WhatsApp Image 2024-03-18 at 4.40.20 PM

ಕ್ಷಯಮುಕ್ತ ಜಿಲ್ಲೆಗೆ ಎಲ್ಲರೂ ಶ್ರಮಿಸೋಣ : ಡಿಹೆಚ್‍ಓ ಡಾ.ವೈ.ರಮೇಶ್‍ಬಾಬು

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,18- ಶತಮಾನಗಳಿಂದಲೂ ಸಮುದಾಯದಲ್ಲಿ ಇರುವ ಕ್ಷಯರೋಗವನ್ನು ನಿರ್ಮೂಲನೆ ಮಾಡಲು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಪ್ರತಿಯೊಬ್ಬ ಸಾರ್ವಜನಿಕರೂ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್), ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಸ್ಪತ್ರೆ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಘಟಕ ಇವರ ಸಹಯೋಗದಲ್ಲಿ “ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಕ್ಷಯರೋಗವು ಸಂಪೂರ್ಣವಾಗಿ ಮರೆಯಾಗುವುದು” ಎಂಬ ಘೋಷವಾಕ್ಯದಡಿ ವಿಮ್ಸ್‍ನಿಂದ ಜಿಲ್ಲಾ ಆಸ್ಪತ್ರೆವರೆಗೆ ಭಾನುವಾರ ಹಮ್ಮಿಕೊಂಡಿದ್ದ ಕ್ಷಯರೋಗ ಜಾಗೃತಿಗಾಗಿ 5 ಕಿ.ಮೀ ಮ್ಯಾರಾಥಾನ್ ಓಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮೈಕ್ರೋ ಬ್ಯಾಕ್ಟೀರಿಯಂ ಟ್ಯೂಬರ್‍ಕ್ಯುಲೋಸಿಸ್ ಎಂಬ ರೋಗಾಣುನಿಂದ ಹರಡಲಿದ್ದು, ಯಾರಿಗಾದರೂ ಎರಡು ವಾರಗಳಿಗಿಂತ ಹೆಚ್ಚು ದಿನದ ಕೆಮ್ಮು, ಉಸಿರಾಟದಲ್ಲಿ ತೊಂದರೆ, ಸಂಜೆ ವೇಳೆ ಜ್ವರ, ರಾತ್ರಿ ವೇಳೆ ಮೈ ಬೆವರುವುದು, ಕಫದಲ್ಲಿ ರಕ್ತ ಬೀಳುವುದು, ಎದೆ ನೋವು, ಹಸಿವಾಗದಿರುವುದು, ತೂಕ ಇಳಿಕೆ, ರೋಗದ ಪ್ರಮುಖ ಲಕ್ಷಣಗಳು ತಮ್ಮ ಗಮನಕ್ಕೆ ಬಂದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ, ಕಫ ಪರೀಕ್ಷೆ ಮಾಡಿಸುವ ಮೂಲಕ ರೋಗವನ್ನು ಬೇಗನೆ ಪತ್ತೆ ಹಚ್ಚಲು ಸಹಕರಿಸಬೇಕು ಎಂದರು.

ಒಮ್ಮೆ ಕ್ಷಯರೋಗ ಪತ್ತೆಯಾದರೆ ಅವರ ಚಿಕಿತ್ಸಾ ಅವಧಿಯು ಮುಗಿಯುವವರೆಗೆ ಮೇಲ್ವಿಚಾರಣೆ, ರೋಗಿಗೆ ಬೆಂಬಲ ಹಾಗೂ ದಾನಿಗಳಿಂದ ಪೌಷ್ಟಿಕ ಆಹಾರ ಒದಗಿಸಲಾಗುವುದು. ಅದರಲ್ಲೂ ಮಕ್ಕಳಿಗೆ ಕ್ಷಯರೋಗ ಇದ್ದಲ್ಲಿ ಪಾಲಕರ, ಸುತ್ತಲಿನ ಮನೆಗಳ ಮತ್ತು ಮಗುವಿಗೆ ಒಡನಾಟವಿರುವವರ ಪರೀಕ್ಷೆ ಮಾಡಲು ಕ್ರಮವಹಿಸಬೇಕು. ಈ ದಿಶೆಯಲ್ಲಿ ವೈದ್ಯ ವಿದ್ಯಾರ್ಥಿಗಳು ತಾವು ಮುಂದೆ ಬರಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಮಾತನಾಡಿ, ರೋಗ ಖಚಿತ ಪಟ್ಟವರನ್ನು ಚಿಕಿತ್ಸೆ ಮುಗಿಯುವವರೆಗೂ ಮೇಲ್ವಿಚಾರಣೆ ಕೈಗೊಳ್ಳಲಾಗುವುದು. ಚಿಕಿತ್ಸೆ ನಿರ್ಲಕ್ಷಿಸಿದಲ್ಲಿ ರೋಗಿಯು ಬಹುಔಷಧಿ ರೋಗ ನಿರೋಧಕ ಕ್ಷಯರೋಗಿಯಾಗಿ ಎರಡು ವರ್ಷಗಳ ಕಾಲ ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದು ಮನನ ಮಾಡಿದರು.

