ಅರಣ್ಯ ಇಲಾಖೆಯಿಂದ ವಿಶ್ವ ರೇಂಜರ್ಸ್ ದಿನಾಚರಣೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 31- ಯಾರು ತನ್ನ ಪ್ರಾಣವನ್ನು ಪಣಕ್ಕಿಟ್ಟು ಬೇರೆಯವರನ್ನು ಅಥವಾ ಸಮಾಜವನ್ನು ರಕ್ಷಿಸುವವರೋ ಅವರನ್ನು ರೇಂಜರ್ಸ್ ಎಂದು ಕರೆಯಲಾಗುವುದು, ಈ ಘಟಕವು ಸೈನ್ಯದಲ್ಲಿ ಮತ್ತು ಸ್ಕೌಟ್ ಅಂಡ್ ಗೈಡ್ಸ್ ನಲ್ಲಿ ಸಹ ಇರುತ್ತದೆ. ಅದೇ ಪ್ರಕಾರವಾಗಿ ಅರಣ್ಯ ಇಲಾಖೆಯಲ್ಲೂ ಸಹ ರೇಂಜರ್ಸ್ ಗಳಿದ್ದಾರೆ, ಅವರು ಹಗಲಿರುಳು ಎನ್ನದೆ ಅರಣ್ಯವನ್ನು ಕಾಯುತ್ತಾರೆ, ಅವರಿಂದಾಗಿ ಅರಣ್ಯದಲ್ಲಿನ ಅಮೂಲ್ಯ ಸಂಪತ್ತು ಮತ್ತು ವನ್ಯ ಮೃಗಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಕರು ಹಾಗೂ ಇಲಾಖೆಯ ಮಹಾನಿರ್ದೇಶಕರಾದ ಸಂಜಯ್ ಬಿಜ್ಜರ್ ತಿಳಿಸಿದರು.
ಅವರು ಇಂದು ನಗರದ ಬೆಳಗಲ್ ಕ್ರಾಸ್ ನಲ್ಲಿರುವ ಅರಣ್ಯ ಇಲಾಖೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ರೇಂಜರ್ಸ್ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ನಮ್ಮ ರಾಷ್ಟ್ರಧ್ವಜದಲ್ಲಿ 3 ಬಣ್ಣಗಳಿವೆ ಆ ಬಣ್ಣದಲ್ಲಿ ಅತ್ಯಂತ ಪ್ರಮುಖವಾಗಿ ಹಸಿರು ಬಣ್ಣವಿದೆ ಈ ಹಸಿರು ಬಣ್ಣ ದೇಶದ ಪ್ರಕೃತಿ ಸುಭಿಕ್ಷ ಸೂಚಕವಾಗಿದೆ, ಈ ಪ್ರಕೃತಿಯನ್ನು ಕಾಪಾಡುವ ಅಥವಾ ಕಾಯುವ ಗಾರ್ಡ್ ಗಳನ್ನು ದೇಶ ಕಾಯುವ ಸೈನಿಕರ ರೀತಿಯಲ್ಲಿ ನೋಡಬೇಕಾಗಿದೆ, ಸೈನಿಕರು ದೇಶದ ಗಡಿಯನ್ನು ಕಾದರೆ, ಗಸ್ತು ಪಾಲಕರು ಅರಣ್ಯವನ್ನು ಕಾಯುತ್ತಾರೆ ಇವರಿಂದಾಗಿ ನಮಗೆ ನದಿ ಹಳ್ಳಕೊಳ್ಳ ಪ್ರಕೃತಿ ಕಾಡು ಮೇಡು ಉಳಿದಿದೆ ಎಂದು ಅಭಿಪ್ರಾಯಪಟ್ಟರು.
ಅತಿ ಮುಖ್ಯವಾಗಿ ನದಿಗಳ ಉಗಮ ಕಾಡಿನಲ್ಲಿ ಆಗುತ್ತದೆ ನದಿ ನೀರು ಭೂಮಿಯಿಂದ ಚಿಮ್ಮುವುದಿಲ್ಲ ಬದಲಾಗಿ ಮರಗಳಲ್ಲಿ ಎಲೆಗಳಲ್ಲಿ ಸಂಗ್ರಹ ಗೊಂಡ ನೀರು ಕಾಲಂತರದಲ್ಲಿ ಜಿನಗಿ ಹನಿಹನಿಯಾಗಿ ಕಳ್ಳ ಕೊಳ್ಳ ವಾಗಿ ಹರಿದು ನದಿಯಾಗುತ್ತದೆ ಎಂದರು.
