WhatsApp Image 2024-03-02 at 7.50.53 PM

ನಾಲ್ಕು ವರ್ಷದ ಪದವಿ ಕೋರ್ಸ್ ನ ನಿರ್ಧಾರ ಘೋಷಿಸುವಲ್ಲಿನ ವಿ.ವಿ ವಿಳಂಬ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,2- ನಾಲ್ಕು ವರ್ಷದ ಪದವಿ ಕೋರ್ಸ್ ನ ನಿರ್ಧಾರ ಘೋಷಿಸುವಲ್ಲಿನ ವಿಳಂಬ ಹಾಗೂ ಅಪ್ರಜಾತಾಂತ್ರಿಕವಾಗಿ ಹೇರಿದ ನಾಲ್ಕು ವರ್ಷದ ಪದವಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಎಐಡಿಎಸ್ಓ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾಧ್ಯಕ್ಷರಾದ ಕೆ.ಈರಣ್ಣ ಮಾತನಾಡಿ ಕಳೆದ ಸರ್ಕಾರ ಅತ್ಯಂತ ತರಾತುರಿಯಲ್ಲಿ ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಎನ್ಇಪಿ-2020 ಯನ್ನು ಜಾರಿ ಮಾಡಿತು.ಎನ್ಇಪಿ-2020 ಭಾಗವಾಗಿದ್ದ ನಾಲ್ಕು ವರ್ಷದ ಪದವಿಯನ್ನು ಅಪ್ರಜಾತಾಂತ್ರಿಕವಾಗಿ ಹೇರಿಕೆ ಮಾಡಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕವನ್ನುಂಟು ಮಾಡಿತು ಎಂದು ಕಿಡಿ ಕಾರಿದರು.

ಈ ಹಿನ್ನೆಲೆ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯು ಶಿಕ್ಷಣಕ್ಕೆ ಮಾರಕವಾಗಿರುವ ಎನ್ಇಪಿ-2020 ವಿರುದ್ಧ ರಾಜ್ಯದಲ್ಲಿ ಹಲವಾರು ಬಲಿಷ್ಠ ಚಳುವಳಿಯನ್ನು ಕಟ್ಟಿದೆ. ಈ ನೀತಿಯ ವಿರುದ್ಧ ಐತಿಹಾಸಿಕವಾಗಿ 35 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂಸೇವರಕರಾಗಿ ರಾಜ್ಯದ ಮೂಲೆ ಮೂಲೆಗಳಿಂದ 36 ಲಕ್ಷ ಸಹಿಗಳನ್ನು ಸಂಗ್ರಹಿಸಿದರು ಎಂದು ಹೇಳಿದರು.

ಎಐಡಿಎಸ್ಓ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡಿ…. ಅಭೂತಪೂರ್ವ ಹೋರಾಟಗಳ ಫಲವಾಗಿ ರಾಜ್ಯದಲ್ಲಿ ಎನ್ ಈಪಿ- 2020 ಅನ್ನು ರಾಜ್ಯದಿಂದ ಹಿಮ್ಮೆಟ್ಟಿಸಲಾಯಿತು ಹಾಗೂ ರಾಜ್ಯ ಸರ್ಕಾರವು ರಾಜ್ಯದ ಶಿಕ್ಷಣ ನೀತಿಯನ್ನು ರೂಪಿಸಲು ಸಮಿತಿಯನ್ನು ರಚಿಸಿತು. ಜನಪರ ಶಿಕ್ಷಣ ನೀತಿಯನ್ನು ರೂಪಿಸಲು ಆಗ್ರಹಿಸಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯಯಿಂದ ಕರ್ನಾಟಕದ 23 ಸಾವಿರಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿ ಸಮೀಕ್ಷೆಯನ್ನು ನಡೆಸಲಾಯಿತು. ನಡೆಸಿದ ಸಮೀಕ್ಷೆಯಲ್ಲಿ ಶೇಕಡ 83 ರಷ್ಟು ವಿದ್ಯಾರ್ಥಿಗಳು ನಾಲ್ಕು ವರ್ಷದ ಪದವಿ ಬೇಡವೆಂದು ಹೇಳಿದ್ದಾರೆ.

ಆದರೆ ರಾಜ್ಯ ಸರ್ಕಾರ ರಚಿಸಿರುವ ರಾಜ್ಯ ಶಿಕ್ಷಣ ಆಯೋಗವು ರಾಜ್ಯ ಶಿಕ್ಷಣ ನೀತಿ ಕುರಿತಾದ ಅಂತಿಮ ವರದಿಯನ್ನು ಆಗಸ್ಟ್ ನಲ್ಲಿ ನೀಡುವುದಾಗಿ ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ. 4 ವರ್ಷದ ಪದವಿಯನ್ನು ಹಿಂಪಡೆಯುವ ಕುರಿತು ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಸರ್ಕಾರದ ಈ ವಿಳಂಬವು ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರಕ್ಕೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

5ನೇ ಸೆಮಿಸ್ಟರ್ ಕೊನೆ ಹಂತದಲ್ಲಿ ಪದವಿ ವಿದ್ಯಾರ್ಥಿಗಳಿಗೆ, ಇದೇ ಅಂತಿಮ ವರ್ಷವೇ ಅಥವಾ ಇನ್ನೊಂದು ವರ್ಷ ಓದಬೇಕೇ ಎಂಬುದರ ಕುರಿತು ಯಾವ ಸ್ಪಷ್ಟತೆಯನ್ನೂ ನೀಡಲಾಗಿಲ್ಲ. ಈ ವಿಳಂಬದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಕುರಿತಾಗಿಯೇ ಸ್ಪಷ್ಟತೆ ಇಲ್ಲದಂತಾಗಿದೆ. ಇನ್ನೂ 3-4ತಿಂಗಳಲ್ಲಿ ಮೂರನೇ ವರ್ಷದ ಪದವಿ ಮುಗಿಯಲಿದ್ದು, ಅವರ ಭವಿಷ್ಯ ಅತಂತ್ರದಲ್ಲಿದೆ. ಆದ್ದರಿಂದ 4 ವರ್ಷ ಪದವಿ ಕೋರ್ಸ್ ಕುರಿತ ನಿರ್ಧಾರವನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದೆಂದು ಎಂದು ಆಗ್ರಹಿಸಿದರು .

ಎಐಡಿಎಸ್‌ಓ ಜಿಲ್ಲಾ ಉಪಾಧ್ಯಕ್ಷರು ಉಮಾ ಪ್ರತಿಭಟನೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಾಗೂ ಉಪಾಧ್ಯಕ್ಷರಾದ ಎಂ.ಶಾಂತಿ, ಪ್ರಮೋದ್, ಖಜಾಂಚಿ ಅನುಪಮ, ಕಛೇರಿ ಕಾರ್ಯದರ್ಶಿ ನಿಹಾರಿಕ ಹಾಗೂ ಎಐಡಿಎಸ್‌ಓ ಕಾರ್ಯಕರ್ತರಾದ ಸತೀಶ್, ಹೊನ್ನೂರು ಸ್ವಾಮಿ ಹಾಗೂ ಸಿಟಿ ಕಾಲೇಜ್ ಹಾಗೂ ಸರಳಾದೇವಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಃಇಸಿದ್ದರು.

Leave a Reply

Your email address will not be published. Required fields are marked *

error: Content is protected !!