
ಆರೋಗ್ಯವಂತ ಮನುಷ್ಯನೇ ಅದೃಷ್ಟವಂತ : ಡಾ ಕವಿತಾ ಎಚ್
ಕರುನಾಡ ಬೆಳಗು ಸುದ್ದಿ
ಆರೋಗ್ಯವೇ ಭಾಗ್ಯ, ನಾಡ ನುಡಿಯಂತೆ ಆರೋಗ್ಯವಂತ ಮನುಷ್ಯ ತುಂಬಾ ಅದೃಷ್ಟವಂತ, ಆರೋಗ್ಯವಂತ ಮನುಷ್ಯನಷ್ಟು ಸಿರಿವಂತರು ಜಗದಲ್ಲಿ ಯಾರೂ ಇಲ್ಲ. ಸರಿ, ಹಾಗಿದ್ದರೆ ಆರೋಗ್ಯ ಎಲ್ಲಿ ಸಿಗುತ್ತದೆ? ಎಂದು ಪ್ರಶ್ನೆ ಹುಟ್ಟಬಹುದು.
ಅಂಗೈಯಲ್ಲಿ ಆರೋಗ್ಯ ಎಂಬಂತೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ. ಅದು ಹೇಗೆಂದರೆ ಆಯುರ್ವೇದದಲ್ಲಿ ಆಹಾರ, ನಿದ್ರೆ ಹಾಗು ಬ್ರಹ್ಮಚರ್ಯ ಆರೋಗ್ಯವಂತ ಜೀವನದ ಆಧಾರ ಸ್ತಂಭಗಳೆಂದು ಹೇಳುತ್ತಾರೆ.ಅದರಲ್ಲಿ ಮೊದಲನೆಯದಾಗಿ ಆಹಾರ, ಎಷ್ಟು ಮತ್ತು ಹೇಗೆ ಮುಖ್ಯವಾಗುವುದು ಎಂಬುದನ್ನು ತಿಳಿಯೋಣವಲ್ಲವೇ..??
ಹುಟ್ಟಿದ ತಕ್ಷಣ ತಾಯಿಯ ಎದೆ ಹಾಲು ಆಹಾರವಾಗುತ್ತದೆ. ಎದೆ ಹಾಲಿನ ಕುರಿತು ತಿಳಿಯುವುದು ತುಂಬಾ ಇದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಆ ಹಾಲಿನಲ್ಲಿ ಸಿಗುವಂಥ ಪೌಷ್ಟಿಕಾಂಶ, ರೋಗ ನಿರೋಧಕ ಶಕ್ತಿಯು ಬೇರೆ ಯಾವುದೇ ಆಹಾರದಲ್ಲಿ ಸಿಗುವುದಿಲ್ಲ. ಅದು ಭೂಮಿಯ ಮೇಲೆ ಸಿಗುವ ಶ್ರೇಷ್ಠ ಆಹಾರ, ಆರು ತಿಂಗಳ ನಂತರ ಮಗುವಿಗೆ ಎದೆ ಹಾಲಿನ ಜೊತೆ ಮೇಲಿನ ಆಹಾರ ಅಂದರೆ ಸಾಮಾನ್ಯವಾಗಿ ಎಲ್ಲರೂ ಕಾಳು, ಬೆಳೆ, ತರಕಾರಿಗಳಿಂದ ದ್ರವ ರೂಪದಲ್ಲಿ (ನೀರ ಗಂಜಿ) ತಯಾರಿಸಿದ್ದನ್ನು, ಮಾಂಸ ರಸ ಹೀಗೆ ಎಂಟರಿಂದ ಹತ್ತು ತಿಂಗಳವರೆಗೆ ಸೇವಿಸುವಂಥದ್ದು. ತದನಂತರ ದ್ರವದಿಂದ ಅದೆ ಆಹಾರವನ್ನು ಘನವಾಗಿಸಿಬೇಕು (ಸ್ವಲ್ಪ ಗಟ್ಟಿಯಾಗಿಸಬೇಕು). ಮಗುವಿಗೆ ಒಂದು ವರ್ಷವಾದಾಗ ದೊಡ್ಡವರು ಸೇವಿಸುವ ತರಹ ಎಲ್ಲಾ ಆಹಾರವನ್ನು ಉಣಿಸಬೇಕು.