ನೈಸರ್ಗಿಕ ಸಂಪನ್ಮೂಲ ಸಂಪತ್ ಭರಿತವಾಗಿ ಹೊಂದಿರುವ ದೇಶ ಅತ್ಯಂತ ಸುಭಿಕ್ಷ ವಾಗಿರುತ್ತದೆ ಕಾರಣ ವೈಜ್ಞಾನಿಕವಾಗಿ ಸಸಿಗಳನ್ನು ನೆಟ್ಟು ಅರಣ್ಯವನ್ನು ಉಳಿಸಿ ಬೆಳೆಸಿ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಆಡಿದ ಅರಣ್ಯ ಅಧಿಕಾರಿ ಸಂದೀಪ್ ಸೂರ್ಯವಂಶಿ, ಪ್ರಕೃತಿಯನ್ನು ದೇವರಂತೆ ಕಾಣಬೇಕು ಕಾಡು ಮೇಡಿಲ್ಲದೆ ಜನರು ಬದುಕಲು ಸಾಧ್ಯವಿಲ್ಲ ಜನರಿಲ್ಲದಿರೆ ಸಮಾಜ ಉಳಿಯಲು ಸಾಧ್ಯವಿಲ್ಲ ಕಾರಣ ಎಲ್ಲರೂ ಪ್ರಕೃತಿಯ ರಕ್ಷಣೆಗೆ ಮುಂದಾಗಬೇಕು ಪ್ರಕೃತಿ ರಕ್ಷಕ ರಕ್ಷಿತಃ ಎಂದು ಪ್ರಕೃತಿ ಉಳಿವಿನ ಬಗ್ಗೆ ತಿಳಿಸಿಕೊಟ್ಟರು.
ವಿಶ್ವ ರೇಂಜರ್ಸ್ ದಿನಾಚರಣೆಯ ಅಂಗವಾಗಿ ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅಂಚೆ ಅಧೀಕ್ಷಕ ಚಿದಾನಂದ ಅವರು ಅಂಚೆ ಇಲಾಖೆಯಲ್ಲಿನ ಜನ ಉಪಯೋಗಿ ಯೋಜನೆಗಳನ್ನು ತಿಳಿಸಿಕೊಟ್ಟರು ಮತ್ತು ಅಂಚೆ ಇಲಾಖೆಯಲ್ಲಿ ಲಭ್ಯವಿರುವ ವಿಮೆಯನ್ನು ತಪ್ಪದೇ ಎಲ್ಲರೂ ಪಡೆದುಕೊಳ್ಳಬೇಕು ಇದರಿಂದ ತಮ್ಮ ಕುಟುಂಬಕ್ಕೆ ಹಾರ್ದಿಕ ಭದ್ರತೆ ಇರುತ್ತದೆ ಎಂದು ತಿಳಿ ಹೇಳಿದರು.
ಕಾರ್ಯಕ್ರಮವನ್ನು ನಗರ ಶಾಸಕರಾದ ನಾರಾ ಭರತ್ ರೆಡ್ಡಿ ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಉಪಮೇಯರ್ ಡಿ ಸುಕುಮ್, ಅಪರ ಮುಖ್ಯ ಅರಣ್ಯ ಸಂರಕ್ಷಕರು ಪ್ರಸಾರ ಸ್ಮಿತಾ ಬಿಜೂರ್ ಇದ್ದರು.
ಸಂಡೂರು ವಲಯದ ಅರಣ್ಯ ಅಧಿಕಾರಿಗಳಾದ ಗಿರೀಶ್ ಕುಮಾರ್ ಸ್ವಾಗತಿಸಿದರು, ಜ್ಞಾನಾಮೃತ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಮೂಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಎಲ್ಲಾ ವಲಯ ಅರಣ್ಯ ಅಧಿಕಾರಿಗಳು ಉಪ ಅರಣ್ಯ ಅಧಿಕಾರಿಗಳು ವನಪಾಲಕರು ಗಾರ್ಡುಗಳು ಸೇರಿದಂತೆ ಹಲವಾರು ಜನ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.
ಅರಣ್ಯ ಕುರಿತ ಕಿರುಪರಿಚಯದ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಮತ್ತು ಕಿಟ್ ಇರುವ ಬ್ಯಾಗನ್ನು ವನಪಾಲಕರಿಗೆ ವಿತರಿಸಲಾಯಿತು.