
ಬದುಕಿನ ಚುಕ್ಕಾಣಿಯ ಹಿಡಿದುಕೋ ಕೈಜಾರುವ ಮುನ್ನ : ವೀಣಾ ಪಾಟೀಲ್
ಕರುನಾಡ ಬೆಳಗು ಸುದ್ದಿ
ಇದು ನಮ್ಮ ನಿಮ್ಮೆಲ್ಲರ ಬಾಳಿನಲ್ಲಿ ಜರುಗುವ ಕಥೆ. ಜೀವನದ ಕಟು ಸತ್ಯವನ್ನು ತೋರುವ ಈ ಕಥೆಯನ್ನು ಗಮನವಿಟ್ಟು ಓದಿ.
ಬದುಕಿನ ಮೊದಲ 20 ವರ್ಷ ಹೇಗೆ ಕಳೆದವೆಂದೇ ಗೊತ್ತಿಲ್ಲದಂತೆ ಶಾಲೆಯ ಆಟ-ಪಾಠ, ಓದು, ಕಾಲೇಜು, ಸ್ನೇಹಿತರು ಹೀಗೆ ಕಳೆದುಹೋದವು. ಕೆಲಸದ ಹುಡುಕಾಟ ಶುರುವಾಯಿತು. ಎರಡು ಮೂರು ಕೆಲಸಗಳನ್ನು ಮಾಡಿ ಅಂತಿಮವಾಗಿ ಒಂದು ನೌಕರಿಯಲ್ಲಿ ಗಟ್ಟಿಯಾಗಿ ಉಳಿದುಕೊಂಡೆ. ಬದುಕಿಗೊಂದು ಸ್ಥಿರತೆ ಬಂತು.
ಮೊದಲ ಸಂಬಳದ ಚೆಕ್ ಬಂದು ಅದನ್ನು ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡಿದ ಹುಮ್ಮಸ್ಸು ನನ್ನದಾಗಿತ್ತು…. ಮುಂದೆ ಹೀಗೆಯೇ ಅಸಂಖ್ಯ ಹಣದ ಚೆಕ್ಕಳು ನನ್ನ ಅಕೌಂಟನ್ನು ತುಂಬತೊಡಗಿದವು ಹೀಗೆಯೇ ಎರಡು ಮೂರು ವರ್ಷ ಕಳೆಯಿತು.
ಮನೆಯಲ್ಲಿ ಮದುವೆಯ ಮಾತುಕತೆ ನಡೆದು 25ಕ್ಕೆ ಮದುವೆಯಾಗಿ ವೈವಾಹಿಕ ಬದುಕಿನ ರಾಮಕಥೆ ಪ್ರಾರಂಭವಾಯಿತು. ಪ್ರೀತಿ, ಪ್ರೇಮ, ಪ್ರಣಯ, ಮೆಲು ಮಾತುಗಳು, ಭವಿಷ್ಯದ ಕುರಿತ ಬಣ್ಣದ ಕನಸುಗಳು, ಗಂಟೆಗಟ್ಟಲೆಯ ಫೋನ್ ಕರೆಗಳು, ಕೈ ಕೈ ಹಿಡಿದು ಓಡಾಟದಲ್ಲಿ ಕಾಲ ಉರುಳಿದ್ದೇ ಗೊತ್ತಾಗಲಿಲ್ಲ.
