WhatsApp Image 2024-02-27 at 12.49.50 PM

ಚುನಾವಣೆ ಖರ್ಚು ವೆಚ್ಚದ ಮೇಲೆ ನಿಗಾ ವಹಿಸಲು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,27- ಬರುವ ಲೋಕಸಭೆ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯಲು ನಿಗಧಿಪಡಿಸಿರುವ ವೆಚ್ಚದಂತೆ ಅಭ್ಯರ್ಥಿಗಳು ಹಣ ವೆಚ್ಚ ಮಾಡುತ್ತಿರುವ ಬಗ್ಗೆ ತೀವ್ರ ನಿಗಾ ಇಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಚುನಾವಣಾ ಖರ್ಚು ವೆಚ್ಚದ ನಿಗಾ ಕುರಿತು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಆರ್‍ಓ, ಎಇಆರ್‍ಓ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿ ಅವರು ಮಾತನಾಡಿದರು.

ಚುನಾವಣೆ ಕರ್ತವ್ಯವನ್ನು ನಿಷ್ಪಕ್ಷ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವ ಹಿನ್ನೆಲೆಯಲ್ಲಿ ನಿಯೋಜನೆಗೊಂಡ ಎಲ್ಲ ತಂಡಗಳೂ ಖರ್ಚು ವೆಚ್ಚಗಳ ಬಗ್ಗೆ ಗಮನ ವಹಿಸಬೇಕು. ಅಭ್ಯರ್ಥಿಗಳು ಮಾಡುವ ಖರ್ಚು ವೆಚ್ಚಗಳ ಬಗ್ಗೆಯೂ ತೀವ್ರ ನಿಗಾ ಇಡಬೇಕು ಎಂದು ತಾಕೀತು ಮಾಡಿದರು.

ಈ ಬಾರಿಯ ಚುನಾವಣೆಗಾಗಿ ಅಭ್ಯರ್ಥಿಗಳ ಮೂಲಕ ವೆಚ್ಚ ಮಾಡುವ ಹಣದ ಮಿತಿಯನ್ನು ಗರಿಷ್ಠ 95 ಲಕ್ಷ ರೂಪಾಯಿಗೆ ನಿಗದಿಪಡಿಸಿದ್ದು, ನಿಗಧಿಪಡಿಸಿರುವ ಈ ವೆಚ್ಚದ ಖರ್ಚಿನ ಬಗ್ಗೆ ತೀವ್ರ ನಿಗಾ ಇಡುವ ಜತೆಗೆ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ದಾಖಲಿಸಿ ಇಟ್ಟುಕೊಂಡು ಕಾಲಕಾಲಕ್ಕೆ ಈ ಕುರಿತು ವರದಿಯನ್ನು ಕಳುಹಿಸಬೇಕು ಎಂದರು.

ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಬಳಕೆ ಮತ್ತು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಂಡು, ಈ ಕುರಿತು ಸಾಕ್ಷಿಗಾಗಿ ವೀಡಿಯೋ ರೆಕಾರ್ಡಿಂಗ್ ಮಾಡಿಕೊಂಡು ಪರಿಸ್ಥಿತಿಗೆ ಅನುಗುಣವಾಗಿ ಪ್ರಕರಣಗಳನ್ನು ದಾಖಲಿಸಿಕೊಳ್ಳಬೇಕು ಎಂದು ಹೇಳಿದರು.

ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದರೆ, ಎಂಸಿಸಿ ತಂಡಗಳು ಉಲ್ಲಂಘನೆ ಆಗದಂತೆ ಎಚ್ಚರ ವಹಿಸಬೇಕು. ಸಹಾಯಕ ವೆಚ್ಚ ವೀಕ್ಷಕರು, ಫ್ಲೈಯಿಂಗ್ ಸ್ಕ್ವಾಡ್‍ಗಳು, ವೀಡಿಯೋ ಸರ್ವೆಲನ್ಸ್, ವೀಡಿಯೋ ವಿವ್ಹಿಂಗ್ ತಂಡಗಳು, ಸ್ಟ್ಯಾಟಿಕ್ ಸರ್ವೆಲನ್ಸ್ ತಂಡಗಳು ಇನ್ನೂ ಜಾಗೃತರಾಗಿ ಕಾರ್ಯನಿರ್ವಹಿಸಬೇಕು. ಒಟ್ಟಾರೆ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷದವರು ವಿವಿಧ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವುದಕ್ಕೆ ಸಂಬಂಧಿಸಿದಂತೆ ಸುವಿಧಾ ಆಪ್ ಇದೆ. ಚುನಾವಣೆ ಸಂದರ್ಭದಲ್ಲಿ ಅಧಿಕಾರಿಗಳು ವಶಪಡಿಸಿಕೊಳ್ಳುವ ಹಣ, ಮದ್ಯ, ಉಡುಗೊರೆ ಸಾಮಗ್ರಿ ಇತ್ಯಾದಿಗಳನ್ನು ದಾಖಲಿಸುವ ಸಲುವಾಗಿಯೇ ಪ್ರತ್ಯೇಕವಾಗಿ ಆಪ್ ರೂಪಿಸಿರುವುದು ಈ ಬಾರಿಯ ವಿಶೇಷವಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಅವರು ಮಾತನಾಡಿ, ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ತಮ್ಮ ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕಿದೆ. ಸಹಾಯಕ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ತಂಡಗಳ ಅಧಿಕಾರಿಗಳಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಬೇಕು. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳಿಗೆ ನಿಗದಿಯಾಗುವ ಚುನಾವಣಾ ವೆಚ್ಚದ ಕುರಿತು ಸರಿಯಾದ ಲೆಕ್ಕಪತ್ರಗಳು ಇರಬೇಕು. ಈ ಸಂಬಂಧ ಯಾವುದೇ ಗೊಂದಲಕ್ಕೆ ಒಳಗಾಗದೇ ಎಲ್ಲ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಹೇಳಿದರು.

ನ್ಯಾಯಸಮ್ಮತವಾಗಿ ಮತಯಾಚನೆಗೆ ಯಾವುದೇ ನಿಬಂಧನೆಗಳಿಲ್ಲ. ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿಯಮಾನುಸಾರ ಪೂರ್ವಾನುಮತಿ ಪಡೆಯಬೇಕಿದೆ. ಪೂರ್ವಾನುಮತಿಯಿಲ್ಲದ ಹಾಗೂ ಕಾನೂನು ಉಲ್ಲಂಘನೆಯ ಚಟುವಟಿಕೆಗಳ ಬಗ್ಗೆ ನಿಯೋಜಿತ ನಿಗಾ ತಂಡಗಳು ತಕ್ಷಣ ಕಾರ್ಯ ಪ್ರವೃತ್ತರಾಗಬೇಕು ಎಂದರು.

ಚುನಾವಣಾ ಅಭ್ಯರ್ಥಿಗೆ ಮತ್ತು ತಾರಾ ಪ್ರಚಾರಕರು ಪ್ರಚಾರಕ್ಕಾಗಿ ಬಂದಂತಹ ಸಂದರ್ಭದಲ್ಲಿ, ತಂಡಗಳು ಕಾರ್ಯಕ್ರಮ ಅಥವಾ ಸಮಾರಂಭಗಳಲ್ಲಿ ಆಗುವಂತಹ ಖರ್ಚು ವೆಚ್ಚಗಳ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು. ಮತದಾರರಿಗೆ ಆಮಿಷ ವೊಡ್ಡಲು ಹಣ, ಮದ್ಯ ಅಥವಾ ಉಚಿತ ಉಡುಗೊರೆಗಳ ಬಗ್ಗೆ ಸಂಪೂರ್ಣ ಸಾಕ್ಷ್ಯ ಸಂಗ್ರಹಿಸಬೇಕು ಎಂದು ಹೇಳಿದರು.

ಲೆಕ್ಕ ಅಧೀಕ್ಷಕ ಡಾ.ಶಶಿ ಶೇಖರ ರೆಡ್ಡಿ ಅವರು ಮಾತನಾಡಿ, ವಸ್ತುನಿಷ್ಠ ವೆಚ್ಚವನ್ನು ನಮೂದಿಸಬೇಕು. ರಾಜಕೀಯಕ್ಕಾಗಿ, ಅಭ್ಯರ್ಥಿಗಳ ಪ್ರಚಾರಕ್ಕಾಗಿ ಹಣ ಬಳಸಿ ಚುನಾವಣಾ ಮಾರ್ಗಸೂಚಿಗಳ ವಿರುದ್ದವಿದೆಯೇ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಭ್ಯರ್ಥಿಗಳು ತಮ್ಮ ಖರ್ಚು ವೆಚ್ಚಗಳನ್ನು ಸಂಪೂರ್ಣವಾಗಿ ಬ್ಯಾಂಕ್ ಖಾತೆಯ ಮುಖಾಂತರವೇ ಮಾಡಬೇಕಿದ್ದು, ಹೀಗಾಗಿ ಬ್ಯಾಂಕುಗಳ ಮೂಲಕ ನಡೆಯುವ ಹಣಕಾಸಿನ ವ್ಯವಹಾರಗಳ ಬಗ್ಗೆ ತೀವ್ರ ನಿಗಾ ಇಡುವಂತೆ ಮತ್ತು ಈ ಕುರಿತು ವರದಿ ನೀಡಬೇಕು. ಅಭ್ಯರ್ಥಿಗಳಿಂದ ಆಗುವ ವೆಚ್ಚಗಳ ಬಗ್ಗೆ ಅಧಿಕೃತ ಹಾಗೂ ನಿಖರ ಮಾಹಿತಿ ನಮೂದಿಸಿದಲ್ಲಿ ಚುನಾವಣಾ ಸುಗಮ ಕಾರ್ಯಕ್ಕೆ ಸಹಕಾರಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *

error: Content is protected !!