
ಕಟ್ಟಡ ಕಾರ್ಮಿಕರ ಸಮಸ್ಯೆಗಳು ಹಲವು ಬೇಡಿಕೆಗಳಿಗಾಗಿ ಒತ್ತಾಯಿಸಿ ಮನವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 16- ಕಟ್ಟಡ ನಿರ್ಮಾಣ ಕಾರ್ಮಿಕರ ಸಮಸ್ಯೆಗಳು ಹಾಗೂ ಹಲವು ಬೇಡಿಕೆಗಳಿಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ (ಜೆಸಿಟಿಯು) ಜಿಲ್ಲಾ ಘಟಕದಿಂದ ನಗರದ ಜಿಲ್ಲಾ ಆಡಳಿತ ಭವನದ ಎದುರಿಗೆ ಸೋಮವಾರ ಪ್ರತಿಭಟನಾ ಧರಣಿ ನಡೆಸಿ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಮತಿ ಸುಧಾ ಗರಗ ಸಿ. ಅವರ ಮೂಲಕ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾನೂನು ಬದ್ಧವಾಗಿ ಇದುವರೆಗೂ ಸಿಗುತ್ತಿದ್ದ ಸೌಲಭ್ಯಗಳು ಈಗ ಸಿಗುತ್ತಿಲ್ಲ. ಈ ಬಗ್ಗೆ ನಿಮ್ಮ ಮತ್ತು ನಿಮ್ಮ ಇಲಾಖೆಯ ಅಧಿಕಾರಿಗಳ ಜೊತೆಗೂ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಕಳೆದ 12 ತಿಂಗಳಲ್ಲಿ 12 ಹೋರಾಟಗಳು ಈ ಸಂಬಂಧ ನಡೆದಿವೆ.ಶೈಕ್ಷಣಿಕ ಸಹಾಯಧನ, ಮದುವೆ ಸಹಾಯಧನ, ವೈದ್ಯಕೀಯ ಪರಿಹಾರಕ್ಕೆ ಸಲ್ಲಿಕೆಯಾದ ಸಾವಿರಾರು ಅರ್ಜಿಗಳು ಕಳೆದ ಒಂದು ವರ್ಷದಿಂದ ಕೊಳೆಯುತ್ತಿವೆ.
ಪಿಂಚಣಿದಾರರ ಪಿಂಚಣಿ ನಿಂತುಹೋಗಿದೆ, ಹೀಗಾಗಿ ಅವರ ಜೀವನ ಕಷ್ಟಕ್ಕೆ ಸಿಲುಕಿದೆ. ಶೈಕ್ಷಣಿಕ ಸಹಾಯಧನ ಬಿಡುಗಡೆಗಾಗಿ ನಾವು ಕೊನೆಗೆ ಹೈಕೋರ್ಟ್ ಮೆಟ್ಟಿಲೇರಬೇಕಾಯಿತು. ಮತ್ತೊಂದೆಡೆ ಕಾರ್ಮಿಕರು ಕೇಳದಿದ್ದರೂ ಲ್ಯಾಪ್‌ಟಾಪ್, ವೈದ್ಯಕೀಯ ತಪಾಸಣೆ, ಪೌಷ್ಟಿಕಾಂಶ (ಆಯುರ್ವೇದಿಕ್) ಕಿಟ್ ಗಳನ್ನು ಖರೀದಿಸಿದ್ದೀರಿ. ಇದಕ್ಕಾಗಿ ಮಂಡಳಿಯ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದೀರಿ. ಇದರಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬುದು ನಮ್ಮ ನೇರ ಆರೋಪ. ಖರೀದಿ ಮೇಲಿರುವ ಕಲ್ಯಾಣ ಮಂಡಳಿ ಉತ್ಸುಕತೆ ತೋರುವಾಗಲೇ, ಡಿಬಿಟಿ ಮೂಲಕ ಕಾರ್ಮಿಕರಿಗೆ ನೇರವಾಗಿ ಸಂದಾಯವಾಗುವ ಸೌಲಭ್ಯಗಳನ್ನು ಕೊಡಲು ನಿರಾಸಕ್ತಿ ಕಾಣುತ್ತಿದೆ.
