325b0aaf-b935-4dc7-ba60-9d6e12f89e71

ಯಲಬುರ್ಗಾ ಕುಕನೂರ ತಾಲೂಕಿನ ಗ್ರಾಮಗಳಲ್ಲಿ ಕೆರೆ ತುಂಬಿಸುವ

ಯೋಜನೆ ಅನುಷ್ಠಾನಕ್ಕೆ ಯೋಜನೆ : ಬಸವರಾಜ ರಾಯರೆಡ್ಡಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 9- ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರಡ್ಡಿ ಅವರು ಜುಲೈ 9ರಂದು ಸಿದ್ನೇಕೊಪ್ಪ, ಸೋಂಪೂರ, ಮಾಳೇಕೊಪ್ಪ, ನಿಂಗಾಪೂರ, ಬನ್ನಿಕೊಪ್ಪ, ಇಟಗಿ ಹಾಗೂ ಮಂಡಲಗೇರಿ ಗ್ರಾಮಗಳಲ್ಲಿ ಸಂಚರಿಸಿ ಮಹತ್ವದ ಕೆರೆ ತುಂಬಿಸುವ ಯೋಜನೆಯ ಬಗ್ಗೆ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಸುಧೀರ್ಘ ಚರ್ಚಿಸಿದರು.

ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ವತಿಯಿಂದ ಯಲಬುರ್ಗಾ-ಕುಕನೂರ ತಾಲೂಕಿನಲ್ಲಿ ಕುಡಿಯುವ ನೀರು, ಅಂತರ್ಜಲ ಅಭಿವೃದ್ಧಿಗಾಗಿ ರೂ. 970 ಕೋಟಿ ಮೊತ್ತದ ಬೃಹತ್ 38 ಕೆರೆಗಳನ್ನು ತುಂಬಿಸಲು ಉದ್ದೇಶಿಸಲಾದ ಯೋಜನೆಗೆ ಜಮೀನು ಲಭ್ಯತೆಯ ಬಗ್ಗೆ ಸಿದ್ನೇಕೊಪ್ಪ, ಸೋಂಪೂರ, ಮಾಳೇಕೊಪ್ಪ, ನಿಂಗಾಪೂರ, ಬನ್ನಿಕೊಪ್ಪ, ಇಟಗಿ ಹಾಗೂ ಮಂಡಲಗೇರಿ ಗ್ರಾಮಗಳ ಹಿರಿಯರು ಮತ್ತು ರೈತ ಪ್ರತಿನಿಧಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ರಾಯರೆಡ್ಡಿ ಅವರು, ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಕನೂರ ತಾಲ್ಲೂಕುಗಳ ಬಹುತೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ಈ ಸಮಸ್ಯೆಯ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದರಿಂದಾಗಿ ಎರಡೂ ತಾಲೂಕಿನಲ್ಲಿ ಕುಡಿಯುವ ನೀರು ಹಾಗೂ ಅಂತರ್ಜಲ ಅಭಿವೃದ್ಧಿಗಾಗಿ 2024-25ನೇ ಸಾಲಿನ ಆಯವ್ಯಯದಲ್ಲಿ 970 ಕೋಟಿ ರೂ. ಅನುದಾನವನ್ನು ಘೋಷಿಸಲಾಗಿದೆ ಎಂದರು.

