WhatsApp Image 2024-05-05 at 2.20.19 PM

ಜನಾರ್ಧನ್ ರೆಡ್ಡಿ ನಾಲಿಗೆ ಹರಿ ಬಿಟ್ಟರೆ, ಎರಡು ಹೆಜ್ಜೆ ಮುಂದೆ ಹೋಗಿ ಮಾತನಾಡಬೇಕಾದಿತು ಹುಷಾರ್! : ಸಚಿವ‌ ಶಿವರಾಜ್ ತಂಗಡಗಿ

ಕರುನಾಡ ಬೆಳಗು ಸುದ್ದಿ

ಕಾರಟಗಿ, 5- ಜನಾರ್ಧನ್ ರೆಡ್ಡಿ ನನಗೂ ನಾಲಿಗೆ ಇದೆ. ನಾನು ಸಂಸ್ಕಾರವುಳ್ಳ ಕುಟುಂಬದಿಂದ ಬಂದ ಕಾರಣ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಇನ್ನೊಮ್ಮೆ ನಾಲಿಗೆ ಹರಿ ಬಿಟ್ಟರೆ ಎರಡು ಹೆಜ್ಜೆ ಮುಂದೆ ಹೋಗಿ ನಿನ್ನ ಬಗ್ಗೆ ಮಾತನಾಡಬೇಕಾದಿತ್ತು ಎಚ್ಚರಿಕೆ…!

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಕಾರಟಗಿ ಪಟ್ಟದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಶಾಸಕ ಜನಾರ್ಧನ್ ರೆಡ್ಡಿ ಅವರಿಗೆ ಈ ಮೇಲಿನಂತೆ ಶನಿವಾರ ಎಚ್ಚರಿಕೆ ನೀಡಿದ್ದಾರೆ.

ನೀನು ಮಂತ್ರಿಯಾಗಿ ನಿಮ್ಮ ಸರ್ಕಾರ‌ ಅಧಿಕಾರಕ್ಕೇರಿದ್ದು, ನಾವು ಐದು ಜ‌ನ ಬೆಂಬಲ ಕೊಟ್ಟಿದ್ದಕ್ಕೆ. ನಾನು ಪಕ್ಷೇತರ‌ ಶಾಸಕನಾಗಿ ಗೆದ್ದ ಕೂಡಲೇ ನಿಮ್ಮ ಕಾವಲುಗಾರರು ನನ್ನ ಮನೆ ಮುಂದೆ ಬಂದು ನಿಂತಿದ್ದರು. ನಾನು ನಿನ್ನ ಮನೆ ಬಾಗಿಲಿಗೆ ಬಂದಿರಲಿಲ್ಲ. ನನ್ನನ್ನು ಕರೆದುಕೊಂಡ ಹೋದ ಮೇಲೆ‌ ನೀನು ಮಂತ್ರಿಯಾದೆ. ನನ್ನ ಹೆಸರು ಹೇಳಿ ನೀನು ಮಂತ್ರಿಯಾಗಿದ್ದೆ. ರೆಡ್ಡಿ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ಯಾ ಎಂದು ವಾಗ್ದಾಳಿ ನಡೆಸಿದರು.

ಒಮ್ಮೆ ‘ಟಗರು’ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಬಳ್ಳಾರಿಗೆ ಬಂದು ಗುದ್ದಿದಾಗ ಎಲ್ಲಿಗೆ ಹೋಗಿ ಬಿದ್ದಿದ್ದೆ ಎನ್ನುವುದು ಗೊತ್ತಲ್ಲ? ಎಂದು ರೆಡ್ಡಿ ಜೈಲಿಗೆ ಹೋಗಿದ್ದನ್ನು ಪರೋಕ್ಷವಾಗಿ ನೆನಪಿಸಿದರು.

ರೆಡ್ಡಿ ನಿನ್ನ ಹಣೆ ಬರಹ ನನಗೆ ಚೆನ್ನಾಗಿ ಗೊತ್ತು. ಅಂದು ನಿನ್ನಿಂದ ತಂಗಡಗಿ ಮಂತ್ರಿಯಾಗಿರಲಿಲ್ಲ. ಕನಕಗಿರಿ ಕ್ಷೇತ್ರದ ಜನರ ಆಶೀರ್ವಾದದಿಂದ ಮಂತ್ರಿಯಾಗಿದ್ದೆ. ನಾನು‌ ನೀನು ಹೇಳಿದ ಪದ ಬಳಸಬಲ್ಲೇ. ಆ ತಾಕತ್ತು ನನಗೂ ಇದೆ; ನಿನ್ನ ಸಂಸ್ಕಾರ ನನ್ನದ್ದಲ್ಲ. ನಾನು ನಿನ್ನ ರೀತಿ ಅಲ್ಲ. ನಿನ್ನಂತಹ ಅದೆಷ್ಟೋ ಜನರನ್ನು ನೋಡಿದ್ದೇನೆ. ರಾಜ್ಯಸಭಾ ಚುನಾವಣಾ ವೇಳೆ ನನ್ನ ಮನೆ‌ ಸುತ್ತಲೂ ಓಡಾಡಿದೆ. ಅದನ್ನು ಬಹಿರಂಗಪಡಿಸಬೇಕಾ? ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ ಗಿರಾಕಿ ನೀನು, ಬಿಜೆಪಿಗೆ ಸೇರಿ ನನ್ನ ಬಗ್ಗೆ ಮಾತನಾಡುತ್ತೀಯಾ ಎಂದು ಛೇಡಿಸಿದರು.

