
ಮಕ್ಕಳಲ್ಲಿ ಭೇದಿ ಮತ್ತು ಅತಿಸಾರ
ಪೋಷಕರು ಕಾಳಜಿ ವಹಿಸಲು ಉಪಮೇಯರ್ ಬಿ.ಜಾನಕಿ ಕರೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,೧೫- 5 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುವ ತೀವ್ರತರ ಅತಿಸಾರ ಭೇದಿಯನ್ನು ಪೋಷಕರು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಕಾಳಜಿ ವಹಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಮಹಾನಗರ ಪಾಲಿಕೆ ಉಪಮೇಯರ್ ಬಿ.ಜಾನಕಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ದೇವಿನಗರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಮೇದಾರ ವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ, ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ, ನವಜಾತ ಶಿಶು ಆರೈಕೆ ಸಪ್ತಾಹ ಹಾಗೂ ಸಾಂಸ್ ಜಾಗೃತಿಯ ಜಿಲ್ಲಾ ಮಟ್ಟದ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
5 ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿಯಿಂದ ಸಂಭವಿಸುವ ಮರಣ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ಉದ್ದೇಶದಿಂದ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಹಾಗೂ ಓಆರ್ಎಸ್ ಪ್ಯಾಕೇಟ್ಗಳ ವಿತರಣಾ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ. ಎಲ್ಲರೂ ಸದುಪಯೋಗಪಡೆದುಕೊಂಡು ಆರೋಗ್ಯಕರ ಜೀವನ ಹೊಂದಬೇಕು ಎಂದು ಹೇಳಿದರು.
ಅತಿಸಾರ ಭೇದಿಯಿಂದ ದೇಹವು ತೀವ್ರ ನಿರ್ಜಲೀಕರಣವಾಗುವ ಸಾಧ್ಯತೆ ಇರುತ್ತವೆ. ಇಂತಹ ಪ್ರಕರಣಗಳಾದ್ದಲ್ಲಿ ಅವರು ತಪ್ಪದೇ ಹತ್ತಿರದ ತಾಲೂಕು ಅಥವಾ ಜಿಲ್ಲಾ ಆಸ್ಪತೆಗಳಿಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯಬೇಕು ಎಂದರು.
ನವಜಾತ ಶಿಶು ಸಪ್ತಾಹ ಕಾರ್ಯಕ್ರಮ:
ನವಜಾತ ಹಾಗೂ ಎಳೆಯ ಮಕ್ಕಳಿಗೆ 6 ತಿಂಗಳವರೆಗೆ ತಾಯಿ ಎದೆ ಹಾಲನ್ನು ಮಾತ್ರ ಶಿಶುವಿಗೆ ಕೊಡುವ ಬಗ್ಗೆ ಉತ್ತೇಜಿಸುವುದು ಹಾಗೂ ನಂತರದ ದಿನಗಳಲ್ಲಿ ತಾಯಿಯ ಎದೆ ಹಾಲಿನೊಂದಿಗೆ ಪೂರಕ ಆಹಾರ ನೀಡುವುದರ ಬಗ್ಗೆ ಆಶಾ-ಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್ ಬಾಬು ಅವರು ಮಾತನಾಡಿ, ಜಿಲ್ಲೆಯಲ್ಲಿ 192115 ಮಕ್ಕಳಿಗೆ ಹುಟ್ಟಿನಿಂದ 5ವರ್ಷದೊಳಗಿನ ಮಕ್ಕಳಿರುವ ಕುಟುಂಬಗಳಿಗೆ 274266 ಓಆರ್ಎಸ್ ಪೆÇಟ್ಟಣಗಳನ್ನು ವಿತರಿಸುವ ಮತ್ತು ಮನೆ ಭೇಟಿ ಸಂದರ್ಭದಲ್ಲಿ ಭೇದಿಯಿಂದ ಬಳಲುತ್ತಿರುವ ಮಕ್ಕಳಿಗೆ 14 ದಿನಗಳ ಕಾಲ ಜಿಂಕ್ ಮಾತ್ರೆಯನ್ನು ವಿತರಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.
ಆನಿಮೀಯ ಮುಕ್ತ ಪೌಷ್ಟಿಕ ಕರ್ನಾಟಕ:
6 ತಿಂಗಳಿನಿಂದ 18 ವರ್ಷದೊಳಗಿನ ಎಲ್ಲರಿಗೂ ರಕ್ತಹೀನತೆಯನ್ನು ತಡೆಗಟ್ಟಲು ಎಲ್ಲಾ ಗರ್ಭಿಣಿ, ಬಾಣಂತಿಯರಿಗೂ ಹಾಗೂ ಸಂತಾನೋತ್ಪತ್ತಿ 20 ರಿಂದ 24 ವಯಸ್ಸಿನ ಎಲ್ಲಾ ಮಹಿಳೆಯರಿಗೆ ರಕ್ತದಲ್ಲಿ ಕಬ್ಬಿಣಾಂಶದ ಪರೀಕ್ಷೆ ಕೈಗೊಂಡು ಸೂಕ್ತ ಔಷದೋಪಚಾರ ಹಾಗೂ ಸ್ಥಳೀಯವಾಗಿ ದೊರೆಯುವ ತರಕಾರಿ, ಹಣ್ಣು ಹಂಪಲು, ಹಸಿರು ತಪ್ಪಲು ಪದಾರ್ಥಗಳನ್ನು ಮೊಳಕೆ ಒಡೆದ ದ್ವಿದಳ ಧಾನ್ಯಗಳನ್ನು ಸೇವಿಸುವ ಕುರಿತು ಜಾಗೃತಿ ನೀಡುವ ಅಭಿಯಾನವಾಗಿದೆ. ಪ್ರಸ್ತುತ 16 ರಿಂದ 18 ವರ್ಷದೊಳಗಿನ 30,000 ಜನರನ್ನು ತಪಾಸಣೆಗೊಳಪಡಿಸುವ ಗುರಿ ಹೊಂದಲಾಗಿದೆ ಎಂದೂ ತಿಳಿಸಿದರು.