ನೋಂದಣಿ ಮತ್ತು ಮರುನೋಂದಣಿಗಾಗಿ ಸಲ್ಲಿಸಲಾದ ಅರ್ಜಿಗಳನ್ನು ಸಕಾರಣವಿಲ್ಲದೇ ರದ್ದುಗೊಳಿಸಲಾಗುತ್ತಿದೆ. ಇದು ಕಲ್ಯಾಣ ಮಂಡಳಿಗೆ ಕಾರ್ಮಿಕರ ಹಿತಾಸಕ್ತಿ ಮುಖ್ಯವಾಗಿಲ್ಲ, ಸಾಮಾಜಿಕ ಸುರಕ್ಷೆ ನೀಡುವ ಉದ್ದೇಶದಿಂದ ಸ್ಥಾಪಿಸಲಾದ ಕಲ್ಯಾಣ ಮಂಡಳಿಯ ಸದುದ್ದೇಶವೇ ನಿಮ್ಮ ಅವಧಿಯಲ್ಲಿ ಮಣ್ಣುಪಾಲಾಗಿದೆ. ಕಲ್ಯಾಣ ಮಂಡಳಿ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ, ಬಡಜನ ವಿರೋಧಿ ನಡೆಯನ್ನು ಕಟ್ಟಡ ಕಾರ್ಮಿಕರಾದ ನಾವು ಅತ್ಯುಗ್ರವಾಗಿ ಖಂಡಿಸುತ್ತೇವೆ. ನಿಮ್ಮ ನಡೆಯನ್ನು ಸರಿಪಡಿಸಿಕೊಳ್ಳಬೇಕೆಂದು ಆಗ್ರಹಿಸುತ್ತೇವೆ. ಈ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರು ಜೂನ್ 28 ರಿಂದ ಜುಲೈ 03 ರವರಿಗೆ ಬೆಂಗಳೂರಿನ ಕಲ್ಯಾಣ ಮಂಡಳಿ ಕಛೇರಿ ಎದುರು ಪ್ರತಿಭಟನೆ ನಡೆಸಿದೆ.ಇನ್ನಾದರೂ ಆಗಿರುವ ತಪ್ಪು ಸರಿಪಡಿಸಲು ಮುಂದಾಗಿ, ಸಮಸ್ಯೆಗಳನ್ನು ಇತ್ಯರ್ಥ ಮಾಡಬೇಕೆಂದು ಈ ಮೂಲಕ ಕೋರುತ್ತೇವೆ.
ಶೈಕ್ಷಣಿಕ ಸಹಾಯಧನ ಸಂಬಂಧಿಸಿ ಹೊರಡಿಸಲಾಗಿದ್ದ 2023ರ ಅಧಿಸೂಚನೆಯನ್ನು ರದ್ದುಮಾಡಿ, ಕರ್ನಾಟಕ ಹೈಕೋರ್ಟ ಆದೇಶದಂತೆ ಕನಿಷ್ಟ ಕಾಲೇಜು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ 2023 ನೇ ಸಾಲಿನಿಂದಲೇ 2021 ರ ಅಧಿಸೂಚನೆ ಅನ್ವಯವೇ ಶೈಕ್ಷಣಿಕ ಸಹಾಯಧನ ನೀಡಬೇಕು.ಶೈಕ್ಷಣಿಕ ಸಹಾಯಧನ ಅರ್ಜಿ ಸಲ್ಲಿಕೆ ಅವಧಿಯನ್ನು 2024 ಆಗಸ್ಟ್ 31 ರವರೆಗೆ ವಿಸ್ತರಿಸಬೇಕು.
ನೋಂದಣಿ ಮತ್ತು ಮರು ನೋಂದಣಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಸಕಾರಣವಿಲ್ಲದೇ, ಅರ್ಜಿ ಸಲ್ಲಿಕೆಯಲ್ಲಿನ ಸಣ್ಣಪುಟ್ಟ ದೋಷಗಳನ್ನೇ ಮುಂದುಮಾಡಿ ತಿರಸ್ಕರಿಸಲಾಗುತ್ತಿದೆ. ಇದು ನಿಲ್ಲಬೇಕು. ಅರ್ಜಿ ಸಲ್ಲಿಕೆಯಲ್ಲಿ ದೋಷವಿದ್ದರೂ ನೈಜ ಕಾರ್ಮಿಕರಾಗಿದ್ದಲ್ಲಿ ಅವರ ಅರ್ಜಿಯನ್ನು ಮಾನ್ಯ ಮಾಡಬೇಕು. ಹಾಗೂ ಕಾಲಮಿತಿಯಲ್ಲಿ ಅಜಿಗಳನ್ನು ವಿಲೇವಾರಿ ಮಾಡಬೇಕು. ಕೆಲವೆಡೆ ಬಿಲ್ಡಿಂಗ್ ಲೈಸನ್ಸ್ ಸಲ್ಲಿಸದಿರುವ ಕಾರಣವನ್ನು ಮುಂದುಮಾಡಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಇದನ್ನು ನಿಲ್ಲಿಸಬೇಕು.