ಮನೆಯ ಎಲ್ಲಾ ಸದಸ್ಯರೊಂದಿಗೆ ಆಹಾರ ಸೇವಿಸಿದರೆ ಒಳ್ಳೆಯದು. ನಾನು ನೋಡಿದಂತೆ ಇತ್ತೀಚೆಗೆ ಮಕ್ಕಳಿಗೆ ಮನೆಯಲ್ಲಿ ತಯಾರಿಸಿದ ಆಹಾರಕ್ಕಿಂತ ಬೆಳಿಗ್ಗೆ ಎದ್ದ ತಕ್ಷಣ ಬ್ರೆಡ್, ಬಿಸ್ಕತ್ತು ಅದರ ಜೊತೆ ಚಹಾ ನೀಡುವುದನ್ನು ತುಂಬಾ ಮನೆಗಳಲ್ಲಿ ರೂಢಿಸಿಕೊಂಡಿದ್ದಾರೆ. ಅವರಿಗೆ ಅವುಗಳ ದುಷ್ಪರಿಣಾಮಗಳು ತಿಳಿದಿವೆಯೋ ಇಲ್ಲವೋ ಗೊತ್ತಿಲ್ಲ.
ಅಂತಹ ಆಹಾರ ಮಕ್ಕಳಲ್ಲಿ ಮಲಬದ್ಧತೆಯನ್ನು ಉಂಟು ಮಾಡುತ್ತದೆ. ಹಸಿವನ್ನು ಕ್ಷಿಣಿಸುತ್ತದಲ್ಲದೇ ಬೆಳವಣಿಗೆಯನ್ನೂ ಕುಂಠಿತಗೊಳ್ಳಿಸುತ್ತದೆ. ರೋಗ ನಿರೋಧಕ ಶಕ್ತಿ ಕುಂದುತ್ತದೆ. ಹೀಗೆ ಹಲವಾರು ದುಷ್ಪರಿಣಾಮಗಳು ಮಕ್ಕಳಲ್ಲಿ ಉಂಟಾಗುತ್ತವೆ.ಮನೆಯ ಅಡಿಪಾಯ ಸರಿಯಾಗಿ ಹಾಕದಿದ್ದಲ್ಲಿ ಮನೆ ತುಂಬಾ ವರ್ಷಗಳವರೆಗೆ ಗಟ್ಟಯಾಗಿ ನಿಲ್ಲುವುದೆ?…ಮಕ್ಕಳಿಗೆ ಎರಡು ವರ್ಷಗಳ ಒಳಗೆ ನೀಡುವ ಆಹಾರ ಅವರ ಆರೋಗ್ಯವಂತ ಬದುಕಿನ, ಧೀರ್ಘ ಆಯುಷ್ಯದ ಅಡಿಪಾಯವಿದ್ದಂತೆ.
ಜೀವನ ಪುರ್ತಿ ನಾವು ತೆಗೆದುಕೊಳ್ಳುವಂತಹ ಆಹಾರದ ಮೇಲೆ ನಮ್ಮ ಆರೋಗ್ಯ ೯೦% ಅವಲಂಭಿಸಿದೆ. ಹಾಗಾದರೆ, ನಿತ್ಯ ಸೇವಿಸುವ ಆಹಾರ ಹೇಗಿರಬೇಕು ಮತ್ತು ಯಾವಾಗ ತೆಗೆದುಕೊಳ್ಳಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಸಾಮಾನ್ಯವಾಗಿ ನಮ್ಮ ಪ್ರತಿ ಊಟ ಸಮತೋಲನವಾಗಿ (balanced diet) ಇರಬೇಕು. ಸಮತೋಲನ ಆಹಾರ ಅಂದರೆ ಅದರಲ್ಲಿ ಪೌಷ್ಟಿಕಾಂಶ, ನಾರಿನಾಂಶ ಹೊಂದಿರಬೇಕು. ಅಂತಹ ಆಹಾರವೆಂದರೆ; ಏಕದಳ ಧಾನ್ಯ- ಜೋಳ, ಅಕ್ಕಿ, ಗೋಧಿ, ರಾಗಿ ಮುಂತಾದವು. ದ್ವಿದಳ ಧಾನ್ಯ- ತೊಗರಿ, ಹೆಸರು, ಅಲಸಂದಿ, ಮಡಿಕೆ ಮುಂತಾದ ಕಾಳುಗಳು. ಏಕದಳ ಮತ್ತು ದ್ವಿದಳ ಧಾನ್ಯಗಳ ಸೇರಿಸಿ ಸೇವಿಸಿದಾಗ ಪ್ರೊಟೀನ್ ಅಂಶ ಸಿಗುತ್ತದೆ.
