ಗ್ಯಾರಂಟಿ ಗಾಗಿ ಸಾರ್ವಜನಿಕರಿಗೆ ಬೆಲೆಏರಿಕೆ ಬರೆ; ಸಿಎಂ ರಾಜಿನಾಮೆ ನೀಡಲಿ : ಶಾಸಕ ದೊಡ್ಡನಗೌಡ ಪಾಟೀಲ
ಸರಿಯಾದ ಆರ್ಥಿಕ ನೀತಿ ಇಲ್ಲದೇ ಅಧಿಕಾರದ ಆಸೆಗಾಗಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅಧಿಕಾರ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಅವುಗಳ ಪೂರೈಕೆಗೆ ಬಜೆಟ್ ಇಲ್ಲದೇ ಒದ್ದಾಡುತ್ತಿರುವ ಸಿಎಂ ಸಿದ್ದರಾಮಯ್ಯ ಸರಕಾರ ಪೆಟ್ರೋಲ್ ಮತ್ತು ಡಿಸೇಲ್ ತೈಲಬೆಲೆ ಏರಿಸಿ ಸಾರ್ವಜನಿಕರಿಗೆ ಹೊರೆ ಮಾಡಿರುವ ಸಿಎಂ ರಾಜೀನಾಮೆ ನೀಡಬೇಕು ಎಂದು ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಾಲೂಕ ಬಿಜೆಪಿ ಮಂಡಲ ವತಿಯಿಂದ ಪೆಟ್ರೋಲ್ ಮತ್ತು ಡಿಸೇಲ್ ತೈಲಬೆಲೆ ಏರಿಕೆ ಖಂಡಿಸಿ ಮಾನವ ಸರಪಳಿ ನಿರ್ಮಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಮಾತಿನಂತೆ ತಲುಪಿಸಲು ಹೆಣಗಾಡುತ್ತಿದೆ ಬಜೆಟ್ ಇಲ್ಲದೇ ಖಾಲಿ ಖಜಾನೆಯಾಗಿದ್ದು ಜನರಿಂದಲೆ ಮತ್ತೆ ಸುಲಿಗೆಗೆ ಇಳಿದಿದೆ. ಸಾರ್ವಜನಿಕರ ಮೇಲೆಯೇ ಮತ್ತೆ ಪೆಟ್ರೋಲ ೩ ರೂ, ಡಿಸೇಲ್ ೩.೫೦ ರೂ. ಬೆಲೆ ಏರಿಕೆ ಮಾಡಿ ಬಿಸಿ ಮುಟ್ಟಿಸಿದೆ. ಇದೇ ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ ಅವರು ನಮ್ಮ ಬಿಜೆಪಿ ಸರಕಾರ ಇದ್ದಾಗ ಬೆಲೆ ಏರಿಕೆ ಅಂತ ಪ್ರತಿಭಟನೆ ಮಾಡಿದ್ದು ಅವರಿಗೆ ನೆನಪಿಲ್ಲವೇ? ಈಗ ತಾವೇನು ಮಾಡಿದ್ದಾರೆ ಎಂಬುದು ಸಾರ್ವಜನಿಕರೆ ಗಮನಿಸುತ್ತಿದ್ದಾರೆ. ಎಂಪಿ ಚುನಾವಣೆಯಲ್ಲಿ ಗ್ಯಾರಂಟಿ ನೀಡಿದರೂ ತಮಗೆ ಹೆಚ್ಚು ಸ್ಥಾನ ಗೆಲ್ಲೋಕೆ ಆಗಿಲ್ಲ ಅಂತ ಈಗ ಬೆಲೆ ಏರಿಕೆ ಮಾಡಿ ಸಾರ್ವಜನಿಕರಿಗೆ ಹೊರೆ ಹೇರಲಾಗಿದೆ. ಅಲ್ಲದೇ ವಾಲ್ಮಿಕಿ ನಿಗಮದಲ್ಲಿ ನೂರಾರು ಕೋಟಿ ಹಗರಣ ಬಟಾಬಯಲು ಆಗಿದ್ದು ಇದಕ್ಕೆ ಸರಕಾರವೇ ನೇರ ಹೊಣೆಯಾಗಿದೆ. ಇಂಥಹ ಸರಕಾರ ಯಾವ ಅಭಿವೃದ್ಧಿಗೂ ಅನುದಾನ ಇಲ್ಲದೇ ಮುಂದೆ ಸಿಎಂ ರಾಜಿನಾಮೆ ಕೊಡಬೇಕಾಗಬಹುದು ಎಂದು ಕಾಂಗ್ರೆಸ್ ನಡೆಯನ್ನು ಖಂಡಿಸಿದರು.
ಇದೇ ವೇಳೆ ಸುಮಾರು ೨೦ ನಿಮಿಷಗಳ ಕಾಲ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು, ಬಸ್ ಪ್ರಯಾಣಿಕರು ಪರದಾಡಿದ್ದು ಕಂಡು ಬಂದಿತು.
ಈ ಸಂದರ್ಭದಲ್ಲಿ ತಾಲೂಕ ಬಿಜೆಪಿ ಅಧ್ಯಕ್ಷ ಮಹಾಂತೇಶ ಬದಾಮಿ, ಬಿಜೆಪಿ ಮುಖಂಡರಾದ ಕೆ. ಮಹೇಶ, ಜಿ.ಕೆ ಹಿರೇಮಠ, ಅಮೀನುದ್ದೀನ ಮುಲ್ಲಾ, ಅಶೋಕ ಬಳೂಟಗಿ, ಕಲ್ಲೇಶ ತಾಳದ, ರಾಜು ಗಂಗನಾಳ ವಕೀಲ, ಸಂಗಪ್ಪ ಮೆಣಸಗೇರಿ, ಪರಶುರಾಮ ನಾಗರಾಳ, ಶೈಲಜಾ ಬಾಗಲಿ, ಉಮೇಶ ಯಾದವ, ಆಲಂಪಾಶಾ ಮೋದಿ ಸೇರಿದಂತೆ ಮತ್ತಿತರರು ಇದ್ದರು.