WhatsApp Image 2024-10-23 at 5.25.40 PM

ರಾಜಕಾಲುವೆಗಳಲ್ಲಿ ಕಸ ತುಂಬಿ ನಾರುತ್ತಿದೆ: ಆರ್.ಅಶೋಕ್

ಕರುನಾಡ ಬೆಳಗು ಸುದ್ದಿ

ಬೆಂಗಳೂರು, 23- ಕಳೆದ 16 ತಿಂಗಳುಗಳಲ್ಲಿ ಆಡಳಿತ ಮಾಡಿದವರ ಪಾಪದ ಫಲದಿಂದ ಮಳೆ ಬಂದಾಗ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಮಳೆನೀರಿನಿಂದ ನೆರೆಯಿಂದ ತೀವ್ರ ಸಮಸ್ಯೆ ಎದುರಿಸಬೇಕಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆರೋಪಿಸಿದರು.

ನಗರದ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಹೆಚ್.ಎಸ್.ಆರ್ ಬಡಾವಣೆಯಲ್ಲಿನ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಸಿಲ್ಕ್ ಬೋರ್ಡ್ ಜಂಕ್ಷನ್‍ನಲ್ಲಿ ಪದೇಪದೇ ನೆರೆಯಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಆಕ್ಷೇಪಿಸಿದರು.

ರಾಜಕಾಲುವೆಗಳಲ್ಲಿ ಕಸ ತುಂಬಿ ನಾರುತ್ತಿದೆ. ಹಿಂದೆ ರಾಜಕಾಲುವೆಗಳನ್ನು ತೆರವು, ಕಸಕಡ್ಡಿ ವಿಲೇವಾರಿ, ತ್ಯಾಜ್ಯಗಳ ತೆರವಿನ ಕಡೆ ಗಮನ ಕೊಡುತ್ತಿದ್ದೆವು. ಕಾಂಗ್ರೆಸ್ ಸರಕಾರವು ಒಂದೂವರೆ ವರ್ಷದಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ನಡೆಸುತ್ತಿಲ್ಲ ಎಂದು ಟೀಕಿಸಿದರು.

ಮಳೆ ಬಂದರೆ ಮಾಧ್ಯಮಗಳಲ್ಲಿ ‘ಮುಳುಗಿಹೋದ ಬೆಂಗಳೂರು’ ಎಂದೇ ಬಿಂಬಿತವಾಗುತ್ತಿದೆ. ಇದರಿಂದ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ. ಇದು ‘ತೇಲುತ್ತಿರುವ ಬೆಂಗಳೂರು’ ಎಂದು ವ್ಯಂಗ್ಯವಾಗಿ ತಿಳಿಸಿದರು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಬೆಂಗಳೂರನ್ನು ಪ್ರತಿನಿಧಿಸುವ ಸಚಿವರು ಒಂದೂವರೆ ವರ್ಷದಲ್ಲಿ ಎಷ್ಟು ರಾಜಕಾಲುವೆ ಒತ್ತುವರಿಗಳನ್ನು ತೆರವು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ನಾವು ನೆರೆನೀರಿನ ಸಮಸ್ಯೆಗಳನ್ನು ಗುರುತಿಸಿ ಅವುಗಳ ಪರಿಹಾರಕ್ಕೆ ಕ್ರಮ ಕೈಗೊಂಡಿದ್ದೆವು ಎಂದು ವಿವರಿಸಿದರು.

ಬೆಂಗಳೂರಿನ ಕೆಲಸ ಮಾಡಿಸಲು ಹಣ ಇಲ್ಲ. 2-3 ವರ್ಷಗಳ ಬಳಿಕ ಬಿಲ್ ಹಣ ಪಾವತಿ ಆಗುತ್ತದೆ ಎಂದು ಅವರು ದೂರಿದರು. ಆದ್ದರಿಂದ ಅದನ್ನು ಯಾರೂ ಮಾಡುತ್ತಿಲ್ಲ. ವಿಶೇಷ ಅನುದಾನದ ಮೂಲಕ ಕೆಲಸ ಮಾಡಿಸಬೇಕಿದೆ ಎಂದು ತಿಳಿಸಿದರು.

