
ಸ್ವಚ್ಛತೆಯ ಕಲ್ಪನೆಯು ನಮ್ಮಿಂದಲೇ ಪ್ರಾರಂಭವಾಗಬೇಕು : ಬಸಮ್ಮ ಹುಡೇದ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 25- ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ಸಂಜಿವಿನಿ ಸಂಘದ ಮಹಿಳೆಯರಿಂದ ಶ್ರಮದಾನ ಹಾಗು ಸ್ವಚ್ಛತೆಯ ಜಾಗೃತಿ ಕಾರ್ಯಕ್ರಮವು ಓಜನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆಯಿತು.
ಜಿಲ್ಲಾ ಎಸ್‌ಬಿಎಂ ಸಮಾಲೋಚಕರಾದ ಬಸಮ್ಮ ಹುಡೇದ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಂದು ಕುಟುಂಬದ ಸದಸ್ಯರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರತಿ ವಾರಕ್ಕೆ ಕನಿಷ್ಠ ೦೨ ಗಂಟೆಯಾದರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಸ್ವಚ್ಛತೆ ಎನ್ನುವ ಕಲ್ಪನೆ ನಮ್ಮಿಂದಲೇ ಪ್ರಾರಂಭವಾಗಬೇಕು ಎಂದು ತಿಳಿಸಿದರು.
ಪ್ರತಿ ದಿನ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕಿಸಿ ಸ್ವಚ್ಛವಾಹಿನಿಗೆ ನೀಡಬೇಕು. ವಸ್ತುಗಳನ್ನು ಖರೀದಿಸಲು ಹೋಗುವಾಗ ಮನೆಯಿಂದಲೇ ಬಟ್ಟೆ ಚೀಲ ತೆಗೆದುಕೊಂಡು ಹೋದಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಬೀಳಲಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಲಾ ಅಂಗನವಾಡಿ, ದೇವಸ್ಥಾನ, ಮಸೀದಿ, ಮಂದಿರಗಳು, ಕಲ್ಯಾಣಿ, ಬಾವಿ, ಗೊಕಟ್ಟೆ ನಾಲಾಗಳನ್ನು ಸ್ವಚ್ಛಗೊಳಿಸುವ ಶ್ರಮದಾ£ ಕಾರ್ಯಕ್ರಮದಲ್ಲಿ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ನಿರಂತರವಾಗಿ ಭಾಗವಹಿಸಿ ಸ್ವಚ್ಛತೆಯೇ ಸೇವೆ ಎನ್ನುವ ಪದಕ್ಕೆ ಅರ್ಥ ಕಲ್ಪಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್‌ಬಿಎಂ ಜಿಲ್ಲಾ ಐಇಸಿ ಸಂಯೋಜಕ ಮಾರುತಿ ನಾಯಕ, ತಾಲ್ಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಒಜನಹಳ್ಳಿ ಗ್ರಾ.ಪಂ ಅಧ್ಯಕ್ಷರಾದ ಹುಚ್ಚಪ್ಪ ಭೋವಿ, ಗ್ರಾ.ಪಂ ಸದಸ್ಯರಾದ ದ್ಯಾಮನಗೌಡ ಮಾಲಿಪಾಟೀಲ್, ಹುಚ್ಚಪ್ಪ ಮೇಟಿ, ಅನ್ನಪೂರ್ಣ ಜಂತ್ಲಿ, ಶಶಿಕಲಾ ಈಶ್ವರ್ ಗೌಡ್ರು, ಒಕ್ಕೂಟದ ಅಧ್ಯಕ್ಷರಾದ ಪುಷ್ಪ ಪೊಲೀಸ್ ಪಾಟೀಲ್, ಗ್ರಾಮ ಪಂಚಾಯತಿ ಕಾರ್ಯದರ್ಶಿ ಆದಯ್ಯಸ್ವಾಮಿ ಹೇರೂರು, ಗ್ರಾಮ ಕಾಯಕ ಮಿತ್ರ ಮೆಹಬೂಬಿ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಂಜೀವಿನಿ ಸಂಘದ ಮಹಿಳೆಯರು ಹಾಜರಿದ್ದರು.