75b9bd97-5fe4-4de2-b9fc-ee0f8074bcc2 (1)

ಡಿಸೆಂಬರ್ 1ರಿಂದ ನೊಂದಣಿ, ಜನವರಿಯಿಂದ ಖರೀದಿ ಆರಂಭ

 ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ

ಕರುನಾಡ ಬೆಳಗು ಸುದ್ದಿ
ಬಳ್ಳಾರಿ,೨೨- ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಭತ್ತ, ರಾಗಿ ಮತ್ತು ಜೋಳ ಖರೀದಿ ಕೇಂದ್ರಗಳು ತೆರೆದಿದ್ದು, ರೈತರು ಬೆಳೆದ ಬೆಳೆಗಳನ್ನು ನೊಂದಾಯಿಸಿಕೊಳ್ಳಲು ಡಿಸೆಂಬರ್ 1ರಿಂದ ಅವಕಾಶ ಕಲ್ಪಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 2023-24 ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆ ಕಾರ್ಯಾಚರಣೆಯ ಜಿಲ್ಲಾ ಟಾಸ್ಕ್ ಫೆÇೀರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ಭತ್ತ ಖರೀದಿ ಕೇಂದ್ರಗಳು ಪ್ರಾರಂಭವಾಗಿವೆ. ಬೆಂಬಲ ಬೆಲೆಯಲ್ಲಿ ರಾಗಿ ಮತ್ತು ಜೋಳ ಬೆಳೆಗಳನ್ನು ಖರೀದಿಸಲು ರೈತರು ಡಿಸೆಂಬರ್ 1 ರಿಂದ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು ಖರೀದಿ ಕೇಂದ್ರವಿರುವ ಎಪಿಎಂಸಿಯಲ್ಲಿ ನೊಂದಣಿ ಮಾಡಿಕೊಳ್ಳಬೇಕು. ಖರೀದಿ ಪ್ರಕ್ರಿಯೆಯನ್ನು 2024 ರ ಜನವರಿ 1 ರಿಂದ ಆರಂಭವಾಗಿ 2024 ರ ಮಾರ್ಚ್ ಅಂತ್ಯದವರೆಗೆ ಖರೀದಿ ಮಾಡಲಾಗುತ್ತದೆ. ಇದಕ್ಕೆ ಬೇಕಾದ ನೊಂದಣಿ ಮತ್ತು ಖರೀದಿ ಸಿದ್ದತೆ, ಸಂಗ್ರಹಕ್ಕೆ ಗೋಧಾಮುಗಳನ್ನು ಸಿದ್ದಪಡಿಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
 ಖರೀದಿ ಕೇಂದ್ರಗಳು: 2023-24ನೇ ಸಾಲಿಗೆ ಎಂ.ಎಸ್.ಪಿ ಕಾರ್ಯಾಚರಣೆಗೆ ಖರೀದಿ ಕೇಂದ್ರಗಳಾಗಿ ಜಿಲ್ಲೆಯಲ್ಲಿ ಬಳ್ಳಾರಿಯ ಎಪಿಎಂಸಿ ಯಾರ್ಡ್, ಕಂಪ್ಲಿಯ ಎಪಿಎಂಸಿ ಯಾರ್ಡ್, ಸಂಡೂರು ಎಪಿಎಂಸಿ ಯಾರ್ಡ್, ಸಿರುಗುಪ್ಪ ಎಪಿಎಂಸಿ ಯಾರ್ಡ್ ಸೇರಿದಂತೆ 4 ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಬೆಂಬಲ ಬೆಲೆಗಳು: 2023-24ನೇ ಸಾಲಿಗೆ ಖರೀದಿಸುವ ಕೃಷಿ ಉತ್ಪನ್ನಗಳಾದ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‍ಗೆ ರೂ.2183, ಗ್ರೇಡ್ ಎ-ಭತ್ತಕ್ಕೆ ರೂ.2203, ರಾಗಿಗೆ ರೂ.3846, ಹೈಬ್ರೀಡ್-ಬಿಳಿ ಜೋಳಕ್ಕೆ ರೂ.3180, ಮಾಲ್ದಂಡಿ-ಬಿಳಿ ಜೋಳಕ್ಕೆ ರೂ.3225 ಬೆಂಬಲ ಬೆಲೆಗಳಾಗಿವೆ ಎಂದು ಅವರು ತಿಳಿಸಿದರು.
