05ca78b6-6d2b-4a2f-85a4-84fbd724ce8e-231x300

ಕೊಳಕುಮಂಡಲ ಹಾವಿನ ಸುತ್ತ‌ : ವೀಣಾ ಪಟೀಲ್

ಕರುನಾಡ ಬೆಳಗು ಸುದ್ದಿ

ಅದೊಂದು ಮಧ್ಯರಾತ್ರಿಯ ಸಮಯ ನಮ್ಮ ಮನೆಯ ಸಾಕು ನಾಯಿ ಬಂಟಿ ಒಂದೇ ಸಮನೆ ಬೊಗಳಲಾರಂಭಿಸಿತು. ನಿದ್ದೆಗಣ್ಣಿನಲ್ಲಿದ್ದ ನಾವು ದಂಪತಿಗಳು ಒಬ್ಬರ ನಂತರ ಒಬ್ಬರು ಏ ಬಂಟಿ ಸುಮ್ನೆ ಮಲ್ಕೋ ಅಂತ ಹೇಳಿ ಮತ್ತೆ ಮಲಗಿದೆವು. ಆದರೆ ಬಂಟಿಯ ಬೊಗಳುವಿಕೆ ನಿಲ್ಲಲೇ ಇಲ್ಲ, ಅದರ ಜೊತೆಗೆ ಜೋರಾಗಿ ಕುಕ್ಕರ್ ಕೂಗಿದಂತಹ ಶಬ್ದ. ಇಷ್ಟೊತ್ತಲ್ಲಿ ಯಾರೋ ಕುಕ್ಕರ್ ಇಟ್ಟು ಅಡುಗೆ ಮಾಡ್ತಿದ್ದಾರೆ ಅದೆಂತ ಜನ ಅಂತ ಗೊಣಗುತ್ತ ನಾನು ಮಗ್ಗಲು ಬದಲಿಸಿದೆ. ಅದೇನೇ ಮಾಡಿದರೂ ನಾಯಿಯ ಬೊಗಳುವಿಕೆ ನಿಲ್ಲದೆ ಹೋದಾಗ ನಾನು ಮತ್ತು ನನ್ನ ಪತಿ ಮನೆಯ ಹೊರ ಬಾಗಿಲನ್ನು ತೆರೆದು ಲೈಟ್ ಹಾಕಿ ನೋಡಲು ನಾಯಿಯ ಬೊಗಳುವಿಕೆ ನಿಂತು ಹೋಯಿತು. ಅಲ್ಲೆಲ್ಲ ಹುಡುಕಾಡಿದ ನಾವು ಏನೂ ಇಲ್ಲ ಸುಮ್ಮನೆ ಬೊಗಳುತ್ತಿದೆ ಎಂದು ಬಂಟಿಯನ್ನು ಬೈದು ಸುಮ್ಮನೆ ಮಲಗಲು ಹೇಳಿ ಒಳಬಂದು ಮಲಗಿಕೊಂಡೆವು. ಮತ್ತೆ ಕೆಲವೇ ಸೆಕೆಂಡುಗಳಲ್ಲಿ ಬಂಟಿ ಬೊಗಳಲು ಆರಂಭಿಸಿತು. ಈ ಬಾರಿ ನಾನು ಹೊರಗೆ ಹೋಗದೆ ಸಿಸಿಟಿವಿ ಕ್ಯಾಮೆರಾದಲ್ಲಿ ನೋಡೋಣ ಎಂದು ಮನೆಯ ಟಿವಿ ಆನ್ ಮಾಡಿ ನೋಡಿದರೆ ಮೆಟ್ಟಿಲನ್ನು ದಾಟಿ ಸ್ವಲ್ಪ ಮುಂದೆ ಹಾವೊಂದು ಸುರಳಿ ಸುತ್ತಿ ಕೂತಿದೆ. ಅದನ್ನು ಎಲ್ಲೂ ಮಿಸುಕಾಡದಂತೆ ಬಂಟಿ ಕಾವಲು ಕಾಯುತ್ತಾ ಒಂದೇ ಸಮ ಬೊಗಳಿ ನಮ್ಮ ಗಮನವನ್ನು ಸೆಳೆಯುತ್ತಿತ್ತು. ನಾವು ಇದುವರೆಗೆ ಕೇಳುತ್ತಿದ್ದ ಕುಕ್ಕರ್ ನ ಶಬ್ದ ಹಾವಿನ ಬುಸುಗುಟ್ಟುವಿಕೆ ಆಗಿತ್ತು.ಮಾರುದ್ದದ ಹಾವನ್ನು ನೋಡಿ ಬಂಟಿಯನ್ನು ಕಟ್ಟೆಯ ಮೇಲೆ ಕರೆದು ಗೇಟ್ ಹಾಕಿದೆವು. ಮುಂದಿನ ಸರದಿ ಹಾವನ್ನು ಹಿಡಿಸಿ‌ ದೂರ ಬಿಟ್ಟು ಬರುವುದು.

