
ಚಿಕ್ಕ ಕುಟುಂಬ ಹೊಂದಲು “ಅಂತರ” ಚುಚ್ಚುಮದ್ದು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಭ್ಯ: ಡಿಹೆಚ್‍ಓ ಡಾ.ವೈ.ರಮೇಶ್ ಬಾಬು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,22- ದಂಪತಿಗಳು ಚಿಕ್ಕ ಕುಟುಂಬ ಹೊಂದಲು ಪ್ರತಿ 3 ತಿಂಗಳಿಗೊಮ್ಮೆ ಪಡೆಯಬಹುದಾದ “ಅಂತರ” ಚುಚ್ಚುಮದ್ದು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಹೇಳಿದರು.
ಸೋಮವಾರದಂದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕುಟುಂಬ ಕಲ್ಯಾಣ ವಿಧಾನಗಳ ಅನುಷ್ಟಾನ ಮತ್ತು “ಅಂತರ” ಚುಚ್ಚುಮದ್ದು ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು, ಚಿಕ್ಕ ಕುಟುಂಬ ಹೊಂದುವುದು ಪ್ರಸ್ತುತ ಸನ್ನಿವೇಶದಲ್ಲಿ ಅತ್ಯಗತ್ಯವಾಗಿದೆ. ಆರೋಗ್ಯ ಇಲಾಖೆ ಅಡಿಯಲ್ಲಿ ಪುರುಷರು ಮತ್ತು ಮಹಿಳೆಯರು ಬಳಸಬಹುದಾದ ಮತ್ತು ಜನನದ ಮಧ್ಯ ಅಂತರವಿಡಲು ತಾತ್ಕಾಲಿಕ ಕುಟುಂಬ ಕಲ್ಯಾಣ ವಿಧಾನಗಳು ಲಭ್ಯವಿದ್ದು, ಇವುಗಳಲ್ಲಿ ಮಹಿಳೆಯರು ಬಳಸಬಹುದಾದ “ಅಂತರ” ಚುಚ್ಚಮದ್ದು ಅತ್ಯಂತ ಸುರಕ್ಷಿತ ಹಾಗೂ ಸರಳವಾಗಿದೆ. ಪ್ರತಿ 3 ತಿಂಗಳಿಗೊಮ್ಮೆ ಚುಚ್ಚುಮದ್ದು ತೆಗೆದುಕೊಳ್ಳುವ ಮೂಲಕ ನಿಶ್ಚಿಂತೆಯಿಂದ ಜನನ ಮಧ್ಯ ಅಂತರವಿಡಲು ಸಹಕಾರಿಯಾಗಿದೆ. ಈ ದಿಶೆಯಲ್ಲಿ ವೈದ್ಯಾಧಿಕಾರಿಗಳು ಜಿಲ್ಲೆಯಲ್ಲಿ ವ್ಯಾಪಕವಾಗಿ ಅನುಷ್ಟಾನ ಮಾಡಲು ಜಾಗೃತಿ ನೀಡುವಂತೆ ಅವರು ತಿಳಿಸಿದರು.
ದಂಪತಿಗಳು ತಮ್ಮ ಮೊದಲ ಮಗುವಿನ ನಂತರ ಎರಡನೇಯ ಮಗುವಿಗೆ 3 ವರ್ಷಗಳ ಅಂತರವಿರಿಸಲು ಈ ಚುಚ್ಚುಮದ್ದು ಅತ್ಯಂತ ಉಪಯುಕ್ತವಾಗಿದ್ದು, ಮಾಸಿಕ ಋತುಚಕ್ರದ 7ನೇ ದಿನದ ನಂತರ ಚುಚ್ಚುಮದ್ದು ತೆಗೆದುಕೊಂಡು ತದನಂತರ ಪ್ರತಿ 3 ತಿಂಗಳಿಗೊಮ್ಮೆ ಚುಚ್ಚಮದ್ದು ತೆಗೆದುಕೊಳ್ಳುವುದರಿಂದ ಜನನವನ್ನು ತಡೆಗಟ್ಟಬಹುದಾಗಿದೆ ಎಂದರು.
