
ಮಧ್ಯದಂಗಡಿ ಆರಂಭ ವಿರೋಧಿಸಿ
ಕುದರಿಮೋತಿ ಗ್ರಾಮದ ಮಹಿಳೆರಿಂದ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 16- ಮದ್ಯದಂಗಡಿ ಆರಂಭ ಮಾಡದಂತೆ ಆಗ್ರಹಿಸಿ ತಾಲ್ಲೂಕಿನ ಕುದರಿಮೋತಿ ಗ್ರಾಮದಲ್ಲಿ ಶನಿವಾರ ಗ್ರಾಮ್ಥರು ಪ್ರತಿಭಟನೆ ನಡೆಸಿದರು.
ಮದ್ಯದಂಗಡಿ ತೆರೆಯರೆ ಪುರುಷರು ಮದ್ಯ ಸೇವನೆ ಮಾಡಿ, ಮನೆಗೆ ಬಂದು, ಹೆಂಡತಿ ಮತ್ತು ಮಕ್ಕಳ ಜೊತೆ ಜಗಳ ಆಡುತ್ತಾರೆ. ದುಡಿದ ಹಣವನ್ನೇಲ್ಲ ಕುಡಿತಕ್ಕೆ ಇಡುತ್ತಾರೆ. ಇದರಿಂದ ಕೌಟುಂಬಿಕ ಜೀವನ ಹಾಳಾಗುತ್ತದೆ. ಅಲ್ಲದೇ ಮದ್ಯ ಸೇವನೆಯಿಂದ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ಮದ್ಯ ಸೇವನೆಯಿಂದ ಮಾನಸಿಕ, ದೈಹಿಕ ಆರೋಗ್ಯವು ಹದಗೆಡುತ್ತದೆ. ಹಾಗಾಗಿ ಮದ್ಯದಂಗಡಿ ತೆರೆಯದಂತೆ ಬಹಳಷ್ಟು ಬಾರಿ ಹೋರಾಟ ಮಾಡಿದ್ದೇವೆ. ಅಲ್ಲದೇ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೇವೆ. ಆದರೂ ಮದ್ಯದಂಗಡಿ ತೆರೆಯುತ್ತಿರುವುದು ಖಂಡನೀಯವಾಗಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರ ಸಮ್ಮುಖದಲ್ಲಿಯೇ ಮದ್ಯದಂಗಡಿ ಆರಂಭಿಸಲು ಮಾಲೀಕರು ಪ್ರಯತ್ನಿಸಿದರು. ಅದನ್ನು ತೆರೆಯದಂತೆ ಮಹಿಳೆಯರು ಹಾಗೂ ಗ್ರಾಮದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಹಾಗೂ ಗ್ರಾಮಸ್ಥರ ಜೊತೆ ಮಾತಿಕ ಚಕಮಕಿ ನಡೆಯಿತು. ಮೈಸೂರು ಮಹಾಸಂಸ್ಥಾನ ಮಠದ ಶ್ರೀವಿಜಯ ಮಹಾಂತ ಸ್ವಾಮೀಜಿ ರಸ್ತೆಗಿಳಿದು ಪ್ರತಿಭಟನಾ ನಿರತ ಗ್ರಾಮಸ್ಥ ಮಹಿಳೆಯರಿಗೆ ಸಾಥ್ ನೀಡಿದರು.
ಗ್ರಾಮಸ್ಥರಾದ ಮಂಜುನಾಥ ಗಟ್ಟೆಪ್ಪನವರ, ಅಮರೇಶ ತಲ್ಲೂರು, ಪಾಪುಸಾಬ್ ನೀರಲಗಿ, ಶ್ರೀಧರ್ ದಾಸರ್, ಹನುಮಗೌಡ, ಮಂಜುನಾಥ ಸಜ್ಜನ್, ರವಿ ಕಟಗಿ, ಫಕೀರಪ್ಪ ಚೌಡ್ಕಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಫರೀದಾ ಬೇಗಂ, ಶಾರವ್ವ, ಹುಲಿಗೆಮ್ಮ, ನಿಂಗಮ್ಮ, ಬಸಮ್ಮ ಹುಚ್ಚಲಕುಂಟಿ, ರೇಣುಕವ್ವ ಇದ್ದರು.