ಎಲ್ಲರ ಸಂಸಾರದಂತೆ ನಮ್ಮ ಬದುಕಿನಲ್ಲೂ ಸಂಭ್ರಮ ಕುಡಿಯೊಡೆಯಿತು ಮಗುವಿನ ರೂಪದಲ್ಲಿ. ತೊಟ್ಟಿಲು ತೂಗುತ್ತಾ ನಮ್ಮ ಮಾತನ್ನು ಮತ್ತು ಮಗುವಿನ ಮಾತನ್ನು ನಾವೇ ಆಡುತ್ತಾ ಮಗುವಿನ ಲಾಲನೆ ಪಾಲನೆಯಲ್ಲಿ ಬದುಕು ಸಾಗಿತು. ಧಾವಂತದಲ್ಲಿ ಏಳುವುದು, ಉಣಿಸುವುದು, ತಿನ್ನಿಸುವುದು, ಮಗುವಿನ ವಿಸರ್ಜನೆಗಳನ್ನು ಕೂಡ ಹೇಸಿಗೆ ಇಲ್ಲದೆ ಬಳಿಯುವುದು ಅಂಬೆಗಾಲಿಡುತ್ತಾ ಬಂದ ಮಗುವನ್ನು ತಬ್ಬ ಮುದ್ದಾಡಿ ಆಡುವುದು. ಹಗಲು ರಾತ್ರಿಗಳ ಪರಿವೆ ಕೂಡ ಇರಲಿಲ್ಲ. ಮಗು ಮಲಗಿದಾಗ ತುಸು ವಿಶ್ರಾಂತಿ ತೆಗೆದುಕೋ ಎಂದರೂ ಕೂಡ ಮಗು ಎದ್ದ ಮೇಲೆ ಮಾಡಲಾಗುವುದಿಲ್ಲ ಎಂದು ಗಡಬಡಿಸಿ ಕೆಲಸ ಮಾಡುವುದು… ಹೀಗೆ ದಿನ ಕಳೆದದ್ದೇ ಗೊತ್ತಾಗಲಿಲ್ಲ.
ಮಗುವಿನ ಜವಾಬ್ದಾರಿಯ ನಡುವೆ ನಾವಿಬ್ಬರೂ ಒಬ್ಬರಿಗೊಬ್ಬರು ಪರಸ್ಪರ ಸಮಯ ಕೊಡಲೇ ಇಲ್ಲ. ಯಾವಾಗ ನಾವಿಬ್ಬರೂ ಹಿಡಿದು ಓಡಾಡುತ್ತಿದ್ದ ಕೈ ಜಾರಿ ಮಗುವಿನ ಕೈಹಿಡಿದೆವು, ಯಾವಾಗ ನಮ್ಮಿಬ್ಬರ ಬಗ್ಗೆ ಮಾತನಾಡುವುದನ್ನುಮರೆತೆವೋ, ಜೊತೆ ಜೊತೆಯಾಗಿ ಓಡಾಡುವುದನ್ನು ಕೈ ಕೈ ಹಿಡಿದು ದೀರ್ಘ ರಾತ್ರಿಗಳಲ್ಲಿ ವಾಕ್ ಮಾಡುವುದನ್ನು, ಸೋಫಾದ ಮೇಲೆ ಒಬ್ಬರಿಗೊಬ್ಬರು ಅಂಟಿ ಕುಳಿತು ಹಾಡು ಕೇಳುವುದನ್ನು ನಿಲ್ಲಿಸಿದೆವೋ ಗೊತ್ತೇ ಆಗಲಿಲ್ಲ.
