
ಟಿಪ್ಪು ನಾಮಫಲಕಕ್ಕೆ ಅವಮಾನ : ಹುಮಾಯೂನ್ ಖಾನ್ ಖಂಡನೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,1- ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಬುಧವಾರ ನಸುಕಿನ ಜಾವ ದುಷ್ಕರ್ಮಿಗಳು ಹಜರತ್ ಟಿಪ್ಪು ಸುಲ್ತಾನ್ ಅವರ ವೃತ್ತದ ನಾಮಫಲಕಕ್ಕೆ ಪಾದರಕ್ಷೆಗಳ ಹಾರ ಹಾಕಿ ಅವಮಾನ ಮಾಡಿರುವುದು ಖಂಡನೀಯ ಎಂದು ಬಳ್ಳಾರಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಹುಮಾಯೂನ್ ಖಾನ್ ತಿಳಿಸಿದ್ದಾರೆ.
ಜನಪರ ಅರಸ, ಸ್ವಾತಂತ್ರ್ಯ ಹೋರಾಟಗಾರ, ಉತ್ತಮ ಆಡಳಿತಗಾರರಾಗಿದ್ದ ಟಿಪ್ಪು ಸುಲ್ತಾನರ ನಾಮಫಲಕಕ್ಕೆ ಅವಮಾನ ಮಾಡಿರುವುದು ಖೇದವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಕ್ಷಣ ದುಷ್ಕರ್ಮಿಗಳನ್ನು ಬಂಧಿಸುವ ಮೂಲಕ ನೊಂದಿರುವ ಹಾಗೂ ಆಕ್ರೋಶಗೊಂಡಿರುವ ಹಜರತ್ ಟಿಪ್ಪು ಸುಲ್ತಾನರ ಅಭಿಮಾನಿಗಳಿಗೆ ನ್ಯಾಯ ನೀಡಬೇಕೆಂದು ಆಗ್ರಹಿಸಿದ್ದಾರೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಮಾಜದಲ್ಲಿ ಅಶಾಂತಿ, ಕೋಮು ಗಲಭೆ ಸೃಷ್ಟಿ ಮಾಡಿ, ಜನರನ್ನು ಭಾವನಾತ್ಮಕ ವಿಚಾರಗಳ ಆಧಾರದಲ್ಲಿ ವಿಭಜನೆ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಕೆಲ ದುಷ್ಟ ಶಕ್ತಿಗಳಿಂದ ನಡೆಯುತ್ತಲೇ ಬಂದಿದೆ. ಆದರೆ ಕನ್ನಡ ನಾಡಿನ ಪ್ರಜ್ಞಾವಂತ ನಾಗರಿಕರು ರಾಜ್ಯವನ್ನು ಶಾಂತಿಯ ತೋಟವನ್ನಾಗಿಯೇ ಉಳಿಸಿದ್ದಾರೆ. ಹೀಗಾಗಿ ಜನರ ಈ ಸೌಹಾರ್ದ ಬದುಕನ್ನು ಕಾಪಾಡುವ ಜವಾಬ್ದಾರಿ ಸರ್ಕಾರದ ಮೇಲಿದ್ದು, ರಾಜ್ಯದಾದ್ಯಂತ ಪೊಲೀಸ್ ವ್ಯವಸ್ಥೆಯನ್ನು ಈ ನಿಟ್ಟಿನಲ್ಲಿ ಎಚ್ಚರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಗುಪ್ತಚರ ಇಲಾಖೆಯ ಸಬಲೀಕರಣ, ನಾಗರಿಕ ಸ್ನೇಹಿ ಪೊಲೀಸಿಂಗ್ ಗೆ ಪ್ರೋತ್ಸಾಹ ಹಾಗೂ ಆಯಾ ಠಾಣಾ ವ್ಯಾಪ್ತಿಯಲ್ಲಿ ನಿಯಮಿತವಾಗಿ ವಿವಿಧ ಸಮುದಾಯಗಳ ಮುಖಂಡರ ಶಾಂತಿ ಸಭೆ ಏರ್ಪಡಿಸುವ ಮೂಲಕ ಕೋಮುವಾದಿ ಶಕ್ತಿಗಳಿಗೆ ಕಡಿವಾಣ ಹಾಕಬೇಕು ಎಂದು ಹುಮಾಯೂನ್ ಖಾನ್ ಆಗ್ರಹಿಸಿದ್ದಾರೆ.
ಈಗಾಗಲೇ ಕೋಮು ಗಲಭೆ, ಸಮಾಜ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡ ಯಾವುದೇ ಪಕ್ಷ, ಸಂಘಟನೆಯ ಮುಖಂಡರು, ಕಾರ್ಯಕರ್ತರ ಮೇಲೆ ನಿಗಾ ಇಡುವ ಮೂಲಕ ಮುಂದಾಗುವ ಅನಾಹುತ ತಪ್ಪಿಸಬೇಕೆಂದು ರಾಜ್ಯದ ಗೃಹ ಸಚಿವರನ್ನು ಮನವಿ ಮಾಡಿದ್ದಾರೆ.
ಚುನಾವಣಾ ಸಂದರ್ಭ ಜನರ ನಡುವೆ ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿ ಗೊಂದಲ ಸೃಷ್ಟಿ ಮಾಡಿ ವಾತಾವರಣ ಕೆಡಿಸುವ ಪ್ರಯತ್ನ ಮೊದಲಿನಿಂದ ನಡೆದುಕೊಂಡು ಬಂದಿದ್ದು, ಯಾವುದೇ ಘಟನೆಗೆ ಹಿಂದೂಗಳೇ ಇರಲಿ ಮುಸ್ಲಿಂರೇ ಇರಲಿ ಅಥವಾ ಇನ್ನಾವುದೇ ಧರ್ಮದವರಿರಲಿ ತಕ್ಷಣಕ್ಕೆ ಪ್ರತಿಕ್ರಿಯೆ ನೀಡುವ ಬದಲು ಸಂಬಂಧಪಟ್ಟ ಇಲಾಖೆ ಅಥವಾ ಪೊಲೀಸರನ್ನು ಸಂಪರ್ಕಿಸಿ ಸಮಸ್ಯೆಯ ಪರಿಹಾರಕ್ಕೆ ಮುಂದಾಗಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಿರವಾರ ಪಟ್ಟಣದಲ್ಲಿ ನಡೆದ ಘಟನೆ ಮರುಕಳಿಸದಂತೆ ಅಧಿಕಾರಿಗಳು, ಸರ್ಕಾರ ಮುತುವರ್ಜಿ ವಹಿಸಬೇಕೆಂದು ತಿಳಿಸಿದ್ದಾರೆ.