ಪಿಂಚಣಿಗಾಗಿ ಸಲ್ಲಿಸಲಾದ ಸಾವಿರಾರು ಅರ್ಜಿಗಳು ವಿಲೇವಾರಿ ಆಗಿಲ್ಲ. ಪಿಂಚಣಿ ಮುಂದುವರಿಕೆಗಾಗಿ ಸಲ್ಲಿಸಲಾದ ಅರ್ಜಿಗಳನ್ನೂ ವಿಲೇವಾರಿ ಮಾಡಿಲ್ಲ. ಜೊತೆಗೆ ಪಿಂಚಣಿಯನ್ನು ವರ್ಷದ 12 ತಿಂಗಳು ಸರಿಯಾಗಿ ಪಾವತಿಯಾಗುತ್ತಿಲ್ಲ. ಬಗ್ಗೆ ಹಲವು ದೂರುಗಳನ್ನು ನೀಡಲಾಗಿದ್ದರೂ, ಉದಾಸೀನ, ನಿರ್ಲಕ್ಷ್ಯ ವಹಿಸಲಾಗಿದ್ದು, ಶೀಘ್ರವಾಗಿ ಪಿಂಚಣಿಗೆ ಸಂಬಂಧಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು. ಪಿಂಚಣಿಯನ್ನು 60 ವರ್ಷಕ್ಕೆ ಪೂರ್ವನ್ವಯವಾಗುವಂತೆ ಜಾರಿ ಮಾಡಬೇಕೇ ಹೊರತು ಅರ್ಜಿ ಅನುಮೋದನೆಗೊಂಡ ಬಳಿಕವಲ್ಲ. ಇದನ್ನು ಹಲವು ಬಾರಿ ಚರ್ಚಿಸಲಾಗಿದ್ದರೂ ಯಾವುದೇ ಪ್ರಗತಿ ಕಾಣುತ್ತಿಲ್ಲ. ಪಿಂಚಣಿದಾರರಿಗೆ ಕನಿಷ್ಟ ವಾರ್ಷಿಕ ರೂ 500 ಪಿಂಚಣಿ ಇಲ್ಲವೇ ರಾಜ್ಯ ಸರ್ಕಾದ ಡಿ.ಎ. ಹೆಚ್ಚಳ ಆಧಾರಿಸಿ ಹೆಚ್ಚು ಮಾಡಬೇಕು.
ಪಿಂಚಣಿಗಾಗಿ ಅರ್ಜಿ ಸಲ್ಲಿಸುವಾಗ ಆಧಾರ್ ಕಡ್ಡಾಯಗೊಳಿಸಿರುವುದರಿಂದ ಆಧಾರ್ ನಲ್ಲಿ ನಮೂದಿಸಲಾದ ಜನ್ಮ ದಿನಾಂಕಕ್ಕೂ ಕಾರ್ಮಿಕರ ನೋಂದಣಿಗಾಗಿ ಅರ್ಜಿ ಸಲ್ಲಿಸುವಾಗ ನೀಡಲಾಗಿದ್ದ ದಾಖಲೆಯಲ್ಲಿ ನಮೂದಾಗಿರುವ ಜನ್ಮ ದಿನಾಂಕದಲ್ಲಿ ವ್ಯತ್ಯಾಸ ಬಂದಲ್ಲಿ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ವಿಷಯವಾಗಿ ಹಿಂದೆ ಅಂದರೆ 2019-20 ರಲ್ಲಿ ‘ಕಟ್ಟಡ ಕಾರ್ಮಿಕರು ಮಂಡಳಿಯ ಫಲಾನುಭವಿಗಳಾಗಿ ನೋಂದಣಿಯಾಗುವ ಸಮಯದಲ್ಲಿ ಸಲ್ಲಿಸಿರುವ ವಯಸ್ಸಿನ ದಾಖಲೆಯನ್ನು ಪಿಂಚಣಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಸಮಯದಲ್ಲಿ ವಯಸ್ಸಿನ ದಾಖಲೆಯಾಗಿ ಪರಿಗಣಿಸಲಾಗುತ್ತದೆ’ (ಸಂಖ್ಯೆ: ಸಿಡಬ್ಲ್ಯೂಬಿ/ಸಿಆರ್-58/2019-29/5129) ಎಂದು ಸುತ್ತೋಲೆ ಹೊರಡಿಸಲಾಗಿತ್ತು. ಸದರಿ ಸುತ್ತೋಲೆಯಂತೆ ಪಾಲನೆ ಮಾಡಬೇಕೆಂದು ಮರು ಸುತ್ತೋಲೆ ಹೊರಡಿಸಬೇಕು.
