ವೀಣಾ ಪಾಟೀಲ್

ಈ ಸಾವು ನ್ಯಾಯವೇ? : ವೀಣಾ ಪಾಟೀಲ್ 

ಕರುನಾಡೆ ಬೇಳಗು ಸುದ್ದಿ

( ಪಶ್ಚಿಮ ಬಂಗಾಳದ ವೈದ್ಯಕೀಯ ವಿದ್ಯಾರ್ಥಿನಿಯ ಬರ್ಬರ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ)

ತನ್ನ ರಾತ್ರಿ ಪಾಳಿಯ ಎಲ್ಲ ಕೆಲಸಗಳನ್ನು ಪೂರೈಸಿ ತನ್ನ ಜೊತೆ ಓದುತ್ತಿರುವ ಇತರ ಇಂಟರ್ನ್ ಸ್ನೇಹಿತರೊಂದಿಗೆ ರಾತ್ರಿ 2 ಗಂಟೆಗೆ ಊಟ ಮಾಡಿ
ಸೆಮಿನಾರ್ ಹಾಲ್ನಲ್ಲಿ ಓದಲು ಕುಳಿತುಕೊಂಡ ಆ ಮಹಿಳಾ ವೈದ್ಯೆಗೆ ಅದು ತನ್ನ ಜೀವನದ ಅಂತಿಮ ರಾತ್ರಿ ಎಂಬ ಅರಿವೇ ಇರಲಿಲ್ಲ. ರೆಸ್ಪಿರೇಟರಿ ಮೆಡಿಸಿನ್ ನಲ್ಲಿ ಸ್ನಾತಕೋತ್ತರ ಪಿಜಿ ಮಾಡುತ್ತಿರುವ
ಆಕೆ ಓದುತ್ತಾ ಕುಳಿತುಕೊಂಡ ಸ್ಥಳದಲ್ಲಿಯೇ ತುಸು ನಿದ್ದೆಗೆ ಜಾರಿದಳು.

ಕಳೆದ ಆರೇಳು ವರ್ಷಗಳಿಂದ ಅಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬ ತನ್ನ ಸಂಬಂಧಿಯೊಬ್ಬರನ್ನು ಅಲ್ಲಿ ದಾಖಲಿಸಿದ್ದು ಅವರನ್ನು ಭೇಟಿಯಾಗಲು ಬಂದನು. ಸೆಮಿನಾರ್ ಹಾಲ್ನಲ್ಲಿ ಆಗ ತಾನೆ ನಿದ್ದೆಗೆ ಜಾರಿದ್ದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಕಂಡು ಆತನಲ್ಲಿನ ರಾಕ್ಷಸಿ ಪ್ರವೃತ್ತಿ ಎಚ್ಚೆತ್ತು ಆಕೆಯ ಮೇಲೆ ಬಲಾತ್ಕಾರ ಎಸಗಿದನು. ಆತನನ್ನು ಬಹಳಷ್ಟು ವಿರೋಧಿಸಿದ ಆಕೆಯ ಕನ್ನಡಕವನ್ನು ಒಡೆದು ಹಾಕಿದ ಆತ ಆಕೆಯ ಮೇಲೆ ಬರ್ಬರವಾಗಿ ದಾಳಿ ಮಾಡಿದನು. ತುಸು ಹೆಚ್ಚಾಗಿಯೇ ವಿರೋಧಿಸಿದ ಆಕೆಯ ಎರಡು ಕೈಗಳನ್ನು ಬಿಗಿದ ಆತ ಕುತ್ತಿಗೆಯ ಮೇಲೆ ಕೈ ಇಟ್ಟು ಉಸಿರುಗಟ್ಟಿಸಲು ಪ್ರಯತ್ನಿಸಿದ. ಅಂತಿಮವಾಗಿ ಆಕೆಯನ್ನು ಅಮಾನುಷವಾಗಿ ಅತ್ಯಾಚಾರ ಮಾಡಿದ ಆತ ಅಲ್ಲಿಂದ ಹೊರ ಬಿದ್ದನು.

