ಮತ ಎಣಿಕೆ ತರಬೇತಿ 2 ಪೋಟೋಸ್ (1)

ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸಿ, ಮತ ಎಣಿಕೆ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ : ನಲಿನ್ ಅತುಲ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 1- ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ನಿಮಿತ್ತ ಜೂನ್ 4ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆಗಾಗಿ ನಿಯೋಜಿಸಲಾದ ಅಧಿಕಾರಿಗಳು, ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸಿ, ಮತ ಎಣಿಕೆ ಅಚ್ಚುಕಟ್ಟಾಗಿ ನಿರ್ವಹಿಸಿ ಎಂದು ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಹಿನ್ನೆಲೆಯಲ್ಲಿ ಸೆಕ್ಟರ್ ಅಧಿಕಾರಿಗಳು, ಮತ ಎಣಿಕೆ ಮೇಲ್ವಿಚಾರಕರು ಹಾಗೂ ಮತ ಎಣಿಕೆ ಸಹಾಯಕ ಅಧಿಕಾರಿಗಳಿಗೆ ಮತ ಎಣಿಕೆ ಕಾರ್ಯದ ಕುರಿತು ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ಎರಡನೇ ಹಂತದ ಮತ ಎಣಿಕೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ ಫಲಿತಾಂಶವು ಜೂನ್ 4ಕ್ಕೆ ಹೊರ ಬರಲಿದ್ದು, ಅಂದು ಮತ ಎಣಿಕಾ ಕಾರ್ಯವನ್ನು ನಗರದ ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆಸಲಾಗುವುದು. ಮತ ಎಣಿಕೆ ಕಾರ್ಯದಲ್ಲಿ ಆಯೋಗವು ನೀಡಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸುಗಮ ಮತ ಎಣಿಕೆಗಾಗಿ ನಿಯೋಜಿಸಲಾದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಸಮಯಕ್ಕೆ ಸರಿಯಾಗಿ ಹಾಜರಾಗಬೇಕು. ಯಾವುದೇ ತೊಂದರೆ ಉಂಟಾದಲ್ಲಿ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಪ್ರಾತ್ಯಕ್ಷತೆ ತರಬೇತಿ: ಸೆಕ್ಟರ್ ಅಧಿಕಾರಿಗಳು, ಮತ ಎಣಿಕೆ ಮೇಲ್ವಿಚಾರಕರು ಹಾಗೂ ಮತ ಎಣಿಕೆ ಸಹಾಯಕ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮದ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಮತ ಎಣಿಕೆ ಕಾರ್ಯದ ಕುರಿತು ಸಂಪೂರ್ಣ ವಿವರವನ್ನು ನೀಡಿದರು. ಅಲ್ಲದೆ ಮತ ಎಣಿಕೆ ಕಾರ್ಯದ ಬಗ್ಗೆ ಪ್ರಾತ್ಯಕ್ಷತೆ ಮೂಲಕ ವಿವರಿಸಿದರು.

ಈ ಸಂದರ್ಭದಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರರು, ಜಿಲ್ಲಾ ಚುನಾವಣಾ ಶಾಖೆಯ ತಹಶೀಲ್ದಾರರು, ವಿವಿಧ ಇಲಾಖೆಗಳ ಅಧಿಕಾರಿಗಳು, ಎಲ್ಲಾ ಸೆಕ್ಟರ್ ಅಧಿಕಾರಿಗಳು, ಮತ ಎಣಿಕೆ ಮೇಲ್ವಿಚಾರಕರು ಹಾಗೂ ಮತ ಎಣಿಕೆ ಸಹಾಯಕ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!