ಕಾರ್ಮಿಕ ಇಲಾಖೆಗಾಗಿ ಪ್ರತ್ಯೇಕವಾಗಿ ತರಲಾದ ಹೊಸ ಸಾಫ್ಟ್ ವೇರ್ ನಲ್ಲಿ ಅನೇಕ ರೀತಿಯ ತಾಂತ್ರಿಕ ದೋಷಗಳು ಪದೇ ಪದೇ ಕಾಣಿಸಿಕೊಳ್ಳುತ್ತಿವೆ. ಇದರಿಂದ ಸಕಾಲದಲ್ಲಿ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಸೇವಾಸಿಂಧು ತಂತ್ರಾಂಶದಲ್ಲಿ ಅರ್ಜಿಸಲ್ಲಿಸುವಾಗ ಉದ್ಭವವಾಗುತ್ತಿದ್ದ ಸರ್ವರ್ ಸಮಸ್ಯೆ ಸೇರಿದಂತೆ ಬೇರೊಂದು ಇಲಾಖೆಯ ಮೇಲೆ ಅವಲಂಬನೆಯಾಗುವುದುನ್ನು ತಪ್ಪಿಸುವ ಹಲವು ಕಾರಣಗಳಿಂದ ಪ್ರತ್ಯೇಕ ತಂತ್ರಾಂಶ ಹೊಂದಲಾಗಿತ್ತು. ಆದರೆ ಇಲ್ಲಿಯೂ ಸರ್ವರ್ ಸಮಸ್ಯೆ ಕಾಡುತ್ತಿದೆ. ಆದ್ದರಿಂದ ಹೊಸ ತಂತ್ರಾಂಶದಲ್ಲಿ ತಾಂತ್ರಿಕ ದೋಷ ಮತ್ತು ಸರ್ವರ್ ಸಮಸ್ಯೆಯನ್ನು ಶೀಘ್ರ ಸರಿಪಡಿಸಬೇಕು.ಸೇವಾಸಿಂಧು ತಂತ್ರಾಂಶದ ಮೂಲಕ ನೋಂದಣಿಯಾಗಿದ್ದು, ಸದ್ಯ ಮಂಡಳಿಯ ಹೊಸ ತಂತ್ರಾಂಶದಲ್ಲಿ ಮರುನೋಂದಣಿಗೆ ಹೋದಾಗ ‘ಡಾಟಾ ನಾಟ್ ಫೌಂಡ್’ ಎಂದು ಬರುತ್ತಿದೆ. ಈ ತರಹದ ಹಲವು ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕು.