ಮಗು ದೊಡ್ಡದಾಗುತ್ತಲೇ ಹೋಯಿತು ನಾನು ಮಗುವಿನ ಲಾಲನೆ ಪಾಲನೆ,ಅಡುಗೆ, ತಿಂಡಿ ಮನೆಗೆಲಸದ ಸುತ್ತ, ಮುಂದೆ ಮಗುವಿನ ಶಾಲೆ ಪಾಠ ಪ್ರವಚನಗಳಲ್ಲಿ ಗಮನಹರಿಸಿದರೆ ಆತ ತನ್ನ ವೃತ್ತಿಯೆಡೆ ಗಮನ ಕೇಂದ್ರಿಕರಿಸಿದ. ಹೊಸ ಅವಕಾಶಗಳು, ಜವಾಬ್ದಾರಿಗಳು ಆತನನ್ನು ಬದುಕಿನ ನಾಗಾಲೋಟದಲ್ಲಿ ಓಡಿಸತೊಡಗಿತ್ತು. ಗರ್ಭಿಣಿಯಾದಾಗಲೇ ನಾನು ಕೆಲಸ ಬಿಟ್ಟ ಕಾರಣ ಒಬ್ಬರ ದುಡಿಮೆಯಲ್ಲಿಯೇ ಮನೆ ನಡೆಯಬೇಕಿತ್ತು. ಮಗುವಿನ ಹೆಚ್ಚಿನ ವಿದ್ಯಾಭ್ಯಾಸ, ಬಟ್ಟೆ ಬರೆ, ಔಷಧಿ ಆಸ್ಪತ್ರೆ ಏರುತ್ತಿರುವ ಮನೆಯ ಖರ್ಚುವೆಚ್ಚಗಳು ಇದ್ದುದರಲ್ಲಿಯೇ ಹೊಂದಿಕೊಂಡು ಹೋಗಲು ಸಾಧ್ಯವಾಗದ ನಾಗರಿಕ ಜೀವನದ ಸವಾಲುಗಳು ಬ್ಯಾಂಕ ಖಾತೆಯಲ್ಲಿನ ಹಣವನ್ನು ನಿಧಾನವಾಗಿ ಕರಗಿಸಿತು.
ಇದೀಗ ನನಗೆ 35… ಒಂದೇ ಮಗು ಸಾಕು ಎಂಬ ನಿರ್ಧಾರ ನಮ್ಮದಾಗಿತ್ತು. ಮನೆ, ಕಾರು, ಒಳ್ಳೆಯ ಜೀವನಶೈಲಿಯನ್ನು ಹೊಂದಿದ್ದರೂ, ಮಗು ಕೂಡ ತಕರಾರಿಲ್ಲದೆ ಓದುತ್ತಿದ್ದರೂ ಏನನ್ನೋ ಕಳೆದುಕೊಂಡ ಭಾವ. ಮೊದಮೊದಲು ಯಾವಾಗಾದರೊಮ್ಮೆ ಸ್ನೇಹಿತರ ಜೊತೆಗೆ ತಡ ರಾತ್ರಿಯವರೆಗೆ ಹರಟೆ ಹೊಡೆದು ಊಟ ಮಾಡಿ ತುಸು ಪೆಗ್ಗೇರಿಸಿ ಮನೆಗೆ ಬರುತ್ತಿದ್ದ ಗಂಡ ಈಗ ವಾರದಲ್ಲಿ ಎರಡು ಮೂರು ದಿನ ಹೊರಗಡೆಯೇ ತಿಂಡಿ ತೀರ್ಥ ಮುಗಿಸಿಕೊಂಡು ಬರುವುದು ಮಾಮೂಲಾಗಿತ್ತು.
