
ಸುನಿತಾ ವಿಲಿಯಮ್ಸ್ ತ್ರಿಶಂಕು ಸ್ಥಿತಿಯಲ್ಲಿ : ವೀಣಾ ಪಾಟೀಲ್
ಕರುನಾಡ ಬೆಳಗು ಸುದ್ದಿ
ಸುನೀತಾ ವಿಲಿಯಮ್ಸ್…. ಹೆಸರನ್ನು ಕೇಳಿದೊಡನೆ ಹೌದಲ್ವೇ! ಆಕೆ ಇನ್ನೂ ಬಾಹ್ಯಾಕಾಶದಿಂದ ಮರಳಿ ಬಂದಿಲ್ಲ ಎಂಬ ವಿಚಾರ ಥಟ್ಟನೆ ಮನಸ್ಸಿಗೆ ಬಂದು ಕೊಂಚ ಕಸಿವಿಸಿಯನ್ನು ಉಂಟುಮಾಡುತ್ತದೆ, ಮನ ಕೇಡನ್ನು ಶಂಕಿಸಿ ಗಾಬರಿಗೊಳ್ಳುತ್ತದೆ, ಎದೆ ಬಡಿತ ಹೆಚ್ಚಾಗುತ್ತದೆ. 2003 ಫೆಬ್ರುವರಿ ಒಂದರಂದು ಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಮರಳುತ್ತಿದ್ದ ಸಂದರ್ಭದಲ್ಲಿ ನೌಕೆಯ ಉಷ್ಣ ನಿರೋಧಕ ಕವಚಕ್ಕೆ ಆದ ಹಾನಿಯಿಂದಾಗಿ ಭಾರತೀಯ ಮೂಲದ ಕಲ್ಪನಾ ಚಾವ್ಲಾ ಸೇರಿದಂತೆ ಏಳು ಜನ ಗಗನಯಾನಿಗಳು ಮೃತಪಟ್ಟದ್ದು ನೆನಪಾಗುತ್ತದೆ. ಅದರಲ್ಲೂ ಭಾರತೀಯ ಮೂಲದ ಕಲ್ಪನಾ ಚಾವ್ಲಾಳ ದುರಂತ ಅಂತ್ಯದ ನೆನಪಾಗಿ ಮನ ನಡುಗುತ್ತದೆ. ಮರುಕ್ಷಣವೇ ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿ ಮರಳಿ ಬರಲಿ ಎಂದು ಮನ ಹಾರೈಸುತ್ತದೆ.
ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಅವರ ತಂದೆ ಗುಜರಾತ್ ನ ಮೆಹಸಾನಾ ಜಿಲ್ಲೆಯವರು. ಅಮೆರಿಕಾದ ಒಹಾಯೋ ರಾಜ್ಯದಲ್ಲಿ ನೆಲೆಸಿರುವ ಅವರಿಗೆ 1965 ಸೆಪ್ಟೆಂಬರ್ 19 ರಂದು ಸುನೀತಾ ವಿಲಿಯಮ್ಸ್ ಜನಿಸಿದಳು. ತನ್ನ ಸಾಂಪ್ರದಾಯಿಕ ಶಿಕ್ಷಣವನ್ನು ಪೂರೈಸಿದ ಸುನಿತಾ ಅಮೆರಿಕಾದ ನೌಕಾಪಡೆಯಲ್ಲಿ ಕ್ಯಾಪ್ಟನ್ ಆಗಿದ್ದರು. ಮುಂದೆ 1998ರಲ್ಲಿ ನಾಸಾದ ಗಗನಯಾನಿಯಾಗಿ ಆಕೆ ಆಯ್ಕೆಯಾದಳು. ಹಲವಾರು ವರ್ಷಗಳ ಸತತ ತರಬೇತಿಗಳ ನಂತರ ಮೊದಲ ಬಾರಿ 2007ರಲ್ಲಿ ಆಕೆ ನಾಸಾದ ಗಗನಯಾತ್ರಿಯಾಗಿ ಅಂತರಿಕ್ಷಯಾನ ಮಾಡಿದ್ದಳು. 2012ರಲ್ಲಿ ಎರಡನೇ ಬಾರಿ ಬಾಹ್ಯಾಕಾಶ ಯಾನವನ್ನು ಮಾಡಿ ಅತಿ ಹೆಚ್ಚು ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದ ಸುನೀತಾ ವಿಲಿಯಂ ಮೊದಲ ಬಾರಿ 2007ರಲ್ಲಿ ನಾಲ್ಕು ಸಲ ಬಾಹ್ಯಾಕಾಶ ನಡಿಗೆಯನ್ನು ಕೈಗೊಂಡರೆ, ಎರಡನೇ ಬಾರಿ ಮೂರು ಸಲ ಬಾಹ್ಯಾಕಾಶ ನಡಿಗೆಯನ್ನು ಕೈಗೊಂಡಿದ್ದರು. ಮೊದಲ ಎರಡು ಅವಧಿಯಲ್ಲಿ ಅವರು ಒಟ್ಟು 322 ದಿನಗಳನ್ನು ಅಂತರಿಕ್ಷದಲ್ಲಿ ಕಳೆದಿದ್ದಾರೆ.ಇದೀಗ ಆಕೆ ಅತ್ಯಂತ ಅನುಭವಿ ಮಹಿಳಾ ಗಗನಯಾನಿ.