ಕಳೆದೊಂದು ವರ್ಷದಲ್ಲಿ ಕಲ್ಯಾಣ ಮಂಡಳಿಯಿಂದ ಲ್ಯಾಪ್ ಟಾಪ್ ಖರೀದಿ, ಮಹಿಳೆಯರಿಗಾಗಿ ಪ್ಯಾಡ್ ಖರೀದಿ, ಖಾಸಗಿ ಆಸ್ಪತ್ರೆಗಳ ಮೂಲಕ ವೈದ್ಯಕೀಯ ತಪಾಸಣೆ ಹೆಸರಲ್ಲಿ ಭಾರಿ ಅವ್ಯವಹಾರ ನಡೆದಿದೆ. ಜೊತೆಗೆ ಇತ್ತೀಚೆಗೆ ಆಯುರ್ವೇದ ಕಂಪನಿಯಿಂದ ಪೌಷ್ಟಿಕಾಂಶ ಕಿಟ್ ಖರೀದಿ ಮಾಡಲಾಗಿದೆ. ಇದರಲ್ಲಿಯೂ ಕೊಟ್ಯಾಂತರ ಅವ್ಯವಹಾರ ನಡೆದಿದೆ. ಇದರ ಜೊತೆಯಲ್ಲಿ ಸ್ಕೂಲ್ ಕಿಟ್ ಬರಲು ಸಿದ್ಧವಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಈ ಎಲ್ಲ ಖರೀದಿಗಳ ತನಿಖೆಯಾಗಬೇಕು. ಯಾವುದೇ ಕಿಟ್ ಗಳನ್ನು ಖರೀದಿಸಿ ನೀಡುವುದನ್ನು ನಿಲ್ಲಿಸಬೇಕು. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಎಲ್ಲ ಖರೀದಿ ಅವ್ಯವಹಾರಗಳ ಬಗ್ಗೆಯೂ ತನಿಖೆಯಾಗಬೇಕು. ಭ್ರಷ್ಟಾಚಾರ, ಲಂಚಗುಳಿತನದಿಂದ ಕಲ್ಯಾಣ ಮಂಡಳಿಯನ್ನು ಮುಕ್ತಗೊಳಿಸಬೇಕು. ಮಂಢ್ಯ,ತುಮಕೂರು,ಬಾಗಲಕೋಟೆ ಹಾಗೂ ಕಲುಬುರಗಿ ಸೇರಿ ರಾಜ್ಯದ ಹಲವಡೆ ಕೆಲವು ಕಾರ್ಮಿಕ ಅಧಿಕಾರಿಗಳು ಶಾಮೀಲಾಗಿ ವಿದ್ಯಾರ್ಥಿ ವೇತನ ಹಾಗೂ ವಿವಿಧ ಸೌಲಭ್ಯಗಳ ಹಗರಣದಲ್ಲಿ ಭಾಗೀಯಾಗಿದ್ದಾರೆ ಆ ಮೂಲಕ ಕೋಟ್ಯಾಂತರ ರೂಪಾಯಿಗಳನ್ನು ಕಲ್ಯಾಣ ಮಂಡಳಿಗೆ ನಷ್ಟ ಉಂಟು ಮಾಡಿದ್ದಾರೆ ಆದರೆ ಅಂತಹ ಹಗರಣಗಳ ಬಗ್ಗೆ ಕಲ್ಯಾಣ ಮಂಡಳಿ ದಿವ್ಯ ಮೌನವಹಿಸಿದೆ ಅಂತಹ ಕೆಲವು ಅಧಿಕಾರಿಗಳಿಗೆ ಕೂಡಲೇ ಅಮಾನತ್ತು ಮಾಡಿ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಮತ್ತು ಅವರ ವೇತನ,ಭತ್ಯೆಗಳಿಂದ ಮಂಡಳಿ ಹಣವನ್ನು ದಂಡವಾಗಿ ವಸೂಲಿ ಮಾಡಬೇಕು.
ಕಲ್ಯಾಣ ಮಂಡಳಿ ಸೆಸ್ ಸಂಗ್ರಹಕ್ಕೆ ಕಾರ್ಮಿಕ ಸಚಿವರು ನಡೆಸಿರುವ ಪ್ರಯತ್ನಗಳನ್ನು ಸ್ವಾಗತಿಸುತ್ತೇವೆ. ಅದರ ಜತೆ 1996 ರ ಕಾನೂನಿನಲ್ಲಿ ಶೇ 1 ರಿಂದ 2 ರಷ್ಟು ಸೆಸ್ ಸಂಗ್ರಹಕ್ಕೆ ಅವಕಾಶವಿದೆ. ಈಗ ನಿರ್ಮಾಣ ಕಾಮಾಗಾರಿಗಳಿಂದ ಶೇ 1 ರಷ್ಟು ಸೆಸ್ ಮಾತ್ರ ಸಂಗ್ರಹ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕೇಂದ್ರ-ರಾಜ್ಯ ಸರ್ಕಾರ,ನಿಗಮ,ಮಂಡಳಿಗಳು,ರೈಲ್ವೆ,ರಕ್ಷಣೆ,ದೂರಸಂಪರ್ಕ, ರಾಷ್ಟ್ರೀಯ ಹೆದ್ದಾರಿ ಹಾಗೂ ಖಾಸಗೀ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಬಿಲ್ಡರ್ ಗಳಿಂದ ಶೇ 2 ರಷ್ಟು ಸೆಸ್ ಸಂಗ್ರಹಿಸಲು ಕಲ್ಯಾಣ ಮಂಡಳಿಯು ತೀರ್ಮಾನ ಕೈಗೊಂಡು ರಾಜ್ಯ ಸಚಿವ ಸಂಪುಟಕ್ಕೆ ಕಳುಹಿಸಿ ಒಪ್ಪಿಗೆ ಪಡೆಯಬೇಕು. ಅಲ್ಲದೆ ರಾಜ್ಯದಲ್ಲಿ ಈಗಾಗಲೇ ಪಟ್ಟಿ ಮಾಡಲಾದ ಅನಧಿಕೃತವಾಗಿ ನಿರ್ಮಾಣ ಕಟ್ಟಡಗಳಿಂದ ಶೇ 2 ರಷ್ಟು ಸೆಸ್ ಸಂಗ್ರಹಿಸಲು ಕಾನೂನು ಕ್ರಮವಹಿಸಬೇಕು.