ಈ ಬೃಹತ್ 38 ಕೆರೆ ತುಂಬಿಸುವ ಯೋಜನೆಗೆ ಕನಿಷ್ಟ 50 ಎಕರೆಗಿಂತ ಹೆಚ್ಚಿಗೆ ಜಮೀನು ಪ್ರತಿಯೊಂದು ಗ್ರಾಮದಲ್ಲಿ ಬೇಕಾಗಿದ್ದು, ಜಮೀನುಗಳನ್ನು ಸರ್ಕಾರ ನಿಗದಿಪಡಿಸಿದ ದರದಲ್ಲಿ ಖರೀದಿಸಲಾಗುವುದು. ಈ ಯೋಜನೆ ಸಾಕಾರಗೊಂಡಲ್ಲಿ ಈ ಭಾಗದಲ್ಲಿ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ತಪ್ಪಲಿದೆ. ಹೀಗಾಗಿ ಗ್ರಾಮಸ್ಥರು ಸಹಕರಿಸಿ ಸಾರ್ವಜನಿಕ ಅನುಕೂಲಕ್ಕಾಗಿ ಜಮೀನು ನೀಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಮುಖ್ಯ ಎಂಜಿನಿಯರ್ ಮಂಜುನಾಥ ಅವರು ಮಾತನಾಡಿ, ಕೆರೆ ತುಂಬಿಸುವ ಈ ಯೋಜನೆಯು ರಾಜ್ಯದಲ್ಲಿಯೇ ಹೊಸದು. ರಾಯರೆಡ್ಡಿ ಅವರು ತಮ್ಮ ಕ್ಷೇತ್ರದ ಜನರ ಅನುಕೂಲಕ್ಕಾಗಿ ಯೋಜನೆಯ ಅನುಷ್ಠಾನಕ್ಕೆ ಶ್ರಮಿಸುತ್ತಿದ್ದು, ಜನರು ಸಹಕರಿಸಬೇಕು. ಇದೊಂದು ಐತಿಹಾಸಿಕ ಯೋಜನೆಯಾಗಿದ್ದು, ಸಾರ್ವಜನಿಕರು ಕೆರೆಗಳ ನಿರ್ಮಾಣಕ್ಕೆ ಜಮೀನು ನೀಡಲು ಮುಂದೆ ಬರಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಇನ್ನೀತರ ಅಭಿಯಂತರರು, ಆಯಾ ಗ್ರಾಮದ ಹಿರಿಯರು, ರೈತರು ಮತ್ತು ರೈತ ಮುಖಂಡರು ಇದ್ದರು.

ರೈತರಲ್ಲಿ ಮನವಿ : ಜುಲೈ 11 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು, 11 ಗಂಟೆಗೆ ಶಿರೂರ, ಮಧ್ಯಾಹ್ನ 12 ಗಂಟೆಗೆ ಬಳಗೇರಿ, 1 ಗಂಟೆಗೆ ತಿಪ್ಪರಸನಾಳ, 03 ಗಂಟೆಗೆ ಕಲ್ಲೂರ, 4 ಗಂಟೆಗೆ ಸಂಗನಾಳ, ಸಂಜೆ 05 ಗಂಟೆಗೆ ರಾಜೂರು ಗ್ರಾಮಗಳಲ್ಲಿ, ಜುಲೈ 12 ರಂದು ಬೆಳಿಗ್ಗೆ 10 ಗಂಟೆಗೆ ಬಂಡಿ, 11 ಗಂಟೆಗೆ ತುಮ್ಮರಗುದ್ದಿ, ಮಧ್ಯಾಹ್ನ 12 ಗಂಟೆಗೆ ವಜ್ರಬಂಡಿ, 1 ಗಂಟೆಗೆ ಹಿರೇಅರಳಿಹಳ್ಳಿ, 03 ಗಂಟೆಗೆ ಮಾಟಲದಿನ್ನಿ, 4 ಗಂಟೆಗೆ ಯಡ್ಡೋಣಿ, ಸಂಜೆ 05 ಗಂಟೆಗೆ ಬೋದೂರ ಗ್ರಾಮಗಳಿಗೆ ಶಾಸಕರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ನಿಗದಿತ ದಿನಾಂಕಗಳಂದು ಎಲ್ಲಾ ರೈತರು ಸಾರ್ವಜನಿಕರು ಹಾಗೂ ಊರಿನ ಮುಖಂಡರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಶಾಸಕರ ಕಚೇರಿಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!