
ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ನೀಡಿ : ಪವಾಡೆಪ್ಪ ಚೌಡ್ಕಿ
ಕರುನಾಡ ಬೆಳಗು ಸುದ್ದಿ
ಕುಷ್ಟಗಿ, 13- ಆಧುನಿಕ ಯುಗದಲ್ಲಿ ಸ್ಪರ್ಧಾತ್ಮಕತೆ ಹೆಚ್ಚು ಇದ್ದು ಮಕ್ಕಳಿಗಾಗಿ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸರಕಾರಿ ಬಾಲಕಿಯರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಪವಾಡೆಪ್ಪ ಚೌಡ್ಕಿ ಹೇಳಿದರು.
ಇಲ್ಲಿನ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಟಾಟಾ ಟ್ರಸ್ಟ್ ವತಿಯಿಂದ ೩ ರಿಂದ ೫ನೇ ತರಗತಿಯ ಹಿಂದುಳಿದ ಮಕ್ಕಳಿಗೆ ಕನ್ನಡ, ಇಂಗ್ಲಿಷ್, ಗಣಿತ ವಿಷಯಗಳಿಗೆ ತರಬೇತಿ ಕೇಂದ್ರ ಪ್ರಾರಂಭ ಕುರಿತು ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹೆಣ್ಣು ಮತ್ತು ಗಂಡು ಮಕ್ಕಳು ಕಲಿಕೆಯಲ್ಲಿ ಮುಂದೆ ಬರಬೇಕು ಎಂದರೆ ಶಾಲೆಯಲ್ಲಿ ಶಿಕ್ಷಕರು ಹೇಳಿದ ಪಾಠವನ್ನು ಮಕ್ಕಳು ಸರಿಯಾಗಿ ಕಲಿಯಬೇಕು ಹಾಗೂ ತಂದೆ ತಾಯಿಗಳು ಕೂಡ ಮಕ್ಕಳಿಗೆ ಪ್ರತಿ ನಿತ್ಯ ಮನೆಯಲ್ಲಿ ಅಭ್ಯಾಸ ಮಾಡಿಸಬೇಕು. ಅಂದಾಗ ಮಾತ್ರ ಮಕ್ಕಳಿಗೆ ಮುಂದಿನ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ಕಲಿಯಲು ಸುಲಭವಾಗುತ್ತದೆ. ಅದರಂತೆ ಶಾಲೆಯಿಂದ ಮಕ್ಕಳು ಮನೆಗೆ ಬಂದ ತಕ್ಷಣ ಮಕ್ಕಳ ತಂದೆ ತಾಯಿಗಳು ತಮ್ಮ ಮಕ್ಕಳ ಕಲಿಕೆ ಬಗ್ಗೆ ಜಾಗೃತಿ ವಹಿಸಬೇಕು. ನಮ್ಮ ಮಗ ಮತ್ತು ಮಗಳು ಶಾಲೆಯಲ್ಲಿ ಇವತ್ತು ಏನು ಓದಿದ್ದಾಳೆ ಮತ್ತು ಏನು ಕಲಿತು ಬಂದಿದ್ದಾಳೆ ಮತ್ತು ಕಲಿಯುತ್ತಿದ್ದಾಳೆ ಎನ್ನುವದನ್ನು ನಾವುಗಳು ಮಕ್ಕಳಿಗೆ ಕೇಳಬೇಕು ಮತ್ತು ಮನವರಿಕೆ ಮಾಡಿಕೊಡಬೇಕು ಮಕ್ಕಳ ಬಗ್ಗೆ ತಂದೆ ತಾಯಿಗಳು ಕಾಳಜಿ ವಹಿಸಬೇಕು. ಬರೀ ಪಾಠ ಕಲಿಸುವಂತ ಶಿಕ್ಷಕರ ಮೇಲೆ ಜವಾಬ್ದಾರಿ ಬಿಟ್ಟರೆ ಸಾಲದು. ನಮ್ಮ ಮಕ್ಕಳು ಸರಕಾರಿ ಶಾಲೆಯಲ್ಲಿ ಓದಬೇಕು ಸರಕಾರಿ ಶಾಲೆಯಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಮಕ್ಕಳು ಸರಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಕಲಿತು ಉಜ್ವಲ ಭವಿಷ್ಯವನ್ನು ಕಂಡುಕೊಂಡಿದ್ದೆಯಾದಲ್ಲಿ ಮುಂದಿನ ಪೀಳಿಗೆಗೆ ಖಾಸಗಿ ಶಾಲೆಗಳೇ ಬೇಡ ಅದಕ್ಕಾಗಿ ಪ್ರತಿಯೊಬ್ಬ ತಂದೆತಾಯಿಗಳು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣ ಕಲಿಸಬೇಕು ಮತ್ತು ಸರಕಾರಿ ಶಾಲೆಗೆ ಸೇರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಶಾಲಾ ಎಸ್.ಡಿ.ಎಂ.ಸಿ. ಸದಸ್ಯರಾದ ಸುರೇಶ ಕೌದಿ, ಮಲ್ಲಪ್ಪ ಕಂಚಿ, ಗುರುರಾಜ ಆಗೋಲಿ, ರಾಮಣ್ಣ ಭೋವಿ, ಶಾಲಾ ಮುಖ್ಯೋಪಾಧ್ಯಾಯರಾದ ಸಿದ್ರಾಮಪ್ಪ ಅಮರಾವತಿ, ಟಾಟಾ ಟ್ರಸ್ಟ್ ತರಬೇತಿ ಶಿಕ್ಷಣ ಸಂಯೋಜಕ ವೀರೇಶ ಹಂಚಿನಾಳ, ಶಿಕ್ಷಕಿ ಶಾರಾದಾ ದಿಗ್ಗಾವಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.