
ರಂಗಭೂಮಿಯಿಂದ ಕಲಾವಿದ ಉತ್ತಮ ಬದುಕನ್ನು ಮತ್ತು ಉತ್ತಮ ಹೆಸರನ್ನು ಸಂಪಾದಿಸಿಕೊಳ್ಳುವ ಅವಕಾಶ ವಿದೆ : ಬಿ.ಶಾರದಮ್ಮ
ಕರುನಾಡ ಬೆಳಗು ಸುದ್ದಿ
ಮರಿಯಮ್ಮನಹಳ್ಳಿ,27- ಕಲೆ ಎನ್ನುವುದು ಮನುಷ್ಯ ಹುಟ್ಟಿನಿಂದ ಹಿಡಿದು ಸಾಯುವವರೆಗೂ ಏನೆಲ್ಲಾ ಚಟುವಟಿಕೆ ಮಾಡುತ್ತಾನೋ ಅವೆಲ್ಲಾ ರಂಗಭೂಮಿಯಲ್ಲಿ ಕಲಾವಿದನ ಪಾತ್ರಗಳೇ ಆಗಿರುತ್ತವೆ. ಅಂಥ ವಿವಿಧ ಕಲೆಗಳ ತಾಯಿಯಂತಿರುವುದೇ ರಂಗಭೂಮಿ ಕಲೆಯಾಗಿದೆ ಎಂದು ಹಿರಿಯ ರಂಗಕಲಾವಿದೆ ಬಿ. ಶಾರದಮ್ಮ ಹೇಳಿದರು.
ಅವರು ಪಟ್ಟಣದ 7ನೇ ವಾರ್ಡಿನಲ್ಲಿರುವ ಸವಿತಾ ಸಮಾಜದ ಸಮುದಾಯ ಭವನದಲ್ಲಿ ರಂಗಬಿಂಬ ಟ್ರಸ್ಟ್ ಬುಧವಾರ ಹಮ್ಮಿಕೊಂಡಿದ್ದ ವಿಶ್ವರಂಗಭೂಮಿ ದಿನಾಚರಣೆ ಹಾಗೂ ರಂಗಗೀತೆಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿಯ ಮೂಲಕ ಕಲಾವಿದ ಉತ್ತಮ ಬದುಕನ್ನು ರೂಪಿಸಿಕೊಳ್ಳುವ ಮತ್ತು ಉತ್ತಮ ಹೆಸರನ್ನು ಸಂಪಾದಿಸಿಕೊಳ್ಳುವ ಅವಕಾಶ ವಿದೆ. ನಾವು ರಂಗಭೂಮಿಯನ್ನು ಎಷ್ಟು ಪ್ರೀತಿಸುತ್ತೇವೆಯೋ ಅಷ್ಟೇ ಸಂತೋಷ, ನೆಮ್ಮದಿ ರಂಗಭೂಮಿ ಕಲಾವಿದರಿಗೆ ನೀಡುತ್ತದೆ ಎಂದು ಅವರು ಹೇಳಿದರು.
ರಂಗಚೌಕಿ ಕಲಾ ಟ್ರಸ್ಟ್ನ ಕಾರ್ಯದರ್ಶಿ ಪುಷ್ಪ ಪಿ. ಸರದಾರ್ ಅವರು ರಂಗಭೂಮಿ ಮತ್ತು ವರ್ತಮಾನದ ತಲ್ಲಣಗಳು ವಿಷಯ ಕುರಿತು ಉಪನ್ಯಾಸದಲ್ಲಿ ಮಾತನಾಡುತ್ತಾ, ರಂಗಭೂಮಿ ವಿಶಾಲವಾಗಿದ್ದು, ಇಂದು ನಾನಾ ರೂಪಾಂತರಗಳ ಮೂಲಕ ತನ್ನ ಜೀವಂತಿಕೆಯನ್ನು ಕಾಪಾಡಿಕೊಂಡಿದೆ. ರಂಗಭೂಮಿ ಕಲೆಯು ಅನೇಕ ವರ್ಷಗಳ ಇತಿಹಾಸ, ಪರಂಪರೆ ಹೊಂದಿದೆ.
ರಂಗಭೂಮಿಯು ಒಳ್ಳೆಯ ಸಂದೇಶಾತ್ಮಕ ತತ್ವಗಳ ಪ್ರತಿಪಾದನೆಯ ಜತೆಗೆ ಜನರಿಗೆ ಉತ್ತಮ ಸಂದೇಶ ನೀಡುವಲ್ಲಿ ರಂಗಭೂಮಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಅವರು ತಿಳಿಸಿದರು.
