
ಬಳೂಟಗಿ : ನರೇಗಾ ಕೂಲಿಕಾರ್ಮಿಕರಿಗೆ ಮತದಾನ ಜಾಗೃತಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 22- ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಳೂಟಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಜಿಲ್ಲಾ, ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಸ್ವೀಪ್ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.
ಈ ವೇಳೆ ತಾಲೂಕು ಐಇಸಿ ಸಂಯೋಜಕರು ಮಾತನಾಡಿ, 2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಬಳೂಟಗಿ ಗ್ರಾಮದ ನರೇಗಾ ಕೂಲಿಕಾರರು ಮೇ 7 ರಂದು ನಡೆಯುವ ಮತದಾನದಂದು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಸಂವಿಧಾನ ಕೊಟ್ಟಿರುವ ಹಕ್ಕಾಗಿದೆ. ಅದನ್ನು ನಾವು ಚಲಾಯಿಸಬೇಕು. ಅದರಿಂದ ವಂಚಿತರಾಗಬಾರದು. ಶೇಕಡಾ 100 ರಷ್ಟು ಮತದಾನ ಆಗಬೇಕು ಎಂದರು.
ಗ್ರಾಮ ಪಂಚಾಯತಿ ಪಿಡಿಒ ಎಂ.ಡಿ.ಫಯಾಜ್ ಮಾತನಾಡಿ, 2024-25 ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಸಾಮೂಹಿಕ ಕೆಲಸ ಆರಂಭಿಸಲಾಗಿದೆ. ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಈ ಬಾರಿ ಎಲ್ಲರೂ 100 ಮಾನವ ದಿನಗಳನ್ನು ಸದುಪಯೋಗ ಪಡೆಯಬೇಕು. ತಮಗೆ ಯೋಜನೆಯ ಬಗ್ಗೆ ಏನಾದರೂ ಸಮಸ್ಯೆಗಳು ಇದ್ದರೆ ನರೇಗಾ ಯೋಜನೆಯ ಏಕೀಕೃತ ಸಹಾಯವಾಣಿ 8277506000 ಗೆ ದೂರು ಅಥವಾ ಕೆಲಸದ ಬೇಡಿಕೆಗಾಗಿ ಕರೆ ಮಾಡಬಹುದು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯತಿ ಡಿಇಒ ಮಹೇಶ ಮಾತನಾಡಿ, ನರೇಗಾದಡಿ ಎನ್ಎಂಆರ್ ತೆಗೆಸುವ ಮೊದಲು ತಮ್ಮ ಜಾಬ್ಕಾರ್ಡ್ಗೆ ಬ್ಯಾಂಕ್ ಪಾಸ್ಬುಕ್ ಲಿಂಕ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ರೀತಿಯ ಸಮಸ್ಯೆ ಇದ್ದರೆ ಬ್ಯಾಂಕ್ಗೆ ಹೋಗಿ ಸರಿಪಡಿಸಿಕೊಳ್ಳಬೇಕು ಎಂದರು.
ಕಾಮಗಾರಿ ಸ್ಥಳದಲ್ಲಿ 200 ಕ್ಕೂ ಹೆಚ್ಚು ಅಕುಶಲ ಕೂಲಿಕಾರರಿಂದ ಮತದಾನದ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಈ ವೇಳೆ ಬಿಎಫ್ಟಿ ಶರೀಫ್, ಕಾಯಕ ಮಿತ್ರರಾದ ವಿದ್ಯಾ ಗಾಣಿಗೇರ, ಕಾಯಕ ಬಂಧುಗಳು, ಅಕುಶಲ ಕೂಲಿಕಾರರು ಹಾಜರಿದ್ದರು.