
ಗ್ರಾಮೀಣ ಭಾಗದ ಕೂಲಿಕಾರರಿಗೆ ನರೇಗಾ ಯೋಜನೆ ಆರ್ಥಿಕ ಸದೃಢತೆಗೆ ದಾರಿ: ತಾ.ಪಂ. ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,2- ಮಹಾತ್ಮಾ ಗಾಂಧಿ ನರೇಗಾ ಯೋಜನೆಯಿಂದ ಗ್ರಾಮೀಣ ಭಾಗದ ಕೂಲಿಕಾರರಿಗೆ ಕೂಲಿ ಕೆಲಸದಲ್ಲಿ ದೊರೆಯುವ ಕೂಲಿ ಹಣವು ಆರ್ಥಿಕ ಸದೃಢತೆಗೆ ದಾರಿಯಾಗಿದೆ ಎಂದು ಕೊಪ್ಪಳ ತಾಲೂಕ ಪಂಚಾಯತಿಯ ನರೇಗಾ ಸಹಾಯಕ ನಿರ್ದೇಶಕರಾದ ಯಂಕಪ್ಪ ಹೇಳಿದರು.
ಕೊಪ್ಪಳ ತಾಲೂಕಿನ ಅಗಳಕೇರಾ ಗ್ರಾಮ ಪಂಚಾಯತಿಯಿಂದ ಕೆರಳ್ಳಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನರೇಗಾ ಕೂಲಿಕಾರರ ಸಮ್ಮುಖದಲ್ಲಿ ಜರುಗಿದ ನರೇಗಾ ದಿವಸ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೇವಲ ಸಾಮುದಾಯಿಕ ಕಾಮಗಾರಿ ಮಾತ್ರವಲ್ಲದೇ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿರುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ 100 ದಿನಗಳ ಅಕುಶಲ ಕೆಲಸವನ್ನು ನೀಡಲಾಗುತ್ತದೆ.
ಗ್ರಾಮೀಣ ಭಾಗದ ಕುಟುಂಬಗಳು ಕೆಲಸ ಅರಸಿ ಬೇರೆ ಕಡೆ ಗುಳೆ ಹೋಗದಂತೆ ತಡೆದು, ಸ್ಥಳೀಯವಾಗಿ ವೈಯಕ್ತಿಕ ಹಾಗೂ ಸಾಮುದಾಯಿಕ ಕಾಮಗಾರಿಗಳಲ್ಲಿ ಕೂಲಿ ಕೆಲಸ ನೀಡುವ ಉದ್ದೇಶ ನೆರವೇರುತ್ತಿರುವುದು ಖುಷಿಯ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಯೋಜನೆಯ ಮೂಲ ಉದ್ದೇಶ ಈಡೇರುತ್ತಿರುವುದು ಕೂಲಿಕಾರರಲ್ಲಿ ಸಂತಸ ಮೂಡಿಸಿದೆ. ನರೇಗಾ ಯೋಜನೆ ಜಾರಿಯಾಗಿ ಇಂದಿಗೆ (ಫೆಬ್ರವರಿ 02ಕ್ಕೆ) 18 ವರ್ಷಗಳು ಗತಿಸಿದ್ದು, ಯೋಜನೆಯಿಂದ ಬಡಕುಟುಂಬಗಳು ಸಾಕಷ್ಟು ಪ್ರಯೋಜನ ಪಡೆದಿವೆ. ಇದರಿಂದ ಗ್ರಾಮೀಣ ಭಾಗದಲ್ಲಿ ಬಡತನ ನಿವಾರಣೆಯತ್ತ ಹೆಜ್ಜೆ ಇಟ್ಟಿದೆ.
ನರೇಗಾ ಯೋಜನೆ ಕೇವಲ ಕೂಲಿ ಕೆಲಸ ಮಾತ್ರ ನೀಡದೇ ಕೂಲಿಕಾರರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದೆ. ಗ್ರಾಮ ಆರೋಗ್ಯದಡಿ ಎಲ್ಲಾ ಕೂಲಿಕಾರರಿಗೆ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಕೈಗೊಂಡು ಬಿಪಿ, ಶುಗರ್, ಅನೀಮಿಯಾ, ಕ್ಷಯ ತಪಾಸಣೆಗೆ ಒಳಪಡಿಸಿ ಕೂಲಿಕಾರರ ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿರುವುದರಿಂದ ಕೂಲಿಕಾರರು ಕೆಲಸದ ನಂತರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಗ್ರಾಮ ಆರೋಗ್ಯ ಜಿಲ್ಲಾ ಸಂಯೋಜಕ ಸಿದ್ದಲಿಂಗಯ್ಯ ಮಾತನಾಡಿ, ಆರೋಗ್ಯವನ್ನು ನಾವು ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ. ಇದರ ಬಗ್ಗೆ ಕಾಳಜಿ ವಹಿಸದೇ ಇದ್ದಲ್ಲಿ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಚಿತ. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಕಾಳಜಿ ವಹಿಸಿದಲ್ಲಿ ಸದಾಕಾಲ ಆರೋಗ್ಯಯುತವಾದ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕೇಕ್ ಕತ್ತರಿಸಿ ಸಂಭ್ರಮಿಸಿದ ಕೂಲಿಕಾರರು: ನರೇಗಾ ದಿವಸ್ ಅಂಗವಾಗಿ ಆಚರಣೆಯ ಸಂಭ್ರಮಕ್ಕಾಗಿ ನರೇಗಾ ದಿವಸ್ ಆಚರಣೆ ಎಂಬ ಶೀರ್ಷಿಕೆ ಒಳಗೊಂಡ ಕೇಕ್ ಅನ್ನು ಕೂಲಿಕಾರರು ಮತ್ತು ಕಾಯಕ ಬಂಧುಗಳು ಕತ್ತರಿಸುವ ಮೂಲಕ ಸಂಭ್ರಮಿಸಿದರು. ನರೇಗಾ ದಿವಸ ಕೂಲಿಕಾರರ ದಿನವೆಂದು ಖುಷಿಪಟ್ಟರು.