ರಾಜ್ಯದ ಹಾವೇರಿ ಸೇರಿದಂತೆ ರಾಜ್ಯದ್ಯಂತ ನಡೆಸಲಾದ ಬೋಗಸ್ ನೋಂದಣಿದಾರರ ಪತ್ತೆ ಕಾರ್ಯಚರಣೆಯಲ್ಲಿ ಸಾಕಷ್ಟು ನೈಜ ಕಾರ್ಮಿಕರು ತೊಂದರೆಗೀಡಾಗಿ ಫಲಾನುಭವಿ ಪಟ್ಟಿಯಿಂದ ವಂಚಿತರಾಗಿದ್ದಾರೆ. ಅಂತಹ ಪಟ್ಟಿಯನ್ನು ಪರಿಶೀಲಿಸಿ ನೈಜ ಕಾರ್ಮಿಕರು ಕಲ್ಯಾಣ ಮಂಡಳಿಯಲ್ಲಿ ಫಲಾನುಭವಿಗಳಾಗಿ ನೋಂದಾಯಿಸಲು ಕ್ರಮವಹಿಸಬೇಕು.ಕಲ್ಯಾಣ ಮಂಡಳಿಯನ್ನು ಪುನರಚಿಸಿ ಕೇಂದ್ರ ಕಾರ್ಮಿಕ ಸಂಯೋಜಿತ ಸಂಘಗಳಿಗೆ ಅದರಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕು ಮತ್ತು ಮಹಿಳೆ ಪ್ರಾತಿನಿಧ್ಯಕ್ಕೆ ಕಾರ್ಮಿಕ ಸಂಘದ ಪ್ರತಿನಿಧಿಗೆ ಮಾತ್ರವೇ ಅವಕಾಶ ಇರಬೇಕು. ಕಾರ್ಮಿಕ ಸಂಘಟನೆಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡುವ ಪ್ರಯತ್ನಗಳನ್ನು ಮಂಡಳಿಯ ಮೇಲ್ನಟ್ಟದಿಂದ ಕೆಳ ಹಂತದವರೆಗೂ ಅಧಿಕಾರಿಗಳು ನಡೆಸುತ್ತಿದ್ದಾರೆ.
ಇದು ತೀವ್ರ ಖಂಡನೀಯ. ಕೆಲವು ಕಡೆ ಕಾರ್ಮಿಕ ನಿರೀಕ್ಷಕರು ತಮ್ಮ ಭ್ರಷ್ಟಚಾರಕ್ಕೆ ಅನುಕೂಲವಾಗುವ ಕೆಲ ಸ್ಥಳೀಯ ಮುಖಂಡರನ್ನು ಸೃಷ್ಟಿಸಿ ಹೊಸ ಸಂಘಗಳನ್ನು ನೋಂದಣಿ ಮಾಡಿಸುತ್ತಿದ್ದಾರೆ. ಇವರ ಮೂಲಕ ಭೋಗಸ್,ನೋಂದಣಿ ಮಾಡಿಸಿ ಮಂಡಳಿ ಸೌಲಭ್ಯಗಳ ಕೊಡಿಸಿ ಮಂಡಳಿಗೆ ನಿಧಿಗೆ ಕನ್ನ ಹಾಕುತ್ತಿದ್ದಾರೆ. ಅದಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಮಂಡಳಿಯ ಎಲ್ಲ ತೀರ್ಮಾನಗಳನ್ನು ಕಲ್ಯಾಣ ಮಂಡಳಿ ಸಭೆ ನಡೆಸಿಯೇ ತೀರ್ಮಾನಿಸಬೇಕು. ಘಟನೋತ್ತರ ಅನುಮೋದನೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು.
ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಇತ್ಯರ್ಥಪಡಿಸಲು ಜುಲೈ 3 ರಂದು ಈ ಪ್ರತಿಭಟನೆ ನಡೆಸಿದೆ. ಕೇಂದ್ರ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಬೇಕು. ಈಗಾಗಲೇ ನಾವು ತೀರ್ಮಾನಿಸದಂತೆ ‘ಭ್ರಷ್ಟಚಾರದಿಂದ ಕಲ್ಯಾಣ ಮಂಡಳಿ ಮುಕ್ತಗೊಳಿಸಿ- ಬಡ ಕಟ್ಟಡ ಕಾರ್ಮಿಕರ ಬದುಕು ರಕ್ಷಿಸಿ”ಎನ್ನುವ ಅಭಿಯಾನವನ್ನು ರಾಜ್ಯದ್ಯಾಂತ ನಡೆಸಿ ಆಗಸ್ಟ್ ಮೊದಲ ವಾರದ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬೃಹತ್ ಅನಿರ್ಧಿಷ್ಟಾವಧಿ ಹೋರಾಟವನ್ನು ‘ಮುಖ್ಯಮಂತ್ರಿ ಮನೆ ಮುಂದೆ’ ನಡೆಸಲಿದ್ದೇವೆ ಎಂದು ಈ ಮೂಲಕ ತಮ್ಮ ಗಮನಕ್ಕೆ ತರಲು ಬಯಸುತ್ತೇವೆ.
ಅಂತಹ ತೀವ್ರ ಹೋರಾಟಕ್ಕೆ ತಾವು ಅವಕಾಶ ನೀಡುವುದಿಲ್ಲ ಮತ್ತು ಲಕ್ಷಾಂತರ ಕಟ್ಟಡ ಕಾರ್ಮಿಕರು ಅವರ ಕುಟುಂಬಗಳು ಹಾಗೂ ಕಲ್ಯಾಣ ಮಂಡಳಿ ಉಳಿವಿನ ದೃಷ್ಟಿಯಿಂದ ಸೂಕ್ತ ಕ್ರಮವಹಿಸುತ್ತೀರೆಂದು ಭಾವಿಸುತ್ತೇವೆ.
ಸ್ಥಳೀಯ ಬೇಡಿಕೆಗಳು ರಾಜ್ಯ ಕಟ್ಟಡ ಕಾರ್ಮಿಕರ ಸಂಘಟನೆಗಳ ಮುಖಂಡರನ್ನು ಎರಡು ತಿಂಗಳಿಗೊಮ್ಮೆ ಪ್ರತ್ಯೇಕ ಸಭೆಗಳನ್ನು ಜಿಲ್ಲಾ ಕಾರ್ಮಿಕ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಬೇಕು. ಅಲ್ಲದೆ ಕಲಬುರಗಿ ವಿಭಾಗೀಯ ಸಹಾಯಕ ಕಾರ್ಮಿಕ ಆಯುಕ್ತರವರ (ಎ.ಎಲ್.ಸಿ)ನೇತೃತ್ವದಲ್ಲಿ ಮೂರು ತಿಂಗಳಿಗೊಮ್ಮೆ ಸಭೆಗಳನ್ನು ನಡೆಸಬೇಕು. ಸದ್ಯ ಇರುವ ಸಮಿತಿಯನ್ನು ವಿಸರ್ಜಿಸಿ.ಜಿಲ್ಲಾ ಕಾರ್ಮಿಕರ ಸಮಿತಿಯಲ್ಲಿ ರಾಜ್ಯ ಸಂಘಟನೆಗಳ ಪ್ರತಿನಿಧಿ ಯಾರಾದರೂ ಒಬ್ಬರನ್ನು ಸಮಿತಿಯಲ್ಲಿ ತೆಗೆದುಕೊಳ್ಳಬೇಕು.ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿದಾಗ ಉದ್ಯೋಗ ಪ್ರಮಾಣ ಪತ್ರದ ನಮೂನೆಯಲ್ಲಿ ಸಣ್ಣಪುಟ್ಟ ನ್ಯೂನತೆಗಳನ್ನು ಇದ್ದಲ್ಲಿ ಏಕ ಪಕ್ಷಿಯವಾಗಿ ತಿರಸ್ಕರಿಸದೆ. ಅರ್ಜಿದಾರರಿಗೆ ಅಥವಾ ಆಯಾ ಸಂಘಟನೆಗಳ ಗಮನಕ್ಕೆ ತಂದು ನ್ಯೂನತೆ ಸರಿಪಡಿಸಿಕೊಂಡು ಮಂಜೂರು ಮಾಡಬೇಕು.
