
ಸಮಗ್ರ ರಾಷ್ಟ್ರ ಅಭಿವೃದ್ಧಿಯಲ್ಲಿ ಯುವ ಸಮೂಹದ ಪಾತ್ರ ಬಹುಮುಖ್ಯ : ಡಾ.ಸುಧಾಕರ ರಾವ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 22- ಸಮಗ್ರ ರಾಷ್ಟ್ರ ಅಭಿವೃದ್ಧಿಯಲ್ಲಿ ಯುವ ಸಮೂಹದ ಪಾತ್ರ ಬಹುಮುಖ್ಯವಾಗಿದ್ದು, ದೇಶದ ಉಜ್ವಲ ಭವಿಷ್ಯ ರೂಪಿಸುವಲ್ಲಿ ಯುವಪೀಳಿಗೆಯು ಕೈಜೋಡಿಸಲು ಒಂದಾಗಬೇಕಿದೆ ದೂರದರ್ಶನ ಕೇಂದ್ರದ ನಿವೃತ್ತ ಉಪನಿರ್ದೇಶಕ ಡಾ.ಸುಧಾಕರ ರಾವ್ ಅವರು ಹೇಳಿದರು.
ಕೇಂದ್ರ ಸಂವಹನ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ವೀರಶೈವ ಮಹಾವಿದ್ಯಾಲಯ ವಿವಿ ಸಂಘದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವೀರಶೈವ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯಲ್ಲಿ ವೀರಶೈವ ಮಹಾವಿದ್ಯಾಲಯದ ಆಡಿಟೋರಿಯಂನಲ್ಲಿ ಗುರುವಾರ ಏರ್ಪಡಿದ್ದ “ರಾಷ್ಟ್ರೀಯ ಬಾಹ್ಯಾಕಾಶ ದಿನ” ಅಂಗವಾಗಿ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಒಂದು ದೇಶವು ಶೈಕ್ಷಣಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಸಾಧನೆಯ ಪಥದತ್ತ ಸಾಗಲು ಯುವಕರು ಕಾರ್ಯಪ್ರವೃತ್ತರಾಗಬೇಕು. ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಅಭಿಪ್ರಾಯ ಕೂಡ ಮುಖ್ಯವಾಗಿದ್ದು, ಸಮಾಜ ಒಳಿತಿಗಾಗಿ ಉತ್ತಮ ಚಿಂತನೆಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಬೇಕು ಎಂದು ಕಿವಿಮಾತು ಹೇಳಿದರು.
ಕೇಂದ್ರ ಸರ್ಕಾರವು ನಾಗರಿಕ ಹಿತಾಸಕ್ತಿ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಮೊದಲ ಬಾರಿಗೆ ಅಪರಾಧಿಗಳಿಗೆ ಸಹಾನುಭೂತಿ, ತಂತ್ರಜ್ಞಾನ ಆಧಾರಿತ ನ್ಯಾಯ ವ್ಯವಸ್ಥೆ ಮತ್ತು ಸಕಾಲಕ್ಕೆ ನ್ಯಾಯದ ಪರಿಕಲ್ಪನೆಯಡಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಎನ್ನುವ ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿ ಮಾಡಲಾಗಿದ್ದು, ಅವುಗಳು ಸರಳ ಹಾಗೂ ಸಂಪೂರ್ಣ ಪಾರದರ್ಶಕತೆಯಿಂದ ಕೂಡಿವೆ ಎಂದು ತಿಳಿಸಿದರು.
ಭಾರತ ದೇಶವು 2047ರ ವೇಳೆಯಲ್ಲಿ ಸ್ವಾತಂತ್ರ್ಯದ ಸವಿನೆನಪಿಗಾಗಿ ಶತಮಾನದ ಅಮೃತ ಮಹೋತ್ಸವ ಆಚರಣೆಗೆ ಉತ್ಸುಕತೆಯಿಂದ ಕೂಡಿದ್ದು, ಮುಂಬರುವ ಅಮೃತ ಕಾಲಕ್ಕಾಗಿ ಅಮೃತ ಪೀಳಿಗೆಯು ಸಮರ್ಪಣ ಭಾವದ ಯೋಚನೆಯೊಂದಿಗೆ ಸಿದ್ಧರಿರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ಹೇಳಿದರು.
ಜನಸಾಮಾನ್ಯರ ಏಳಿಗೆಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಯೋಜನೆಗಳ ಕುರಿತು ಮಾಹಿತಿ ತಿಳಿಸಿದರು.