ಸಾಂಸ್ ಕಾರ್ಯಕ್ರಮ:
ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಯನ್ನು ತಲೆದೋರಿಸಿ ಮರಣ ಸಂಭವಿಸಲು ಕಾರಣವಾಗುವ ನ್ಯುಮೋನಿಯವನ್ನು ತಡೆಗಟ್ಟುವ ಮೂಲಕ ಮಗುವಿನ ಬಾಲ್ಯವನ್ನು ಸದೃಢಗೊಳಿಸಲು ಸಾಂಸ್ ಕಾರ್ಯಕ್ರಮ ಅನುಷ್ಟಾನ ಮಾಡಲಾಗಿದೆ. ಮಗುವಿಗೆ ಕೆಮ್ಮು, ಉಸಿರಾಟದ ತೊಂದರೆ, ಪಕ್ಕೆಸೆಳೆತ, ವೇಗದ ಉಸಿರಾಟ, ತೀವ್ರಜ್ವರ ಕಂಡುಬಂದಲ್ಲಿ ಆಶಾಕಾರ್ಯಕರ್ತೆಯರು ವೈದ್ಯರ ಬಳಿ ಕಳುಹಿಸುವರು ಎಂದು ವಿವರಿಸಿದರು.
ಪ್ರಸ್ತಕ ಸಾಲಿನಲ್ಲಿ ರಾಷ್ಟ್ರೀಯ ನವಜಾತ ಶಿಶು ಸಪ್ತಾಹ ಕಾರ್ಯಕ್ರಮ (ನ.15ರಂದು 21ರವರೆಗೆ), ತೀವ್ರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ (ನ.15ರಿಂದ ನ.28ರವರೆಗೆ), ನ್ಯುಮೋನಿಯಾ ಕೊನೆಗೊಳಿಸಲು ಸಾಮಾಜಿಕ ಜಾಗೃತಿ ಹಾಗೂ ಕ್ರಿಯೆ 2023 (ನ.15ರಿಂದ 2024ರ ಫೆ.29ರವರೆಗೆ) ಮತ್ತು ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮ (ನ.15ರಿಂದ ಡಿ.08ರವರೆಗೆ) ಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಹಾಗೂ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನದ ಜಾಗೃತಿ ಭಿತ್ತಿ ಪತ್ರಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ 5 ಜನ ಗರ್ಭಿಣಿಯರಿಗೆ ಸೀಮಂತ ಕಾರ್ಯ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯ ಕುಬೇರ ಅವರು, 14 ಜನ ಕುಷ್ಟರೋಗಿಗಳನ್ನು ದತ್ತು ಪಡೆದುಕೊಂಡು, ತಿಂಗಳಿಗೆ ಬೇಕಾದ ಪೌಷ್ಟಿಕ ಆಹಾರ ಕಿಟ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ಮಾಲನ್.ಬಿ., ಮಹಾನಗರ ಪಾಲಿಕೆ ಸದಸ್ಯೆ ಕಲ್ಪನಾ, ಎಸ್ಡಿಎಂಸಿ ಅಧ್ಯಕ್ಷ ಹುಸೇನ್, ರಾಮಣ್ಣ, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಆರ್.ಅನೀಲ್ ಕುಮಾರ್, ಜಿಲ್ಲಾ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ದೇವಿನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸುರೇಖಾ, ವೈದ್ಯಾಧಿಕಾರಿ ಡಾ.ಸುಧಾರಾಣಿ, ಮೇದಾರವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಸೈಯದುಲ್ಲಾ ಸೇರಿದಂತೆ ಆಶಾ ಕಾರ್ಯಕರ್ತೆಯರು, ತಾಯಂದಿರು, ಶಾಲಾ ಮಕ್ಕಳು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.
ನಂತರದಲ್ಲಿ ಆಶಾ ಕಾರ್ಯಕರ್ತೆಯರಿಂದ ಓಆರ್ಎಸ್ ದ್ರಾವಣ ಪುಡಿಯನ್ನು ಹೇಗೆ ಮಿಶ್ರಿತಗೊಳಿಸಿ ಉಪಯೋಗಿಸಬೇಕು ಎನ್ನುವುದರ ಕುರಿತು ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು