
ಐದು ವರ್ಷ ಕಾಂಗ್ರೆಸ್ ಸರಕಾರ ಸುಭದ್ರ
ಸಿಎಂ ಸಿದ್ದರಾಮಯ್ಯ ಹೇಳಿಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ: ರಾಜ್ಯದಲ್ಲಿ 5 ವರ್ಷ ಕಾಂಗ್ರೆಸ ಸರಕಾರ ಇರಲಿದೆ. ಮುಂದೆ ಚುನಾವಣೆ ನಡೆದು ನಮ್ಮ ಸರಕಾರವೇ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಬಸಾಪೂರ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
2.5 ವರ್ಷದ ಬಳಿಕ ಸಿಎಂ ಬದಲಾಗುತ್ತಾರಲ್ಲ ಎಂಬ ವಿಚಾರಕ್ಕೆ ಪೂರ್ಣವಾಗಿ ಪ್ರತಿಕ್ರಿಯಿಸದ ಸಿಎಂ, ನಮ್ಮದೇ ಸರಕಾರ ಐದು ವರ್ಷ ಇರಲಿದೆ.
ಏಕೆಂದರೆ ಹಿಂದಿನ ಬಿಜೆಪಿ ಸರಕಾರ ರಾಜ್ಯವನ್ನು ದಿವಾಳ ಎಬ್ಬಿಸಿತ್ತು. ಇದರ ನಡುವೆಯೇ ಅಧಿಕಾರಕ್ಕೆ ಬಂದ ತಕ್ಷಣ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ನಮ್ಮ ಯಾವ ಶಾಸಕರು ಅಸಮಾಧಾನಗೊಂಡಿಲ್ಲ ಎಂದು ವಿಷಯಾಂತರ ಮಾಡಿದರು.
ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರಕಾರ ಮಲತಾಯಿ ಧೋರಣೆ ತೋರಿಸುತ್ತಿದೆ.
ಸಚಿವ ಸಂಪುಟದ ನಾಲ್ವರು ಸಚಿವರು ದೆಹಲಿಗೆ ಹೋದರೂ, ಪ್ರಧಾನಿ ಮತ್ತು ಸಂಬಂಧಿಸಿದ ಸಚಿವರು ಭೇಟಿಗೆ ಸಮಯ ನೀಡುತ್ತಿಲ್ಲ.
ಬರ ತಾಂಡವಾಡುತ್ತಿರುವಾಗ ಜನರಿಗೆ ಅನುಕೂಲ ಕಲ್ಪಿಸುವ ವಿಚಾರದಲ್ಲಿ ಕೇಂದ್ರ ಸರಕಾರ ರಾಜಕೀಯ ಮಾಡುತ್ತಿದೆ. ತಾವು ತಮ್ಮ ಪಾಲಿನ ಅನುದಾನ ನೀಡುತ್ತಿಲ್ಲ.
ಇಂತಹ ಸಂದರ್ಭದಲ್ಲಿ ಬಿಜೆಪಿ ಬರ ಅಧ್ಯಯನ ಬಿಟ್ಟು, ಕೇಂದ್ರ ಸರಕಾರದಿಂದ ಬರ ಪರಿಹಾರ ಕೊಡಿಸುವ ಕೆಲಸ ಮಾಡಬೇಕು.
ರಾಜ್ಯದಲ್ಲಿ 25 ಜನ ಸಂಸದರಿದ್ದು, ಇವರೆಲ್ಲ ಏನೂ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ
ಸುರ್ಜೇವಾಲ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ರಾಜ್ಯಕ್ಕೆ ಬರುತ್ತಿರುವುದು ಅಸಮಾಧಾನ ಶಮನಕ್ಕಲ್ಲ. ಲೋಕಸಭಾ ಚುನಾವಣೆಯ ತಯಾರಿಗಾಗಿ ಬರುತ್ತಿದ್ದಾರೆ. ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.
ಬರ ತಾಂಡವಾಡುತ್ತಿರುವಾಗ ಶಾಸಕರು ವಿದೇಶ ಪ್ರವಾಸ ಮಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ,
ಸರಕಾರದ ಖರ್ಚಿನಲ್ಲಿ ಶಾಸಕರು ಪ್ರವಾಸ ಹೋಗುತ್ತಿಲ್ಲ. ಸ್ವಂತ ದುಡ್ಡಿನಿಂದ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಪ್ರವಾಸಕ್ಕೆ ಹೋಗುವುದು ಅವರ ವೈಯಕ್ತಿಕ ವಿಚಾರವಾಗಿದೆ. ಹೋದರೇ ತಪ್ಪೇನು…? ಎಂದು ಪ್ರಶ್ನಿಸಿದರು.
ಉದ್ಯೋಗ ಖಾತ್ರಿ ಯೋಜನೆಯ ಬಾಕಿ ೪೦೦ ಕೋಟಿ ರೂ. ಅನುದಾನ ಕೇಂದ್ರದಿಂದ ಬರುವುದು ಬಾಕಿ ಇದೆ. ಬರ ಪರಿಹಾರ ವಿಳಂಭವಾಗಿದೆ. ಈ ಎರಡು ಅನುದಾನವನ್ನು ಬಿಜೆಪಿ ಸಂಸದರು ಮತ್ತು ಕೇಂದ್ರ ಸಚಿವರು ಕೊಡಿಸುವ ಕೆಲಸ ಮಾಡಲಿ ಎಂದರು.
ಇಂಧನ ಇಲಾಖೆ ವ್ಯಾಪ್ತಿಯ ರೈತರ ಕೃಷಿ ಸಲಕರಣೆ ನೀಡುವ ಯೋಜನೆ ಸೆ.22 ರಿಂದ ಸ್ಥಗಿತಗೊಂಡಿದೆ ಎಂಬ ಮಾಹಿತಿ ನಿಮ್ಮಿಂದಲೇ ತಿಳಿದಿದೆ. ಈ ವಿಚಾರ ನನ್ನ ಗಮನಕ್ಕಿಲ್ಲ. ಅದನ್ನು ಪರಿಶೀಲಿಸಿ, ಯೋಜನೆ ಯಥಾಸ್ಥಿತಿ ಮುಂದುವರೆಸುತ್ತೇವೆ.
6 ತಿಂಗಳಲ್ಲಿ ಸರಕಾರ ಬೀಳುತ್ತದೆ ಎನ್ನುವ ಯತ್ನಾಳ್ ಹಗಲು ಗನಸು ಕಾಣುತ್ತಿದ್ದಾರೆ.ನಮ್ಮ ಕೆಲಸ ನಾವು ಮಾಡಿಕೊಂಡು ಹೋಗುತ್ತೇವೆ. ರೈತರ ಬಗ್ಗೆ ಕಾಳಜಿ ಇದ್ದರೆ ಬಿಜೆಪಿ ಸಂಸದರು ಅನುದಾನ ಬಿಡುಗಡೆ ಮಾಡಿಸಿಕೊಂಡು ಬರಲಿ ಎಂದರು.