ನಿರ್ಧರಿಸಿರುವ ಎ.ಪಿ.ಎಂ.ಸಿ ಸ್ಥಳದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಪ್ರತಿ ಖರೀದಿ ಕೇಂದ್ರಗಳಿಗೆ ನುರಿತ ಗುಣಮಟ್ಟ ಪರೀಕ್ಷಕರನ್ನು ನೇಮಿಸಬೇಕು ಹಾಗೂ ಗುಣಮಟ್ಟ ಪರಿಶೀಲನೆ ಹೆಸರಲ್ಲಿ ರೈತರಿಗೆ ಯಾವುದೇ ಅನಾನುಕೂಲವಾಗದಂತೆ ಎಚ್ಚರವಹಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಬಲ ಬೆಲೆ ಕಾರ್ಯಾಚರಣೆ ಬಗ್ಗೆ ಖರೀದಿ ಏಜೆನ್ಸಿಗಳು, ಕೃಷಿ ಇಲಾಖೆ, ಕೃಷಿ ಮಾರುಕಟ್ಟೆ ಇಲಾಖೆಗಳು ಕರಪತ್ರ, ಡಂಗೂರ, ಬ್ಯಾನರ್ ಮೂಲಕ ವ್ಯಾಪಕ ಪ್ರಚಾರ ನೀಡಬೇಕು ಎಂದು ತಿಳಿಸಿದರು.
ಖರೀದಿ ಕೇಂದ್ರದ ಕೊಠಡಿ, ಖರೀದಿ ಪ್ರಾಂಗಣ, ಬೆಳಕು, ಕುಡಿಯುವ ನೀರು, ನೆರಳು, ರೈತ ವಿಶ್ರಾಂತಿ, ತುರ್ತು ಟಾರ್ಪಲಿನ್, ರಕ್ಷಣಾ ವ್ಯವಸ್ಥೆ ಮಾಡುವ ಜವಾಬ್ದಾರಿ ಹೊಂದಬೇಕು. ಗಾಳಿ, ಮಳೆ, ಬೆಳಕು ಮುಂತಾದ ಪ್ರಕೃತಿ ಅಥವಾ ಮಾನವ ವಿಕೋಪಗಳಿಂದ ಕೃಷಿ ಉತ್ಪನ್ನ ರಕ್ಷಿಸಲು ಅವಶ್ಯವಿರುವ ಹೊದಿಕೆ, ಹಾಸುಗಳು, ರಕ್ಷಣಾ ಸಾಮಗ್ರಿಗಳನ್ನು ಹಾಗೂ ಸ್ವಂತ ಕೇಂದ್ರಗಳಲ್ಲಿ ಎಲ್ಲಾ ಮೂಲ ಸೌಕರ್ಯಗಳನ್ನು ಮಾಡುವ ಜವಾಬ್ದಾರಿಯನ್ನು ಎ.ಪಿ.ಎಂ.ಸಿ ಅಧಿಕಾರಿಗಳು ವಹಿಸಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆಯಿಂದ ಈಗಾಗಲೇ ಜಾರಿಗೊಳಿಸಿರುವ ಫ್ರೂಟ್ಸ್ ದತ್ತಾಂಶದಲ್ಲಿರುವ ರೈತರ ಫ್ರೂಟ್ಸ್ ಐಡಿ ಮಾಹಿತಿಯನ್ನು ಪಡೆದು, ಕೃಷಿ ಇಲಾಖೆ ಒದಗಿಸಿರುವ ಸರಾಸರಿ ಬೆಳೆ ಮಾಹಿತಿಗಳನ್ವಯ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಾಯಿಸಿ ರೈತರಿಂದ ಬೆಳೆಗಳನ್ನು ಖರೀದಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಸಕೀನಾ, ಕೃಷಿ ಇಲಾಖೆಯ ಉಪ ನಿರ್ದೇಶಕ ದಯಾನಂದ, ಕೆಎಫ್‍ಸಿಎಸ್‍ಸಿಯ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತದ ಶಾಖಾ ವ್ಯವಸ್ಥಾಪಕರು, ಎಪಿಎಂಸಿಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!