ಕೂಡಲೇ ತನ್ನ ಕೋಣೆಯಲ್ಲಿ ಮಲಗಿದ್ದ ಮಗನನ್ನು ಕರೆದು ಹೇಳಿದಾಗ ಆತ ನಮ್ಮ ಕೆಲಸದ ಹುಡುಗರನ್ನು ಎಬ್ಬಿಸಿದ. ಜೊತೆಗೆ ಗೊತ್ತಿರುವ ಇನ್ನೋರ್ವ ವ್ಯಕ್ತಿಗೆ ಕರೆ ಕಳುಹಿಸಿದರು. ನಮ್ಮ ಕೆಲಸದ ಹುಡುಗನ ಸ್ನೇಹಿತನೊಬ್ಬ ಹಾವು ಹಿಡಿಯುತ್ತಿದ್ದನು. ಆತನ ಪಾಲಕರಿಗೆ ಈ ವಿಷಯ ಗೊತ್ತಿಲ್ಲದೆ ಇರುವುದರಿಂದ ಆತನಿಗೆ ಕರೆ ಮಾಡಿ ಬರಲು ಹೇಳಿದರು. ಮುಂದೆ ಕೆಲವೇ ನಿಮಿಷಗಳಲ್ಲಿ ಆ ಹಾವು ಹಿಡಿಯುವ ವ್ಯಕ್ತಿ ನಮ್ಮಮನೆಗೆ ಬಂದನು. ಇದಿಷ್ಟು ಹೊತ್ತು ನಮಗೆ ಹಾವಿನ ಭಯಕ್ಕಿಂತ ಅದರ ಜೋರಾದ ಉಸಿರ್ಗರೆಯುವಿಕೆಯಿಂದ ಆಗುತ್ತಿತ್ತು. ತನ್ನ ಪ್ರಾಣವನ್ನು ಉಳಿಸಿಕೊಳ್ಳುವ ಭರದಲ್ಲಿ ನಾಯಿಯನ್ನು ತನ್ನ ಹತ್ತಿರವೂ ಬಿಟ್ಟುಕೊಳ್ಳದೆ ಜೋರಾಗಿ ಬಸುಗುಡುತ್ತಿದ್ದ ಹಾವಿನ ಶಬ್ದ ಸುಮಾರು 40 ರಿಂದ 50 ಅಡಿ ದೂರ ಕೇಳಿಸುತ್ತಿತ್ತು.

ಹಾವು ಹಿಡಿಯಲು ಬಂದ ಯುವಕ ಒಂದು ಚೀಲವನ್ನು ಒಂದು ಉದ್ದನೆಯ ಮತ್ತು ಒಂದು ಚಿಕ್ಕ ಕೋಲನ್ನು ಕೇಳಿ ಪಡೆದನು. ಅದರ ಜೊತೆಗೆ ಚೀಲದ ಬಾಯಿ ಬಿಗಿಯಲು ಹುರಿಯನ್ನು ಕೂಡ. ಇಷ್ಟು ಹೊತ್ತಿಗೆ ಆ ಹಾವು ಕಾಂಪೌಂಡಿನ ಒಂದು ಬದಿಗೆ ಸಾಲಾಗಿ ಇಟ್ಟಿರುವ ಹೂವಿನ ಕುಂಡಗಳ ಹಿಂದೆ ಹೊರಟು ಹೋಗಿತ್ತು. ಆದರೆ ಹಾವಾಡಿಗನ ಚಾಲಾಕಿತನದಿಂದ ನಿಧಾನವಾಗಿ ಹಿಂದೆ ಹಿಂದೆ ಸರಿಯುತ್ತಾ ಇತ್ತು. ಇದೀಗ ನಾನು ಹಾವು ಹಿಡಿಯಲು ಸಿದ್ಧನಾಗುತ್ತಿದ್ದ ಆ ಯುವಕನನ್ನು ಆ ಹಾವಿನ ಕುರಿತು ಕೇಳಲು ಆತ ಅದೊಂದು ಕೊಳಕು ಮಂಡಲ ಹಾವು ನಮ್ಮ ಭಾಗದಲ್ಲಿ ಅಷ್ಟಾಗಿ ಕಾಣ ಸಿಗದ ಅಪರೂಪದ ಹಾವೆಂದು, ದೊಡ್ಡ ದೊಡ್ಡ ಕಾಡುಗಳಲ್ಲಿ ಮಾತ್ರವೇ ವಾಸಿಸುತ್ತದೆ ಎಂದು ಹೇಳಿದನು.

