
ಐಎಂಎ ರಾಜ್ಯಮಟ್ಟದ ಪ್ರಶಸ್ತಿಗೆ
ಪತ್ರಕರ್ತ ಕೆ.ಎಂ.ಮಂಜುನಾಥ್ ಆಯ್ಕೆ
ಬಳ್ಳಾರಿ, 26 – ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ ನೀಡುವ ರಾಜ್ಯಮಟ್ಟದ ಪತ್ರಿಕೋದ್ಯಮ ಸೇವಾ ಪ್ರಶಸ್ತಿಗೆ ಕನ್ನಡಪ್ರಭ ದಿನ ಪತ್ರಿಕೆಯ ಬಳ್ಳಾರಿ ಜಿಲ್ಲಾ ಪ್ರಧಾನ ವರದಿಗಾರ ಕೆ.ಎಂ.ಮಂಜುನಾಥ್ ಅವರು ಆಯ್ಕೆಯಾಗಿದ್ದಾರೆ.
ಬೀದರ್ ನಲ್ಲಿ ಅಕ್ಟೋಬರ್ 28 ರಂದು ನಡೆಯುವ 89 ನೇ ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಕರ್ನಾಟಕ ರಾಜ್ಯ ವಾರ್ಷಿಕ ವೈದ್ಯಕೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ.ಶಿವಕುಮಾರ್ ಬಿ. ಲಕೋಳ ತಿಳಿಸಿದ್ದಾರೆ.
ಹಿರಿಯ ಪತ್ರಕರ್ತ ಕೆ.ಎಂ.ಮಂಜುನಾಥ್ ಅವರು ಕಳೆದ ಹದಿನೇಳು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದ ಸೇವೆಯಲ್ಲಿದ್ದು, ವಿಜಯಕರ್ನಾಟಕ, ವಿಜಯವಾಣಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದು ಕಳೆದ ಏಳು ವರ್ಷಗಳಿಂದ ಕನ್ನಡಪ್ರಭ ಜಿಲ್ಲಾ ಪ್ರಧಾನ ವರದಿಗಾರರಾಗಿ ಸೇವೆಸಲ್ಲಿಸುತ್ತಿದ್ದಾರೆ.
ಶೋಷಿತ ಸಮುದಾಯಗಳು ಎದುರಿಸುವ ಅನೇಕ ಸಮಸ್ಯೆಗಳ ಕುರಿತು ತಮ್ಮ ವಸ್ತುನಿಷ್ಠ ವರದಿಗಳ ಮೂಲಕ
ಬೆಳಕು ಚೆಲ್ಲಿದ್ದಾರೆ. ಅಭಿವೃದ್ಧಿ ಪತ್ರಿಕೋದ್ಯಮದ ಬಗ್ಗೆ ಹೆಚ್ಚು ಆಸ್ಥೆವಹಿಸಿ ಕಳೆದ ಒಂದುವರೆ ದಶಕಕ್ಕೂ ಹೆಚ್ಚು ಕಾಲ ಪತ್ರಿಕೋದ್ಯಮ ಸೇವೆಯಲ್ಲಿ ನಿರತರಾಗಿರುವ ಮಂಜುನಾಥ್ ಅವರ ಸೇವೆಯನ್ನು ಪರಿಗಣಿಸಿ ರಾಜ್ಯಮಟ್ಟದ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ ತಿಳಿಸಿದೆ.