ಗ್ರಾಮೀಣಾಭಿವೃದ್ಧಿ ಆಯುಕ್ತರಿಂದ ನರೇಗಾ ಕಾಮಗಾರಿಗಳ ಪರಿಶೀಲನೆ (1)

ಗ್ರಾಮೀಣಾಭಿವೃದ್ಧಿ ಆಯುಕ್ತರಿಂದ ನರೇಗಾ ಕಾಮಗಾರಿಗಳ ಪರಿಶೀಲನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 20- 2023-24 ಹಾಗೂ 2024-25ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಮತ್ತು ಅನುಷ್ಠಾನಗೊಳ್ಳುತ್ತಿರುವ ಬಹದ್ದೂರಬಂಡಿ, ಬಿಸರಳ್ಳಿ, ಕೋಳೂರು ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿ ಸ್ಥಳಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಆಯುಕ್ತರಾದ ಪವನ್ ಕುಮಾರ್ ಮಾಲಪಾಟಿ ಅವರು ಶನಿವಾರದಂದು ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ಮಾಡಿದರು.

ಬಹದ್ದೂರಬಂಡಿ ಗ್ರಾಮ ಪಂಚಾಯತ್ ವತಿಯಿಂದ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಹೂವಿನಾಳ ರಸ್ತೆಯ ಬದಿ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿ ಕೆಲಸ, ಕಾರ್ಯನಿರ್ವಹಣೆ ಕುರಿತು ಪರಿಶೀಲಿಸಿದರು.

ಸ್ಥಳದಲ್ಲಿದ್ದ ಕೂಲಿಕಾರರ ಜೊತೆಗೆ ಕುಟುಂಬದ ಸದಸ್ಯರು ಕೆಲಸಕ್ಕೆ ಕಳೆದ ಸಾಲಿನಲ್ಲಿ ಹಾಗು ಪ್ರಸಕ್ತದಲ್ಲಿ ಕೆಲಸ ನಿರ್ವಹಿಸಿದ ಬಗ್ಗೆ ಚರ್ಚಿಸಿದರು. ಜಾಬ್‌ಕಾರ್ಡಗಳಲ್ಲಿ ಕೂಲಿ ಕೆಲಸ ನಿರ್ವಹಿಸಿದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಪಡೇಟ್ ಮಾಡತಕ್ಕದ್ದು. ಇದರಿಂದ ಕೂಲಿಕಾರರಿಗೆ ವರ್ಷದಲ್ಲಿ ಎಷ್ಟು ದಿನಗಳ ಕೂಲಿ ಕೆಲಸ ನಿರ್ವಹಿಸಿದ್ದೇವೆ ಹಾಗು ಎಷ್ಟು ಕೂಲಿ ಹಣ ಪಾವತಿಯಾಗಿದೆ ಎಂಬುದರ ಸಂಪೂರ್ಣ ಮಾಹಿತಿ ತಿಳಿಯುತ್ತದೆ.

ಮೆಟ್ ಗಳು ನಿಮ್ಮ ಕೂಲಿಕಾರರಿಗೆ ಅಳತೆ ಕುರಿತು ಸರಿಯಾಗಿ ಮಾಹಿತಿ ನೀಡಿರಿ. ಇದರಿಂದ ಅವರಿಗೂ ಕೂಡಾ ಅಳತೆಯ ಬಗ್ಗೆ ತಿಳಿಯುತ್ತದೆ ಎಂದ ಅವರು, ನಾಲಾ ಹೂಳೆತ್ತುವ ಕಾಮಗಾರಿಯ ಕಡತದ ಅಂದಾಜು ಪತ್ರಿಕೆಯಲ್ಲಿ ಅಳವಡಿಸಿಕೊಂಡಿರುವ ಮಾಹಿತಿಯನ್ನು ಪರಿಶೀಲಿಸಿದರು.

ಬೇಸಿಗೆ ಇರುವುದರಿಂದ ನಿರಂತರವಾಗಿ ಕೂಲಿಕಾರರಿಗೆ ಕೂಲಿ ಕೆಲಸ ಲಭ್ಯವಿದೆ. ಆ ಕಾರಣಕ್ಕಾಗಿ ಗ್ರಾಮ ಪಂಚಾಯತಿಯಿಂದ ಕ್ರಮವಹಿಸಲು ಸೂಚಿಸಿದರು. ಕಾಯಕ ಬಂಧುಗಳು ನಿರಂತರವಾಗಿ ಕಾಲ ಕಾಲಕ್ಕೆ ಮಾಹಿತಿ ನೀಡಬೇಕೆಂದು ಸೂಚಿಸಿದರು.

