WhatsApp Image 2024-04-20 at 6.34.25 PM

ನಾಯಕತ್ವ, ದೂರದೃಷ್ಟಿ ಇಲ್ಲದ ಇಂಡಿ : ನರೇಂದ್ರ ಮೋದಿ

ಕರುನಾಡ ಬೆಳಗು ಸುದ್ದಿ

ಬೆಂಗಳೂರು, 20- ಇಂಡಿ ಒಕ್ಕೂಟಕ್ಕೆ ನಾಯಕರೇ ಇಲ್ಲ; ದೂರದೃಷ್ಟಿಯೂ ಇಲ್ಲ. ಅವರದು ಹಗರಣಗಳ ಚರಿತ್ರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಳಿಸಿದರಲ್ಲದೆ, ಫಿರ್ ಏಕ್ ಬಾರ್ ಮೋದಿ ಸರಕಾರ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರದಲ್ಲಿ ಇಂದು ಏರ್ಪಡಿಸಿದ್ದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರ ಸಭೆ ‘ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಮಾತನಾಡಿದ ಅವರು, ನಾನಿಲ್ಲಿ ರಿಪೋರ್ಟ್ ಕಾರ್ಡ್ ಜೊತೆ ಮತ ಕೇಳಲು ಬಂದಿದ್ದೇನೆ. ಹಗಲಿರುಳೆನ್ನದೆ ನಿಮಗಾಗಿ ಶ್ರಮಿಸಿದ್ದೇನೆ. ನಿಮ್ಮ ಕನಸುಗಳೇ ಮೋದಿಯ ಸಂಕಲ್ಪ ಎಂದರು. 24-7 ಮೂಲಕ 20247ರಲ್ಲಿ ದೇಶವನ್ನು ಮುನ್ನಡೆಸುವ ಗ್ಯಾರಂಟಿ ಕೊಡುತ್ತಿದ್ದೇನೆ ಎಂದು ತಿಳಿಸಿದರು.

ಬಡವರಿಗಾಗಿ ಉಚಿತ ಪಡಿತರ ಕೊಟ್ಟಿದ್ದೇವೆ, ಲಕ್ಷಾಂತರ ಜನರಿಗೆ ಉಚಿತ ಪಡಿತರ ಸಿಗುತ್ತಿದೆ. ಇದು ಇನ್ನೂ 5 ವರ್ಷ ಮುಂದುವರಿಯಲಿದೆ ಎಂದು ಭರವಸೆ ನೀಡಿದರು. ಉಚಿತ ಚಿಕಿತ್ಸೆಯ ಕನಸನ್ನೂ ಕಾಣದ ಜನರಿಗೆ ಆಯುಷ್ಮಾನ್ ಕಾರ್ಡ್ ಮೂಲಕ ಉಚಿತ ಚಿಕಿತ್ಸೆ ಕೊಡುತ್ತಿದ್ದೇವೆ ಎಂದು ವಿವರಿಸಿದರು.

ಎಸ್‍ಸಿ, ಎಸ್‍ಟಿ, ಒಬಿಸಿ ಪರಿವಾರಕ್ಕೆ ನನ್ನ ಸರಕಾರದ ಗರಿಷ್ಠ ಲಾಭ ಸಿಕ್ಕಿದೆ. ನೀರಿನ ಸೌಕರ್ಯ, ಮನೆ ಇಲ್ಲದೆ, ವಿದ್ಯುತ್ ಸಂಪರ್ಕವಿಲ್ಲದೆ ಜನರು ಜೀವಿಸುತ್ತಿದ್ದರು. 10 ವರ್ಷಗಳಲ್ಲಿ 25 ಕೋಟಿ ಜನರು ಬಿಪಿಎಲ್ ರೇಖೆಗಿಂತ ಮೇಲಕ್ಕೆ ಬಂದಿದ್ದಾರೆ ಎಂದು ವಿಶ್ಲೇಷಿಸಿದರು. ಮುಂದಿನ 10 ವರ್ಷಗಳಲ್ಲಿ 3 ಕೋಟಿ ಮನೆಗಳನ್ನು ನಿರ್ಮಿಸಿಕೊಡುತ್ತೇವೆ ಎಂದು ತಿಳಿಸಿದರು.