ಮರುದಿನ ಅಗಸ್ಟ್ 10 ರ ಮುಂಜಾನೆ 7ರ ಸಮಯ. ನಿಮ್ಮ ಮಗಳ ಆರೋಗ್ಯ ಸರಿ ಇಲ್ಲ ತುಸು ಬೇಗನೆ ಬನ್ನಿ ಎಂದು ಪೊಲೀಸರು ಆ ವೈದ್ಯಕೀಯ ವಿದ್ಯಾರ್ಥಿನಿಯ ಪಾಲಕರಿಗೆ ಕರೆ ಮಾಡಿ ಹೇಳಿದರು. ಕೂಡಲೇ ತಮ್ಮ ಮಗಳು ಓದುತ್ತಿದ್ದ ಮೆಡಿಕಲ್ ಕಾಲೇಜಿಗೆ ಧಾವಿಸಿ ಬಂದ ಪಾಲಕರನ್ನು ಸುಮಾರು 3 ಗಂಟೆಗಳ ಕಾಲ ಕಾಯಿಸಿದ ಪೊಲೀಸರು ಅಂತಿಮವಾಗಿ ಆಕೆ ಮಾನಸಿಕ ವಿಕೃತಿಯಿಂದ ಬಳಲುತ್ತಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದರು. ನೆನ್ನೆ ತಾನೆ 36 ಗಂಟೆಗಳ ರಾತ್ರಿ ಡ್ಯೂಟಿಗೆ ಬಂದ ಸ್ನಾತಕೋತ್ತರ ವೈದ್ಯಕೀಯ ಪದವಿ ಓದುತ್ತಿರುವ 31 ರ ಯುವತಿ ರಾತೋ ರಾತ್ರಿ ಅದು ಹೇಗೆ ಮಾನಸಿಕವಾಗಿ ಅಸ್ವಸ್ಥವಾದಳು? ಮೂರು ನಾಲ್ಕು ಗಂಟೆಗಳ ಆಕ್ರಂದನ, ಬೇಡುವಿಕೆಗಳ ನಂತರ ಅಂತಿಮವಾಗಿ ಪಾಲಕರಿಗೆ ಮಗಳನ್ನು ನೋಡಲು ಅವಕಾಶ ದೊರೆಯಿತು.

ಹಾಗೆ ಮಗಳನ್ನು ನೋಡಲು ಬಂದ ತಂದೆ ಬಹುಶಹ ಜೀವನದಲ್ಲಿ ಎಂದೂ ಮರೆಯಲಾರದ ದೃಶ್ಯ ಅದಾಗಿತ್ತು. ಅರೆನಗ್ನ ಸ್ಥಿತಿಯಲ್ಲಿದ್ದ ಮಗಳ ಕಳೆಬರ
ಕಂಡು ಆತ ಬವಳಿ ಬಂದು ಬೀಳುವುದೊಂದೇ ಬಾಕಿ. ಆಕೆಯ ಬಾಯಿ, ಕಣ್ಣು ಮತ್ತು ಗುಪ್ತಾಂಗಗಳಲ್ಲಿ ರಕ್ತ ಧಾರೆಯಾಗಿ ಹೆಪ್ಪುಗಟ್ಟಿತ್ತು. ಆಕೆಯ ಕನ್ನಡಕ ಒಡೆದು ಆಕೆಯ ಕಣ್ಣಿನಲ್ಲಿ ಕನ್ನಡಕದ ಚೂರುಗಳು ಸಿಕ್ಕಿಕೊಂಡಿದ್ದವು. ಎರಡು ಕಾಲುಗಳು ಸಂಪೂರ್ಣ 90 ಡಿಗ್ರಿ ಅಗಲವಾಗಿ ತೆರೆದಂತೆ ಇದ್ದವು. ವ್ಯಕ್ತಿಯ ಪೆಲ್ವಿಕ್ ಗರ್ಡಲ್ (ಶ್ರೋಣಿಯ ನಡುಕಟ್ಟು) ಸಂಪೂರ್ಣವಾಗಿ ಘಾಸಿಗೊಂಡು ಮುರಿದು ಹೋದಾಗ ಮಾತ್ರ ವ್ಯಕ್ತಿಯ ಕಾಲುಗಳು ಆ ರೀತಿ 90 ಡಿಗ್ರಿ ಕೋನದಲ್ಲಿ ದೊರೆಯಲು ಸಾಧ್ಯ.

ಆಕೆಯ ದೇಹಕ್ಕಾದ ಅವಸ್ಥೆಯನ್ನು ನೋಡಿದರೆ ಬಹುಶಹ ಇದೊಂದು ಗ್ಯಾಂಗ್ ರೇಪ್ ಎಂಬುದು ದೃಢವಾಗುತ್ತದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಆಕೆಯ ಕುತ್ತಿಗೆಯ ಭಾಗವನ್ನು ಒತ್ತಿ ಹಿಡಿದಿದ್ದು ಆಕೆ ಉಸಿರುಗಟ್ಟಿ ಸತ್ತ ನಂತರವೂ ಕೂಡ ಆಕೆಯ ಮೇಲೆ ಅಮಾನುಷವಾಗಿ ಪದೇಪದೇ ಅತ್ಯಾಚಾರ ನಡೆಸಲಾಗಿದೆ.

ಆಕೆಯ ಹಲವಾರು ಸ್ನೇಹಿತರು ಆಕೆಯ ಶವವನ್ನು ಸುತ್ತುವರಿದಿದ್ದು, ಸಾಕ್ಷಿ ನಾಶವಾಗಬಾರದೆಂದು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಶವದ ಪೋಸ್ಟ್ ಮಾರ್ಟಮ್ ಮುಗಿಯುವರೆಗೂ ಕದಲಲಿಲ್ಲ. ಕರ್ತವ್ಯನಿರತಳಾಗಿದ್ದ ಓರ್ವ ವೈದ್ಯೆ ರಾತೋರಾತ್ರಿ ಅಮಾನುಷವಾಗಿ ಅತ್ಯಾಚಾರಕ್ಕೊಳಪಟ್ಟು ಕೊಲೆಯಾಗಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಆಗಿದೆ.

ಈ ಕುರಿತು ಆಕೆ ಓದುತ್ತಿರುವ ಕಾಲೇಜಿನ ಡೀನ್ ರನ್ನು ಪ್ರಶ್ನಿಸಿದಾಗ ಆಕೆ ವಿಕೃತ ಮನಸ್ಥಿತಿಯನ್ನು ಹೊಂದಿದ್ದ ಹೆಣ್ಣು ಮಗಳಾಗಿದ್ದು, ಆಕೆಯ ಆತ್ಮಹತ್ಯೆಗೂ ತಮಗೂ ಸಂಬಂಧವಿಲ್ಲ ಎಂದು ಆತ ಹೇಳಿಕೆ ಕೊಟ್ಟರು. ಪೋಸ್ಟ್ ಮಾರ್ಟಮ್ ಮುಗಿದ ಕೂಡಲೇ ಆಕೆಯ ಅಂತಿಮ ಸಂಸ್ಕಾರವನ್ನು ಅವಸರದಲ್ಲಿ ಮಾಡುವಂತೆ ಆಕೆಯ ಪಾಲಕರನ್ನು ಒತ್ತಾಯಿಸಿ ಯಶಸ್ವಿಯಾದರು.ಆಕೆ ಸತ್ತ ಕೆಲವೇ ಗಂಟೆಗಳಲ್ಲಿ ಆಕೆ ಸತ್ತ ಕೋಣೆಯನ್ನು ಮರುನವೀಕರಣಕ್ಕೆ ಒಳಪಡಿಸಿದಾಗ ಅಲ್ಲಿದ್ದ ಉಳಿದ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮುಂದಿನ ನಾಲ್ಕು ಗಂಟೆಗಳಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಅದೇ ಮೆಡಿಕಲ್ ಕಾಲೇಜಿನ ಡೀನ್ ಸಂದೀಪ್ ಘೋಷ್ ತನ್ನ ರಾಜೀನಾಮೆ ಪತ್ರವನ್ನು ಸಲ್ಲಿಸುವುದರ ಜೊತೆ ಜೊತೆಗೆ ಆಕೆ ತನ್ನ ಮಗಳಿದ್ದಂತೆ ಎಂದು ಕೂಡ ಹೇಳಿದರು.

ಮತ್ತೆ ನಡೆದ ಬೆಳವಣಿಗೆಯಲ್ಲಿ ಆ ಡೀನ್ ರನ್ನು ಅದೇ ಸಂಸ್ಥೆಯ ಮತ್ತೊಂದು ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ಸಮಾನಾಂತರ ಹುದ್ದೆಗೆ ಭರ್ತಿ ಮಾಡಲಾಯಿತು…. ಆದರೆ ಆ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಈ ಡೀನರನ್ನು ಕಾಲೇಜಿನ ಒಳಗೆ ಪ್ರವೇಶಿಸಲು ಸಾಧ್ಯವಿಲ್ಲದಂತೆ ಅಡ್ಡಗಟ್ಟಿದರು.

