WhatsApp Image 2024-04-19 at 7.55.58 PM

ರಕ್ತದಲ್ಲಿ ಪಕ್ಷ ಹುಡುಕುವುದು ನೀಚನತ : ಕೃಷ್ಣ ಇಟ್ಟಂಗಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 19- ಹುಬ್ಬಳ್ಳಿಯ ಕಾಂಗ್ರೆಸ್ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಕೊಲೆ ಪ್ರಕರಣವನ್ನು ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳು ರಾಜಕೀಯಕರಣಗೊಳಿಸಲು ಯತ್ನಿಸುತ್ತಿವೆ. ಪ್ರತಿ ಸಲ ಚುನಾವಣೆ ಸಂದರ್ಭದಲ್ಲಿ, ಒಂದಲ್ಲ ಒಂದು ವಿಷಯವನ್ನು ಎತ್ತಿಕೊಂಡು, ಅದಕ್ಕೆ ಧರ್ಮದ ಬಣ್ಣ ಬಳಿದು, ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ಪ್ರಯತ್ನಿಸುವುದು ಬಿಜೆಪಿಯ ಚಾಳಿಯಾಗಿದೆ. ಇದು ಖಂಡನೀಯ ಎಂದು ಕಾಂಗ್ರೆಸ್ ಪಕ್ಷದ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ ಹೇಳಿದ್ದಾರೆ.

ರಕ್ತದಲ್ಲಿ ಪಕ್ಷವನ್ನು ಹುಡುಕುವುದು ನೀಚನತನದ ಪರಮಾವಧಿ. ಅಮಾಯಕ ಹುಡುಗಿಯ ಕೊಲೆ ಪ್ರಕರಣದಲ್ಲಿಯೂ ಇಂತಹ ದುರ್ಬುದ್ಧಿ ತೋರಿಸುತ್ತಿರುವ ಬಿಜೆಪಿ, ಅಧಿಕಾರಕ್ಕೆ ಬರಲು ಯಾವ ಹಂತಕ್ಕಾದರೂ ಇಳಿಯಬಲ್ಲುದು ಎಂಬುದನ್ನು ಈ ದುರ್ಘಟನೆಗೆ ಸಂಬಂಧಿಸಿದಂತೆ ಅದು ನಡೆಸುತ್ತಿರುವ ಕ್ರಿಯೆಗಳು ಮತ್ತು ನೀಡುತ್ತಿರುವ ಪ್ರತಿಕ್ರಿಯೆಗಳು ತೋರಿಸುತ್ತಿವೆ. ಅಪರಾಧ ಕೃತ್ಯವನ್ನು ರಾಜಕೀಯಕರಣಗೊಳಿಸಲು ಅದು ಪ್ರಯತ್ನಿಸುತ್ತಿದೆ. ಇದು ಬಿಜೆಪಿಯ ಅಸಲಿ ಮುಖವನ್ನು ಅನಾವರಣಗೊಳಿಸಿದೆ ಎಂದಿದ್ದಾರೆ ಅವರು.

ಚುನಾವಣೆಯಲ್ಲಿ ತನಗೆ ಹಿನ್ನಡೆಯುಂಟಾಗಲಿದೆ ಎಂಬುದರ ಸುಳಿವು ಬಿಜೆಪಿಗೆ ಸಿಕ್ಕಿದೆ ಎಂಬುದನ್ನು ಈ ಬೆಳವಣಿಗೆಗಳು ಬಿಂಬಿಸಿವೆ. ಜನರ ಮುಂದೆ ಹೋಗಲು ಯಾವುದೇ ಅಭಿವೃದ್ಧಿಪರ ವಿಷಯಗಳಿಲ್ಲದ ಅದು ಈ ಅಪರಾಧ ಪ್ರಕರಣವನ್ನು ಎತ್ತಿಕೊಂಡು, ಜನರ ನಡುವೆ ಧರ್ಮದ ವಿಷ ಬೀಜ ಬಿತ್ತಿ, ತನ್ನ ಹೀನ ಉದ್ದೇಶವನ್ನು ಈಡೇರಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ. ರಾಜ್ಯದ ಮತದಾರರು ಬಿಜೆಪಿಯ ಈ ನೀಚ ಬುದ್ಧಿಯನ್ನು ಅರ್ಥ ಮಾಡಿಕೊಂಡು, ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕೃಷ್ಣ ಇಟ್ಟಂಗಿ ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ, ಹಿಜಾಬ್ನಂತಹ ಧಾರ್ಮಿಕ ವಿಷಯವೂ ದೇಶಾದ್ಯಂತ ವಿವಾದವಾಗಿ ಬದಲಾಯಿತು. ಅಭಿವೃದ್ಧಿಪರ ವಿಷಯಗಳ ಬದಲಾಗಿ ಹಲಾಲ್-ಜಟ್ಕಾದಂತಹ ವಿಷಯಗಳು ಪ್ರಾಧಾನ್ಯತೆ ಪಡೆದುಕೊಂಡಿದ್ದವು. ಬಿಜೆಪಿಯ ಈ ನಡೆಗಳು ಆಕಸ್ಮಿಕವಲ್ಲ ಎಂಬುದನ್ನು ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಅದು ನಡೆದುಕೊಳ್ಳುತ್ತಿರುವ ವಿಧಾನಗಳೇ ಸ್ಪಷ್ಟವಾಗಿ ಹೇಳುತ್ತಿವೆ. ಈಗಾಗಲೇ ಆರೋಪಿಯ ಬಂಧನವಾಗಿದ್ದು, ಆತನಿಗೆ ಕಾನೂನುಪ್ರಕಾರ ಶಿಕ್ಷೆಯೂ ಆಗಲಿದೆ. ಆದ್ದರಿಂದ ಜನರು ಅವರ ದುರ್ಬುದ್ಧಿಯ ಪ್ರಚೋದನೆಗಳಿಗೆ ಮರುಳಾಗಬಾರದು ಎಂದು ಕೃಷ್ಣ ಇಟ್ಟಂಗಿ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!