
ವಿದ್ಯಾರ್ಥಿಗಳು ಲಂಚಕೋರರ ವಿರುದ್ಧ ಜಾಗೃತಗೊಳ್ಳಬೇಕಿದೆ : ನ್ಯಾ. ಮಹಾಂತೇಶ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 30- ಕರ್ನಾಟಕ ಸರಕಾರ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪಳ ಹಾಗೂ ಲೋಕಾಯುಕ್ತ ಪೋಲಿಸ್ ಇಲಾಖೆವತಿಯಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಸಪ್ತಾಹ ಪ್ರಯುಕ್ತ “ಭ್ರಷ್ಟಾಚಾರ ನಿಗ್ರಹ ಅರಿವು” ಕುರಿತು ಜಾಗೃತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಿವಿಲ್ ನ್ಯಾಯಧೀಶ ಮಹಾಂತೇಶ ಎಸ್. ದರಗದ್ ನೆರವೇರಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಎಲ್ಲ ರಂಗಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು ಜಾಗೃತಗೊಳ್ಳಬೇಕಿದೆ. ಲಂಚ ಕೊಡುವುದು ಹಾಗೂ ತೆಗೆದುಕೊಳ್ಳುವುದು ತಪ್ಪು. ನಮ್ಮ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಈ ಭ್ರಷ್ಟಾಚಾರವು ಒಂದು ಪ್ರಮುಖ ಅಡಚಣೆಯಾಗಿದೆ ಇದರ ನಿರ್ಮೂಲನೆಗಾಗಿ ನಾಗರಿಕರು ಮತ್ತು ಖಾಸಗಿ ವಲಯದಂತಹ ಎಲ್ಲಾ ಪಾಲುದಾರರು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ಭ್ರಷ್ಟಾಚಾರ ನಿರ್ಮೂಲನೆಯ ಪ್ರತಿಜ್ಞೆಯನ್ನು ಭೋಧಿಸಿದರು.
ಈ ಸಂದರ್ಭದಲ್ಲಿ ಶ್ರೀ ಚಂದ್ರಪ್ಪ ಇ.ಟಿ, ಪ್ರಭಾರ ಡಿವೈಎಸ್ಪಿ ಕೊಪ್ಪಳ ಇವರು ಮಾತನಾಡುತ್ತ ಪ್ರತಿಯೊಬ್ಬ ನಾಗರಿಕರು ಜಾಗರೂಕನಾಗುವ ಅಗತ್ಯ ಇದೆ. ಎಲ್ಲಾ ಸಮಯದಲ್ಲಿ ಉನ್ನತ ಗುಣಮಟ್ಟದ ಪ್ರಮಾಣಿಕತೆ ಮತ್ತು ನಿಷ್ಠೆಗೆ ಬದ್ಧರಾಗಿರಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾ. ದೊಡ್ಡಮನಿ ಹನುಮಂತನಾಯ್ಕ ಇವರು ಮಾತನಾಡುತ್ತ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕು. ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಮಾಣಿಕತೆ ಮತ್ತು ಕಾನೂನಿನ ನಿಯಮಗಳನ್ನು ಅನುಸರಿಸಬೇಕು. ಪ್ರಮಾಣಿಕ ಮತ್ತು ಪಾರದರ್ಶಕ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಯಾವುದೇ ಭ್ರಷ್ಟಾಚಾರದ ಘಟನೆಯನ್ನು ಸೂಕ್ತ ಸಂಸ್ಥೆಗೆ ವರದಿ ಮಾಡವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರುಗಳಾದ ಶಿವನಾಥ ಇ.ಜಿ, ಸಂತೋಷಕುಮಾರಿ, ಸಿದ್ದಲಿಂಗೇಶ .ಹೆಚ್, ವಿದ್ಯಾರ್ಥಿಗಳು ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಪ್ರಾರ್ಥನೆ ಕು. ಸೃಷ್ಟಿಕಾ, ಸ್ವಾಗತ ಜ್ಞಾನೇಶ ಪತ್ತಾರ, ವಂದನಾರ್ಪಣೆ ಡಾ.ಟಿ.ವಿ. ವಾರುಣಿ ಹಾಗೂ ಕಾರ್ಯಕ್ರಮದ ನಿರೂಪಣೆ ಮಹಾಂತೇಶ ನೆಲಾಗಣಿ ನೆರವೇರಿಸಿದರು.