ಕೊಳಕುಮಂಡಲ ಎಂಬ ಹೆಸರು ಕೇಳುತ್ತಲೇ ನಾನು ಭಯದಿಂದ ಈ ಹಿಂದೆ ಎಲ್ಲೋ ಓದಿದ ನೆನಪಿನ ಮೇಲೆ ಈ ಹಾವು ಕಚ್ಚಿದ ಭಾಗಕ್ಕೆ ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಗ್ಯಾಂಗ್ರಿನ್ ಆಗುತ್ತದೆ ಅಲ್ವೇ ಅಂತ ಕೇಳಿದೆ. ಅದಕ್ಕೆ ಹೌದೆಂದು ಹೇಳಿದ ಆ ಯುವಕ ಅತ್ಯಂತ ವಿಷಕಾರಿಯಾದ ಈ ಹಾವು ರಾತ್ರಿ ಸಮಯದಲ್ಲಿ ಹೆಚ್ಚು ಚಟುವಟಿಕೆಯಿಂದ ಇರುತ್ತದೆ. ನಾಗರ ಹಾವಿನಂತೆಯೇ ಈ ಹಾವು ಕೂಡ ಅತ್ಯಂತ ವಿಷಕಾರಿ. ಈ ಹಾವು ಕಡಿಯುವುದರಿಂದ ಕೂಡ ಸಾವು ಸಂಭವಿಸುತ್ತದೆ ಎಂದು ಹೇಳಿದನು.

ಆದರೆ ಜೀವ ಭಯದಿಂದ ಜೋರಾಗಿ ಬಸುಗುಡುತ್ತಿರುವ ಹಾವಿನ ಶಬ್ದದಿಂದ ವಿಚಲಿತರಾದ ನಮ್ಮನ್ನೆಲ್ಲ ದೂರ ಸರಿಯಲು ಹೇಳಿದನು. ನನ್ನ ಮಗ ಮತ್ತಿಬ್ಬರು ಕೆಲಸದವರು ಕಾಂಪೌಂಡಿನ ಮೇಲೆ ಹತ್ತಿ ಕುಳಿತರೆ, ನಾನು ಮತ್ತು ನನ್ನ ಪತಿ ನಮ್ಮ ನಾಯಿ ಬಂಟಿಯೊಂದಿಗೆ ಕಟ್ಟೆಯ ಮೇಲೆ ಕಟಾಂಜನದ ಒಳಗೆ ಇದ್ದೆವು. ಹೂವಿನ ಕುಂಡದ ಒಂದು ಬದಿ ಚೀಲದ ಬಾಯಿಯನ್ನು ಅಗಲಿಸಿ ಅದಕ್ಕೆ ಸಣ್ಣಕೋಲನ್ನು ಓರೆಯಾಗಿ ಇಟ್ಟ ಯುವಕ ಮತ್ತೊಂದು ಬದಿಯಿಂದ ದೊಡ್ಡದೊಂದು ಕೋಲನ್ನು ತೆಗೆದುಕೊಂಡು ಶಬ್ದ ಮಾಡಲಾರಂಭಿಸಿದ. ದೊಡ್ಡ ಕೋಲಿನ ಶಬ್ದಕ್ಕೆ ನಿಧಾನವಾಗಿ ತನ್ನ ಸುರುಳಿಯಾಕಾರವನ್ನು ಬಿಚ್ಚಿ ಇನ್ನೊಂದೆಡೆ ನಿಧಾನವಾಗಿ ಸರಿಯಲಾರಂಭಿಸಿತು ಹಾವು.