2014ರಲ್ಲಿ ಎನ್‍ಡಿಎ ಸರಕಾರ ರಚಿಸಲಾಯಿತು. ಎಸ್‍ಸಿ ಕುಟುಂಬದವರು, ಬುಡಕಟ್ಟು ಸಮಾಜದವರಿಗೆ ರಾಷ್ಟ್ರಪತಿ ಆಗುವ ಅವಕಾಶ ಸಿಕ್ಕಿದೆ. ಬಾಬಾಸಾಹೇಬ ಅಂಬೇಡ್ಕರರ 5 ಸ್ಥಳಗಳನ್ನು ಪಂಚತೀರ್ಥವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ವಿವರಿಸಿದರು.

ಎಸ್‍ಸಿ, ಎಸ್‍ಟಿ, ಒಬಿಸಿಯವರಿಗೆ ಶಿಕ್ಷಣ ಕ್ಷೇತ್ರದಲ್ಲೂ ಆದ್ಯತೆ ಕೊಡಲಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್‍ಗೆ ಇದು ಉದಾಹರಣೆ ಎಂದು ದಾಖಲಾತಿ ಸಹಿತ ವಿವರ ನೀಡಿದರು. ಮುದ್ರಾ ಯೋಜನೆಯಡಿ 10 ಲಕ್ಷದ ಬದಲು ಇನ್ನು ಮುಂದೆ 20 ಲಕ್ಷ ಸಾಲ ಕೊಡಲಾಗುವುದು ಎಂದು ಪ್ರಕಟಿಸಿದರು.

ದೊಡ್ಡ ಶಕ್ತಿಗಳು ಮೋದಿಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಲು ಪ್ರಯತ್ನ ನಡೆಸಿವೆ. ಆದರೆ, ನಾರಿ ಶಕ್ತಿ, ಮಾತೃಶಕ್ತಿಯ ಆಶೀರ್ವಾದ, ಜನರ ಸುರಕ್ಷಾ ಕವಚ ನನ್ನ ಜೊತೆಗಿದೆ. ತಾಯಂದಿರ ಸೇವೆ ನನ್ನ ಪ್ರಾಥಮಿಕ ಆದ್ಯತೆ ಎಂದ ಅವರು, 3 ಕೋಟಿ ಸೋದರಿಯರನ್ನು ಲಕ್ಷಾಧಿಪತಿ ದೀದಿ ಮಾಡಲಿದ್ದೇವೆ ಎಂದು ನುಡಿದರು. ಕೃಷಿ ಕ್ಷೇತ್ರದಲ್ಲಿ ಡ್ರೋಣ್ ಪೈಲಟ್ ತರಬೇತಿ ನೀಡಲಾಗುತ್ತಿದೆ. ಈ ಭಾಗದ ಹೆಣ್ಮಕ್ಕಳೂ ಡ್ರೋಣ್ ತಾಂತ್ರಿಕತೆ ಬಳಸುವಂತೆ ಆಗಲಿದೆ ಎಂದು ತಿಳಿಸಿದರು.