ಈ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವಿನ ಚುನಾವಣೆಯಾಗಿದೆ. ಸುಳ್ಳು ಹೇಳುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಎರಡು ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸುಳ್ಳಿನ ಗ್ಯಾಂಗ್ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣಕ್ಕೆ ಬಂದಿತ್ತು. ವಿಜಯೇಂದ್ರ ಮತ್ತು ಜನಾರ್ದನ್ ರೆಡ್ಡಿ ಅವರೇ, ಹತ್ತು ವರ್ಷಗಳ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಪ್ಪು ಹಣ ತಂದು ಬಡವರ ಖಾತೆಗೆ ತಲಾ ಹದಿನೈದು ಲಕ್ಷ ಹಣ ಹಾಕುವುದಾಗಿ ಹೇಳಿದ್ರಲ್ಲ ಆ ವಿಚಾರ ಎಲ್ಲಿ? ಬಡವರ ಖಾತೆಗಂತೂ ಹಣ ಬಿದ್ದಿಲ್ಲ. ವಿಜಯೇಂದ್ರ ಅಥವಾ ಜನಾರ್ದನ್ ರೆಡ್ಡಿ ಅವರ ಖಾತೆಗೆ ಬಿದ್ದಿರಬಹುದು ಎಂದು ಟೀಕಿಸಿದರು.‌

ನನ್ನ ಮಾತಿಗೆ ನಿಮಗೆ ‘ಬ್ಯಾಡಗಿ ಮೆಣಸಿನಕಾಯಿ ಕಡಿದ ಆಗೋ ಅಥವಾ ಚೇಳು ಕಡಿದ ಆಗೋ ಆಗಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

‘ಡಬ್ಬಲ್ ಬೆಡ್ ರೂಮ್ ರೆಡ್ಡಿ’ ಎಲ್ಲಿದೆ ಡಬ್ಬಲ್ ಬೆಡ್ ರೂಮ್ . ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ, ನಾನು ಜ‌ನರಿಗೆ ಸಿಗಲ್ಲ ಎಂದು ಸುಳ್ಳು ಮಾತನಾಡುತ್ತೀಯಾ, ನಾನು ದಿನದ 24 ಗಂಟೆ ಕ್ಷೇತ್ರದ ಜನತೆಗೆ ಲಭ್ಯನಿದ್ದೇನೆ. ಯಾವುದೇ ಸಂದರ್ಭದಲ್ಲೂ ಕರೆ ಸ್ವೀಕರಿಸಿ ಮಾತನಾಡುತ್ತೇನೆ. ಗೆದ್ದ ಕೂಡಲೇ ಗಂಗಾವತಿ ಕ್ಷೇತ್ರದ‌ ಜನತೆಗೆ ಡಬ್ಬಲ್ ಬೆಡ್ ರೂಮ್ ಮನೆ ಕಟ್ಟಿಸಿ ಕೊಡುವುದಾಗಿ ಹೇಳಿದ್ದೆ. ಡಬ್ಬಲ್ ಬೆಡ್ ಎಲ್ಲಿ ಎಂದು ತಮ್ಮ ಭಾಷಣದ ಉದ್ದಕ್ಕೂ ಜನಾರ್ಧನ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.

ನಿನ್ನಷ್ಟು ಸುಳ್ಳು ನಾನು ಹೇಳಲ್ಲ. ಗೆದ್ದ ಕೂಡಲೇ ಪ್ರತಿಯೊಂದು ಪಂಚಾಯಿತಿಗೆ ಭೇಟಿ ನೀಡಿದ್ದೇನೆ. ಚುನಾವಣಾ ಪೂರ್ವದಲ್ಲಿ‌ ನೀಡಿದ್ದ ಭರವಸೆಯಂತೆ ಅಧಿಕಾರಕ್ಕೆ ಬಂದ ಕೂಡಲೇ ಐದು ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಒಂದು ರೂಪಾಯಿ ಹಣ ಕೊಟ್ಟಿಲ್ಲ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ನಮ್ಮ ಸರ್ಕಾರ 100 ಕೋಟಿ‌ ಹಣ ನೀಡಿದಾಗ ನನ್ನನ್ನು ಹುಡುಕಿ ಬಂದು ಅಭಿನಂದನೆ ಹೇಳಿದಾತ, ಮೊನ್ನೆ ಬಿಜೆಪಿ ಸೇರಿ ಇದೀಗ ನನ್ನ ಬಗ್ಗೆ ಮಾತನಾಡುತ್ತಿಯಲ್ಲಪ್ಪಾ ಎಂದು ಟಾಂಗ್ ನೀಡಿದರು.

ಇಷ್ಟು ವರ್ಷಗಳ ಕಾಲ ಬಿಜೆಪಿಯವರು ಸುಳ್ಳು ಹೇಳಿಕೊಂಡು ಅಧಿಕಾರ ನಡೆಸಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಮಾತ್ರ ಜನರ ಬಳಿ‌ ಬರುತ್ತಾರೆ. ಇನ್ನು ಮುಂದೆ ಇಂತಹ ಸುಳ್ಳಿಗೆ ಜನತೆ ಆಸ್ಪದ ನೀಡಬಾರದು ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!