
ಕಾಂತರಾಜು ವರದಿ ಸಲ್ಲಿಕೆಗೂ ಮುನ್ನ ವಿರೋಧ ಸಲ್ಲ
ಸಚಿವ ಶಿವರಾಜ್ ತಂಗಡಗಿ
ಕರುನಾಡ ಬೆಳಗು ಸುದ್ದಿ
ಬಾಗಲಕೋಟೆ, ನ.23 – ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜು ವರದಿ ಸಲ್ಲಿಕೆಗೂ ಮುನ್ನವೇ ವರದಿಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಬಾಗಲಕೋಟೆಯ ನವನಗರದಲ್ಲಿ ಗುರುವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ವರದಿಯಲ್ಲಿ ಏನಿದೆ ಎಂದು ಯಾರಿಗೂ ಗೊತ್ತಿಲ್ಲ.ವರದಿ ಬಗ್ಗೆ ಮೊದಲೇ ಕಲ್ಪನೆ ಮಾಡಿಕೊಳ್ಳುವುದು ಬೇಡ. ವರದಿ ಸಲ್ಲಿಕೆಯಾಗಿ, ಸಾಧಕ- ಬಾಧಕಗಳ ಬಗ್ಗೆ ಚರ್ಚೆ ನಡೆದು ಆ ಬಳಿಕ ನಿರ್ಧಾರ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ.
ಈ ಬಗ್ಗೆ ಯಾರು ಕೂಡ ಗೊಂದಲಕ್ಕೀಡಾಗುವುದು ಬೇಡ. ವರದಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದಂತೆ ಆಗಿದೆ ಎಂದರು.
ಕಾಂತರಾಜು ವರದಿಯಿಂದ ಕಾಂಗ್ರೆಸ್ ಸಮಾಜವನ್ನು ಒಡೆಯುತ್ತದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಸರಿಯಲ್ಲ.ಮುಖ್ಯಮಂತ್ರಿ ಆಗಿದ್ದವರು ಸತ್ಯಾಸತ್ಯತೆ ತಿಳಿದು ಮಾತನಾಡಬೇಕು. ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ಹೇಳಿದರು.
ಒಕ್ಕಲಿಗ ಸಮುದಾಯದ ಮುಖಂಡರು ನನಗೂ ಮನವಿ ಕೊಟ್ಟಿದಾರೆ. ವರದಿ ಬರುವುದಕ್ಕೂ ಮುನ್ನ ಮೊದಲೇ ಚರ್ಚೆ ಮಾಡುವುದು ಸರಿಯಲ್ಲ. ಸಾಕಷ್ಟು ವರದಿಗಳು ಬಂದಾಗ ಅದನ್ನು ಪರಿಷ್ಕರಿಸುವುದು ಅಥವಾ ತಿರಸ್ಕರಿಸೋದು ನಂತರದ ವಿಚಾರ.
ಇನ್ನು ಮುಖ್ಯವಾಗಿ ಇದು ಜಾತಿ ಗಣತಿ ಅಲ್ಲ. ಎಲ್ಲರೂ ಜಾತಿ ಗಣತಿ ಎನ್ನುತ್ತಿದ್ದಾರೆ. ನಮ್ಮ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು, ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ಮಾಡಿಸೋಣ ಎಂದಿದ್ದಾರೆ, ಆ ವಿಚಾರ ಬೇರೆ.ಇದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಆಧಾರವಾಗಿ ಯಾವ ಜನತೆ ಯಾವ ಹಂತದಲ್ಲಿದಾರೆ ಎಂಬುದನ್ನು ತಿಳಿದುಕೊಳ್ಳಲು ಮಾಡಿಸಿರುವ ಸಮೀಕ್ಷೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದಾಗ ಯಾವ ಸಮಾಜ ಹಿಂದುಳಿದಿದೆ ಅಂತಹ ಸಮಾಜವನ್ನು ಮೇಲೆತ್ತುವುದು ಮುಖ್ಯ ಉದ್ದೇಶವಾಗಿರುತ್ತದೆ. ಸಿದ್ದರಾಮಯ್ಯನವರಿಗೆ ಹಿಂದುಳಿದವರ ಮೇಲೆತ್ತುವ ಆಸೆ ಹೆಚ್ಚಿದೆ ಎಂದು ತಿಳಿಸಿದರು.