ಮಾನ್ಯತಾ ಟೆಕ್ ಪಾರ್ಕ್ ಮುಳುಗಡೆ ಪಾರ್ಕ್ ಆಗಿದೆ. ಮಾರ್ಕೆಟ್‍ನಲ್ಲೂ ಬ್ಲಾಕ್ ಆಗುತ್ತಿದೆ. ಇಷ್ಟಿದ್ದರೂ ಕೂಡ ಸರಕಾರ, ಯಾವುದೇ ಸಚಿವರು, ಮುಖ್ಯಮಂತ್ರಿ ಗಮನಿಸುತ್ತಿಲ್ಲ. ಮುಖ್ಯಮಂತ್ರಿ ನಾನು ಪ್ರತಿ 15 ದಿನಕ್ಕೊಮ್ಮೆ ನಗರ ಪ್ರದಕ್ಷಿಣೆ- ಪರಿಶೀಲನೆ ಮಾಡುತ್ತೇನೆ ಎಂದಿದ್ದರು. 3 ತಿಂಗಳು, 6 ತಿಂಗಳಾದರೂ ಈ ಕಡೆ ತಲೆ ಹಾಕಿಲ್ಲ ಎಂದು ಆರೋಪಿಸಿದರು.

ಸಿಲುಕಿಕೊಳ್ಳುವ ಜಂಕ್ಷನ್ : ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಸಿಲ್ಕ್ ಬೋರ್ಡ್ ಜಂಕ್ಷನ್ ಸಿಲುಕಿಕೊಳ್ಳುವ ಜಂಕ್ಷನ್ ಆಗಿದೆ ಎಂದು ಟೀಕಿಸಿದರು. ಮೆಟ್ರೊ ಕಾಮಗಾರಿ ನಿಂತಿದೆ. ಈ ಸರಕಾರ ನಿದ್ರೆ ಮಾಡುತ್ತಿದೆ ಎಂದು ಆರೋಪಿಸಿದರು.

ಒಂದು ವಾರದ ಮಳೆಗೆ ಬೆಂಗಳೂರು ಅಸ್ತವ್ಯಸ್ತವಾಗಿದೆ. ಒಂದು ಬಿಡಿಗಾಸನ್ನೂ ಸರಕಾರ ಶಾಸಕರಿಗೆ ಕೊಡುವುದಿಲ್ಲ ಎಂದು ಅವರು ಹೆಚ್.ಎಸ್.ಆರ್ ಬಡಾವಣೆಯ ವೀಕ್ಷಣೆ ಸಂದರ್ಭದಲ್ಲಿ ತಿಳಿಸಿದರು. ಪರಿಸ್ಥಿತಿ ಬಹಳ ಹದಗೆಟ್ಟಿದೆ. ಇವರು ಮುಡಾ ಹಗರಣದಲ್ಲಿ ನಾವು ಬಚಾವ್ ಆಗುವುದು ಹೇಗೆ? ವಾಲ್ಮೀಕಿ ನಿಗಮದ ಹಗರಣದಿಂದ ಈಚೆ ಬರುವುದು ಹೇಗೆ? ಯಾರ ಮೂಲಕ ಕೇಸ್ ಮುಚ್ಚಿ ಹಾಕಬೇಕೆಂದು ಯೋಚಿಸುತ್ತಿದ್ದರೆ ಬೆಂಗಳೂರಿನ ಸ್ಥಿತಿಗತಿ ನೋಡತಕ್ಕವರು ಯಾರು ಎಂದು ಪ್ರಶ್ನಿಸಿದರು.

ಕಾಲುವೆ ವಿಸ್ತರಿಸುವುದು, ನೀರು ಸರಾಗವಾಗಿ ಹರಿಯುವಂತೆ ಮಾಡುತ್ತಿಲ್ಲ. ಬೆಂಗಳೂರು ಬಿಬಿಎಂಪಿ ಕಮೀಷನರ್ ಅವರನ್ನು ಮಾತನಾಡಿದರೆ ಕೇವಲ ಮಾತನಾಡುತ್ತಾರೆಯೇ ಹೊರತು ಕೆಲಸ ಮಾಡುತ್ತಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸರಕಾರದ ಮಾನ ಮರ್ಯಾದೆಯೂ ಹಾಳಾಗಿದೆ ಎಂದು ತಿಳಿಸಿದರು.

ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ್, ಶಾಸಕ ಸತೀಶ್ ರೆಡ್ಡಿ, ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸಿ.ಕೆ. ರಾಮಮೂರ್ತಿ ಮೊದಲಾದ ಪ್ರಮುಖರು ಇದ್ದರು.

Leave a Reply

Your email address will not be published. Required fields are marked *

error: Content is protected !!