ಇದು ನಮ್ಮಿಬ್ಬರ ನಡುವಿನ ಅಸಹನೆಗೆ ಕಿರಿಕಿರಿಗೆ ಕೂಡ ಕಾರಣವಾಗಿತ್ತು. ಆತನ ಮುಂಗೋಪ ಸಿಟ್ಟುಗಳಿಗೆ ನನ್ನ ಒರಟಾದ ಉತ್ತರಗಳು ಪರಿಸ್ಥಿತಿಯನ್ನು ಗಂಭೀರತೆಗೆ ಕರೆದೊಯ್ಯುತ್ತಿದ್ದವು. ಮನಸ್ತಾಪಕ್ಕೆ ಕಾರಣವಾಗುತ್ತಿದ್ದವು. ಇಬ್ಬರೂ ಕೋಪದಿಂದ ಕೂಗಾಡಿ ತಲೆಬಿಸಿ ಮಾಡಿಕೊಂಡು ಮುಖ ತಿರುವುತ್ತಿದ್ದೆವು.ಮಾತನಾಡಿದರೆ ತಾನೆ ಜಗಳ…. ಮಾತನಾಡದಿದ್ದರೆ!! ಬರ ಬರುತ್ತಾ ನಮ್ಮಿಬ್ಬರ ನಡುವೆ ಮಾತುಕತೆ ಕಡಿಮೆಯಾಯಿತು. ದಿನಗಳು ಕಳೆಯುತ್ತಾ ಹೋದಂತೆ ಮಗು ಹತ್ತನೇ ತರಗತಿ ಪಾಸಾಗಿ ಕಾಲೇಜಿಗೆ ಹೋಗುವಂತಾಯಿತು. ಆತನ ಮುಂದಿನ ವಿದ್ಯಾಭ್ಯಾಸಕ್ಕೆ ಅಕೌಂಟಿನಲ್ಲಿನ ಹಣವೆಲ್ಲ ಖರ್ಚಾಗಿತ್ತು
ಮಗ ಮುಂದಿನ ವಿದ್ಯಾಭ್ಯಾಸಕ್ಕೆ ಹೊರ ಊರಿಗೆ ಹೋದ ಮೇಲೆ ನಮ್ಮಿಬ್ಬರ ಮೌನ ಇಡೀ ಮನೆಯನ್ನು ಆಳತೊಡಗಿತು. ಅಂತ ಒಂದು ಮೌನದ ಕ್ಷಣದಲ್ಲಿ ನನ್ನ ಮನಸ್ಸು ಆತ ನನ್ನ ಬಳಿ ಬಂದು ಕೂರಬಾರದೇ? ಕೈ ಹಿಡಿದು ಆಪ್ತವಾಗಿ ಮಾತನಾಡಬಾರದೇ? ಇಬ್ಬರು ಜೊತೆಯಾಗಿ ವಾಕಿಂಗ್ ಹೋಗಲು ಕೇಳಬಾರದೇ?ಎಂಬ ಭಾವ ಕಾಡಿತು. ನಾನೇ ಮುಂದಾಗಿ ಕೇಳಲೇ ಎಂದರೆ ಅಹಂ ಭಾವ ತಡೆಯುತ್ತಿತ್ತು.
ಆದರೂ ಅದೊಮ್ಮೆ ಆತ ನನ್ನನ್ನು ಹೊರಗೆ ಸುತ್ತಾಡಿ ಬರಲು ಕರೆದಾಗ ನಾನು ತುಸು ವಿಚಿತ್ರವಾಗಿ ಕಣ್ಣುಗಳನ್ನು ದೊಡ್ಡದಾಗಿಸಿ ಮನೆಯಲ್ಲಿ ಅದೆಷ್ಟು ಕೆಲಸವಿರುತ್ತದೆ ಗೊತ್ತಲ್ಲವೇ? ಕೆಲಸ ಬಿಟ್ಟು ಹೇಗೆ ಬರಬೇಕು ಎಂದು ಸೊಂಟಕ್ಕೆ ಸೆರಗನ್ನು ಸಿಕ್ಕಿಸಿ ನನ್ನ ಕೆಲಸಕ್ಕೆ ತೊಡಗಿಕೊಂಡರೆ ಮನದ ಇನ್ನೊಂದು ಮೂಲೆ ಇರಲಿ ಬಾ ಕೆಲಸ ಇದ್ದದ್ದೆ ಆಮೇಲೆ ಬಂದು ಇಬ್ಬರೂ ಸೇರಿ ಮಾಡೋಣ ಎಂದು ಆತ ಹೇಳಬಾರದೇ! ಹಾಗೆ ಹೇಳಿದರೆ ಹೊರಟುಬಿಡುತ್ತೇನೆ ಎಂದು ಚೀರುತ್ತಿತ್ತು. ಆದರೆ ಒಂದೂ ಮಾತನಾಡದೆ ಆತ ಸುಮ್ಮನೆ ಪೇಪರ್ ಹಿಡಿದು ಕುಳಿತುಬಿಟ್ಟ.
