
ಮನೆಗಳ್ಳತನ ಪ್ರಕರಣ ಮನೆಗಳ್ಳರ ಬಂಧನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 03- ತಾಲೂಕಿನ ಅಳವಂಡಿ ಹಾಗೂ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ನಾಲ್ಕು ಮನೆಗಳ್ಳನ ಪ್ರಕರಣವನ್ನು ಬೇಧಿಸಿದ ಪೊಲೀಸರು 15 ಲಕ್ಷ ರೂ. ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ.
ಕನಕಗಿರಿ ತಾಲೂಕಿನ ಹನುಮೇಶ ಹಾಗೂ ಗಂಗಾವತಿ ತಾಲೂಕಿನ ರಾಘವೇಂದ್ರ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಯಶೋಧಾ ವಂಟಗೋಡಿ, ಅಳವಂಡಿ ಠಾಣಾ ವ್ಯಾಪ್ತಿಯ ಕಾತರಕಿ ಗುಡ್ಲಾನೂರು ಹಾಗೂ ಅಳವಂಡಿ ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ ದಾಖಲಾಗಿದ್ದು, ಡಿವೈಎಸ್ಪಿ ಶರಣಬಸಪ್ಪ ಸುಬೇದಾರ್ ಮಾರ್ಗದರ್ಶನ ಹಾಗೂ ವೃತ್ತ ನಿರೀಕ್ಷಕ ಮಹಾಂತೇಶ ಸಜ್ಜನ್ ನೇತೃತ್ವದಲ್ಲಿ ತಂಡ ರಚಿಸಲಾಯಿತು ಎಂದರು.
ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸರು ಇಬ್ಬರನ್ನು ಬಂಧಿಸಿ ಅವರನ್ನು 290 ಗ್ರಾಮ್ ಚಿನ್ನಾಭರಣ , 50 ಸಾವಿರ ರೂ. ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬಂಗಾರವನ್ನು ಬ್ಯಾಂಕ್ ನಲ್ಲಿ ಅಡವಿಟ್ಟಿದ್ದರು. ಪೊಲೀಸರು ತಾಂತ್ರಿಕ ತಂಡದ ಸಹಾಯ ಪಡೆದು ಪ್ರಕರಣ ಬೇಧಿಸಿದ್ದಾರೆ. ತನಿಖಾ ತಂಡಕ್ಕೆ ವೈಯಕ್ತಿಕ ವಾಗಿ 20 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಆರೋಪಿಗಳು ನಾಲ್ಕು ಪ್ರಕರಣ ಮಾತ್ರವಲ್ಲದೇ ಈ ಹಿಂದೆ ಬೂದಗುಂಪಾ ಹಾಗೂ ಜೀರಾಳ ಗ್ರಾಮಗಳಲ್ಲಿ ನಡೆದ ಮನೆಗಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.
ತನಿಖಾ ತಂಡದಲ್ಲಿ ಪಿಎಸ್ಐ ನಾಗಪ್ಪ, ಅಶೋಕ ಬೇವೂರು, ಮೀನಾಕ್ಷಿ, ಎಎಸ್ಐ ನೀಲಕಂಠಪ್ಪ, ಶಶಿಕಾಂತ್ ರಾಥೋಡ್ ಮತ್ತು ಸಿಬ್ಬಂದಿ ಇದ್ದು, ಪ್ರಕರಣ ಗಳನ್ನು ಸವಾಲಾಗಿ ಸ್ವೀಕರಿಸಿ ಬೇಧಿಸಿದ್ದಾರೆ ಎಂದು ತಿಳಿಸಿದ್ದಾರೆ.