
ಮುನಿರಾಬಾದ್‌ನಲ್ಲಿ ವಿಶ್ವ ನ್ಯೂಮೋನಿಯಾ ದಿನಾಚರಣೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 12- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ನ್ಯೂಮೋನಿಯಾ ದಿನಾಚರಣೆ ಕಾರ್ಯಕ್ರಮವು ತಾಲ್ಲೂಕಿನ ಮುನಿರಾಬಾದ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ಕೊಪ್ಪಳ ಕ್ಷೇತ್ರ ಆರೋಗ್ಯ ಶಿಕ್ಷಾಣಾಧಿಕಾರಿ ಗಂಗಮ್ಮ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಮಕ್ಕಳಿಗೆ ಬರುವ 12 ಮಾರಕ ರೋಗಗಳ ವಿರುದ್ದ ಈಗಾಗಲೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ಮತ್ತು ಶಿಶುಗಳಿಗೆ ಲಸಿಕೆ ನೀಡಲಾಗುತ್ತದೆ.
ನ್ಯುಮೋನಿಯಾ ಖಾಯಿಲೆ ಮಕ್ಕಳನ್ನು ಕಾಡುವ ಸಾಮಾನ್ಯ ಖಾಯಿಲೆಗಳಲ್ಲಿ ಇದು ಕೂಡ ಒಂದಾಗಿದೆ. ತೀವ್ರ ರೀತಿಯ ನ್ಯುಮೋನಿಯಾದಿಂದ ಮಕ್ಕಳು ಮರಣ ತಪ್ಪಿಸುವ ಸಲುವಾಗಿ ಪ್ರತಿ ವರ್ಷ ನವೆಂಬರ್ 12 ರಂದು ವಿಶ್ವ ನ್ಯುಮೋನಿಯ ದಿನಾಚರಣೆ ಯನ್ನು ಆಚರಿಸಲಾಗುತ್ತದೆ. ನ್ಯುಮೋನಿಯ ಖಾಯಿಲೆ ಹೇಗೆ ಹರಡುತ್ತದೆ, ಅದರ ಲಕ್ಷಣಗಳ ಕುರಿತು ಹಾಗೂ ನ್ಯುಮೋನಿಯ ಖಾಯಿಲೆಯಿಂದ ಮಕ್ಕಳ ಮರಣ ನಿಯಂತ್ರಿಸುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ.
ಕೆಮ್ಮು ಮತ್ತು ಶೀತ ಹೆಚ್ಚಾಗುವುದು, ತೀವ್ರ ಉಸಿರಾಟದ ತೊಂದರೆ, ಪಕ್ಕೆಸಳೆತ, ತೀವ್ರ ರೀತಿಯ ಜ್ವರ ನ್ಯುಮೋನಿಯ ಇಂತಹ ಲಕ್ಷಣಗಳಿರುವ ಮಕ್ಕಳನ್ನು ಗುರುತಿಸಿ, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಕ್ಷೇತ್ರ ಸಿಬ್ಬಂದಿಯವರಿಗೆ ಹೇಳಿದರು.
ನ್ಯುಮೋನಿಯದಿಂದ ಮಕ್ಕಳ ರಕ್ಷಣೆ ಕುರಿತು ಹುಟ್ಟಿದ ಅರ್ಧ ಗಂಟೆಯೊಳಗೆ ತಾಯಿಯ ಏದೆಹಾಲು ನೀಡುವುದು ಜೊತೆಗೆ ೬ ತಿಂಗಳವರೆಗೆ ಕೇವಲ ತಾಯಿಯ ಏದೆ ಹಾಲು ಮಾತ್ರ ನೀಡುವುದು. ೦೬ ತಿಂಗಳ ನಂತರ ಪೂರಕ ಪೌಷ್ಠಿಕ ಆಹಾರ ನೀಡುವುದು, ಕುಡಿಯುವ ನೀರನ್ನು ಮುಚ್ಚಿಡಬೇಕು. ಮಕ್ಕಳಿಗೆ ಸಕಾಲದಲ್ಲಿ ಲಸಿಕೆ ಹಾಕಿಸುವುದರ ಮೂಲಕ ತೆಗೆದುಕೊಂಡು ನ್ಯುಮೋನಿಯ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಹಕರಿಸಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪದ್ಮಾವತಿ, ಸಿ.ಹೆಚ್.ಓ ಮಂಜುಷಾ, ಆಶಾ ಸುಗಮಕಾರರು, ಆಶಾ/ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮದ ಸಾರ್ವಜನಿಕರು ಇದ್ದರು.