
ಸಚಿವರ ನೇತೃತ್ವದಲ್ಲಿ ವಿವಿಧ ಇಲಾಖಾಧಿಕಾರಿಗಳೊಂದಿಗೆ ಸಭೆ ಶೇ.60ರಷ್ಟು ಕನ್ನಡ ಬಳಕೆಗೆ ಕಠಿಣ ನಿಯಮ ರೂಪಿಸುವ ವಿಚಾರ
ಕರುನಾಡ ಬೆಳಗು ಸುದ್ದಿ
ಬೆಂಗಳೂರು,6- ರಾಜ್ಯಾದ್ಯಂತ ಎಲ್ಲಾ ವ್ಯಾಪಾರ ಉದ್ದಿಮೆ, ಶಿಕ್ಷಣ ಸಂಸ್ಥೆ, ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಅಳವಡಿಕೆಗೆ ನಿಯಮ ರೂಪಿಸುವ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಕಾಸಸೌಧಲ್ಲಿ ಶನಿವಾರ ಸಭೆ ನಡೆಸಿದರು.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡ ಪ್ರಾಥಮಿಕವಾಗಿ ಸಚಿವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಕಠಿಣ ನಿಯಮ ರೂಪಿಸುವ ಸಂಬಂದ ಸಚಿವರು ಸಭೆಯಲ್ಲಿ ಕೈಗಾರಿಕೆ ಇಲಾಖೆ, ಗೃಹ ಇಲಾಖೆ ಹಾಗೂ ಕಾನೂನು ಇಲಾಖೆ ಅಧಿಕಾರಿಗಳ ಜತೆ ಸುದೀರ್ಘವಾಗಿ ಚರ್ಚೆ ನಡೆಸಿದರು.
ಸಭೆ ಬಳಿಕ ಮಾತಬಾಡಿದ ಸಚಿವರು, ಕೇವಲ ದಂಡ, ನೋಟಿಸ್ ನೀಡಿಕೆ ಮಾತ್ರವಲ್ಲ. ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಸದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ನಿಯಮ ಇರಲಿದೆ. ಮುಂದಿನ ಸಭೆ ಬಳಿಕ ಶೀಘ್ರವೇ ನಿಯಮಗಳ ಆದೇಶ ಹೊರಡಿಸಲಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್ . ಮಂಜುಳ, ಡಾ.ಏಕ್ ರೂಪ್ ಕೌರ್, ಗೃಹ ಇಲಾಖೆ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ ಎಸ್ .ರವಿ, ಇಲಾಖೆ ನಿರ್ದೇಶಕರಾದ ಡಾ.ಕೆ.ಧರಣಿದೇವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.