
ವಿಕಸತ ಭಾರತ ಕಾರ್ಯಕ್ರಮ | ಸಂಸದ ಸಂಗಣ್ಣ ಭರವಸೆ
ಮುಂದಿನ ಅವಧಿಯಲ್ಲಿ ಕನಕಗಿರಿಗೆ ರೈಲು ಓಡಾಟ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೧೬- ಲೋಕಸಭಾ ವ್ಯಾಪ್ತಿಯ 10 ತಾಲೂಕುಗಳ ಪೈಕಿ 8 ತಾಲೂಕಿಗೆ ರೈಲ್ವೆ ಹಳಿ ಹಾಕಲಾಗಿದೆ. ಮುಂದಿನ ಅವಧಿಯಲ್ಲಿ ಕನಕಗಿರಿ ಹಾಗೂ ಮಸ್ಕಿ ತಾಲೂಕಿಗೆ ರೈಲು ಸಂಚಾರ ಆರಂಭಿಸಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಕನಕಗಿರಿ ಯಲ್ಲಿ ಮಂಗಳವಾರ ನಮ್ಮ ಸಂಕಲ್ಪ ವಿಕಸತ ಭಾರತ ಕಾರ್ಯಕ್ರಮದಲ್ಲಿ ಆರಾಧ್ಯ ದೇವನಾದ ಲಕ್ಷ್ಮಿ ಕನಕಾಚಲಪತಿ ಯನ್ನು ಸ್ಮರಿಸುತ್ತಾ ಮಾತು ಆರಂಭಿಸಿದರು.
ದರೋಜಿ- ಬಾಗಲಕೋಟೆ ರೈಲ್ವೆ ಯೋಜನೆ ಎರಡು ಭಾಗವಾಗಿ ವಿಗಂಡಿಸಲಾಗಿದೆ. ದರೋಜಿ- ಗಂಗಾವತಿ ಸರ್ವೇ ಕಾರ್ಯ ಮುಗಿದಿದೆ. ರೈಲ್ವೆ ಮಂಡಳಿಗೆ ಡಿಪಿಆರ್ ಸಲ್ಲಿಸಲಾಗಿದೆ. ಮಂಡಳಿ ಒಪ್ಪಿಗೆ ಪಡೆದ ಬಳಿಕ ಟೆಂಡರ್ ಕರೆದು ಕಾಮಗಾರಿ ಆರಂಭವಾಗಲಿದೆ. ಮತ್ತೊಂದು ಭಾಗವಾದ ಗಂಗಾವತಿ- ಕನಕಗಿರಿ- ತಾವರಗೇರಾ- ಕುಷ್ಟಗಿ- ಇಲಕಲ್- ಹುನಗುಂದ -ಬಾಗಲಕೋಟೆ ಗೆ ಸಂಪರ್ಕಿಸುವ ರೈಲ್ವೆ ಯೋಜನೆ ಸರ್ವೇ ಕಾರ್ಯ ಆರಂಭವಾಗಿದೆ. ಶೀಘ್ರವೇ ರೈಲ್ವೆ ಮಂಡಳಿಗೆ ಸಲ್ಲಿಕೆಯಾಗಲಿದೆ. ಮುಂದಿನ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆಡಳಿತದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು. ಆದರೆ, ನಂತರ ಬಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ರಾಷ್ಟ್ರದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತಿದೆ. ಕಳೆದ ಒಂಬತ್ತುವರೆ ವರ್ಷದಲ್ಲಿ ರೈಲ್ವೆ, ಹೆದ್ದಾರಿ ಸೇರಿ ಎಲ್ಲ ರಂಗದಲ್ಲಿ ಅಭಿವೃದ್ಧಿ ಕಾಮಗಾರಿಗಳು ಆಗುತ್ತಿವೆ ಎಂದರು.
ಕರ್ನಾಟಕದಲ್ಲೂ ಯಡಿಯೂರಪ್ಪ ಮುಖ್ಯಂತ್ರಿಯಾಗಿದ್ದ ವೇಳೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಮೂಲಕ ರೈತರ ಅಭಿವೃದ್ಧಿಗೆ ಯೋಜನೆ ರೂಪಿಸಿದರು. ಭ್ರೂಣಹತ್ಯೆ ತಡೆಯುವ ಸಲುವಾಗಿ ಭಾಗ್ಯಲಕ್ಷ್ಮೀ, ಹಿರಿಯರಿಗೆ ಸಂಧ್ಯಾಸುರಕ್ಷಾ ಮುಂತಾದ ಯೋಜನೆಗಳ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಿದ್ದರು.
ಆದರೆ, ನಂತರ ಬಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಓಟ್ ಬ್ಯಾಂಕ್ ರಾಜಕೀಯ ಮಾಡಿತು. ಬಿಜೆಪಿ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯವೇ ಹೊರತು ಇತರ ಪಕ್ಷಗಳಿಂದ ಸಾಧ್ಯವಿಲ್ಲ. ಹೀಗಾಗಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಮಹಾಂತೇಶ ಸಜ್ಜನ್, ಪ.ಪಂ ಸದಸ್ಯ ಸುರೇಶ್ ಗುಗ್ಗಳಶೆಟ್ಟಿ, ಬಿಜೆಪಿ ಮುಖಂಡರಾದ ಹನುಮಂತಪ್ಪ ಬಸರಿಗಿಡ, ವಾಗೀಶ ಹಿರೇಮಠ, ಹನುಮೇಶ್ ಶೆಟ್ಟರ್ ಸೇರಿ ಮತ್ತಿತರರಿದ್ದರು.