ಹೀಗೆ ದಿನಗಳು ಕಳೆದು ನಮ್ಮಿಬ್ಬರ ಕಣ್ಣಿಗೆ ಕನ್ನಡಕ ಬಂದಿತ್ತು, ಕೂದಲು ತನ್ನ ದಟ್ಟ ಕಪ್ಪು ಬಣ್ಣ ಕಳೆದುಕೊಂಡು ಅಲ್ಲಲ್ಲಿ ಬಿಳಿ ಕೂದಲು ಕಾಣತೊಡಗಿತ್ತು. ಮನ ಗೊಂದಲದ ಗೂಡಾಗುತ್ತಿತ್ತು. ಇದೆಲ್ಲದರಿಂದ ಹೊರಬರಲು ನಾನು ನನ್ನದೇ ವಯಸ್ಸಿನ ಸ್ನೇಹಿತೆಯರ ಜೊತೆ ಪಾರ್ಕು,ದೇವಸ್ಥಾನ, ಪಿಕ್ನಿಕ್, ವಾಕಿಂಗ್, ಕಿಟ್ಟಿ ಪಾರ್ಟಿ ಎಂದು ನನ್ನನ್ನು ನಾನು ತೊಡಗಿಸಿಕೊಂಡರೆ ಆತ ತನ್ನದೇ ಸ್ನೇಹಿತರ ವಲಯದಲ್ಲಿ ಕಾಲ ಕಳೆದು ಮನೆಗೆ ಬರತೊಡಗಿದ.
ಮಗನ ಓದು ಮುಗಿದು ಆತ ಕೆಲಸಕ್ಕೆ ಸೇರಿ ತನ್ನ ಕಾಲ ಮೇಲೆ ನಿಂತು ನಮ್ಮಿಬ್ಬರಿಗೂ ಸಂಭ್ರಮ ಸಂತಸವನ್ನುಂಟು ಮಾಡಿದ. ಮುಂದೆ ಕೆಲವೇ ದಿನಗಳಲ್ಲಿ ಹೆಚ್ಚಿನ ಅವಕಾಶ ದೊರೆತು ವಿದೇಶಕ್ಕೆ ಹಾರಿ ಹೋದ ಆತ. ಮಗ ಮನೆಯಲ್ಲಿದ್ದಾಗ ಸಂತಸದ ಗೂಡಾಗುತ್ತಿದ್ದ ಮನೆ ಮತ್ತೆ ಮೌನದ ಮುಸುಕು ಹೊದ್ದು ಕುಳಿತಿತ್ತು. ಪರಸ್ಪರ ಅವಶ್ಯಕತೆ ಇದ್ದಷ್ಟೇ ಮಾತನಾಡಿದರೂ ನಮ್ಮಿಬ್ಬರ ಮನಗಳು ಬಹಳಷ್ಟು ದೂರವಾಗಿದ್ದವು. ಜೊತೆಯಾಗಿ ಸಾಗುವ ರೈಲಿನ ಹಳಿಗಳಂತೆ, ನದಿಯ ಎರಡು ದಂಡೆಗಳಂತೆ ನಾವಿಬ್ಬರೂ ಪರಸ್ಪರ ಜೊತೆಯಾಗಿದ್ದರೂ ಜೊತೆ ಇಲ್ಲದವರಾಗಿದ್ದೆವು.