ಮತ್ತೋರ್ವರಾದ ಕಿಷ್ಕಿಂದ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ನಾವೀನ್ಯ ವಿಭಾಗದ ಡೀನ್ ಪ್ರೊ.ಮಂಜುನಾಥ್.ಎಸ್ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಾ, ಚಂದ್ರಯಾನ-3 ಯಶಸ್ವಿ ಉಡಾವಣೆ ನಿಮಿತ್ಯ ಭಾರತದ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ ಗರಿಮೆ ತಂದಿದ್ದು, ನಮ್ಮೆಲ್ಲರ ಹೆಮ್ಮೆಯ ಸಂಗತಿ ಎಂದು ಸ್ಮರಿಸಿದರು.
ಇದೇ ವೀರಶೈವ ಕಾಲೇಜಿನ ಹಳೆಯ ವಿದ್ಯಾರ್ಥಿ ಉಡುಪಿ ರಾಮಚಂದ್ರ ರಾವ್ ಇಸ್ರೋ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕೆಲಸ ನಿರ್ವಹಿಸಿದ್ದಲ್ಲದೆ ಆರ್ಯಭಟ, ಭಾಸ್ಕರ, ರೋಹಿಣಿ ಸೇರಿದಂತೆ 20ಕ್ಕೂ ಹೆಚ್ಚು ಉಪಗ್ರಹಗಳ ಕೇಂದ್ರ ರೂವಾರಿಯಾಗಿದ್ದಾರೆ ಎಂಬುವುದು ಸಂತಸ ತಂದಿದೆ ಎಂದರು.
ಸ್ವದೇಶಿ ನಿರ್ಮಿತ ರಾಕೇಟ್, ಸ್ವದೇಶಿ ನಿರ್ಮಿತ ಬಾಹ್ಯಾಕಾಶ, ಸ್ವದೇಶಿ ತಂತ್ರಜ್ಞಾನ ಅನ್ವೇಷಣೆ ದೇಶದ ಮಹೋನ್ನತ ಕಾರ್ಯವಾಗಿದ್ದು, ಯುವಕರು ಪ್ರೇರೇಪಿತರಾಗಿ ವೈಜ್ಞಾನಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಹುರಿದುಂಬಿಸಿದರು.
ಶಿವಮೊಗ್ಗ ಮತ್ತು ಬಳ್ಳಾರಿಯ ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಹಾಗೂ ನೋಡಲ್ ಅಧಿಕಾರಿ ಅಕ್ಷತಾ ಸಿ.ಹೆಚ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಇಸ್ರೋ ಸಂಸ್ಥೆಯು ಚಂದ್ರಯಾನ-3 ರಾಕೆಟ್ ಉಡಾವಣೆ ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿಸಿದ ಕಾರ್ಯ ಸಾಧನೆಯ ನಿಮಿತ್ತ ಸ್ಮರಣಾರ್ಥಕವಾಗಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸಂಶೋಧನೆ ಮತ್ತು ಬಾಹ್ಯಾಕಾಶ ಅಧ್ಯಯನಕ್ಕೆ ಒಲವು ತೋರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಮಂಜುನಾಥ್.ಎಸ್ ಅವರು ಚಂದ್ರಯಾನ-3 ರಾಕೆಟ್ ಉಡಾವಣೆಯ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತೋರ್ಪಡಿಸಿದರು.
ಪಿಎಂ ಸೂರ್ಯ ಘರ್ ಯೋಜನೆ, ವಿಕಸಿತ ಭಾರತ ಬಜೆಟ್, ಹೊಸ ಕ್ರಿಮಿನಲ್ ಕಾನೂನುಗಳು ಹಾಗೂ ಪಿಎಂ ದೂರದರ್ಶಿತ್ವ-2047ರ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದ ಆಕರ್ಷಣೆಯಾಗಿತ್ತು.
ಜಾನಪದ ಕಲಾತಂಡದ ಜಾಗೃತಿ ಗೀತೆಗಳು ನೆರೆದಿದ್ದವರಲ್ಲಿ ಮನಸೂರೆಗೊಂಡಿತು.
ಇದಕ್ಕೂ ಮುನ್ನ ವೀರಶೈವ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಸಿ, ‘ತಾಯಿಯ ಹೆಸರಿನಲ್ಲಿ ಗಿಡ ನೆಡುವುದು’ ಕಾರ್ಯಕ್ರಮದ ವಿಶೇಷವಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಚಿತ್ರಕಲೆ, ರಂಗೋಲಿ, ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವೀರಶೈವ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಿ.ಮನೋಹರ್, ವೀರಶೈವ ಪಿಯು ಕಾಲೇಜಿನ ಪ್ರಾಂಶುಪಾಲ ಪಿ.ಎಸ್.ಗೌತಮ್, ವೀರಶೈವ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಅಧಿಕಾರಿ ಶರಣಬಸವ, ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರಕರಾದ ರಾಮಕೃಷ್ಣ.ಎನ್, ಸಿ.ವಿ ಲಕ್ಷಿö್ಮÃಕಾಂತ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.