ರಂಗಭೂಮಿಗೆ ವಿಶೇಷವಾದ ಶಕ್ತಿಯಿದ್ದು, ಅದು ನಮ್ಮ ವ್ಯಕ್ತಿತ್ವ ವಿಕಾನದ ಜೊತೆಗೆ ಉತ್ತಮ ಮೌಲ್ಯಗಳನ್ನು ಬಿತ್ತುತ್ತದೆ. ನಾವು ನಮ್ಮ ಬದುಕಿನ ಜೊತೆಯೊಂದಿಗೆ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ರಂಗಭೂಮಿ ಉಳಿವಿಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಅವರು ಹೇಳಿದರು.
ಕಲಾವಿದ ಹಾಗೂ ನಿವೃತ್ತ ಶಿಕ್ಷಕ ಕೆ.ನಾಗೇಶ್ ಮಾತನಾಡಿ, ಕಲೆ ಕೇವಲ ಮನರಂಜನೆಗಾಗಿ ಅಲ್ಲ. ಮನೋವಿಕಾಸಕ್ಕಾಗಿ, ಮೌಲ್ಯಗಳ ಬೆಳವಣಿಗೆ ಪೂರಕವಾಗಿದೆ. ರಂಗಕಲೆಯು ಸಮಾಜದಲ್ಲಿಯ ಅಂಕುಡೊಂಕುಗಳನ್ನು ಸರಿಪಡಿಸಿ ಮೌಲ್ಯಯುತ ಸ್ವಸ್ತ ಸಮಾಜ ನಿರ್ಮಾಣದಲ್ಲಿ ರಂಗಭೂಮಿ ಪಾತ್ರ ಬಹು ದೊಡ್ಡದು ಎಂದು ಅವರು ಹೇಳಿದರು.
ಸಂಗೀತ ಕಲಾವಿದ ಸಂತೋಷ್ ಕುಮಾರ್ ಚಂದುಕರ ಮಾತನಾಡಿ, ರಂಗಭೂಮಿ ಉಳಿಯಬೇಕಾದರೆ ಪ್ರತಿಯೊಬ್ಬರು ನಾಟಕಗಳನ್ನು ನೋಡುವ ಮೂಲಕ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.
ಸ್ಥಳೀಯ ಉದ್ಯಮಿ ವಸ್ತ್ರದ ಶಿವಶಂಕರಯ್ಯ ಸಭೆಯಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.
ರಂಗಬಿಂಬ ಟ್ರಸ್ಟ್ನ ಅಧ್ಯಕ್ಷೆ ಎಂ. ಗಾಯಿತ್ರಿದೇವಿ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.
ಕಾರ್ಯಕ್ರಮದ ನಂತರ ರಂಗಗೀತೆ ಗಾಯನ ಕಾರ್ಯಕ್ರಮದಲ್ಲಿ ಗೊಲ್ಲರಹಳ್ಳಿಯ ಜಿ. ಮಲ್ಲಪ್ಪ ಮತ್ತು ಸಂಗಡಿಗರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಗೊಲ್ಲರಹಳ್ಳಿಯ ಕೆ. ತಿಪ್ಪಣ್ಣ ಆಚಾರ್ ಹಾರ್ಮೋನಿಯಂ ಸಾಥ ನೀಡಿದರು. ಗೊಲ್ಲರಹಳ್ಳಿಯ ಜಿ. ಕೆ. ಮೌನೇಶ್ ತಬಲ ಸಾಥ ನೀಡಿದರು.
ಸ್ಥಳೀಯ ಕಲಾವಿದರಾದ ಸಂತೋಷ್ ಕುಮಾರ್ ಚಂದುಕರ, ಚಂದ್ರಕಾಂತ್,ಹನುಮಯ್ಯ, ತಿರುಮಲೇಶ್ ಸೇರಿದಂತೆ ಇತರರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಕಲಾವಿದರಾದ ಮಾಹಾಂತೇಶ್ ನೆಲ್ಲುಕುದುರೆ ಪ್ರಾರ್ಥಿಸಿದರು. ಸಿ. ಕೆ. ನಾಗರಾಜ ಸ್ವಾಗತಿಸಿದರು.
ಕೆ. ಮಲ್ಲನಗೊಡ ವಂದಿಸಿದರು. ಹುರುಕೊಳ್ಳಿ ಮಂಜುನಾಥ ನಿರೂಪಿಸಿದರು.