ಕಳೆದೆರಡು ದಿನಗಳ ಹಿಂದೆ ಆ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಕ್ಯಾಂಡಲ್ ಹಿಡಿದು ಶಾಂತಿಯುತ ಮೆರವಣಿಗೆ ನಡೆಸಲು ಪ್ರಯತ್ನಿಸಿದಾಗ ಅವರನ್ನು ಲಾರಿಗಳಲ್ಲಿ ಬಂದ ಹಲವಾರು ಗೂಂಡಾಗಳ ಗುಂಪು ಮನೆಬಂದಂತೆ ಹೊಡೆದು ಚದುರಿಸಿತು.
ಆ ವೈದ್ಯಕೀಯ ವಿದ್ಯಾರ್ಥಿನಿ ಸತ್ತ ದಿನವೇ ಈ ಕೇಸನ್ನು ಇಲ್ಲಿಯೇ ಮುಚ್ಚಿ ಹಾಕ್ತಿ ಇದರ ಹಿಂದೆ ದೊಡ್ಡವರ ಕೈವಾಡವಿದೆ ಎಂದು ಹೇಳಿದ ಪೊಲೀಸ್ ಕಮಿಷನರ್ ಇದೀಗ ಅಗಸ್ಟ್ 15 ರ ಮಧ್ಯರಾತ್ರಿ ಕ್ಯಾಂಡಲ್ ಹಿಡಿದು ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳ ಮುಂದೆ ನಿಂತು ತಾವು ಪ್ರಾಮಾಣಿಕವಾಗಿ ತನಿಖೆ ನಡೆಸುತ್ತಿರುವುದಾಗಿಯೂ ಮಾಧ್ಯಮದವರ ಮಧ್ಯ ಪ್ರವೇಶದಿಂದ ಈ ಪ್ರಕರಣ ಗಂಭೀರ ತಿರುವುಗಳನ್ನು ಪಡೆದುಕೊಂಡಿದೆ ಎಂದು ಹೇಳುವ ಮೂಲಕ ತಮ್ಮ ಇಲಾಖೆ ತಲೆತಗ್ಗಿಸುವಂತೆ ಮಾಡಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯಮಂತ್ರಿಯವರು ಪ್ರಕರಣದ ತನಿಖೆ ಮಾಡಲು ಕೇವಲ ಆರು ದಿನಗಳ ಗಡುವನ್ನು ನೀಡಿದ್ದು, ಅಷ್ಟರಲ್ಲಿ ಅಪರಾಧಿಗಳನ್ನು ಕಂಡುಹಿಡಿದು ನ್ಯಾಯಾಂಗದ ವಶಕ್ಕೆ ಕೊಡಬೇಕೆಂದು ಹೇಳಿದ್ದಾರೆ.
ಈ ಮಧ್ಯ ಇಡಿ ಪಶ್ಚಿಮ ಬಂಗಾಳದದ್ದಂತ ಜನಾಕ್ರೋಶ ಮುಗಿಲು ಮುಟ್ಟಿದ ಕಾರಣ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಈ ಪ್ರಕರಣವನ್ನು ಸಿಬಿಐಗೆ ವಹಿಸಿದೆ.

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಈ ಕುರಿತು ತನ್ನ ಪ್ರಕಟಣೆಯನ್ನು ಹೊರಡಿಸಿದ್ದು… ಕರ್ತವ್ಯ ನಿರತಳಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿಗಾದ ಅನ್ಯಾಯ ಅಕ್ಷಮ್ಯವಾದ ಅಪರಾಧ. ಆಕೆಯ ಸಾವಿಗೆ ಹೊಣೆಗಾರರಾದವರನ್ನು ಸರ್ಕಾರ ಶೀಘ್ರವೇ ಗುರುತಿಸಿ ಶಿಕ್ಷಿಸಬೇಕು ಎಂದು ಒತ್ತಾಯಿಸಿರುವುದಲ್ಲದೆ 17 ಅಗಸ್ಟ್ ಶನಿವಾರ ಮುಂಜಾನೆ ಆರು ಗಂಟೆಯಿಂದ 18 ಆಗಸ್ಟ್ ರವಿವಾರ ಮುಂಜಾನೆ ಆರು ಗಂಟೆಯವರೆಗೆ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸರ್ಕಾರಿ, ಅರೆ ಸರಕಾರಿ, ಖಾಸಗಿ ಆಸ್ಪತ್ರೆಗಳು ಕ್ಲಿನಿಕ್ ಗಳಲ್ಲಿ ಕೆಲಸ ಮಾಡುವ ವೈದ್ಯರು, ವೈದ್ಯಕೀಯ ಕಾಲೇಜಿನ ಆಸ್ಪತ್ರೆಗಳು ದೇಶಾದ್ಯಂತ ಬಂದ್ ಆಚರಿಸುವ ಮೂಲಕ ಪ್ರತಿಭಟನೆ ಮಾಡಲು ಕರೆ ನೀಡಿದ್ದಾರೆ.