ಇದೀಗ ನಿವೃತ್ತಿ ಹೊಂದಿದ ನನ್ನ ಪತಿ ಮನೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರೂ ಮಾತಿಗೆ ಬರ. ಇಬ್ಬರಿಗೂ ನಿಧಾನವಾಗಿ ಮಾಗಿದ ವಯಸ್ಸು ತನ್ನ ಕೊಡುಗೆಗಳನ್ನು ಧಾರಾಳವಾಗಿ ನೀಡಿ ಬಿ ಪಿ, ಶುಗರ್, ಸೊಂಟ ಮತ್ತು ಮೈಕೈ ನೋವುಗಳು ಜೊತೆಯಾದವು. ಇದುವರೆಗೆ ಮೇಕಪ್ ಸಾಮಾನುಗಳು, ಸುಗಂಧ ದ್ರವ್ಯಗಳ ಗೂಡಾಗಿದ್ದ ನಮ್ಮ ಡ್ರೆಸ್ಸಿಂಗ್ ಮಿರರ್ ನ ಮುಂದೆ ಔಷಧಿ ಮಾತ್ರೆ ನೋವಿನ ಮುಲಾಮುಗಳ ತಮ್ಮ ಸ್ಥಾನವನ್ನು ಕಂಡುಕೊಂಡವು.
.
ಆಗಾಗ ಮಗ ಮಾಡುತ್ತಿದ್ದ ಫೋನ್ ಕರೆ ನಮ್ಮಿಬ್ಬರಲ್ಲಿ ಜೀವನೋತ್ಸಾಹವನ್ನು ಹುಟ್ಟಿಸುತ್ತಿದ್ದರೂ ಇದೀಗ ಚಾತಕ ಪಕ್ಷಿಯಂತೆ ಅವನ ಬರುವಿಕೆಗಾಗಿ ಇಬ್ಬರೂ ಕಾಯುತ್ತಿದ್ದೆವು. ಮಗನಿಗೆ ಮದುವೆ ಮಾಡಿ ಆತನ ಸಂಸಾರ ಬೆಳೆಯುವುದನ್ನು ನೋಡುವ ಆಸೆ ನಮ್ಮಿಬ್ಬರಲ್ಲಿ ಗುಟ್ಟಾಗಿ ಒಡಮೂಡಿತ್ತು.
ಅದೊಂದು ದಿನ ಸೋಫಾದ ಮೇಲೆ ಕುಳಿತು ನಾನು ಮೊಬೈಲ್ ನೋಡುತ್ತಿದ್ದರೆ ಪೇಪರ್ ನಲ್ಲಿ ಮುಖ ಹುದುಗಿಸಿದ್ದ ನನ್ನ ಪತಿಯ ಮೊಬೈಲ್ಗೆ ಕರೆಯೊಂದು ಬಂದು ಒಂದೆರಡು ನಿಮಿಷದ ಮಾತುಕತೆಯಲ್ಲಿ ಕಟ್ಟಾಯಿತು. ವಿವರ್ಣಗೊಂಡ ಮುಖವನ್ನು ಹೊತ್ತ ಪತಿಯನ್ನು ನೋಡಿ ಏನಾಯಿತು ಎಂದು ತಲೆ ಎತ್ತಿದಾಗ ಮಗ ವಿದೇಶದಲ್ಲಿಯೇ ಒಂದು ಹುಡುಗಿಯನ್ನು ಮದುವೆಯಾಗಿದ್ದು ಇನ್ನು ಅಲ್ಲಿಯೇ ಇರುತ್ತಾನೆ ಎಂಬ ವಿಷಯವನ್ನು ನಿರ್ಭಾವುಕರಾಗಿ ಪತಿ ಹೇಳಿದರೆ, ನಾನು ಸೋಫಾದಲ್ಲಿ ಮತ್ತಷ್ಟು ಕುಸಿದು ಕುಳಿತೆನು. ಬದುಕು ಬದಲಾಗಬಹುದು ಎಂಬ ಆಶಾಗೋಪುರ ಕ್ಷಣಾರ್ಧದಲ್ಲಿ ನೆಲಕಚ್ಚಿತ್ತು.