ಸಾಮಾನ್ಯವಾಗಿ ಅಂತರ ಚುಚ್ಚುಮದ್ದು ತೆಗೆದುಕೊಳ್ಳುವುದರಿಂದ ಎದೆಹಾಲು ಉಣಿಸುವಲ್ಲಿ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ, ಬಂಜೆತನ ಬರುವುದಿಲ್ಲ, ಋತುಸ್ರಾವದ ಸಂದರ್ಭದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಮತ್ತು ಮಗು ಬೇಕೆನಿಸಿದರೆ ಚುಚ್ಚುಮದ್ದು ನಿಲ್ಲಿಸಿದ 7 ರಿಂದ 10 ತಿಂಗಳ ನಂತರ ಮತ್ತೆ ಗರ್ಭಧರಿಸಲು ಅವಕಾಶವಿದೆ. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರಕುವ ಈ ಸೇವೆಯನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ವಿನಂತಿಸಿದರು. ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ ಅವರು ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ 2405 ಮಹಿಳೆಯರು ಅಂತರ ಚುಚ್ಚುಮದ್ದು ಬಳಸುತ್ತಿದ್ದು ಸಂತಸದ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಅಂತರ ಚುಚ್ಚುಮದ್ದು ಬಳಸುವ ದಂಪತಿಗಳು ಈ ಅವಧಿಯಲ್ಲಿ ನುಂಗುವ ಗುಳಿಗೆ, ವಂಕಿ ಅಳವಡಿಕೆ ಅಥವಾ ನಿರೋಧ್ ಬಳಸುವ ಅವಶ್ಯಕತೆ ಇರುವುದಿಲ್ಲ. ಚುಚ್ಚುಮದ್ದು ತೆಗೆದುಕೊಂಡ ದಿನದಂದು ಇಂಜೆಕ್ಷನ್ ತೆಗೆದುಕೊಂಡ ಜಾಗದಲ್ಲಿ ಉಜ್ಜುವುದನ್ನು ಅಥವಾ ಶಾಖ ನೀಡುವುದನ್ನು ಮಾಡಬಾರದು. ಆಕಸ್ಮಿಕವಾಗಿ ಚುಚ್ಚುಮದ್ದು ತೆಗೆದುಕೊಂಡ ನಂತರದ ದಿನಗಳಲ್ಲಿ ತೂಕ ಹೆಚ್ಚಾಗುವುದು, ತಲೆನೋವು ಕಂಡುಬರುವುದು ಅಥವಾ ಇನ್ನಾವುದೇ ತೊಂದರೆ ಕಂಡುಬಂದಲ್ಲಿ ಹತ್ತಿರದ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ ಸಲಹೆ ಸೂಚನೆಗಳನ್ನು ಪಡೆಯಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತರಬೇತುದಾರರಾದ ಡಾ.ಕಾವ್ಯಶ್ರೀ, ಡಾ.ದಿವ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ತಜ್ಞ ವೈದ್ಯರಾದ ಡಾ.ಚೈತ್ರ ವರ್ಣೆಕರ್, ಡಾ.ಪರಿಮಳ ದೇಸಾಯಿ, ಡಾ.ಆಶಿಯಾ ಬೇಗಮ್, ವೈದ್ಯಾಧಿಕಾರಿಗಳಾದ ಡಾ.ಹನುಮಂತಪ್ಪ, ಡಾ.ಕರುಣಾ, ಡಾ.ಶಗುಪ್ತಾ, ಡಾ.ಸುರೇಖ, ಕುಟುಂಬ ಕಲ್ಯಾಣ ವಿಭಾಗದ ಗೋಪಾಲ್.ಕೆ.ಹೆಚ್., ಮಲ್ಲಿಕಾರ್ಜುನ್ ಸೇರಿದಂತೆ ಇತರೆ ವೈದ್ಯಾಧಿಕಾರಿಗಳು ಹಾಜರಿದ್ದರು.
——–
ಸ್ಪರ್ಶ ಕುಷ್ಟರೋಗ ಜಾಗೃತಿ ಅಭಿಯಾನ; ಜ.24 ರಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ
ಕುಷ್ಟರೋಗ ನಿರ್ಮೂಲನೆಯ ಅಂಗವಾಗಿ ಜ.30 ರಿಂದ ಫೆ.13 ರವರೆಗೆ ಸ್ಪರ್ಶ ಕುಷ್ಟರೋಗ ಜಾಗೃತಿ ಅಭಿಯಾನವನ್ನು ರಾಷ್ಟ್ರಾದ್ಯಾಂತ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಸ್ಪರ್ಶ ಕುಷ್ಟರೋಗ ಜಾಗೃತಿ ಅಭಿಯಾನವನ್ನು ಯಶಸ್ವಿಗೊಳಿಸಲು ಪೂರ್ವ ಭಾವಿಯಾಗಿ ಜಿಲ್ಲಾಧಿಕಾರಿ ಅವರು ಮತ್ತು ಅಪರ ಜಿಲ್ಲಾಧಿಕಾರಿಯವರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ಜ.24 ರಂದು ಬೆಳಿಗ್ಗೆ 11.30 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ತಿಳಿಸಿದ್ದಾರೆ