ಈ ಹಿಂದೆ ಬಾಹ್ಯಾಕಾಶಯಾನಕ್ಕೆ ಬಳಸುತ್ತಿದ್ದ ಗಗನನೌಕೆಗೆ ಪರ್ಯಾಯವಾಗಿ ಇದೀಗ ಬೋಯಿಂಗ್ ಸ್ಟಾರ್ ಲೈನರ್ ನವರ ಸ್ಪೇಸ್ ಕ್ಯಾಪ್ಸುಲ್ನಲ್ಲಿ ಒಂದು ವಾರ ಕಾಲದ ಕಾರ್ಯನಿಮಿತ್ತ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ 2024ರ ಜೂನ್ 5ರಂದು ತನ್ನ ಸಹೋದ್ಯೋಗಿ ಬುಚ್ ವಿಲ್ಮೋರ್ ಅವರೊಂದಿಗೆ ಪಯಣಿಸಿದ್ದ ಸುನಿತಾ 14ನೇ ತಾರೀಕಿನಂದು ಅದೇ ಸ್ಪೇಸ್ ಕ್ಯಾಪ್ಸೂಲ್ ನಲ್ಲಿ ಮರಳಿ ಬರಬೇಕಿತ್ತು…. ಆದರೆ ಕಾರಣಾಂತರಗಳಿಂದ ಅವರ ಪಯಣ ಸಾಧ್ಯವಾಗದೆ ಇಬ್ಬರೂ ಗಗನಯಾನಿಗಳು ಅಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಉಂಟಾಗಿದೆ.
ಈ ಹಿಂದೆ ಸ್ಟಾರ್ ಲೈನರ್ 2019 ರಲ್ಲಿ ತನ್ನ( ಸ್ಪೇಸ್ ಕ್ಯಾಪ್ಸುಲ್) ಬಾಹ್ಯಾಕಾಶಕೋಶವನ್ನು ಮಾನವರಹಿತವಾಗಿ ಉಡಾಯಿಸಿದ್ದು ಅದು ಕಕ್ಷೆಗೆ ಸೇರಲು ಯಶಸ್ವಿಯಾಗಿದ್ದರೂ ಕೂಡ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿರಲಿಲ್ಲ. ಮತ್ತೆ 2022 ರಲ್ಲಿ ಮತ್ತೊಮ್ಮೆ ಬಾಹ್ಯಾಕಾಶಯಾನ ಪರೀಕ್ಷೆ ನಡೆಸಿದಾಗ ಅದು ಯಶಸ್ವಿಯಾಗಿದ್ದರೂ ಹಿಂದಿರುಗಿದ ಬಾಹ್ಯಾಕಾಶಕೋಶ (ಸ್ಪೇಸ್ ಕ್ಯಾಪ್ಸುಲ್ನಲ್ಲಿ) ದಲ್ಲಿ ಹಲವಾರು ದೋಷಗಳಿದ್ದುದು ಪತ್ತೆಯಾಗಿತ್ತು.
ಇದೀಗ ಮೂರನೇ ಬಾರಿ ಅಮೆರಿಕದ ನಾಸಾ ಗಗನ ಯಾನ ಸಂಸ್ಥೆ ಮತ್ತು ಮತ್ತು ಬೋಯಿಂಗ್ ಸ್ಟಾರ್ ಲೈನರ ಗಳು ಜಂಟಿಯಾಗಿ ಜೂನ್ 5ರಂದು ಮೊದಲ ಮಾನವಸಹಿತ ಬಾಹ್ಯಾಕಾಶ ಪಯಣಕ್ಕೆ ನನ್ನದ್ದವಾಗಿರುವ ಸ್ಪೇಸ್ ಕ್ಯಾಪ್ಸುಲನ್ನು ಪರೀಕ್ಷಿಸುವ ಸಲುವಾಗಿ ಅಮೆರಿಕಾದ ಫ್ಲೋರಿಡಾದಿಂದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು 400 ಕಿಲೋಮೀಟರ್ ದೂರದ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ದಿದೆ.