ವೈದ್ಯ ವೃತ್ತಿ ಮಾಡುವವರು ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಅತ್ಯಂತ ಅಪಾಯಕಾರಿ ಸನ್ನಿವೇಶಕ್ಕೆ ಒಳಗಾಗುತ್ತಾರೆ. ಈ ಹಿನ್ನಲೆ ಮುಂಜಾಗೃತೆ ವಹಿಸಿ ಯಾರಾದರೂ ಚಿಕಿತ್ಸೆ ಪಡೆಯಲು ನಿರಾಕರಿಸಿದರೆ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಚಿಕಿತ್ಸೆ ಪೂರ್ಣಗೊಳಿಸಬೇಕು. ಮುಖ್ಯವಾಗಿ ಕ್ಷಯರೋಗವನ್ನು ಸಾಮಾನ್ಯ ಖಾಯಿಲೆ ಎಂಬ ರೀತಿಯಲ್ಲಿ ಕಾಣುವ ಮೂಲಕ ಕಳಂಕ- ತಾರತಮ್ಯವನ್ನು ತೊಲಗಿಸುವ ಪ್ರಯತ್ನವನ್ನು ಮಾಡಬೇಕು ಎಂದು ವಿನಂತಿಸಿದರು.

ಕ್ಷಯರೋಗ ನಿರ್ಮೂಲನೆಗೆ ಹಮ್ಮಿಕೊಂಡಿದ್ದ 5 ಕಿ.ಮೀ. ಮ್ಯಾರಾಥಾನ್ ಓಟಕ್ಕೆ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಮೈಕ್ರೋ ಬಯೋಲಜಿ ವಿಭಾಗದ ಮುಖ್ಯಸ್ಥರಾದ ಡಾ.ಕೃಷ್ಣ ಅವರು ವಿಮ್ಸ್ ಆವರಣದಲ್ಲಿ ಚಾಲನೆ ನೀಡಿದರು.

ಓಟವು ವಿಮ್ಸ್‍ನಿಂದ ಆರಂಭವಾಗಿ ಸುಧಾ ವೃತ್ತದ ಮೂಲಕ ಹೆಚ್.ಆರ್.ಗವಿಯಪ್ಪ ವೃತ್ತದ ಮಾರ್ಗವಾಗಿ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಗಡಿಗಿ ಚೆನ್ನಪ್ಪ ವೃತ್ತದ ಮಾರ್ಗವಾಗಿ ಬಂದು ಜಿಲ್ಲಾ ಆಸ್ಪತ್ರೆಯ ಆವರಣಕ್ಕೆ ಆಗಮಿಸಿ ಮುಕ್ತಾಯಗೊಂಡಿತು.

ಮ್ಯಾರಾಥಾನ್ ಓಟದಲ್ಲಿ ವಿಜೇತರ ಪಟ್ಟಿ:
ಮಹಿಳಾ ವಿಭಾಗದಲ್ಲಿ ಡಾ.ವಂದನಾ, ಡಾ.ನಿಸರ್ಗ, ಡಾ.ರಂಜೀತಾ ಪಾಟೀಲ್.
ಪುರುಷರು ವಿಭಾಗದಲ್ಲಿ ಡಾ.ಜೈಕುಮಾರ್.ಟಿ, ಡಾ.ಅಖೀಲ್, ಡಾ.ಮಲ್ಲನಗೌಡ.

ಈ ಸಂದರ್ಭದಲ್ಲಿ ವಿಮ್ಸ್ ತಜ್ಞ ವೈದ್ಯರಾದ ಡಾ.ಮಲ್ಲಿಕಾರ್ಜುನ, ಡಾ.ರಘುವೀರ, ಡಾ.ಅನೀಲಕುಮಾರ ಜೋಸೆಫ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ವೈದ್ಯ ವಿದ್ಯಾರ್ಥಿ ಸಂಘದ ಡಾ.ಲೋಕೇಶ್, ಡಾ.ಗೌರಿ, ಡಾ.ಪ್ರಸನ್ನ, ಡಾ.ಸಂತೋಷ ಹಾವೇರಿ, ಕ್ಷಯರೋಗ ಕಾರ್ಯಕ್ರಮದ ವಿಭಾಗದ ಪಂಪಾಪತಿ, ಓಬಳರೆಡ್ಡಿ, ಬಸವರಾಜ ರಾಜಗುರು, ಪ್ರದೀಪ್, ಚಂದ್ರಶೇಖರ, ಅಂದಾನಪ್ಪ ಅಂಡಿಗೇರಿ, ರಾಮಾಂಜನೇಯಲು, ವೀರೇಶ್ ಸೇರಿದಂತೆ ನೂರಾರು ವೈದ್ಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!