ವೈದ್ಯೋ ನಾರಾಯಣೋ ಹರಿಃ ಎಂದು ವೈದ್ಯರನ್ನು ಭಗವಂತನ ಸ್ವರೂಪದಲ್ಲಿ ಕಾಣುವ ನಮ್ಮ ಭವ್ಯ ಭಾರತದಲ್ಲಿ ಅಂತಹ ವೈದ್ಯ ಅದರಲ್ಲೂ ಹೆಣ್ಣು ಮಗಳ ಮೇಲೆ ಎಸಗಿರುವ ವಿಕೃತಿ ಖಂಡನಾರ್ಹ. ಇಂತಹ ಘಟನೆಗಳು ನಡೆದಾಗ ಮೊದಮೊದಲು ಜೋರಾಗಿ ಪ್ರತಿಭಟಿಸುವ, ನಂತರ ಕಾಲ ಕಳೆದಂತೆ ಮರೆತುಬಿಡುವ ಒಂದೆರಡು ವರ್ಷಗಳ ಇಲ್ಲವೇ ಹಲವಾರು ವರ್ಷಗಳ ನಂತರ ಅಪರಾಧಿ ಹೊರ ಬಂದರೂ ತಲೆಕೆಡಿಸಿಕೊಳ್ಳದಂತಹ ಸಮಾಜದಲ್ಲಿ ನಾವಿಂದು ಬದುಕುತ್ತಿದ್ದು, ಇದುವೇ ನಮ್ಮ ಸಮಾಜದಲ್ಲಿ ಮಹಿಳೆಯರ ಮೇಲಿನ ವಿಕೃತ ಅತ್ಯಾಚಾರ ಅನಾಚಾರಗಳಿಗೆ ಕಾರಣವಾಗುತ್ತಿದೆ.
ಇಂತಹ ಸಮಯದಲ್ಲಿ ಸರ್ಕಾರವು ಇನ್ನೆಂದು ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ತಲೆಯೆತ್ತಿ ನೋಡದಂತಹ ಶಿಕ್ಷೆಯನ್ನು ವಿಧಿಸಬೇಕು.
ಇಂತಹ ವಿಕೃತ ಅಪರಾಧಿಗಳು ರಾಜಕೀಯ ಕಾರಣಗಳಿಂದ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳದಂತೆ ಅವರನ್ನು ಬಂಧಿಸಿ l ಕಾನೂನು ಕ್ರಮ ಕೈಗೊಳ್ಳಬೇಕು.

ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುವ, ಪರ ಸ್ತ್ರಿಯರಲ್ಲಿ ಕೂಡ ತಮ್ಮ ತಾಯಿ ತಂಗಿಯರನ್ನು ಅರಸುವ ಉತ್ತಮ ಗಂಡು ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಮತ್ತು ಜರೂರತ್ತು ಈ ಮೊದಲಿಗಿಂತ ಹೆಚ್ಚಾಗಿದ್ದು ಆ ದಿಶೆಯಲ್ಲಿ ಮುಂದುವರೆಯೋಣ.

ಚಿಕ್ಕ ವಯಸ್ಸಿನಲ್ಲಿಯೇ ತನಗಾದ ಅನ್ಯಾಯಕ್ಕೆ ಜೀವವನ್ನೇ ಬಲಿಕೊಟ್ಟ ಯುವ ವೈದ್ಯೆಯ ಆತ್ಮಕ್ಕೆ ಶಾಂತಿ ದೊರೆಯುವುದು ಆಕೆಯ ಮೇಲೆ ಅತ್ಯಾಚಾರವೆಸಗಿದ ದುಷ್ಕರ್ಮಿಗಳಿಗೆ ಶಿಕ್ಷೆ ದೊರೆತಾಗ….

ಸಮಸ್ತ ಭಾರತೀಯರು ತಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ, ಇಂದಿನ ನಮ್ಮ ಮೌನ ಮುಂದೆ ನಮ್ಮ ಮನೆಯ ಮಕ್ಕಳ ಆಕ್ರಂದನಕ್ಕೆ ಕಾರಣವಾಗದಿರಲಿ ಎಂಬ ಎಚ್ಚರಿಕೆಯನ್ನು ಹೊಂದಿರಲಿ ಎಂಬ ಆಶಯದೊಂದಿಗೆ

ವೀಣಾ ಹೇಮಂತ್ ಗೌಡ ಪಾಟೀಲ್

ಮುಂಡರಗಿ ಗದಗ್

Leave a Reply

Your email address will not be published. Required fields are marked *

error: Content is protected !!