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಿವಿಧ ಸಂಶೋಧನಾ ಕಾರ್ಯಗಳಲ್ಲಿ ತೊಡಗಿರುವ ಇನ್ನಿತರ ಏಳು ಗಗನಯಾತ್ರಿಗಳ ಕೆಲಸಕ್ಕೆ ನೆರವಾಗಲು ಈ ಇಬ್ಬರು ಗಗನಯಾತ್ರಿಗಳು ಹೋಗಿದ್ದಾರೆ.. ಇಂಜಿನ್ ನಲ್ಲಿ ಕಂಡು ಬಂದ ದೋಷದಿಂದಾಗಿ ನೌಕೆಯನ್ನು ಸ್ವಯಂಚಾಲಿತವಾಗಿ ಬಾಹ್ಯಾಕಾಶ ನಿಲ್ದಾಣಕ್ಕೆ ಜೋಡಿಸುವಂತಹ ವ್ಯವಸ್ಥೆ ಇತ್ತು. ಆದರೆ ಈ ಸ್ವಯಂ ಚಾಲಿತ ವ್ಯವಸ್ಥೆಯು ವಿಫಲವಾದ ಕಾರಣ ಬಾಹ್ಯಾಕಾಶ ನಿಲ್ದಾಣಕ್ಕೆ ನೌಕೆಯನ್ನು ಜೋಡಿಸಲು ಸುನೀತಾ ಮತ್ತು ವಿಲ್ಮೋರ್ ಹರಸಾಹಸ ಪಡಬೇಕಾಯಿತು.
ಸ್ಟಾರ್ ಲೈನರ್ ಬಾಹ್ಯಾಕಾಶಕೋಶದಲ್ಲಿನ ಯಾಂತ್ರಿಕ ದೋಷಗಳು ಪರಿಹಾರವಾಗಲಿವೆ ಎಂಬ ವಿಶ್ವಾಸ ನಾಸಾ ಮತ್ತು ಬೋಯಿಂಗ್ ಸಂಸ್ಥೆಗಳಿಗೆ ಇದೆ. ಅದೇ ಬಾಹ್ಯಾಕಾಶ ನೌಕೆಯಲ್ಲಿ ಇಬ್ಬರೂ ಭೂಮಿಗೆ ಮರಳುವ ನಿರೀಕ್ಷೆಯು ಇದೆ… ಇದರ ಜೊತೆಗೆ ಅವರಿಬ್ಬರನ್ನು ಮತ್ತೆ ಭೂಮಿಗೆ ಮರಳಿ ತರಲು ಬೇರೊಂದು ಮಾರ್ಗವನ್ನು ಕೂಡ ವಿಜ್ಞಾನಿಗಳು ಯೋಚಿಸುತ್ತಿದ್ದಾರೆ… ಆದರೆ ಅದು ಕಾರ್ಯಗತಗೊಂಡರೂ ಕೂಡ ಆರು ತಿಂಗಳ ಕಾಲ ಕಾಯಬೇಕಾಗಿದೆ.
ಸದ್ಯದ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಸುನಿತಾ ಮತ್ತು ವಿಲ್ಮೋರ್ ಹಲವಷ್ಟು ಮನೋದೈಹಿಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಸಾಕಷ್ಟು ವಿಕಿರಣಗಳಿಗೆ ಆಕೆ ಮತ್ತು ಆಕೆಯ ಸಹೋದ್ಯೋಗಿ ತೆರೆದುಕೊಳ್ಳುವುದರಿಂದ ವಿಕಿರಣ ಸಂಬಂಧಿ ರೋಗಗಳಿಗೆ ಒಳಗಾಗುವ ಅಪಾಯ ಇರುತ್ತದೆ. ಶೂನ್ಯ ಗುರುತ್ವಾಕರ್ಷಣೆ ಇರುವ ಬಾಹ್ಯಾಕಾಶದಲ್ಲಿ ಮೂಳೆಯ ಸಾಂದ್ರತೆ ಕಡಿಮೆಯಾಗುವ ಮಾಂಸ ಖಂಡಗಳು ಕ್ಷೀಣಿಸುವ ಅಪಾಯ ಎದುರಾಗಬಹುದು. ಇದರ ಜೊತೆಗೆ ಮಾನಸಿಕವಾಗಿಯೂ ಕುಗ್ಗಬಹುದಾದ ಸಂಭವನೀಯತೆಗಳು ಅಧಿಕ.
ಆಶಾದಾಯಕ ಸಂಗತಿ ಎಂದರೆ ಗಗನಯಾತ್ರಿಗಳು ಒಮ್ಮೆ ಬಾಹ್ಯಾಕಾಶ ನಿಲ್ದಾಣಕ್ಕೆ ಹೋದರೆ ಆರು ತಿಂಗಳುಗಳ ಕಾಲ ಅಲ್ಲಿಯೇ ಉಳಿಯಬೇಕಾಗುತ್ತದೆ… ಕೆಲವೊಮ್ಮೆ ಒಂದು ವರ್ಷವೂ ಆಗಬಹುದು. ಅದಕ್ಕೆ ಬೇಕಾದ ಮಾನಸಿಕ ಸಿದ್ಧತೆಗಳನ್ನು ಬಾಹ್ಯಾಕಾಶಯಾನಿಗಳು ಮಾಡಿಕೊಂಡಿರುತ್ತಾರೆ.
ಏನೇ ಆದರೂ ಅನುಭವಿ ಗಗನಯಾನಿಗಳಾಗಿರುವ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸುರಕ್ಷಿತವಾಗಿ ಭೂಮಿಗೆ ಮರಳಿ ಬರಲಿ ಎಂದು ಇಡೀ ಜಗದ ಜನರ ಪ್ರಾರ್ಥನೆ ಫಲಿಸಲಿ.