WhatsApp Image 2024-08-23 at 7.04.46 PM

ನಾಡ ದೇವಿ ಭುವನೇಶ್ವರಿ ಪ್ರತಿಮೆ ಸಿದ್ದಗೊಳ್ಳುತ್ತಿರುವ ಸ್ಥಳಕ್ಕೆ ಸಚಿವ ತಂಗಡಗಿ ಭೇಟಿ, ಪರಿಶೀಲನೆ

ಕರುನಾಡ ಬೆಳಗುಬ ಸುದ್ದಿ

ಬೆಂಗಳೂರು, 23- ಬೆಂಗಳೂರಿನ ಹೊರ ವಲಯದ ಫ್ಯಾಕ್ಟರಿವೊಂದರಲ್ಲಿ ಸಿದ್ದಗೊಳ್ಳುತ್ತಿರುವ ನಾಡದೇವಿ ಭುವನೇಶ್ವರಿ ಪ್ರತಿಮೆಯ ಸ್ಥಳಕ್ಕೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ನವೆಂಬರ್ 1ಕ್ಕೆ ಪ್ರತಿಮೆ ನಾಡ ದೇವಿಯ ಕಂಚಿನ ಪ್ರತಿಮೆಯನ್ನು ಅನಾವರಣ ಗೊಳಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಬಾಗಲಗುಂಟೆಯಲ್ಲಿರುವ ಶಿಲ್ಪಿ ಕೆ. ಶ್ರೀಧರ್ಮೂರ್ತಿ ಅವರ ಫ್ಯಾಕ್ಟರಿಗೆ ಸಚಿವರು ಭೇಟಿ ನೀಡಿ ಮಾಹಿತಿ ಪಡೆದರು.

ಮೊದಲು ಸಿಮೆಂಟಿನಲ್ಲಿ ಪ್ರತಿಮೆ ನಿರ್ಮಿಸಿ ನಂತರ ಫೈಬರ್ ಗ್ಲಾಸ್ ನಲ್ಲಿ ಅಚ್ಚು ತೆಗೆದು ಕಂಚಿನಲ್ಲಿ ಎರಕ ಹಾಕಲಾಗುತ್ತದೆ. ಈಗಾಗಲೇ ಸಿಮೆಂಟ್ ನಲ್ಲಿ ಪ್ರತಿಮೆ ನಿರ್ಮಿಸಲಾಗಿದ್ದು ಅಂದಾಜು 45 ದಿನಗಳಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಸಚಿವರಿಗೆ ಶಿಲ್ಪಿ ಶ್ರೀಧರ್ ಮೂರ್ತಿ ತಿಳಿಸಿದರು.

ನಾಡ ದೇವಿ ಪ್ರತಿಮೆಯ ಹಿಂದೆ ಕರ್ನಾಟಕ ನಕ್ಷೆ ಹಾಗೂ ಉಬ್ಬು ಶಿಲ್ಪ ಇರಲಿದೆ. ಮುಂಭಾಗದಲ್ಲಿ ಭೌಗೋಳಿಕ ನಕ್ಷೆ ಇದ್ದರೆ ಹಿಂಬದಿಯಲ್ಲಿ ನಾಡಗೀತೆಯನ್ನು ಕೆತ್ತಲಾಗಿದೆ. ಕರ್ನಾಟಕದ ಪ್ರಸಿದ್ಧ ಶಿಲ್ಪಕಲಾ ಶೈಲಿಗಳಾದ ಹೊಯ್ಸಳ ಚಾಲುಕ್ಯ ಕದಂಬ ಹಾಗೂ ಆಧುನಿಕ ನೈಜ ಶಿಲ್ಪಗಳ ಶೈಲಿಗಳನ್ನು ಅಳವಡಿಸಿ ಪ್ರತಿಮೆಯನ್ನು ನಿರ್ಮಿಸಲಾಗುತ್ತದೆ. ಇದರಲ್ಲಿ ರಾಜಲಾಂಛನಗಳಾದ ಹೊಯ್ಸಳ ಲಾಂಛನ, ವೈ ಜಯಂತಿ ಮಾಲೆ ಕಂಠಿಹಾರ, ಗಂಡ ಭೇರುಂಡ ಇರಲಿವೆ.

ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಶೀರ್ಷಿಕೆಡಿ ಹಲವು ಕಾರ್ಯಕ್ರಮ ಗಳನ್ನು ಆಯೋಜನೆ ಮಾಡಲಾಗುತ್ತಿದೆ. ಅದರಂತೆ ವಿಕಾಸಸೌಧದ ಆವರಣದಲ್ಲಿ ಕನ್ನಡಾಂಬೆಯ ಪ್ರತಿಮೆಯನ್ನು ನಿರ್ಮಿಸಲು ಸಚಿವ ಶಿವರಾಜ ತಂಗಡಗಿ ಅವರು ಪಣತೊಟ್ಟಿದರು. ಕಳೆದ ಒಂದುವರೆ ತಿಂಗಳ ಹಿಂದೆ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.

Leave a Reply

Your email address will not be published. Required fields are marked *

error: Content is protected !!