ದೇವೇಗೌಡರು ಅತ್ಯಂತ ಅನುಭವಿ ರಾಜಕಾರಣಿ. ಅವರ ಮಾರ್ಗದರ್ಶನ ನಮ್ಮ ಜೊತೆಗಿದೆ. ಎನ್‍ಡಿಎ ಸರಕಾರ ರೈತರನ್ನು ಆರ್ಥಿಕವಾಗಿ ಬಲಪಡಿಸುತ್ತಿದೆ. ಶ್ರೀ ಅನ್ನ ಮೂಲಕ ಸಿರಿಧಾನ್ಯವನ್ನೂ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದ್ದೇವೆ. ಇದು ಈ ಭಾಗದ ಜನರಿಗೆ ನೆರವಾಗಲಿದೆ ಎಂದು ತಿಳಿಸಿದರು. ಇಲ್ಲಿನ ನೀರಿನ ಸಮಸ್ಯೆ ಪರಿಹರಿಸಲು ಮುಂದಾಗಿದ್ದೇವೆ ಎಂದು ಹೇಳಿದರು.

ಇಲ್ಲಿ ಬಿಜೆಪಿ ಸರಕಾರ ಇದ್ದಾಗ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 10 ಸಾವಿರ ಸಿಗುತ್ತಿತ್ತು. ಅದನ್ನು 6 ಸಾವಿರಕ್ಕೆ ಇಳಿಸಲಾಗಿದೆ. 4 ಸಾವಿರ ಕೊಡುತ್ತಿದ್ದುದನ್ನು ರದ್ದು ಮಾಡಿದ್ದಾರೆ. ಇಂಥ ರೈತ ವಿರೋಧಿಗಳಿಗೆ ಪಾಠ ಕಲಿಸಿ ಎಂದು ಮನವಿ ಮಾಡಿದರು. ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯಡಿ ಮೂಲಸೌಕರ್ಯ ಹೆಚ್ಚಿಸುತ್ತಿದ್ದೇವೆ. ಹೆದ್ದಾರಿಗಳ ಸಂಖ್ಯೆ ವ್ಯಾಪ್ತಿ ಹೆಚ್ಚಿಸಿದ್ದೇವೆ. ಈ ಭಾಗದಲ್ಲಿ ವಿಶೇಷ ಆರ್ಥಿಕ ವಲಯ ನಿರ್ಮಿಸಲಾಗುತ್ತಿದೆ. ನಂದಿ ಬೆಟ್ಟ, ತಾಯಿ ಕೋಲಾರಮ್ಮನ ಆಶೀರ್ವಾದ ಇದೆ. ಇವುಗಳಿಗೆ ಪ್ರೋತ್ಸಾಹ ಕೊಡುತ್ತೇವೆ ಎಂದರು. 26ರಂದು ತಪ್ಪದೆ ಮತದಾನ ಮಾಡಿ ಎಂದು ವಿನಂತಿಸಿದರು. ಮೋದಿಜೀ ಅವರು ಬಂದಿದ್ದರು; ನಿಮಗೆಲ್ಲರಿಗೂ ನಮಸ್ಕಾರ ಹೇಳಿದ್ದಾರೆ ಎಂದು ಜನರಿಗೆ ತಿಳಿಸಿ ಎಂದರು.

ಚಿಕ್ಕಬಳ್ಳಾಪುರದ ನನ್ನ ಸೋದರ, ಸೋದರಿಯರಿಗೆ ನಮಸ್ಕಾರಗಳು ಎಂದು ಭಾಷಣ ಆರಂಭಿಸಿದರು. ಸಂತ ಕೈವಾರ ತಾತಯ್ಯ, ವಿಶ್ವೇಶ್ವರಯ್ಯ ಮೊದಲಾದ ಪ್ರಮುಖರನ್ನು ನೆನಪಿಸಿಕೊಂಡರು. ಮೊದಲ ಹಂತದ ಚುನಾವಣೆಯು ದೇಶದ ಉತ್ಸಾಹ ಹೆಚ್ಚಿಸಿದೆ. ಮೊದಲ ಹಂತದಲ್ಲಿ ಎನ್‍ಡಿಎ, ವಿಕಸಿತ ಭಾರತದ ಪರವಾಗಿ ಜನರು ಮತದಾನ ಮಾಡಿದ್ದಾರೆ ಎಂದರು. ದೇವೇಗೌಡರ ಉತ್ಸಾಹ, ಬದ್ಧತೆಯನ್ನು ಮೆಚ್ಚಿಕೊಂಡರು.