ಈ ಪ್ರೊಟೀನ್ ಅಂಶ ಮಾಂಸಾಹಾರಕ್ಕೆ ಸಮ. ಮಾಂಸಾಹಾರ ಸೇವಿಸುವವರಲ್ಲಿ ಪ್ರೋಟೀನ್ ಕೊರತೆ ಕಂಡು ಬರುವುದು ಕಡಿಮೆ. ಹಸಿರು ತರಕಾರಿ, ಸೊಪ್ಪುಗಳನ್ನು ಸೇವಿಸುವುದರಿಂದ ನಾರಿನಾಂಶ ಹಾಗು ಕಬ್ಬಿಣಾಂಶ ಸಿಗುತ್ತದೆ. ತಕ್ಕ ಮಟ್ಟಿಗೆ ಕೊಬ್ಬಿನಾಂಶವೂ ದೇಹಕ್ಕೆ ಬೇಕಾಗುತ್ತದೆ. ಅದು ಹಾಲು, ಮೊಸರು, ತುಪ್ಪದಲ್ಲಿ ಸಿಗುತ್ತದೆ. ಇಷ್ಟನ್ನು ಕನಿಷ್ಟವೆಂದರೆ ಒಂದು ಬಾರಿಯಾದರೂ ಸೇವಿಸಬೇಕು. ಗರಿಷ್ಟವೆಂದರೆ ಎರಡು ಬಾರಿ ಸೇವಿಸಬೇಕು.
ಇಲ್ಲಿಯವರೆಗೆ ಯಾವ ಯಾವ ಆಹಾರ ಸೇವಿಸಬೇಕು ಎಂಬುದನ್ನು ತಿಳೆದೆವು. ಇನ್ನು ಯಾವಾಗ ಮತ್ತ ಹೇಗೆ ಸೇವಿಸಬೇಕೆಂಬುದನ್ನು ನೋಡೋಣ. ಇಲ್ಲಿ ಸರ್ವಜ್ಞನವರ ವಚನ ನೆನಪಾಗುತ್ತದೆ.
ಹಸಿಯದೆ ಉಣಬೇಡ/ ಹಸಿದು ಮತ್ತಿರಬೇಡ/ ಬಿಸಿಬೇಡ ತಂಗಳುಣಬೇಡ ವೈದ್ಯನಾ/ ಬೆಸೆಸಲೇ ಬೇಡೆಂದ//ಸರ್ವಜ್ಞ//
ಅವರು ಹೇಳಿದ್ದು ಅರ್ಥ ಪೂರ್ಣವಾಗಿದೆ. ಇದನ್ನೇ ವೈಜ್ಞಾನಿಕವಾಗಿ ಹೇಳಬೇಕೆಂದರೆ ಅಜೀರ್ಣವನ್ನುಂಟು ಮಾಡುತ್ತದೆ. ಊಟವಾದ ಬಳಿಕ ೩ ತಾಸಿನೊಳಗೆ ಮತ್ತೇನೂ ತಿನ್ನಬಾರದು. ಆದರೆ ೩ ರಿಂದ ೬ ತಾಸಿನೊಳಗೆ ಆಹಾರವನ್ನು ಸೇವಿಸಿಬೇಕು. ಮೇಲಿಂದ ಮೇಲೆ ಆಹಾರ ಸೇವಿಸಿದರೆ ಅದು ಅಜೀರ್ಣವನ್ನುಂಟು ಮಾಡುತ್ತದೆ.ಹಸಿವನ್ನು ಮಿಕ್ಕಿ ಉಂಡರೆ ಆಮ್ಲಪಿತ್ತವನ್ನುಂಟು(acidity) ಮಾಡುತ್ತದೆ. ಹಣ್ಣುಗಳು ಆಹಾರದ ಒಂದು ಭಾಗವಾಗಿದ್ದರಿಂದ ಅದನ್ನು ಯಾವಾಗ ಸೇವಿಸಬೇಕೆಂಬುದನ್ನು ತಿಳಿಯೋಣ.
