮದುವೆ ಮಾಡಬಹುದೇನೋ” ಎಂಬಂತೆ ಮಾತನಾಡುತ್ತಿದ್ದರು. ಕೊನೆಗೆ ಆ ಶವವನ್ನು ಸ್ಮಶಾನದ ಗುಂಡಿಯಲ್ಲಿ ಹೂತು ಹಾಕುವಾಗ ಅಲ್ಲಿದ್ದವರೆಲ್ಲರೂ ಬಿಷಪ್ ಮತ್ತು ಮನ್ಸೂರ್ ಬೇ ಗಾಲೀಬನಿಗೆ ಸಂತೈಸಲು ಮುಂದೆ ಬರುತ್ತಿದ್ದರೇ ಹೊರತು ಗಿಬ್ರಾನನ ಕಡೆ ಒಬ್ಬರೂ ಹೊರಳಿ ನೋಡಲಿಲ್ಲ. ಕೊನೆಗೆ ಗುಂಡಿಯನ್ನು ಮುಚ್ಚುವ ವ್ಯಕ್ತಿಯನ್ನು ಕರೆದು ಫಾರಿಸ್ ಎಫಂಡಿಯು ಸಮಾಧಿ ಎಲ್ಲಿದೆ ನೆನಪಿದೆಯಾ ಎಂದಾಗ ಅವನು ಆ ಸಮಾಧಿಯ ಪಕ್ಕದಲ್ಲಿ ಸೆಲ್ಮಾಳ ಮತ್ತು ಅವಳ ಮಗುವನ್ನು ಸಮಾಧಿ ಮಾಡಿರುವುದಾಗಿ ತಿಳಿಸಿದನು. ಕೊನೆಗೆ ಇದೇ ಗುಂಡಿಯಲ್ಲಿ ನನ್ನ ಭಾರವಾದ ಹೃದಯವನ್ನು ಸಹ ಸಮಾಧಿ ಮಾಡಿದೆ ಎಂಬ ಮಾತನ್ನು ಗಿಬ್ರಾನ್ ಅತ್ಯಂತ ನೋವಿನಿಂದ ಹೇಳಿದ. ಸ್ಮಶಾನದ ಅಂತ್ಯಕ್ರಿಯೆ ಮುಗಿಸಿದ ವ್ಯಕ್ತಿ ಕಣ್ಮರೆಯಾಗುತ್ತಿದ್ದಂತೆ ಗಿಬ್ರಾನ್ ತನ್ನ ಪ್ರೇಯಸಿಯ ಸಮಾಧಿಯ ಮೇಲೆ ಬಿದ್ದು ಕಣ್ಣೀರು ಸುರಿಸತೊಡಗಿದ.
ಹೀಗೆ ಈ ಕಾದಂಬರಿ ದುರಂತ ಅಂತ್ಯವನ್ನು ಕಂಡಿತು. ಒಂದು ವೇಳೆ ಧರ್ಮಾಧಿಕಾರಿಯ ಧರ್ಮದ ಪ್ರಾಬಲ್ಯ ಇಲ್ಲದೇ ಹೋಗಿದ್ದರೆ ಸೆಲ್ಮಾ ಮತ್ತು ಗಿಬ್ರಾನ್ ಒಂದಾಗಬಹುದಿತ್ತೇನೋ? ಫಾರಿಸ್ ಕಾಯಿಲೆಯಿಂದ ಹಾಸಿಗೆ ಹಿಡಿದ ಸಂದರ್ಭದಲ್ಲಿ ಮಗಳನ್ನು ಮುಂದೆ ಕೂರಿಸಿಕೊಂಡು ಆಡುವ ಮಾತುಗಳು ಎಂತಹ ಕಠೋರ ಮನಸಿನ ವ್ಯಕ್ತಿಯಾದರೂ ಅವನ ಕಣ್ಣಲ್ಲಿ ನೀರು ಬರದೇ ಇರಲು ಸಾಧ್ಯವಿಲ್ಲ. ಖಲೀಲ್ ಗಿಬ್ರಾನ್ ಹಲವಾರು ಕಾವ್ಯ ರೂಪಕಗಳನ್ನು ಉಪಯೋಗಿಸಿದ್ದಾರೆ. ಸರಳ ಭಾಷಾ ಶೈಲಿ ಓದುಗರನ್ನು ಮತ್ತಷ್ಟು ಓದಲು ಪ್ರೇರೇಪಿಸುತ್ತದೆ. ಕಾದಂಬರಿ ಬಗ್ಗೆ ಹೇಳುವುದಕ್ಕಿಂತ ಕೇಳುವುದಕ್ಕಿಂತ ಸ್ವತಃ ಓದಿದಾಗ ಆಗುವ ಅನುಭವ ಅಪರಿಮಿತವಾದದ್ದು. ಇದು ದೊಡ್ಡ ಸಾಗರದಂತಿರುವ ಕಾದಂಬರಿಯನ್ನು ಬೊಗಸೆಯಲಿ ಹಿಡಿದಿಡುವ ನನ್ನ ಒಂದು ಸಣ್ಣ ಪ್ರಯತ್ನವಷ್ಟೆ…
ಶ್ರೀಧರ ಎಸ್ ವಾಣಿ
ಶಿಕ್ಷಕರು
ಸ.ಹಿ.ಪ್ರಾ.ಶಾಲೆ ಇಂದರಗಿ
ತಾ.ಜಿ. ಕೊಪ್ಪಳ
ಸಾ. ಕಲ್ಲತಾವರಗೇರಿ
583287
ದೂ.ಸಂ : 9972400298
shreedharvani7@gmail.com.