ಹಾಗೆಯೇ ಸರಿಯುತ್ತಾ ಹೋಗಿ ಕೊನೆಗೆ ಚೀಲದೊಳಗೆ ಹಾವು ಹೋದ ಕೂಡಲೇ ಚೀಲದ ಬಾಯಿಯ ಹೊರಗೆ ಕೋಲನ್ನು ಚೀಲದ ಅರ್ಧ ಭಾಗಕ್ಕೆ ಅಡ್ಡಲಾಗಿಟ್ಟ ಆ ಯುವಕ ತನ್ನ ಎರಡು ಕಾಲುಗಳನ್ನು ಅಗಲಿಸಿ ಆ ಕೋಲುಗಳ ಮೇಲೆ ಇಟ್ಟು ನಿಧಾನವಾಗಿ ಚೀಲದ ತುದಿಯನ್ನು ಸುರುಳಿ ಸುತ್ತುತ್ತಾ ಕೊನೆಗೆ ಹುರಿಯಿಂದ ಕಟ್ಟಿದನು. ಕೂಡಲೇ ನಾನು ಮತ್ತೊಂದು ಗೊಬ್ಬರದ ಚೀಲವನ್ನು ತಂದು ಆತನ ಕೈಗಿಟ್ಟೆ. ತಾನು ಈಗಾಗಲೇ ಗೋಣಿಚೀಲದಲ್ಲಿ ಹಿಡಿದಿಟ್ಟ ಹಾವನ್ನು ಮತ್ತೆ ಚೀಲದ ಸಮೇತ ಗೊಬ್ಬರದ ಚೀಲಕ್ಕೆ ಹಾಕಿ ಗಂಟು ಕಟ್ಟಿ ಕಪ್ಪತ್ತಗುಡ್ಡದಲ್ಲಿ ಬಿಡಲು ತೆಗೆದುಕೊಂಡು ಹೋದನು.

ಈ ಹಿಂದೆ ನಮ್ಮ ಮನೆಯ ಸುತ್ತ ಆಗಾಗ ಸಣ್ಣಪುಟ್ಟ ಹಾವುಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿತ್ತು ನಿಜ ಆದರೆ ಈ ರೀತಿಯ ಅಪರೂಪದ ಹಾವನ್ನು ನೋಡಿದ್ದು ಇದೇ ಮೊದಲು. ಅಂದು ತಡಸಂಜೆಯವರೆಗೆ ಮನೆಯ ಪಕ್ಕದಲ್ಲಿ ಬೆಳೆಸಿರುವ ಉದ್ಯಾನದಲ್ಲಿ ಗಿಡಗಳಿಗೆ ನೀರು ಹಾಕುತ್ತಾ ಇದ್ದ ನನಗೆ ಹಾವು ಸಂಜೆಯೇ ಹುಲ್ಲಿನ ಹಾಸಿನ ಬಳಿ ಬಂದಿರಬಹುದು ಎಂಬ ಶಂಕೆಯನ್ನು ಅವರೆಲ್ಲ ವ್ಯಕ್ತಪಡಿಸಿದಾಗ ಆತಂಕದಿಂದ ತುಸು ಮೈ ನಡುಗಿತು.

ಆದರೆ ಅದರ ತಂಟೆಗೆ ಹೋಗದೆ ಇದ್ದರೆ ಹಾವು ಯಾರಿಗೂ ಏನನ್ನು ಮಾಡುವುದಿಲ್ಲ ಎಂದು ಹೇಳಿದ ಆ ಯುವಕನ ಮಾತನ್ನು ನೆನೆಯುತ್ತಾ ಈಗಾಗಲೇ ವಯಸ್ಸಾಗಿರುವ ನಮ್ಮ ಬಂಟಿಯ ಚುರುಕುತನವನ್ನು ಹೊಗಳುತ್ತಾ ಎಲ್ಲರೂ ಮತ್ತೆ ನಿದ್ದೆಗೆ ಜಾರಿದೆವು.

ವೀಣಾ ಹೇಮಂತ್ ಗೌಡ ಪಾಟೀಲ್,

ಮುಂಡರಗಿ. ಗದಗ್

 

Leave a Reply

Your email address will not be published. Required fields are marked *

error: Content is protected !!