
ಜಲಾಶಯದ 19ನೇ ಗೇಟ್ ಚೈನ್‌ಲಿಂಕ್ ಕಟ್ ಆಗಿರುವುದಕ್ಕೆ ಟಿ.ಬಿ ಬೋರ್ಡ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ : ಚನ್ನಬಸವ ಜೇಕಿನ್
ಕರುನಾಡ ಬೆಳಗು ಸುದ್ದಿ
ಗಂಗಾವತಿ, 16- ಸುಮಾರು 70 ವರ್ಷದ ಹಿಂದೆ ನಿರ್ಮಾಣವಾದ ತುಂಗಭದ್ರಾ ಜಲಾಶಯದ 19ನೇ ಗೇಟ್‌ನ ಚೈನ್‌ಲಿಂಕ್ ಕಟ್ ಆಗಿ ನೀರು ರಭಸವಾಗಿ ಅದೊಂದೇ ಗೇಟ್‌ನಲ್ಲಿ ದಿನಕ್ಕೆ ಸುಮಾರು 30 ಸಾವಿರದಿಂದ 40 ಸಾವಿರ ಕ್ಯೂಸೆಕ್ಸ್ ನೀರು ಪೋಲಾಗುತ್ತಿದೆ. ಇದರಲ್ಲಿ ಜಲಾಶಯದ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ ಎಂದು ಕನ್ನಡಸೇನೆ ಸಂಘಟನೆಯ ಕೊಪ್ಪಳ ಜಿಲ್ಲಾಧ್ಯಕ್ಷರಾದ ಚನ್ನಬಸವ ಜೇಕಿನ್ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಜಲಾಶಯದ ನೀರು ಪೋಲಾಗದಂತೆ, ಶೀಘ್ರದಲ್ಲಿ ಗೇಟ್ ಅಳವಡಿಸುವ ಮೂಲಕ ರೈತರ ಎರಡನೇ ಬೆಳೆಗೆ ನೀರು ಲಭಿಸುವಂತೆ ಶಿಸ್ತು ಕ್ರಮವಹಿಸಲು ಸರ್ಕಾರಕ್ಕೆ ಸೂಚನೆ ನೀಡಲು ಒತ್ತಾಯಿಸಿ ಆಗಸ್ಟ್-14 ಬುಧವಾರದಂದು ಗೌರವಾನ್ವಿತ ರಾಜ್ಯಪಾಲರಿಗೆ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಈಗ ಜಲಾಶಯಕ್ಕೆ ಗೇಟ್ ಅಳವಡಿಸಲು ಸುಮಾರು ೫೫ ರಿಂದ ೬೦ ಟಿ.ಎಂ.ಸಿ ನೀರನ್ನು ಖಾಲಿ ಮಾಡಿದಾಗ ಮಾತ್ರ ಸಾಧ್ಯ ಎಂದು ಹೇಳಲಾಗುತ್ತಿದೆ. ಜಲಾಶಯಕ್ಕೆ ಭೇಟಿ ನೀಡಿದ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರರವರು, ಗೇಟ್ ಕಟ್ ಆಗಿರುವುದಕ್ಕೆ ಯಾರೂ ಹೊಣೆಗಾರರಲ್ಲ, ಯಾರನ್ನೂ ದೂಷಿಸಲಾಗದು ಎಂದು ನಿರ್ಲಕ್ಷ್ಯತನದ ಹೇಳಿಕೆ ನೀಡಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳು ಜಲಾಶಯಕ್ಕೆ ತಜ್ಞರ ಸಲಹೆಯಂತೆ ಕನಿಷ್ಟ ೫೦ ವರ್ಷಗಳಿಗೊಮ್ಮೆ ಗೇಟ್ ಬದಲಾಯಿಸಬೇಕಿತ್ತು, ಆದರೆ ಬದಲಾಯಿಸದಿದ್ದರಿಂದ ಈ ಅವಘಡ ಸಂಭವಿಸಿದೆ. ಆದರೆ ನೀರು ಪೋಲಾಗದಂತೆ ತಾತ್ಕಾಲಿಕ ಗೇಟ್ ಅಳವಡಿಸಲು ಸೂಚಿಸಲಾಗಿದೆ ಎಂದು ಹೇಳಿರುತ್ತಾರೆ.