ಕೊಪ್ಪಳ ಜಿಲ್ಲಾ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಅನೇಕ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿರುವ ಮತ್ತು ಮಾಹಿತಿ ಕೇಳಲು ಬರುವ ಮುಗ್ದ ಕಟ್ಟಡ ಕಾರ್ಮಿಕರೊಂದಿಗೆ ಅಶಿಸ್ತಿನಿಂದ.ಅಸಭ್ಯವಾಗಿ ದರ್ಪದಿಂದ ನಡೆದುಕೊಳ್ಳುತ್ತಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯನಿರ್ವಾಹಕರಾಗಿರುವ ಹೇಮಂತ್ ಸಿಂಗ್ ಅವರಿಗೆ ತಕ್ಷಣದಿಂದ ವಜಾಗೊಳಿಸಲು ಕೋರಿಕೆ.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕೆ ಪೂರಕವಾಗಲು ವಿತರಿಸಿದ ಲ್ಯಾಪ್ ಟಾಪ್ ಗಳನ್ನು ನಕಲಿ ಕಟ್ಟಡ ಕಾರ್ಮಿಕರಿಗೆ ಹಂಚಿಕೆ ಮಾಡಿದ ಹಗರಣವನ್ನು ಸಮಗ್ರ ತನಿಖೆ ಆಗಬೇಕು.
ಕಟ್ಟಡ ಕಾರ್ಮಿಕರು ವಿವಿಧ ಸೌಲಭ್ಯಗಳಿಗೆ ಸಲ್ಲಿಸುವ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿ ಮನವಿ ಅರ್ಪಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು ಸಂಯೋಜಿತ) ಜಿಲ್ಲಾ ಅಧ್ಯಕ್ಷ ಖಾಸೀಮ್ ಸಾಬ್ ಸರ್ದಾರ್.ಜಿಲ್ಲಾ ಉಪಾಧ್ಯಕ್ಷ ಇಸ್ಮಾಯಿಲ್ ಇಟಗಿ.ತಾಲೂಕಾ ಅಧ್ಯಕ್ಷ ಹನುಮೇಶ್ ಭೋವಿ.
ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎಐಟಿಯುಸಿ ಸಂಯೋಜಿತ)ಜಿಲ್ಲಾ ಅಧ್ಯಕ್ಷ ತುಕಾರಾಮ ಬಿ. ಪಾತ್ರೋಟಿ. ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎ.ಗಫಾರ್.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಲ್.ತಿಮ್ಮಣ್ಣ.ಜಿಲ್ಲಾ ಖಜಾಂಚಿ ಅಡಿವೆಪ್ಪ ಚಲವಾದಿ.ಜಿಲ್ಲಾ ಉಪಾಧ್ಯಕ್ಷ ಜಾಫರ್ ಕುರಿ.ಜಿಲ್ಲಾ ಸಹ ಕಾರ್ಯದರ್ಶಿ ಮೌಲಾ ಸಾಬ್ ಹಣಗಿ. ಶಿವಲಿಂಗಯ್ಯ ಲಕಮಾಪುರ. ಶಮಶುದ್ದೀನ್ ಮಕಾಂದಾರ್. ರಾಜಾ ಸಾಬ್ ತಹಶೀಲ್ದಾರ್. ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ (ರಿ )
(AIUTUC ಸಂಯೋಜಿತ) ಜಿಲ್ಲಾ ಸಂಚಾಲಕ ಶರಣು ಗಡ್ಡಿ. ಮುದುಕಪ್ಪ ಭಾಗ್ಯನಗರ. ರಾಮಲಿಂಗ ಶಾಸ್ತ್ರಿ. ಸಂಜಯ್ ದಾಸ್ ಕೌಜಗೇರಿ.ಮೈಲಾರಪ್ಪ. ಶೇಖ್ ಸಾಬ್. ಯಮನೂರಪ್ಪ. ಮಹೆಬೂಬ್. ನಾಗರಾಜ್. ಗವಿಸಿದ್ದಪ್ಪ ಮುಂತಾದವರು ಭಾಗವಹಿಸಿದ್ದರು.