
ಬಿಸಿಲ ನಗರಿ ಬಳ್ಳಾರಿಯಲ್ಲಿ ಜನಮನ ಸೂರೆಗೊಂಡ ಸಂಗೀತ ಬೈಠಕ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 1- ಸೂರ್ಯನಗರಿ ಬಳ್ಳಾರಿಯಲ್ಲೀಗ ಬಿಸಿಲು ಸುರಿಯುತ್ತಿದ್ದರೆ ಸಮಾನ ಮನಸ್ಕ ಸಂಗೀತಗಾರರೆಲ್ಲ ಸೇರಿಕೊಂಡು `ಸಂಗೀತದ ಬೈಠಕ್’ ಆಯೋಜಿಸುವ ಮೂಲಕ ಸಪ್ತಸ್ವರಗಳ ನಿನಾದವನ್ನು ಮೊಳಗಿಸುತ್ತಿದ್ದಾರೆ.
ಸಂಗೀತ ಶಾರದೆಯ ಧಮನಿಯಲ್ಲಿ ಮೂಡಿ ಬರುವ ಸ…ರಿ…ಗ…ಮ…ಪ…ದ…ನಿ ಸ್ವರಗಳ ಲಯ, ತಾಳ ಮತ್ತು ಮೇಳಗಳ ನಡುವೆ ಬಿಸಿಲಿನ ಬಿಸಿಯಲ್ಲೂ ಸಂಗೀತದ ಪಸೆ ಪಸರಿಸುತ್ತಿದ್ದಾರೆ. ಆ ಮೂಲಕ ಸಂಗೀತ ಸರಸ್ವತಿಯ ಆರಾಧನೆ ಮಾಡುತ್ತಿದ್ದಾರೆ. ನಗರದ ಬಹುತೇಕ ಸಂಗೀತಾಸಕ್ತರು, ಸಂಗೀತ ಪ್ರೇಮಿಗಳು ಈ `ಸಂಗೀತ ಬೈಠಕ್ ಕಾರ್ಯಕ್ರಮ’ ವನ್ನು ಉತ್ತೇಜಿಸುತ್ತಿದ್ದು, ಇದು 9ನೇ ಕಾರ್ಯಕ್ರಮವಾಗಿದೆ. ಆಯಾ ತಿಂಗಳ ಯಾವುದಾದರೂ ಒಂದು ಭಾನುವಾರ ಆಯ್ಕೆ ಮಾಡಿಕೊಂಡು ಸಂಗೀತ ಬೈಠಕ್ ನಡೆಸಲಾಗುತ್ತದೆ.
ಈ ಬಾರಿ ಗಾಂಧಿನಗರ ಬಾಲಭಾರತಿ ಶಾಲೆಯ ಮುಂಭಾಗದಲ್ಲಿನ ಮೀನಾಕ್ಷಿ ನಿಲಯದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಮೂಲಕ ಸಂಜೆಯ ಸೊಬಗಿಗೆ ಸಂಗೀತದ ರಸಸ್ಪರ್ಶ ಸ್ಫುರಿಸಿದರು.
ಪ್ರತಿ ಸಂಗೀತ ಬೈಠಕ್ ನಲ್ಲಿ ಓರ್ವ ಹಿರಿಯ ಸಂಗೀತ ಕಲಾವಿದರು ಮತ್ತು ಓರ್ವ ಕಿರಿಯ ಸಂಗೀತ ಕಲಾವಿದರನ್ನು ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸುವುದು ವಾಡಿಕೆ. ಈ ಬಾರಿ ಡ್ರೀಮ್ ವಲ್ರ್ಡ್ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ, ದಿ.ವಿಜಯಾ ಕಿಶೋರ್ ಮತ್ತು ಹಾಲಿ ದೊಡ್ಡಯ್ಯ ಕಲ್ಲೂರು ಅವರ ಶಿಷ್ಯೆ ಎಂ.ಎಸ್. ಜಯಲಕ್ಷ್ಮಿ ಇವರು ಮಿಯಾ ಮಲ್ಹಾರ್ ರಾಗದಲ್ಲಿ ಗಾಯನ ಆರಂಭಿಸಿ ಶ್ರೋತೃಗಳ ಮನ ತಣಿಸಿದರು. ದಾಸರ ಪದಗಳು, ಅಭಂಗ ಮತ್ತು ಮೀರಾ ಭಜನ್ ಹಾಡಿದರು.
2 ತಾಸಿನ ಈ ಕಾರ್ಯಕ್ರಮದಲ್ಲಿ ಪ್ಯೂಪಿಲ್ ಟ್ರೀ ಅಕಾಡೆಮಿಯ ಸಂಗೀತ ಶಿಕ್ಷಕ ರಾಘವೇಂದ್ರ ಗುಡದೂರು ಇವರು ಸಹಿತ ಮುಲ್ತಾನಿ ರಾಗದಲ್ಲಿ ಗಾಯನ ಆರಂಭಿಸಿ, ಪುರಂದರ ದಾಸರ `ಕರುಣಿಸೋ ರಂಗಾ ಕರುಣಿಸೋ’ ಭೈರವಿ ರಾಗದಲ್ಲಿ ಪ್ರಸ್ತುತ ಪಡಿಸಿ ಸಂಗೀತಾಸಕ್ತರನ್ನು ಸಂತೃಪ್ತಗೊಳಿಸಿದರು.
ಪದ್ಮಜಾ ಅರಳಿಕಟ್ಟೆ, ಪೋಲಕ್ಸ್ ಹನುಮಂತಪ್ಪ ಮತ್ತು ಎರೇಗೌಡ ಅವರು ಹಾರ್ಮೋನಿಯಮ್ ಸಾಥ್ ನೀಡಿದರೆ, ಹಿರಿಯ ಪತ್ರಕರ್ತರು ಮತ್ತು ಸಂಗೀತಗಾರರಾದ ಎಂ.ಅಹಿರಾಜ್, ಶಿವಪ್ರಕಾಶ್ ವಸ್ತ್ರದ್, ಪವಮಾನ ಅರಳಿಕಟ್ಟೆ ಮತ್ತು ಹರ್ಷಾ ಆಚಾರ್ ಅವರು ತಬಲಾ ಸಾಥ್ ನೀಡಿದರು.