ಈಗಾಗಲೇ ಜಲಾಶಯದ 19ನೇ ಗೇಟ್ ಕಟ್ ಆಗಿ ಸುಮಾರು ೩-೪ ದಿನಗಳು ಕಳೆದಿವೆ. ಈ ಬಾರಿ ಜಲಾಶಯದಲ್ಲಿ ಅಧಿಕ ಪ್ರಮಾಣದಲ್ಲಿ ೧೦೫ ಟಿ.ಎಂ.ಸಿ ನೀರು ಸಂಗ್ರಹವಾಗಿತ್ತು. ಆದರೆ ಈಗ ಜಲಾಶಯದ ನೀರು ವ್ಯರ್ಥವಾಗಿ ಹೋರಹೋಗುತ್ತಿರುವುದರಿಂದ ರೈತರು ಎರಡನೇ ಬೆಳೆಗೆ ನೀರು ಇಲ್ಲದಂತಾ, ಕಷ್ಟದ ಪರಿಸ್ಥಿತಿ ಎದುರಾಗಲಿರುವ ಬಗ್ಗೆ ಚಿಂತೆಗೀಡಾಗಿದ್ದಾರೆ. ಕಳೆದ2-3 ವರ್ಷಗಳಿಂದ ಬರಗಾಲದಲ್ಲಿದ್ದ ರೈತರು ಈ ಬಾರಿ ಅಧಿಕ ಪ್ರಮಾಣದ ನೀರು ಸಂಗ್ರಹವಾಗಿದ್ದಕ್ಕೆ ಸಂತಸದಿAದಿದ್ದರು. ತುಂಗಭದ್ರಾ ಜಲಾಶಯದ ಮಂಡಳಿ ಹಾಗೂ ಸರ್ಕಾರ ಜಲಾಶಯದ ಗೇಟ್‌ನ ಅಳವಡಿಕೆಯಲ್ಲಿ ತೀವ್ರ ನಿರ್ಲಕ್ಷ್ಯ ತೋರುತ್ತಾ, ಜಲಾಶಯದ ನೀರು ವ್ಯರ್ಥವಾಗಿ ಹರಿಯುತ್ತಿದ್ದರೂ ಕಣ್ಣುಮುಚ್ಚಿ ಕುಳಿತಿರುವುದಲ್ಲದೇ ಬೇಕಾಬಿಟ್ಟಿ ನಿರ್ಲಕ್ಷ್ಯತನದ ಹೇಳಿಕೆಗಳನ್ನು ನೀಡುತ್ತಿರುವುದು ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕಾರಣ ಸರ್ಕಾರಕ್ಕೆ ಈ ಭಾಗದ ರೈತರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಜಲಾಶಯದ ನೀರು ಪೋಲಾಗದಂತೆ ಕ್ರಮವಹಿಸಲು ಸರ್ಕಾರಕ್ಕೆ ಸೂಚನೆ ನೀಡಲು ರೈತರ ಪರವಾಗಿ ಘನತೆವೆತ್ತ ರಾಜ್ಯಪಾಲರಲ್ಲಿ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಆದಿಲ್‌ಪಾಷಾ ಮುಸ್ಟೂರು, ಜಿಲ್ಲಾ ಎಸ್.ಸಿ/ಎಸ್.ಟಿ ಘಟಕದ ಅಧ್ಯಕ್ಷರಾದ ಶಿವಪ್ಪ ವಿನೋಬನಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಆನಂದ ಎಸ್, ಗಂಗಾವತಿ ತಾಲೂಕ ಅಧ್ಯಕ್ಷರಾದ ಮಂಜುನಾಥ ಪತ್ತಾರ, ಕನ್ನಡಪರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಪೀರ್ ಮಹಮ್ಮದ್, ಉಪಾಧ್ಯಕ್ಷರಾದ ರಮೇಶ, ಸಂಘಟನಾ ಕಾರ್ಯದರ್ಶಿಯಾದ ಮಲ್ಲೇಶ ನಾಯ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.