ಪತಿ ಮುಂದುವರೆದು ಬ್ಯಾಂಕಿನಲ್ಲಿರುವ ಹಣವನ್ನು ಯಾವುದಾದರೂ ವೃದ್ಧಾಶ್ರಮಕ್ಕೆ ಕಟ್ಟಿ ಇನ್ನು ಮೇಲೆ ಅಲ್ಲಿಯೇ ಇರುವಂತೆ ಸಲಹೆ ನೀಡಿದ್ದು, ವಯಸ್ಸಾದ ಮೇಲೆ ತೆಗೆದುಕೊಳ್ಳಬೇಕಾದ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಹೇಳಿದ್ದಾನೆಂದು ಹೇಳಿದಾಗ ನನ್ನ ದುಃಖದ ಕಟ್ಟೆ ಒಡೆದಿತ್ತು.
ಅಳುತ್ತಿದ್ದ ನನ್ನ ಬಳಿ ಸಾರಿದ ಪತಿ ಸೋಫಾದ ಮೇಲೆ ನನ್ನ ಪಕ್ಕದಲ್ಲಿ ಕುಳಿತು ನನ್ನ ಕೈಯನ್ನು ತನ್ನ ನಡುಗುತ್ತಿದ್ದ ಕೈಯಲ್ಲಿ ಹಿಡಿದು ನನ್ನನ್ನು ತನ್ನ ಎದೆಗೆ ಒತ್ತಿ ಸಮಾಧಾನ ಪಡಿಸಿದಾಗ ಆ ನೋವಿನಲ್ಲಿಯೂ ಕೂಡ ನನ್ನ ಕಣ್ಣಲ್ಲಿ ಹೊಂಬೆಳಕು ಮೂಡಿತು. ಮನ ಮತ್ತೆ ಹರ್ಷದಿಂದ ಗರಿಗೆದರಿತು.
ನಡೆ, ದೇವಸ್ಥಾನಕ್ಕೆ ಹೋಗಿ ನಂತರ ಎಲ್ಲಾದರೂ ಸುತ್ತಾಡಿ ಊಟ ಮಾಡಿ ಮನೆಗೆ ಬರೋಣ ಎಂದು ಆತ ಕರೆದಾಗ ತಕ್ಷಣ ನಾನು ಸರಿ ಎಂದು ತಯಾರಾದೆ.
ಬಹಳ ವರ್ಷಗಳ ನಂತರ ನಾವಿಬ್ಬರೂ ಸಡಗರ ಸಂಭ್ರಮದಿಂದ ತಯಾರಾಗಿ ಹತ್ತಿರದ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದೆವು. ನಮ್ಮಿಬ್ಬರ ಅಹಮ್ಮಿನ ಕೋಟೆಯೊಳಗೆ ಬಂಧಿಯಾಗಿದ್ದ ಪ್ರೀತಿ ಪ್ರೇಮದ ನವಿರು ಭಾವ, ನಿನಗಾಗಿ ನಾನು ನನಗಾಗಿ ನೀನು ಎಂಬ ಮಾತನ್ನು ಕೇಳಬೇಕೆಂಬ ಎಷ್ಟೋ ವರ್ಷಗಳ ಕಾತರದ ಗಳಿಗೆ ನಮ್ಮ ಬಾಳಿನಲ್ಲಿ ಮೂಡಿತ್ತು.