ನಿಮ್ಮವರೇ ಚೆಂಬು ಕೊಟ್ಟವರು – ದೇವೇಗೌಡ : ಮಾಜಿ ಪ್ರಧಾನಿ ಎಚ್‍ಡಿ.ದೇವೇಗೌಡ ಅವರು ಮಾತನಾಡಿ, ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳಲ್ಲಿ ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ, ದೇಶವನ್ನು ವಿಶ್ವದಲ್ಲಿ ಪ್ರಥಮ ಸ್ಥಾನಕ್ಕೆ ತೆಗೆದುಕೊಂಡು ಹೋದ ಪ್ರಧಾನಿ ಮೋದಿಯವರನ್ನು ಬೆಂಬಲಿಸೋಣ ಎಂದರು. ಈ ರಾಜ್ಯದ ಮುಖ್ಯಮಂತ್ರಿಗಳು ಚೆಂಬು ಜಾಹೀರಾತು ಪ್ರಕಟಿಸಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರು 10 ವರ್ಷಗಳ ಕಾಲ ಚೆಂಬು ಕೊಟ್ಟಿದ್ದಾರೆ. ಸೋನಿಯಾ ಗಾಂಧಿಯವರು ಯುಪಿಎ ಅಧ್ಯಕ್ಷೆ ಆಗಿದ್ದಾಗ ಕ್ರೀಡೆ, 2 ಜಿ ಸೇರಿ ಅದೆಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಪ್ರಶ್ನಿಸಿದರು. ರಾಷ್ಟ್ರದ ಸಂಪತ್ತನ್ನು ಸೂರೆ ಮಾಡಿ ಚೆಂಬು ಬರಿದಾಗಿದೆ. ಬರಿಯ ಚೆಂಬನ್ನು ಯಾರ ಕೈಗೆ ಕೊಟ್ಟರು ಈ ಕಾಂಗ್ರೆಸ್ ನಾಯಕರು ಎಂದು ಕೇಳಿದರು.

ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ನಿಮ್ಮವರು ಸಂಪತ್ತು ಲೂಟಿ ಮಾಡಿ ಬರಿ ಚೆಂಬು ನೀಡಿದ್ದರು. 10 ವರ್ಷ ದೇಶವಾಳಿದ ಮೋದಿಯವರು ದೇಶದ ಬಡವರು, ಪರಿಶಿಷ್ಟ ಸಮುದಾಯ, ಹಿಂದುಳಿದವರು, ಸಣ್ಣ ಸಣ್ಣ ಸಮಾಜವನ್ನು ಮೇಲೆತ್ತುವ ಕೆಲಸವನ್ನು ಮಾಡಿದ್ದಾರೆ. ಅಂಥ ಮಹಾನುಭಾವ ಮೋದಿ ಎಂದು ವಿಶ್ಲೇಷಿಸಿದರು. ಇದೊಂದು ಕ್ಷುಲ್ಲಕ ರಾಜಕಾರಣ ಎಂದು ಟೀಕಿಸಿದರು. ರಾಹುಲ್ ಗಾಂಧಿ, ಅಬ್ಬಾ ಅವರ ಭಾಷಣ ಎಂದು ನಗುತ್ತ ನುಡಿದರು. ವರ ಭಾಷಣದ ಬಗ್ಗೆ ವ್ಯಾಖ್ಯಾನ ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದರು. ವಿಪಕ್ಷ ಸ್ಥಾನವನ್ನು ಪಡೆಯಲು ಕಾಂಗ್ರೆಸ್ ಪಕ್ಷ 10 ವರ್ಷದಲ್ಲಿ ಪಡೆಯುವ ಯೋಗ್ಯತೆ ಇವರಿಗೆ ಇಲ್ಲ ಎಂದು ಟೀಕಿಸಿದರು.

ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಾತನಾಡಿ, ಅಧಿಕೃತ ವಿಪಕ್ಷಕ್ಕೆ ಬೇಕಾದ ಸ್ಥಾನಗಳೂ ಕಾಂಗ್ರೆಸ್ಸಿಗೆ ಸಿಗಲಾರದು. ಕಾಂಗ್ರೆಸ್ ಅಪ್ರಸ್ತುತವಾಗಲಿದೆ. ನಾವು ಮೈಮರೆಯದೆ ಮೋದಿಜೀ ಅವರ ಜನಹಿತ ಕಾರ್ಯಗಳನ್ನು ಜನತೆಗೆ ತಿಳಿಸಬೇಕು ಎಂದು ಮನವಿ ಮಾಡಿದರು.

ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಡಾ.ಸುಧಾಕರ್ ಅವರು ಮಾತನಾಡಿ, ಕೋವಿಡ್ ಬಂದಾಗಲೂ ಮೇಕೆದಾಟು ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ಸಿಗರು ಇಂಡಿ ಕೂಟದ ಸ್ಟಾಲಿನ್‍ರನ್ನು ಮೆಚ್ಚಿಸಲು ಕದ್ದುಮುಚ್ಚಿ ಕಾವೇರಿ ನೀರನ್ನು ಬಿಟ್ಟಿದ್ದಾರೆ. ಸರಕಾರ ಬಂದು ಒಂದು ವರ್ಷವಾದರೂ ಮೇಕೆಯೂ ಇಲ್ಲ; ದಾಟೂ ಇಲ್ಲ ಎಂದು ಆಕ್ಷೇಪಿಸಿದರು.

ಸಿದ್ದರಾಮಯ್ಯರ ಸರಕಾರ : ಸಿದ್ದರಾಮಯ್ಯರ ಸರಕಾರ ಇದೆ ಎಂದು ಜನರನ್ನು ಒಳಗೆ ಬಿಡುತ್ತಿಲ್ಲವೇ? ಬಿಡ್ರೀ ಅಲ್ಲಿ ಒಳಗೆ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ತಮ್ಮ ಭಾಷಣಕ್ಕೂ ಮೊದಲು ಸೂಚಿಸಿದರು.

ಮೂರನೇ ಅವಧಿಗೆ ಕೂಡ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎನ್‍ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ಪಕ್ಷ 40 ಸ್ಥಾನಗಳನ್ನು ಗೆಲ್ಲುವುದು ಕೂಡ ಕಷ್ಟ ಎಂದು ತಿಳಿಸಿದರು. ಅಕ್ಕಿ ಕೊಟ್ಟಿಲ್ಲ; ನೀರು ಕೊಡಲು ಆಗಿಲ್ಲ. ನಿನ್ನೆ ಜಾಹೀರಾತು ಕೊಟ್ಟು ಜನರಿಗೆ ಚೆಂಬು ಕೊಟ್ಟಿದ್ದಾರೆ. ಚೆಂಬೇನೋ ಕೊಟ್ಟಿದ್ದೀರಿ. ನೀರು ಯಾವಾಗ ಕೊಡುತ್ತೀರಿ ಎಂದು ಪ್ರಶ್ನಿಸಿದರು. ಮೋದಿಯವರಿಗೆ ಸಮಾನವಾದ ವ್ಯಕ್ತಿ ಈ ದೇಶದಲ್ಲಿ ಇಲ್ಲ ಎಂದು ನುಡಿದರು. ಬ್ರದರ್ ಎಂಬ ಓಲೈಕೆ ರಾಜಕಾರಣವನ್ನು ಟೀಕಿಸಿದರು.

ಕೋಲಾರದ ಅಭ್ಯರ್ಥಿ ಮಲ್ಲೇಶಬಾಬು, ಬಿಜೆಪಿ- ಜೆಡಿಎಸ್ ಪ್ರಮುಖರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!