ನಾಣ್ಣುಡಿಯಲ್ಲಿ ಹೇಳಿರುವಂತೆ ಹಸ್ತ ಹಣ್ಣ ತಿನಬೇಕು, ಉಂಡು ಕಬ್ಬು ತಿನಬೇಕು. ಯಾಕೆ ಹೇಳಿದ್ದಾರೆಂದರೆ, ಹಸಿವಾದಾಗ ಹಣ್ಣು ತಿಂದರೆ ಅದು ನಮ್ಮ ಅನ್ನನಾಳವನ್ನು ಸ್ವಚ್ಛಗೊಳಿಸಿ ಅ್ಯಂಟಿ ಆಕ್ಸಿಡೆಂಟ್ ನೀಡುತ್ತದೆ. ಇದರಿಂದ ತಿಂದ ಆಹಾರ ಜೀರ್ಣಿಸಲು ಸಹಕರಿಸುತ್ತದೆ. ಉಂಡ ಮೇಲೆ ಕಬ್ಬು ತಿಂದರೆ ನಮ್ಮ ಲಾಲಾರಸ ಹೊಟ್ಟೆ ಸೇರಿ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ರಾತ್ರಿಯ ಆಹಾರವನ್ನು ಆದಷ್ಟೂ ಬೇಗ ಸೇವಿಸಬೇಕು. ಮಲಗುವ ಎರಡು ಗಂಟೆಗಳ ಮೊದಲು ಅಥವಾ ೮-೯ ಗಂಟೆಯೊಳಗೆ ಸೇವಿಸಬೇಕು.ಸೇವಿಸಿದ ನಂತರ ಏನು ಮತ್ತು ಹೇಗೆ ಇರಬೇಕೆಂದು ಸರ್ವಜ್ಞನು ತುಂಬಾ ಚೆನ್ನಾಗಿ ಹೇಳಿದ್ದಾರೆ.
ಉಂಡುಕೆಂಡವ ಕಾಸಿ/ ಉಂಡು ನೂರಡಿ ನಡೆದು/
ಉಂಡು ಎಡಮಗ್ಗುಲಲ್ಲಿ ಮಲಗಿದೊಡೆ ವೈದ್ಯನಾ ಬಂಡಾಟವೆ ಇಲ್ಲ//ಸರ್ವಜ್ಞ//
ಇದು ನಿಜ ಕೂಡ. ಯಾವ ಆಹಾರ, ಯಾವಾಗ ತೆಗೆದುಕೊಳ್ಳಬೇಕೆಂದು ತಿಳಿದರೆ ಸಾಲದು. ಎಷ್ಟು ಪ್ರಮಾಣ ತೆಗೆದುಕೊಳ್ಳಬೇಕೆಂದು ತಿಳಿಯುವುದೂ ಅವಶ್ಯಕ. ವೈಜ್ಞಾನಿಕವಾಗಿ ಹೇಳುವುದಾದರೆ ಹೊಟ್ಟೆಯ ಅರ್ಧ ಭಾಗ ಆಹಾರ, ಕಾಲು ಭಾಗ ನೀರು ಇನ್ನು ಕಾಲು ಭಾಗ ಖಾಲಿ ಇರಬೇಕು.ಅತಿಯಾಗಿ ಅಥವಾ ಅತಿ ಅಲ್ಪ ಆಹಾರ ಸೇವನೆ ಆರೋಗ್ಯಕರವಾದುದಲ್ಲ. ಇಲ್ಲಿ ಅಕ್ಕಮಹದೇವಿಯವರ ವಚನ ನೆನಪಾಗುತ್ತದೆ.
ಆಹಾರವ ಕಿರಿದು ಮಾಡಿರಯ್ಯ/ ಆಹಾರವ ಕಿರಿದು ಮಾಡಿರಯ್ಯ/ ಆಹಾರದಿಂದ ವ್ಯಾದಿ ಹಬ್ಬಿ, ಬಲಿಯುವದಯ್ಯ/ಆಹಾರದಿಂ ನಿದ್ರೆ, ತಾಮಸ, ಮೈಮರೆವು/ ತಾಮಸದಿಂ ಅಜ್ಞಾನ ಹೆಚ್ಚಿ ಕಾಯವಿಕಾರ/ ಮನೋವಿಕಾರ, ಭಾವವಿಕಾರ, ಇಂದ್ರಿಯ ವಿಕಾರ/ ವಾಯುವಿಕಾರ, ಇಂಥ ಪಂಚ ವಿಕಾರಗಳನ್ನುಂಟು ಮಾಡಿ/ ಸೃಷ್ಟಿಗೆ ತಂದುದಾದ ಕಾರಣ ಕಾಯದ ಅತಿ ಪೋಷಣೆ ಮೃತ್ಯುವಾದುದು/ ಜಪ, ತಪ, ಧ್ಯಾನ, ಧಾರಣ,ಪೂಜೆಗೆ ಸೂಕ್ಷ್ಮದಿಂದ ತನು ಮಾತ್ರವಿದ್ದರೆ ಸಾಲದೇ? ತನುವ ಪೋಷಿಸುವ ಆಸೆ ಅತೀತ್ವಕ್ಕೆ ವಿಘ್ನವೆಂದುದು ತನು ಪೋಷಣೆಯಿಂದ/ತಾಮಸ ಹೆಚ್ಚಿ ಅಜ್ಞಾನದಿಂದ ವಿರಕ್ತಿ ಹಾನಿ ಅರಿವು ನಷ್ಟ, ಪರವು ದೂರ, ನೀರಕೆ/ ನಿಲವಿಲ್ಲದ ಕಾರಣ ಚೆನ್ನಮಲ್ಲಿಕಾರ್ಜುನನ/ ಒಲಿಸಬಂದ ಕಾಯವ ಕೆಡಿಸದೆ ಉಳಿಸಿಕೊಳಿರಯ್ಯ ….
