
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 5- ಪರಿಸರದ ಬಗ್ಗೆ ಜಾಗೃತಿ, ರಕ್ಷಣೆ ಮತ್ತು ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನುವಹಿಸುತ್ತದೆ. ಆದ್ದರಿಂದ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆಂದು ಉಪ ಸರಂಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ ವಿಭಾಗ) ಹುಸೇನ ಪೆಂಡಾರಿ ಕರೆ ನೀಡಿದರು.
ದಿನಾಂಕ:05-06-2024ರಂದು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಕೊಪ್ಪಳ ತಾಲೂಕಿನ ಲೇಬಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮನೂರು ಗ್ರಾಮದ ಗೋಮಾಳ ಪ್ರದೇಶದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ಸಮೃದ್ಧ, ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿರುತ್ತದೆ. ಮನುಷ್ಯ ತನ್ನ ಅಭಿವೃದ್ಧಿಗಾಗಿ ತನಗರಿವಿಲ್ಲದಂತೆ ಪರಿಸರ ಹಾಳು ಮಾಡುತ್ತಿದ್ದಾನೆ. ಇದನ್ನು ಹೇಗಾದರೂ ಮಾಡಿ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜೂನ್-5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.
ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರವನ್ನು ಹಾಳು ಮಾಡುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ. ನಮ್ಮ ಪರಿಸರದ ಸಂರಕ್ಷಣೆಗಾಗಿ ನಾವೆಲ್ಲರೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವುದು ಅವಶ್ಯವಿದೆ. ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಪರಿಸರಕ್ಕೆ ಸಂಬಂಧಿಸಿದಂತೆ ಬದಲಾವಣೆ ಅನುಸರಿಸಿದಲ್ಲಿ ಭೂಮಿಯ ಉಳಿವಿಗೆ ಸಹಾಯಕವಾಗುತ್ತದೆ. ಗೋಮಾಳ ಪ್ರದೇಶದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಹೊಂಗೆ, ಅಪಸಿ, ಸಿಹಿ ಹುಣಸೆ, ಸಿಮಾರುಬಾ, ನೆರಳೆ ಸಸಿಗಳು ಸೇರಿದಂತೆ ಒಟ್ಟು 15 ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತಿಯ ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಸಾಮಾಜಿಕ ವಲಯ ಅರಣ್ಯಧಿಕಾರಿ ಗುರುನಗೌಡ ಪಾಟೀಲ್, ಉಪ ವಲಯ ಅರಣ್ಯಧಿಕಾರಿ ಅಬ್ದು ಸಮಿ, ಜಿಲ್ಲಾಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಯಮನೂರ, ತಾಂತ್ರಿಕ ಸಂಯೋಜಕಿ ಕವಿತಾ ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ ಮೇಗಳಮನಿ, ಅರಣ್ಯ ಇಲಾಖೆಯ ತಾಂತ್ರಿಕ ಸಹಾಯಕಿ ನೇತ್ರಾವತಿ, ಅರಣ್ಯ ರಕ್ಷಕರು, ಸಾಮಾಜಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.