IMG-20240425-WA0046(1)

ಕುಡಿಯುವ ನೀರಿನ ಪೈಪ್‌ಲೈನ್‌ಗಳು ಹಾಳಾಗದಂತೆ ಕಾಮಗಾರಿ ಅನುಷ್ಠಾನಕ್ಕೆ ಜಿಪಂ ಸಿಇಓ ಸೂಚನೆ

ಕರುನಾಡ ಬೆಳಗು ಸುದ್ದಿ

ವಿಜಯನಗರ, 26- ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಪೈಪ್‌ಲೈನ್‌ಗಳನ್ನು ಅಳವಡಿಸಲಾಗಿರುತ್ತದೆ. ಆದ್ದರಿಂದ ಅನುಷ್ಠಾನ ಇಲಾಖೆಗಳು ಪೈಪ್‌ಲೈನ್‌ಗಳು ಇರುವುದನ್ನು ಗುರುತಿಸಿ ಅವು ಹಾಳಾಗದಂತೆ ಸಿವಿಲ್ ಕಾಮಗಾರಿಗಳನ್ನು ನಡೆಸಬೇಕು ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸದಾಶಿವ ಪ್ರಭು ಬಿ ಅವರು ಸಂಬಂಧಿಸಿದ ಅನುಷ್ಠಾನ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ, ಕೆಆರ್‌ಐಡಿಎಲ್, ಪಿಡಬ್ಲ್ಯೂಡಿ, ಕರ್ನಾಟಕ ರಾಜ್ಯ ಹ್ಯಾಬಿಟೇಷನ್ ಸೆಂಟರ್, ನಿರ್ಮಿತಿ ಕೇಂದ್ರ, ಜೆಸ್ಕಾಂ ಮತ್ತು ಬಿಎಸ್‌ಎನ್‌ಎಲ್ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಏಪ್ರೀಲ್ 25ರಂದು ನಡೆಸಿದ ವಿಡಿಯೋ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.

ಕುಡಿಯುವ ನೀರಿನ ಪೈಪ್‌ಲೈನ್ ಮತ್ತು ಜಿಲಜೀವನ್ ಮಿಷನ್ ಯೋಜನೆಯಡಿ ಪೈಲ್‌ಲೈನ್‌ಗಳು ಅನುಷ್ಠಾನ ಇಲಾಖೆಗಳ ಕಾಮಗಾರಿ ಸಂದರ್ಭದಲ್ಲಿ ಹಾಳಾಗಿರುವ ಬಗ್ಗೆ ಜಿಲ್ಲೆಯ ಅನೇಕ ಪಂಚಾಯಿತಿಗಳಿAದ ದೂರುಗಳು ಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸುವ ಮುಂಚಿತವಾಗಿ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಲಿಖಿತವಾಗಿ ಸಂಪರ್ಕಿಸಿ ಕಾಮಗಾರಿ ಅನುಷ್ಠಾನ ಸ್ಥಳದಲ್ಲಿ ಕಂಟ್ರೋಲ್ ವಾಲ್ವಗಳು ಇಲ್ಲದಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಕಾಮಗಾರಿಗಳನ್ನು ಮುಂಜಾಗ್ರತೆಯಿಂದ ಅನುಷ್ಠಾನಗೊಳಿಸಬೇಕು. ಒಂದು ವೇಳೆ ಕಾಮಗಾರಿಗಳ ಸಲುವಾಗಿ ಅವುಗಳನ್ನು ಸ್ಥಳಾಂತರ ಗೊಳಿಸಬೇಕಿದ್ದಲ್ಲಿ ಸೂಕ್ತ ವೆಚ್ಚಭರಿಸಿ ಸ್ಥಳಾಂತರಗೊಳಿಸಬೇಕು.

ಈ ಬಗ್ಗೆ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಲು ಸೂಚಿಸಿ ಈ ಬಗ್ಗೆ ಗುತ್ತಿಗೆದಾರರಿಗೆ ಸೂಕ್ತ ಸಲಹೆ ಮತ್ತು ಆದೇಶಗಳನ್ನು ನೀಡಿ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಮನ್ವಯದೊಂದಿಗೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಭೆಯಲ್ಲಿ ಹಾಜರಿದ್ದ ಬಿಎಸ್‌ಎನ್‌ಎಲ್ ಅಧಿಕಾರಿಗಳು, ಗ್ರಾಮೀಣ ಪ್ರದೇಶದಲ್ಲಿ ಬಿಎಸ್‌ಎನ್‌ಎಲ್ ಕೇಬಲ್‌ಗಳು ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ತುಂಬಾ ಹಾಳಾಗಿ ಗ್ರಾಮೀಣ ಪ್ರದೇಶದಲ್ಲಿ ಇಂಟರ್‌ನೆಟ್ ಸಂಪರ್ಕ ಮತ್ತಿತರ ಸಂವಹನ ಕಾರ್ಯಕ್ಕೆ ಅಡಚಣೆಯಾಗುತ್ತಿರುವ ಬಗ್ಗೆ ಮುಖ್ಯಕಾರ್ಯನಿರ್ವಾಹಕ ಅಧಿಕಾರಗಳ ಗಮನಕ್ಕೆ ತಂದರು. ಈ ಬಗ್ಗೆ ಇಲಾಖೆಯೊಂದಿಗೆ ಸಮನ್ವಯ ಮಾಡಿಕೊಂಡು ಕಾಮಗಾರಿಗಳ ಅನುಷ್ಠಾನಕ್ಕೆ ಸಿಇಓ ಅವರು ಸೂಚನೆ ನೀಡಿದರು.

ಎಲ್ಲಾ ಅನುಷ್ಠಾನ ಇಲಾಖೆಗಳ ಕಾರ್ಯಪಾಲಕ ಅಭಿಯಂತರರು, ಯೋಜನಾ ನಿರ್ದೇಶಕರು, ಸಹಾಯಕ ಕಾರ್ಯ ಪಾಲಕ ಅಭಿಯಂತರರು ಮತ್ತು ಜಿಲ್ಲಾ ಪಂಚಾಯತಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ತಾಲೂಕು ಹಂತದ ಅಧಿಕಾರಿಗಳು ಸಹ ವಿಡಿಯೋ ಸಂವಾದದ ಮೂಲಕ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!