
ತಾಯಿಯ ಹೆಸರಲ್ಲಿ ಒಂದು ವೃಕ್ಷ ಅಭಿಯಾನ ಕಾರ್ಯಕ್ರಮದಲ್ಲಿ ಪಿಡಿಓ ಹೇಳಿಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 23- ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ, ಅದಕ್ಕಾಗಿ ಪ್ರತಿಯೊಬ್ಬರೂ ತಾಯಿಯ ಹೆಸರಿನಲ್ಲಿ ಒಂದು ಸಸಿಗಳನ್ನು ನೆಡುವ ಸಂಕಲ್ಪ ಮಾಡಬೇಕು ಎಂದು ಮೈಲಾಪುರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸೈಯದ್ ಜೆ.ಬಿ ಅವರು ಹೇಳಿದರು.
ತಾಲೂಕಿನ ಸೋಮನಾಳ ಗ್ರಾಮದ ಅಂಬೇಡ್ಕರ್ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲೂಕು ಪಂಚಾಯತ, ಸಾಮಾಜಿಕ ವಲಯ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತಿ ರವರ ಸಹಯೋಗದಲ್ಲಿ ಗುರುವಾರದಂದು ಆಯೋಜಿಸಲಾದ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ದೇಶದ ಪ್ರಧಾನ ಮಂತ್ರಿ ಅವರು ಪ್ರತಿಯೊಬ್ಬರೂ ಪರಿಸರವನ್ನು ಬೆಳೆಸಿ, ಸಂರಕ್ಷಣೆ ಮಾಡುವ ಉದ್ದೇಶದಿಂದ ಪರಿಸರ ದಿನದ ಅಂಗವಾಗಿ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ನೆಡುವ ಕಾರ್ಯಕ್ರವನ್ನು ದೇಶದೆಲ್ಲೆಡೆ ಹಮ್ಮಿಕೊಳ್ಳಲಾಗಿದೆ. ಬರೀ ಕಾರ್ಯಕ್ರಮಗಳ ಮಾಡಿ ಸಸಿಗಳನ್ನ ನೆಟ್ಟರೆ ಸಾಲದು ಅವುಗಳನ್ನು ಪೋಷಿಸಿ ಬೆಳಿಸಿ ದೊಡ್ಡ ಮರಗಳನ್ನಾಗಿ ಮಾಡಬೇಕು. ನಾವೆಲ್ಲರೂ ತಾಯಿಯ ಮೇಲಿನ ಪ್ರೀತಿ ಮತ್ತು ಗೌರವದ ಸಂಕೇತವಾಗಿ ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದರು.
ಸಾಮಾಜಿಕ ವಲಯ ಅರಣ್ಯ ಇಲಾಖೆಯ ಗಸ್ತು ಪಾಲಕರಾದ ಶಿವಶರಣ ಕೋಳಿ ಅವರು ಮಾತನಾಡಿ ದಿನೇ ದಿನೇ ಪರಿಸರ ನಾಶವಾಗಿ ತಾಪಮಾನ ಏರಿಕೆಯಂತಹ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹಾಗಾಗಿ ಭೂಮಿ ತಾಯಿಯನ್ನು ಕಾಪಾಡುವುದು ಅತಿ ಅವಶ್ಯಕವಾಗಿದೆ. ಮುಂದಿನ ಪೀಳಿಗೆಗೆ ಸುಂದರವಾದ ಪರಿಸರವನ್ನು ಉಳಿಸುವ ಬಗ್ಗೆ ಯೋಚಿಸಬೇಕು. ಇದಕ್ಕೆಲ್ಲ ಸಸಿ ನೆಡುವುದೊಂದೇ ಪರಿಹಾರವಾಗಿದೆ ಎಂದರು.
ಈ ವೇಳೆ ಗ್ರಾಮ ಪಂಚಾಯತಿ ಕಾರ್ಯದರ್ಶಿ ಸಂದೀಪ್, ತಾಲೂಕು ಪಂಚಾಯತ ಐಇಸಿ ಸಂಯೋಜಕ ಸೋಮನಾಥ ಗೌಡರ್, ಗ್ರಾಮದ ಪ್ರಮುಖರಾದ ಬಸವರಾಜ್ ತಳವಾರ, ರಾಜಪ್ಪ ಭಾವಿಕಟ್ಟಿ, ಶಾಲಾ ಮುಖ್ಯೋಪಾಧ್ಯಾಯ ಬೆಟ್ಟದಪ್ಪ ಕುಂಬಾರ್, ಶಿಕ್ಷಕರಾದ ರಮೇಶ್ ಖ್ಯಾಡೇದ್ , ಗ್ರಾ.ಪಂ ಸಿಬ್ಬಂದಿಗಳಾದ ಲಿಂಗರಾಜ್, ನಾಗರಾಜ್, ಸೇರಿ ನರೇಗಾ ಕೂಲಿಕಾರರು ಇದ್ದರು.