ಸಾಮಾಜಿಕ ಅರಣ್ಯ ಇಲಾಖೆಯಿಂದ ಬಿಸರಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಸರಳ್ಳಿ ಗ್ರಾಮದಿಂದ ಬಿಕನಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಬದಿ ನೆಡುತೋಪು ಅನುಷ್ಠಾನಗೊಳಿಸಿರುವ ಕಾಮಗಾರಿಯನ್ನು ವೀಕ್ಷಿಸಿದರು. ನೆಡುತೋಪುಗಳ ರಕ್ಷಣೆ ಬಹು ಮುಖ್ಯವಾದುದು. ಹೆಚ್ಚು ಹೆಚ್ಚು ನೆಡುತೋಪು ಕಾಮಗಾರಿಗಳನ್ನು ಅನುಷ್ಠಾನಿಸಬೇಕೆಂದು ಸೂಚಿಸಿದರು.

ಬಿಕನಳ್ಳಿ ಗ್ರಾಮದ ರೈತ ಬಸವರೆಡ್ಡಿ ಬಸವರಡ್ಡೇರ ಇವರು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಬಾಳೆ ತೋಟವನ್ನು 2023 ಜೂನ್ ನಲ್ಲಿ ಅನುಷ್ಠಾನಿಸಿದ್ದು ಅವರಿಗೆ ಕೂಲಿ, ಸಾಮಗ್ರಿ ಹಣ ಪಾವತಿಯಾಗಿರುವ ಬಗ್ಗೆ ರೈತರಿಂದ ಮಾಹಿತಿ ಪಡೆದರು. ವೈಯಕ್ತಿಕ ಸೌಲಭ್ಯ ಪಡೆಯಲು ರೂ.5.00ಲಕ್ಷ ದವರೆಗೆ ಅವಕಾಶ ಇರುವುದರಿಂದ ದಾಳಿಂಬೆ ಇತ್ಯಾದಿಗಳನ್ನು ನರೇಗಾದಡಿ ಅನುಷ್ಠಾನಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ಸ್ಥಳದಲ್ಲಿದ್ದ ರೈತ ಬಸವರಡ್ಡಿಗೆ ತಿಳಿಸಿದರು. ರೈತರಿಗೆ ಅವಕಾಶ ಇರುವ ಕಡೆ ಹೆಚ್ಚು ದಾಳಿಂಬೆ ತೋಟ ನಿರ್ಮಿಸಿಕೊಳ್ಳಲು ರೈತರಿಗೆ ಪ್ರೇರಣೆ ಮಾಡಬೇಕೆಂದು ಸ್ಥಳದಲ್ಲಿ ಹಾಜರಿದ್ದ ತೋಟಗಾರಿಕೆ ಉಪನಿರ್ದೇಶಕರು ಹಾಗೂ ಹಿರಿಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.

2023-24 ಮತ್ತು 2024-25ನೇ ಸಾಲಿನಲ್ಲಿ ಕೋಳೂರು ಗ್ರಾಮ ಪಂಚಾಯತಿಯಿಂದ ಕಾಟರಳ್ಳಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ಶೌಚಾಲಯ, ಅಡುಗೆ ಕೋಣೆ ಇತ್ಯಾದಿ ಶಾಲಾಭಿವೃದ್ದಿ ಕಾಮಗಾರಿಗಳನ್ನು, ಸ್ಥಳದಲ್ಲಿ ಕಾಮಗಾರಿಗೆ ಬಳಕೆ ಮಾಡಿಕೊಂಡಿರುವ ಬಗ್ಗೆ ಕಡತದಲ್ಲಿನ ಐಟಂವಾರು ದಾಖಲಾತಿಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಆಯುಕ್ತಾಲಯದ ಜಂಟಿ ನಿರ್ದೇಶರಾದ( ತೋಟಗಾರಿಕೆ) ಶ್ರೀಶೈಲ ದಿಡ್ಡಿಮನಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಕರಾದ ಕೃಷ್ಣ ಉಕ್ಕುಂದ, ರಾಜ್ಯ ಯೋಜನಾ ಅಭಿಯಂತರರಾದ ಯಶವಂತ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಂಕ್ರಪ್ಪ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಗುರನಗೌಡ, ಜಿಲ್ಲಾ ಪಂಚಾಯತಿ ಎಡಿಪಿಸಿ ಮಹಾಂತಸ್ವಾಮಿ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ಎಂಐಎಸ್ ಸಂಯೋಜಕ ಮೈನುದ್ದೀನ್, ತಾಲೂಕ ನರೇಗಾ ಸಿಬ್ಬಂದಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಹಾಯಕರು, ಬೇರ್ ಪೂಟ್ ಟೆಕ್ನಿಷಿಯನ್‌ಗಳು, ಗ್ರಾಮ ಕಾಯಕ ಮಿತ್ರರು ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.

 

Leave a Reply

Your email address will not be published. Required fields are marked *

error: Content is protected !!