
ಕರುಣೆಯ ಆರ್ದತೆಯನ್ನು ಸೃಷ್ಟಿಸುವ ಶಕ್ತಿ ಸಾಹಿತ್ಯಕ್ಕಿದೆ
ಹಿರಿಯ ಸಾಹಿತಿ ಡಾ. ಹೆಚ್. ಎಸ್. ಸತ್ಯನಾರಾಯಣ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 05- ಸಾಹಿತ್ಯವು ಧರ್ಮಗಳನ್ನು ಮೀರಿದ ಆರ್ದತೆಯನ್ನು ಸೃಷ್ಟಿಸುತ್ತದೆ ಕರುಣೆಯ ಆರ್ದತೆಯನ್ನು ಸೃಷ್ಟಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಚಿಕ್ಕಮಗಳೂರಿನ ಸಾಹಿತಿ ವಿಮರ್ಶಕ ಡಾ. ಹೆಚ್. ಎಸ್. ಸತ್ಯನಾರಾಯಣ ಹೇಳಿದರು.
ಅವರು ರವಿವಾರ ಬಾಲಾಜಿ ಫಂಕ್ಷನ್ ಹಾಲ್ ನಲ್ಲಿ ಜರುಗಿದ ‘ಅಕ್ಬರ್ ಕಾಲಿಮಿರ್ಚಿ : ಸಾಹಿತ್ಯ ಮತ್ತು ಸಾಂಸ್ಕೃತಿಕ ಅನುಸಂಧಾನ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಕ್ಬರ್ ಕಾಲಿಮಿರ್ಚಿ ತಮ್ಮ ಬದುಕಿನ ಕಾಲದ ಮನೋಧರ್ಮಕ್ಕೆ ಅನುಗುಣವಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದು ಅವರ ಸಾಹಿತ್ಯದಲ್ಲಿ ಸ್ಥಳೀಯತೆ ಜೊತೆಗೆ ನೋವು ಹತಾಶೆ ಆಸೆ ಕನಸು ಬದುಕು ಭರವಸೆ ಹೀಗೆ ಅನೇಕ ಸಂವೇದನೆಗಳು ಕೂಡಿದ ಉತ್ತಮ ಸಾರದ ಸಾಹಿತ್ಯ ರಚನೆ ಮಾಡಿದ್ದಾರೆ.
ಕೆಟ್ಟ ಸಾಹಿತ್ಯಿಕ ರಾಜಕಾರಣ ಅಲ್ಲಲ್ಲಿ ಕಾಣುತ್ತೇವೆ. ಇಂಥ ಮನೋಧರ್ಮ ಸರಿಯಲ್ಲ ಇದು ನಿಜವಾದ ಪ್ರತಿಭಾವಂತರಿಗೆ ಮಾರಕ. ಸ್ಥಳೀಯ ಸಾಂಸ್ಕೃತಿಕ ಬಳಗ ನಿರ್ಮಾಣಕ್ಕೆ ಇಂಥ ಕಾರ್ಯಕ್ರಮ ಅವಶ್ಯ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕ ಹನುಮಂತಪ್ಪ ಉಪ್ಪಾರ ರಚಿಸಿದ ‘ಅರಳುವ ಹೂಗಳು’ ಮಕ್ಕಳ ಕವನ ಸಂಕಲನವನ್ನು ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ವೀರಣ್ಣ ನಿಂಗೋಜಿ ಮಾತನಾಡಿ ಕಾಲಿಮಿರ್ಚಿಯವರ ಸಾಹಿತ್ಯದ ಸಾಧನೆಯ ಅನುಸಂಧಾನ ಮೂಲಕ ಅವರನ್ನು ಗೌರವಿಸುವ ಇಂಥ ಸಮಾರಂಭ ಮಹತ್ವಪೂರ್ಣ ಎಂದು ಹೇಳುತ್ತ ಕಾಲಿಮಿರ್ಚಿ ಮತ್ತು ತಮ್ಮ ಸಾಹಿತ್ಯ ಮತ್ತು ಯುವ ಸಂಘಟನೆಯ ದಿನಗಳ ನೆನಪು ಮೆಲುಕು ಹಾಕಿದರು.
ಪ್ರಾಧ್ಯಾಪಕ ಶರಣಬಸಪ್ಪ ಬಿಳಿಎಲೆ ಆಶಯ ಭಾಷಣ ಮಾಡಿದರು.ವೇದಿಕೆಯಲ್ಲಿ ಸಾಹಿತಿ ಮಹಾಂತೇಶ ಮಲ್ಲನಗೌಡರ, ನಾಗಭೂಷಣ ಅರಳಿ, ಪ್ರಾ.ಶಾ.ಶಿ.ಸಂ.ಜಿಲ್ಲಾ ಅಧ್ಯಕ್ಷ ಶರಣಬಸನಗೌಡ ಪಾಟೀಲ್, ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ, ವಿಮಲಾ ಇನಾಂದಾರ, ಕೊಪ್ಪಳ ತಾಲೂಕು ಕಸಾಪ ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ ಉಪಸ್ಥಿತರಿದ್ದರು.
ಶೇಖರ ಭಜಂತ್ರಿ ನಿರೂಪಿಸಿದರು ಅನಸೂಯ ಜಹಗೀರದಾರ ಸ್ವಾಗತಿಸಿದರು ವೀರನಗೌಡ ಪಾಟೀಲ ವಂದಿಸಿದರು.