
ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಅಂತಿಮ ಸಿದ್ಧತೆಗಳ ಪರಿಶೀಲನೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 1- ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಕುತೂಹಲಕ್ಕೆ ಅಂತಿಮ ತೆರೆ ಎಳೆಯುವ ಪ್ರಕ್ರಿಯೆಯಾದ ಮತಗಳ ಎಣಿಕೆ ಕಾರ್ಯ ಜೂ.04 ರಂದು ಬೆಳಿಗ್ಗೆ 08 ಗಂಟೆಯಿಂದ ಬಳ್ಳಾರಿ ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಜರುಗಲಿದ್ದು, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮತ ಎಣಿಕಾ ಕೇಂದ್ರಕ್ಕೆ ಭೇಟಿ ನೀಡಿ, ಅಂತಿಮ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು.
ಜೂ.04 ರಂದು ಬೆಳಿಗ್ಗೆ 08 ಗಂಟೆಗೆ ಮತ ಎಣಿಕಾ ಕಾರ್ಯ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ಸ್ಟ್ರಾಂಗ್ ರೂಂ ಗಳನ್ನು ತೆರೆಯುವುದು, ಪೋಸ್ಟಲ್ ಬ್ಯಾಲೆಟ್‍ಗಳ ಎಣಿಕೆಗೆ ಸಿದ್ಧ ಮಾಡಿಕೊಳ್ಳುವುದು, ಮತ ಎಣಿಕಾ ಕಾರ್ಯ ನೆರವೇರಿಸುವ ಅಧಿಕಾರಿ, ಸಿಬ್ಬಂದಿಗಳು, ಮಾಧ್ಯಮದವರು ಮತ್ತು ಏಜೆಂಟರುಗಳ ಮತ ಎಣಿಕಾ ಕೇಂದ್ರಕ್ಕೆ ಪ್ರವೇಶ ಕಲ್ಪಿಸಲು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಪರಿಶೀಲಿಸಿದರು. ಈಗಾಗಲೆ ಮತ ಎಣಿಕಾ ಕೊಠಡಿಗಳನ್ನು ಅಗತ್ಯ ಬ್ಯಾರಿಕೇಡ್, ಎಣಿಕಾ ಟೇಬಲ್‍ಗಳ ವ್ಯವಸ್ಥೆ, ಮತ ಎಣಿಕಾ ಕೇಂದ್ರಕ್ಕೆ ಪ್ರವೇಶ ಕಲ್ಪಿಸುವ ದ್ವಾರದಲ್ಲಿ ಭದ್ರತೆ ಮುಂತಾದ ಕಾರ್ಯಗಳ ಬಗ್ಗೆಯೂ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಮತಗಳ ಎಣಿಕಾ ಕಾರ್ಯ ಅತ್ಯಂತ ಸುಗಮ ಹಾಗೂ ಸುವ್ಯವಸ್ಥೆಯಿಂದ ಜರುಗಬೇಕು, ಈ ಬಗ್ಗೆ ಯಾವುದೇ ಲೋಪದೋಷಗಳಿಗೆ ಅವಕಾಶವಾಗದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು. ಎಣಿಕಾ ಕೇಂದ್ರ ಕಟ್ಟಡದಲ್ಲಿ ಅಂದು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿ, ಸಿಬ್ಬಂದಿ, ಮಾಧ್ಯಮದವರು ಸೇರುವುದರಿಂದ ಉಪಹಾರ ಹಾಗೂ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿರಬೇಕು. ಕಟ್ಟಡದ ಪ್ರತಿ ಮಹಡಿಯಲ್ಲಿರುವ ಶೌಚಾಲಯಗಳನ್ನು ಸ್ವಚ್ಛವಾಗಿರಿಸಿ, ನಿಯಮಿತವಾಗಿ ಸ್ವಚ್ಛತೆಯ ನಿರ್ವಹಣೆಗೆ ಸ್ವಚ್ಛತಾ ಸಿಬ್ಬಂದಿ ನಿಯೋಜಿಸಬೇಕು, ಎಣಿಕಾ ಕೇಂದ್ರ ಪ್ರವೇಶಿಸಲು ಅಧಿಕೃತವಾಗಿ ಪಡೆದಿರುವ ಪ್ರವೇಶ ಅನುಮತಿ ಪತ್ರ (ಪಾಸ್) ಹೊಂದಿದವರಿಗೆ ಮಾತ್ರ ಎಣಿಕಾ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.