
ಜಿಲ್ಲೆಯ 1314 ಬೂತ್ ನಲ್ಲಿ ಬಿಜೆಪಿ ಗ್ರಾಮ ಚಲೋ ಅಭಿಯಾನ
ಒಂದು ದಿನದ ಸಂಪೂರ್ಣ ಗ್ರಾಮ ವಾಸ್ತವ್ಯ : ನವೀನ ಗುಳಗಣ್ಣವರ್
ಕರುನಾಡ ಬೆಳಗು ಸುದ್ದಿ
ಕುಕನೂರ,9- ಜಿಲ್ಲೆಯಲ್ಲಿ ಬಿಜೆಪಿಯಿಂದ ಗ್ರಾಮ ಚಲೋ ಅಭಿಯಾನ ಆರಂಭವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯಿಂದ ಫೆ.9, 10, 11 ಮೂರು ದಿನಗಳ ಕಾಲ ಗ್ರಾಮ ಚಲೋ ಅಭಿಯಾನ ಜಿಲ್ಲೆಯ ಒಟ್ಟು 1314 ಬೂತ್ ಗಳಲ್ಲಿ ಜರುಗಲಿದೆ. ಕಾರ್ಯಕರ್ತರು, ಬಿಜೆಪಿ ಮುಖಂಡರು ತಮ್ಮ ಬೂತನ್ನು ಬಿಟ್ಟು, ಬೇರೆ ಗ್ರಾಮದ ಬೂತಿಗೆ ತೆರಳಿ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ. ಒಂದು ಸಂಪೂರ್ಣ ದಿನವನ್ನು ಆ ಬೂತ್ ನಲ್ಲಿಯೇ ಕಳೆಯಲಿದ್ದಾರೆ. ಈ ಅಭಿಯಾನದಲ್ಲಿ, ಶಾಸಕರು ಸಂಸದರು ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಲ್ಲ ಹಂತದ ಪದಾಧಿಕಾರಿಗಳಿಗೆ ಒಂದೊಂದು ಗ್ರಾಮದ ಬೂತ್ ಗಳನ್ನು ನೀಡಲಾಗಿದೆ ಎಂದರು.
ಕೇಂದ್ರ ಸರ್ಕಾರದ ಸಾಧನೆ ಕರ ಪತ್ರವನ್ನು ಮನೆ ಮನೆಗೆ ತಲುಪಿಸುವುದು, ಗ್ರಾಮದಲ್ಲಿರುವ ಬೂತ್ ಅಧ್ಯಕ್ಷರ ಮನೆಗೆ ಭೇಟಿ ಹಾಗೂ ಬೂತ್ ಸಮಿತಿ ಹಾಗೂ ಪೇಜ್ ಪ್ರಮುಖರ ಪರಿಶೀಲನೆ, ಗೋಡೆ ಬರಹ ಅಭಿಯಾನ, ಬೂತ್ ನಲ್ಲಿರುವ ಸಾಧಕರ ಭೇಟಿ, ಕೇಂದ್ರ ಸರ್ಕಾರದ ಫಲಾನುಭವಿಗಳ ಭೇಟಿ, ನವ ಮತದಾರರ ಭೇಟಿಯ ಕಾರ್ಯ ಜರುಗಲಿದೆ ಎಂದರು.
ಹಿರಿಯರು ಭಾಗಿ : ಸಂಸದ ಸಂಗಣ್ಣ ಕರಡಿ, ವಿಧಾನಸಭೆಯ ಮುಖ್ಯ ಸಚೇತಕ ಶಾಸಕ ದೊಡ್ಡನಗೌಡ ಹೆಚ್ ಪಾಟೀಲ್,ಮಾಜಿ ಸಚಿವ ಹಾಲಪ್ಪ ಆಚಾರ್, ಬಸವರಾಜ್ ದಡೇಸಗೂರ್, ಪರಣ್ಣ ಮನವಳ್ಳಿ ಹಾಗು ಜಿಲ್ಲೆಯ ಎಲ್ಲಾ ಹಿರಯರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.