ಕೂಲಿಕಾರರಿಗೆ ಆರೋಗ್ಯ ತಪಾಸಣೆ: ನರೇಗಾ ದಿವಸ ಕಾರ್ಯಕ್ರಮದಲ್ಲಿ ಅಗಳಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಮೃತ ಆರೋಗ್ಯ ಅಭಿಯಾನ ಸಹಯೋಗದಲ್ಲಿ ಕೂಲಿಕಾರರಿಗೆ ಬಿಪಿ, ಶುಗರ್ ಪರೀಕ್ಷಿಸಲಾಯಿತು. ಸಣ್ಣ ಪುಟ್ಟ ಕಾಯಿಲೆಗಳಾದ ಜ್ವರ, ನೆಗಡಿ, ಕೆಮ್ಮು ಇತ್ಯಾದಿಗಳಿಗೆ ಮಾತ್ರೆಗಳನ್ನು ವಿತರಿಸಲಾಯಿತು.
ಕಾಯಕ ಬಂಧುಗಳಿಗೆ ಕುಡಿಯುವ ನೀರಿನ ಕ್ಯಾನ್ ವಿತರಣೆ: ನರೇಗಾ ಕಾಮಗಾರಿ ಸ್ಥಳದಲ್ಲಿ ಕುಡಿಯುವ ನೀರು ಒದಗಿಸಲು ಕಾಯಕ ಬಂಧುಗಳ ಗುಂಪಿಗೆ ಒಂದರAತೆ ಕುಡಿಯುವ ನೀರಿನ ಕ್ಯಾನ್ಗಳನ್ನು ಗ್ರಾಮ ಪಂಚಾಯತಿಯಿAದ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ 100 ದಿನಗಳ ಕೂಲಿ ಕೆಲಸ ನಿರ್ವಹಿಸಿದ ಕುಟುಂಬದ ಮುಖ್ಯಸ್ಥರಾದ ಬಸವರಾಜ ಭಜಂತ್ರಿ ಇವರಿಗೆ ಸನ್ಮಾನಿಸುವುದರ ಮೂಲಕ ಪ್ರಶಸ್ತಿಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸಸಿಗಳ ನೆಡುವಿಕೆ: ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸಹಾಯಕ ನಿರ್ದೇಶಕರು, ಕಾಯಕ ಬಂಧುಗಳು, ಕೂಲಿಕಾರರು ಕೆರೆಯ ದಡದಲ್ಲಿ ಅರಣ್ಯ ಇಲಾಖೆಯ ಸಸಿಗಳಾದ ತೇಗ, ನೇರಳೆ ಸಸಿಗಳನ್ನು ನೆಟ್ಟರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಯಂಕಮ್ಮ ಕನಕರಾಜ ಬುಳ್ಳಾಪುರ, ಉಪಾಧ್ಯಕ್ಷರಾದ ಪ್ರಭಾವತಿ ಜಂಬಣ್ಣ ಹೂಗಾರ, ಗ್ರಾಮ ಪಂಚಾಯತಿ ಸದಸ್ಯರಾದ ಬಸವರಾಜ ವಡ್ಡರ, ಪ್ರಕಾಶ ಕುಂಬಾರ, ಪಂಚಾಯತ ಅಭಿವೃದ್ಧಿ ಅಧಿಕಾರಿ ಅನಿತಾ ಕಿಲ್ಲೇದ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಅಕ್ಷಯ ಕುಮಾರ್, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ಎಂಐಎಸ್ ಸಂಯೋಜಕ ಶರಣಬಸವ ಪಾಟೀಲ್, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಯಮನೂರಪ್ಪ, ತಾಂತ್ರಿಕ ಸಹಾಯಕ ಶರಣಯ್ಯ, ತಾಲೂಕ ಕೆಎಚ್ಪಿಟಿ ಸಂಯೋಜಕಿ ಮರಿಯಮ್ಮ, ಬೇರ್ ಫೂಟ್ ಟೆಕ್ನಿಷಿಯನ್ ಮೈಲಾರಿ, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಸುಮನ್, ಸಿದ್ದಪ್ಪ, ಕಾಯಕ ಬಂಧುಗಳು ಹಾಗು 210 ಕೂಲಿಕಾರರು ಹಾಜರಿದ್ದರು.