ನಮ್ಮ ಆಹಾರವನ್ನು ಅಂದರೆ ಊಟವನ್ನು ಕಿರಿದು ಮಾಡಬೇಕು. ಅತಿ ಆಹಾರ ಸೇವಿಸುವುದರಿಂದ ನಿದ್ರೆ ಹೆಚ್ಚಾಗುವದು. ಅದರೊಡನೆ ತಾಮಸ ಪ್ರವೃತ್ತಿ ಹೆಚ್ಚಾಗುವುದು (ಆಲಸ್ಯತನ). ಮೈ ಅರಿವು ತಪ್ಪುವುದು. ತಾಮಸವು ಹೆಚ್ಚಿದಂತೆ ಜ್ಞಾನ ಕುಂದುತ್ತದೆ. ಅಜ್ಞಾನ ಬಲಿಯುತ್ತದೆ. ಆಗ ದೇಹದಲ್ಲಿ ಹಲವಾರು ಕಾಯಿಲೆಗಳು ತಲೆ ಎತ್ತುವುವು. ದೇಹದ ಬೊಜ್ಜು ಹೆಚ್ಚಾದಂತೆ ಸಂಧಿವಾತ ಕಾಣುವುದು. ರಕ್ತದ ಒತ್ತಡ ಹೆಚ್ಚುವುದು, ಹೃದಯ ತನ್ನ ಕಾರ್ಯದಲ್ಲಿ ಸೋಲತೊಡಗುವುದು. ಹೀಗೆ ಹಲವಾರು ಕಾಯಿಲೆಗಳು ತಲೆ ಎತ್ತುತ್ತವೆ…
ಆಹಾರವೇ ಆರೋಗ್ಯದ ಬುನಾದಿಯಾಗಿರುವುದರಿಂದ ಇಂದು ಜಾಗತೀಕರಣದ ಭರಾಟೆಯಲ್ಲಿ ಮನುಷ್ಯ ತನ್ನ ಪ್ರಾಕೃತಿಕ ಆಹಾರ ಪದ್ಧತಿಯಿಂದ ದೂರ ಸರಿದು ಪಾಶ್ಚಿಮಾತ್ಯ ಆಹಾರ ಸಂಸ್ಕೃತಿಯ ಕಡೆ ವಾಲುತ್ತಿದ್ದಾನೆ. ಹಾಗಾಗಿ ಇಂದು ಮನುಷ್ಯನ ಬದುಕು ತುಂಬಾ ಅಸ್ವಸ್ಥಕರವಾಗಿದೆ ಮತ್ತು ಆಯುಷ್ಯವೂ ಕಡಿಮೆಯಾಗುತ್ತಿದೆ.ಹಾಗಾಗಿ ಮತ್ತೆ ನಾವು ನಮ್ಮ ಮೂಲ ಆಹಾರ ಸಂಸ್ಕೃತಿಯ ಕಡೆ ಬರಬೇಕಾದ ಅನಿವಾರ್ಯದ ಕಾಲಘಟ್ಟದಲ್ಲಿ ನಾವಿದ್ದೇವೆ.
ಡಾ. ಕವಿತಾ ಎಚ್. ಎಫ್
ವೈದ್ಯರು
ಸರಕಾರಿ ಆಯುರ್ವೇದ ಚಿಕಿತ್ಸಾಲಯ
ಕಾಮನೂರ
ತಾ/ಜಿ: ಕೊಪ್ಪಳ