ಕೈ ಕೈ ಹಿಡಿದು ನಡೆಯದಿದ್ದರೂ ಇದೀಗ ಒಬ್ಬರಿಗೊಬ್ಬರು ಆಸರೆಯಾಗಿ, ಒಬ್ಬರಿನ್ನೊಬ್ಬರ ಕೆಲಸಗಳಲ್ಲಿ ಸಹಾಯಕರಾಗಿ, ಜೊತೆಯಾಗಿ ಎದ್ದು ಪರಸ್ಪರ ಮಾತನಾಡುತ್ತಾ, ಅಡುಗೆ ತಿಂಡಿ ಮಾಡಿ ಸವಿಯುತ್ತಾ, ಮುಂಜಾನೆ ಮತ್ತು ಸಂಜೆ ವಾಕಿಂಗ್ ಮಾಡುತ್ತಾ ಒಬ್ಬರಿನ್ನೊಬ್ಬರ ಕಾಳಜಿ ಮಾಡುತ್ತಾ, ಆಗಾಗ ಮಗ ಸೊಸೆ ಮಾಡುವ ಫೋನ್ ಕರೆಗಾಗಿ ಕಾಯುತ್ತಾ ಸಾಗಿರುವ ನಮ್ಮ ಬದುಕಿನಲ್ಲಿನ ಅಹಂ ಎಂಬ ನಿರ್ವಾತ ಮಾಗಿದ ಪ್ರೇಮದ ಎಳೆ ಬಿಸಿಲಿಗೆ ಕರಗಿ ಹೋಗಿದೆ.
ಸ್ನೇಹಿತರೆ, ಬದುಕು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವುದಿಲ್ಲ ನಿಜ. ಆದರೆ ನಮಗೆ ಸಿಕ್ಕಷ್ಟನ್ನು ಸರಿಯಾಗಿ ದಕ್ಕಿಸಿಕೊಂಡು ಬದುಕುವುದು ಜಾಣರ ಲಕ್ಷಣ. ದಾಂಪತ್ಯ ಎಂಬುದು ಜೊತೆಯಾಗಿ ಎಳೆಯಬೇಕಾದ ಜೋಡೆತ್ತಿನ ಪಯಣ. ಇದರಲ್ಲಿ ಇಬ್ಬರ ಪ್ರಯತ್ನವು ಮುಖ್ಯ. ನಮ್ಮ ನಮ್ಮ ಅಹಮ್ಮಿನ ಕೋಟೆಯಿಂದ ಹೊರಬರದೆ ಇದ್ದರೆ ಬದುಕು ಕೊನೆಯವರೆಗೂ ನೀರಸವಾಗಿ ಸಾಗುತ್ತದೆ.
ಪರಸ್ಪರ ಒಬ್ಬರಿಗೊಬ್ಬರು ಗೌರವವನ್ನು ಕೊಟ್ಟುಕೊಂಡು ಸೋಲುವುದರಲ್ಲಿ ತಪ್ಪಿಲ್ಲ. ಒಬ್ಬರಿಗೊಬ್ಬರು ಪರಸ್ಪರ ಸೋತು ನಡೆದರೆ ಬದುಕಿನಲ್ಲಿ ಗೆಲ್ಲುತ್ತಾರೆ. ಆ ಗೆಲುವು ಉತ್ಸಾಹದ, ಸಂತಸದ ಮತ್ತು ಸಾರ್ಥಕ್ಯದ ಜೀವನಕ್ಕೆ ಕಾರಣವಾಗುತ್ತದೆ.
ಜೀವನದ ಕೊನೆಯವರೆಗೂ ಹಟ ಸಾಧಿಸಿ ಅಂತಿಮವಾಗಿ ಒಂದಾದ ಮೇಲಿನ ದಂಪತಿಗಳ ಬದುಕಿನ ಅರ್ಧ ಭಾಗ ಮುನಿಸಿನಲ್ಲಿಯೇ ಕಳೆದು ಹೋಯಿತು.
ಕೈ ಜಾರುವ ಮುನ್ನ ಬದುಕನ್ನು, ಸಂಗಾತಿಯನ್ನು, ಸಮಯವನ್ನು ಪ್ರೀತಿಯನ್ನು ಹಿಡಿದಿಟ್ಟುಕೊಳ್ಳಿ. ಮತ್ತೆ ಸಿಗುವುದೋ ಇಲ್ಲವೋ ಯಾರಿಗೆ ಗೊತ್ತು!
ಸಿಕ್ಕದ್ದನ್ನು ಕಳೆದುಕೊಳ್ಳುವ ಮೂರ್ಖತನ ಖಂಡಿತ ಬೇಡ.