
ತುಮ್ಮರಗುದ್ದಿ ಗ್ರಾಮದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- ಸಂವಿಧಾನ ನಮಗೆ ಮತದಾನ ಮಾಡುವ ಹಕ್ಕನ್ನು ಕೊಟ್ಟಿದ್ದು, ಅದನ್ನು ಎಲ್ಲರೂ ಕಡ್ಡಾಯವಾಗಿ ಚಲಾಯಿಸಬೇಕು ಎಂದು ತಾ.ಪಂ ಸಹಾಯಕ ನಿರ್ದೇಶಕರಾದ ಹನಮಂತಗೌಡ ಪೊಲೀಸ್ ಪಾಟೀಲ್ ಹೇಳಿದರು.
ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಗ್ರಾಮದ ನರೇಗಾ ಯೋಜನೆಯಡಿ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಸ್ವೀಪ್ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 2024 ರ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನವು ಮೇ 7 ರಂದು ನಡೆಯಲಿದ್ದು, ನರೇಗಾ ಕೂಲಿಕಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನದಿಂದ ಯಾರೂ ವಂಚಿತರಾಗಬಾರದು ಎಂದು ಸಲಹೆ ನೀಡಿದರು.
ನರೇಗಾ ಯೋಜನೆಯಡಿ ಈಗ ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನದಡಿ ಮೂರು ತಿಂಗಳ ಅಭಿಯಾನ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದು ತಮಗಿರುವ 100 ಮಾನವ ದಿನಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ವೇಳೆ ಕೂಲಿಕಾರರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ತಾಪಂ ತಾಂತ್ರಿಕ ಸಂಯೋಜಕರಾದ ಸಂತೋಷ ನಂದಾಪುರ, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ತಾಂತ್ರಿಕ ಸಹಾಯಕರಾದ ಸಂಗಮೇಶ ಜಡಿಮಠ, ಗ್ರಾ.ಪಂ ಕಾರ್ಯದರ್ಶಿಗಳಾದ ಶ್ರೀಕಾಂತ, ಡಿಇಒ ರಮೇಶ, ಜಿಕೆಎಂ ಶಿಲ್ಪಾ, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು.